ಕೋಮು ಮತ್ತು ಕ್ರೋನಿ ಮಿಶ್ರಿತ ಸಚಿವ ಸಂಪುಟ

2018ರ ಚುನಾವಣೆಯ ನಂತರ 3ನೇ ಬಾರಿಗೆ ಸಚಿವ ಸಂಪುಟ ರಚನೆಯಾಗಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಕೋಮು (ಹಿಂದುತ್ವ) ಮತ್ತು ಕ್ರೋನಿ (ಚಮಚಾ ಬಂಡವಾಳದಾರರು) ಮಿಶ್ರಿತ ಸಚಿವ ಸಂಪುಟವನ್ನು ಹೊಂದಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿ.ಪಿ.ಐ.(ಎಂ) ಉಡುಪಿ ಜಿಲ್ಲಾ ಸಮಿತಿ ಆಪಾದಿಸಿದೆ.

ಸರಕಾರದ ಚಟುವಟಿಕೆಗಳ ಮೇಲೆ ಆರ್.ಎಸ್.ಎಸ್. ಹಿಡಿತ ಹೆಚ್ಚಲಿದ್ದು, ಧರ್ಮ, ಧರ್ಮದ ನಡುವೆ ದ್ವೇಷ ಹೆಚ್ಚಿಸುವ ಚಟುವಟಿಕೆಗಳು ಉಡುಪಿ ಜಿಲ್ಲೆ ಮತ್ತು ರಾಜ್ಯದಲ್ಲಿ ಹೆಚ್ಚಾಗಲಿವೆ. ಸಮಾಜವಾದಿ ಚಿಂತನೆ ಹೊಂದಿದ್ದ ಎಸ್.ಆರ್. ಬೊಮ್ಮಾಯಿಯವರ ಪುತ್ರ ಬಸವರಾಜ ಬೊಮ್ಮಾಯಿಯವರು ಜನತಾ ಪರಿವಾರದಿಂದ ರಾಜಕೀಯಕ್ಕೆ ಧುಮುಕಿ ಮುಖ್ಯಮಂತ್ರಿಯಾದ ಕೂಡಲೇ ಹುಬ್ಬಳ್ಳಿಯ ಸಂಘ ಪರಿವಾರದ ಕಛೇರಿಗೆ ಭೇಟಿ ನೀಡಿದ್ದು, ಕೇವಲ ಧನ್ಯವಾದ ಹೇಳುವುದಕ್ಕೆ ಮಾತ್ರ ಅಲ್ಲ ಎಂದು ಸಿಪಿಐ(ಎಂ) ಅಭಿಪ್ರಾಯಪಡುತ್ತದೆ. ಇದಕ್ಕೆ ಪೂರಕವೆಂಬಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಬ್ಬರೂ ಕೂಡಾ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ) ಸಚಿವ ಸಂಪುಟದಲ್ಲಿ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದಿದೆ.

ಜಿಲ್ಲೆಯ ಇಬ್ಬರು ಸಚಿವರು ಕೂಡಾ ಆರ್.ಎಸ್.ಎಸ್. ಹಿನ್ನೆಲೆಯವರಾಗಿದ್ದು, ಉಸ್ತುವಾರಿ ಸಚಿವರಾಗಿರುವ ಶ್ರೀ ಸುನೀಲ್ ಕುಮಾರ್ ಅವರು “ಹಿಂದುತ್ವ ನನ್ನ ಮೊದಲ ಆಯ್ಕೆ” ಎಂದು ಈಗಾಗಲೇ ಘೋಷಿಸಿದ್ದಾರೆ.

ಇನ್ನೊಂದೆಡೆಯಲ್ಲಿ 2018ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿದಾವಿತ್ ಪ್ರಕಾರ ಇಬ್ಬರು ಸಚಿವರನ್ನು ಹೊರತುಪಡಿಸಿ, ಮುಖ್ಯಮಂತ್ರಿ ಬೊಮ್ಮಾಯಿಯವರು ಸೇರಿದಂತೆ 28 ಸಚಿವರು ಕೋಟ್ಯಾಧಿಪತಿಗಳಾಗಿದ್ದಾರೆ. ಇಬ್ಬರು ಸಚಿವರು ರೂ. 100 ಕೋಟಿಗೂ ಹೆಚ್ಚಿನ (ಎಂಟಿಬಿ ನಾಗರಾಜ್ 1,224 ಕೋಟಿ ರೂಪಾಯಿ) ಆಸ್ತಿ ಹೊಂದಿರುತ್ತಾರೆ. ಕಳೆದ 3 ವರ್ಷಗಳಲ್ಲಿ ಆಸ್ತಿಯ ಮೊತ್ತ ಇನ್ನಷ್ಟು ಹೆಚ್ಚಾಗಿರುತ್ತದೆ.

ಕೋಟ್ಯಾಧಿಪತಿಗಳ ಸಚಿವ ಸಂಪುಟದ ನೀತಿಗಳು ಯಾರ ಪರವಾಗಿರುತ್ತದೆ ಎಂದು ಯಾರಾದರೂ ಊಹಿಸಬಹುದು. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಜನ ಉದ್ಯೋಗ, ಕೋಟ್ಯಾಂತರ ಜನ ಆದಾಯ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲೂ ಕೆಲವೇ ಕಾರ್ಪೋರೇಟ್ ಕಂಪೆನಿಗಳ ಆದಾಯ ತೀವ್ರವಾಗಿ ಹೆಚ್ಚಾಗುತ್ತಿದೆ. ಕರ್ನಾಟಕ ಸರಕಾರದ ಮುಂದಿನ ನೀತಿಗಳು ಇನ್ನಷ್ಟು ವೇಗವಾಗಿ ಕಾರ್ಪೋರೇಟ್ ಕಂಪೆನಿಗಳ ಪರವಾಗಿರುತ್ತವೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಈ ಸಂದರ್ಭದಲ್ಲಿ ನೊಂದ ಜನರು ಐಕ್ಯತೆಯಿಂದ ಹೋರಾಡುವುದು ಮಾತ್ರವೇ ಉಳಿದಿರುವ ದಾರಿ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *