ಕೇರಳದಲ್ಲಿ ಕೋಮು ವಿಭಜನೆಗೆ ನಕಾರ

ಫೋಟೋ: ತಿರುವನಂತಪುರದಲ್ಲಿ ಸೆಪ್ಟಂಬರ್‌ 20ರಂದು ನಡೆದ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ…

ಪ್ರಕಾಶ್ ಕಾರಟ್

KaratA copy
ಪ್ರಕಾಶ್ ಕಾರಟ್

ಮುಸ್ಲಿಮರ ವಿರುದ್ಧ ದನಿ ಗಟ್ಟಿಗೊಳಿಸಲು ಮತ್ತು ಕ್ರೈಸ್ತ ಪಾದ್ರಿಗಳನ್ನು ತನ್ನತ್ತ ಸೆಳೆಯಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಗಮನ ಕೇಂದ್ರೀಕರಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಕೇರಳದ ವಿವಿಧ ಚರ್ಚ್‌ಗಳ ಮುಖಂಡರನ್ನು ಭೇಟಿ ಮಾಡಿದ್ದರು. ಆದರೂ ಈ ಕೂಟಕ್ಕೆ ಯಶಸ್ಸು ಸಿಗುತ್ತಿಲ್ಲ. ಪಾಲಾ ಬಿಷಪ್ ಹೇಳಿಕೆಯ ಸಂದರ್ಭದಲ್ಲಿ ಕ್ಯಾಥೊಲಿಕ್ ಚರ್ಚ್ ಮತ್ತು ಇತರ ಕ್ರೈಸ್ತ ಪಂಥದ ಒಳಗಡೆಯಿಂದಲೇ ‘ಇಸ್ಲಾಮ್ ಭೀತಿ’ಯ ಅಪಾಯದ ಮತ್ತು ಹಿಂದುತ್ವ ಶಕ್ತಿಗಳ ವಿಭಜನಕಾರಿ ತಂತ್ರಗಳ ವಿರುದ್ಧ ದನಿ ಕೇಳಿ ಬರುತ್ತಿರುವುದು ಸಂತಸದ ಸಂಗತಿಯಾಗಿದೆ.

ಕೇರಳದ ಸಾಮಾಜಿಕ ಸಂಯೋಜನೆ ತುಂಬಾ ಅದ್ವಿತೀಯ. ರಾಜ್ಯದ ಜನಸಂಖ್ಯೆಯ ಶೇಕಡ 45ರಷ್ಟು ಜನರು ಮುಸ್ಲಿಮರು ಹಾಗೂ ಕ್ರೈಸ್ತರು. ಮೂರೂ ಧಾರ್ಮಿಕ ಸಮುದಾಯಗಳ ಸಾಮಾಜಿಕ ಬಂಧ ಹಾಸುಹೊಕ್ಕಾಗಿರುವುದು ಕೂಡ ಕೇರಳದ ವಿಶಿಷ್ಟತೆ. ಎಲ್ಲರೂ ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದಾರೆ. ಮಲಯಾಳಿ ಅಸ್ಮಿತೆಯು ಈ ಎಲ್ಲ ಧಾರ್ಮಿಕ ಗುಂಪುಗಳ ಸಾಮಾಜಿಕ-ಸಾಂಸ್ಕೃತಿಕ ಗುಣಲಕ್ಷಣಗಳನ್ನು ಸಮೀಕರಿಸಿಕೊಂಡಿದೆ.

ಈ ಸನ್ನಿವೇಶಕ್ಕೆ ಪೂರಕವಾಗಿ ರಾಜಕೀಯದಲ್ಲಿ ಒಂದು ಬಲವಾದ ಜಾತ್ಯತೀತ ಪರಂಪರೆ ಇದೆ. ಅದಕ್ಕೆ ಎಡಪಂಥ ಪ್ರಮುಖ ಕೊಡುಗೆ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿ-ಆರ್‌ಎಸ್‌ಎಸ್ ಕೂಟದ ಮೂಲಕ ಹಿಂದುತ್ವದ ಗಾಳಿಯು ಈ ಸೌಹಾರ್ದಯುತ ಸಹಬಾಳ್ವೆಯ ವಾತಾವರಣವನ್ನು ಕೆಡಿಸಲು ಪ್ರಯತ್ನಿಸುತ್ತಿದೆ. ಕ್ಯಾಥೊಲಿಕ್ ಚರ್ಚ್‌ನ ಭಾಗವಾಗಿರುವ ಸಿರೋ-ಮಲಬಾರ್ ಚರ್ಚ್‌ನ ಪಾಲಾದ ಬಿಷಪ್ ಜೋಸೆಫ್ ಕಲ್ಲರಂಗತ್ ಮಾಡಿರುವ ಭಾಷಣವನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕೊಟ್ಟಾಯಂ ಜಿಲೆಯ ಒಂದು ಚರ್ಚಿನಲ್ಲಿ ಮಾಡಿದ ಭಾಷಣದಲ್ಲಿ ಅವರು, ಮುಸ್ಲಿಂ ಉಗ್ರಗಾಮಿ ಶಕ್ತಿಗಳು ನಡೆಸುತ್ತಿರುವ ‘ಲವ್ ಜಿಹಾದ್’ ಮತ್ತು ‘ಮಾದಕದ್ರವ್ಯ ಜಿಹಾದ್’ ಬಗ್ಗೆ ಎಚ್ಚರಿಕೆ ನೀಡಿದರು. ಕ್ಯಾಥೊಲಿಕ್ ಚರ್ಚ್ ಈ ಹಿಂದೆಯೇ ‘ಲವ್ ಜಿಹಾದ್’ ವಿಚಾರ ಎತ್ತಿದ್ದು ‘ಮಾದಕದ್ರವ್ಯ ಜಿಹಾದ್’ ಹೊಸದಾಗಿದೆ.

ಮುಸ್ಲಿಮೇತರನ್ನು ಹಾಳು ಮಾಡಲು ಜಿಹಾದಿಗಳು ಮಾದಕವಸ್ತುಗಳನ್ನು ಬಳಸುತ್ತಿದ್ದಾರೆ ಎಂದು ಬಿಷಪ್ ಹೇಳಿದ್ದಾರೆ. ಈ ಬೇಕಾಬಿಟ್ಟಿ ಆರೋಪವು ಕೇರಳ ಸಮಾಜದಲ್ಲಿ ಕಳವಳ ಹಾಗೂ ತಪ್ಪುಗ್ರಹಿಕೆಗಳಿಗೆ ಕಾರಣವಾಗಿದೆ.

ದೇಶದ ಬೇರೆ ಭಾಗಗಳಂತೆ ಕೇರಳದಲ್ಲಿ ಕೂಡ ಡ್ರಗ್ ಮಾಫಿಯಾ ಮತ್ತು ಜಾಲಗಳು ಕಾರ್ಯಾಚರಿಸುತ್ತಿವೆ. ಆದರೆ ಅದಕ್ಕೆ ಉಗ್ರಗಾಮಿ ಧಾರ್ಮಿಕ ಗುಂಪುಗಳೊಂದಿಗೆ ಸಂಬಂಧ ಕಲ್ಪಿಸುವುದು ಶುದ್ಧ ತಪ್ಪು. ಇಂಥ ಯಾವುದೇ ಸಂಪರ್ಕ ಇಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ‘ಯಾವುದೇ ಧರ್ಮ ಮಾದಕದ್ರವ್ಯವನ್ನು ಪ್ರೋತ್ಸಾಹಿಸುವುದಿಲ್ಲ. ಅದರ ಬಣ್ಣ ಸಮಾಜ-ವಿರೋಧಿಯಾಗಿದೆ’ ಎಂದಿದ್ದಾರೆ. ‘ಸಾಮಾಜಿಕ ಅನಿಷ್ಟಗಳಿಗೆ ಧಾರ್ಮಿಕ ಬಣ್ಣ ಲೇಪಿಸಬಾರದು’ ಎಂದೂ ವಿಜಯನ್ ಹೇಳಿದ್ದಾರೆ.

ಒಟ್ಟಾರೆ ರಾಜಕೀಯ ವಲಯವು ‘ಜಿಹಾದಿ ಪಿತೂರಿ’ ಸಿದ್ಧಾಂತವನ್ನು ತಳ್ಳಿ ಹಾಕಿರುವಾಗ ಬಿಜೆಪಿ ಮಾತ್ರ ಬಿಷಪ್‌ರ ನಿಲುವಿಗೆ ಬೆಂಬಲ ನೀಡಿದೆ. ಜಿಹಾದಿಗಳ ಚಟುವಟಿಕೆಗಳ ವಿರುದ್ಧ ಒಂದು ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿಜೆಪಿಗೆ ಇದು ಮುಸ್ಲಿಮರು ಮತ್ತು ಕ್ರೈಸ್ತರ ನಡುವೆ ಕಂದಕ ಮೂಡಿಸಿ “ಇಸ್ಲಾಮ್‌ ಭೀತಿ” ಸೃಷ್ಟಿಸಲು ಒಂದು ಉತ್ತಮ ಅವಕಾಶವಾಗಿ ಕಂಡಿದೆ.

‘ಲವ್ ಜಿಹಾದ್’ಗೆ ಸಂಬಂಧಿಸಿ ಹೇಳುವುದಾದರೆ, ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ 21 ಜನರು ತಮ್ಮ ಮನೆ ಹಾಗೂ ಕುಟುಂಬಗಳನ್ನು ತೊರೆದು ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್-ಖೊರಾಸನ್ ಸೇರಲು ಅಫ್ಘಾನಿಸ್ತಾನಕ್ಕೆ ತೆರಳಿದ ಕಳವಳಕಾರಿ ವಿದ್ಯಮಾನ ನಡೆದಿತ್ತು. ಆ ಪೈಕಿ ಇಸ್ಲಾಂಗೆ ಮತಾಂತರಗೊಂಡ ಇಬ್ಬರು ಕ್ರೈಸ್ತ ಮಹಿಳೆಯರಿದ್ದು ಅವರು ಅಫ್ಘಾನಿಸ್ತಾನಕ್ಕೆ ತೆರಳಲು ತಮ್ಮ ಗಂಡಂದಿರ ಜೊತೆ ಸೇರಿದ್ದರು. ಆ ಇಬ್ಬರು ಮಹಿಳೆಯರಲ್ಲಿ ಒಬ್ಬರು ವಾಸ್ತವವಾಗಿ ಕ್ರಿಶ್ಚಿಯನ್ ಪುರುಷನನ್ನೇ ಮದುವೆಯಾಗಿ ಇಬ್ಬರೂ ಇಸ್ಲಾಂಗೆ ಧರ್ಮಾಂತರಗೊಂಡಿದ್ದರು. ಈ ಜನರನ್ನು ನೇಮಿಸಿಕೊಂಡು ಅವರಲ್ಲಿ ಉಗ್ರವಾದಿ ಸಿದ್ಧಾಂತ ತುರುಕುವುದರ ಹಿಂದೆ ಜಿಹಾದಿ ನೆಟ್‌ವರ್ಕ್ ಕೆಲಸ ಮಾಡಿತ್ತು.

ಈ ಇಬ್ಬರು ಯುವ ಮಹಿಳೆಯರು ಮತಾಂತರಗೊಂಡು ಧಾರ್ಮಿಕ ಉಗ್ರಗಾಮಿತ್ವದಿಂದ ಪ್ರಭಾವಿತರಾಗಿದ್ದಕ್ಕೆ ಕ್ಯಾಥೊಲಿಕ್ ಚರ್ಚ್ ಕಳವಳ ವ್ಯಕ್ತಪಡಿಸುವುದನ್ನು ಅರ್ಥ ಮಾಡಿಕೊಳ್ಳಬಹುದು. ಇಂಥ ಉಗ್ರಗಾಮಿ ಸಿದ್ಧಾಂತಕ್ಕೆ ಬಲಿಯಾಗದಂತೆ ಧಾರ್ಮಿಕ ಸಭೆಗಳಲ್ಲಿ ಎಚ್ಚರಿಕೆ ನೀಡುವುದು ಕೂಡ ಸರಿಯಾಗಿದೆ. ಆದರೆ, ಇವುಗಳು ಕೆಲವೇ ಅಪರೂಪದ ಪ್ರಕರಣಗಳಾಗಿವೆ. ಮುಸ್ಲಿಮೇತರ ಮಹಿಳೆಯರನ್ನು ಆಕರ್ಷಿಸಲು ‘ಲವ್ ಜಿಹಾದ್’ನಂಥ ಸಂಘಟಿತ ಯತ್ನ ನಡೆದಿರಲಿಲ್ಲ ಎಂಬುದು ರಾಜ್ಯ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ತನಿಖೆಗಳಿಂದ ತಿಳಿದು ಬಂದಿತ್ತು.

ವಿವಿಧ ಧಾರ್ಮಿಕ ಮತ್ತು ಜಾತಿ ಸಂಘಟನೆಗಳು ‘ಲವ್ ಜಿಹಾದ್’ ಬಗ್ಗೆ ಮಾತನಾಡುವಾಗ ಬಳಸುವ ‘ನಮ್ಮ ಮಹಿಳೆಯರು’ ಮತ್ತು ‘ನಮ್ಮ ಹುಡುಗಿಯರು’ ಎಂಬ ಪರಿಭಾಷೆಯು ಕೂಡ ತೀರಾ ಕಳವಳಕಾರಿಯಾದುದು. ಅವುಗಳು ಮಹಿಳೆಯರ ಮೇಲೆ ಪಿತೃಪ್ರಧಾನ ಹಾಗೂ ಆಸ್ತಿಹಕ್ಕಿನಿಂದ ಪ್ರೇರಿತ ಕಲ್ಪನೆಗಳಾಗಿವೆ. ಪ್ರೇಮ ಮತ್ತು ಮದುವೆ ವಿಚಾರದಲ್ಲಿ ಮಹಿಳೆಯರಿಗೆ ತಮ್ಮದೇ ಆದ ಅಭಿಪ್ರಾಯ ಹಾಗೂ ಆಯ್ಕೆಗಳನ್ನು ನಿರಾಕರಿಸುವ ಪರೋಕ್ಷ ಧ್ವನಿಯೂ ಅದರಲ್ಲಿ ಅಡಗಿದೆ.

ಮುಸ್ಲಿಮರ ವಿರುದ್ಧ ದನಿ ಗಟ್ಟಿಗೊಳಿಸಲು ಮತ್ತು ಕ್ರೈಸ್ತ ಪಾದ್ರಿಗಳನ್ನು ತನ್ನತ್ತ ಸೆಳೆಯಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಗಮನ ಕೇಂದ್ರೀಕರಿಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಕೇರಳದ ವಿವಿಧ ಚರ್ಚ್‌ಗಳ ಮುಖಂಡರನ್ನು ಭೇಟಿ ಮಾಡಿದ್ದರು.

ಕೇರಳದ ಕ್ರೈಸ್ತ ಸಮುದಾಯದಲ್ಲಿ ಅತಿ ದೊಡ್ಡ ಭಾಗವಾಗಿರುವ ಕ್ಯಾಥೊಲಿಕ್ ಚರ್ಚ್, ಬಿಜೆಪಿ-ಆರ್‌ಎಸ್‌ಎಸ್‌ನ ನಿಜ ಸ್ವರೂಪವನ್ನು ತಿಳಿದುಕೊಳ್ಳುವುದು ಅಗತ್ಯ. ಮುಸ್ಲಿಮರೇ ಆಗಿರಲಿ ಕ್ರೈಸ್ತರೇ ಆಗಿರಲಿ, ಒಟ್ಟಾರೆಯಾಗಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂದುತ್ವ ಶಕ್ತಿಗಳು ನಿರಂತರವಾಗಿ ಪ್ರಚಾರ ನಡೆಸುತ್ತಿವೆ. 2016ರಿಂದ 2019ರ ವರೆಗಿನ ‘ಪ್ರಾಸಿಕ್ಯೂಷನ್ ರಿಲೀಫ್’ ವರದಿ ಪ್ರಕಾರ, ದೇಶದಾದ್ಯಂತ ಕ್ರೈಸ್ತರ ವಿರುದ್ಧ 1774 ದ್ವೇಷದ ಅಪರಾಧ ಕೃತ್ಯಗಳು ನಡೆದಿವೆ. 2016ರಿಂದೀಚೆಗೆ ಕ್ರೈಸ್ತರ ವಿರುದ್ಧ ದ್ವೇಷದ ಅಪರಾಧ ಕೃತ್ಯಗಳಲ್ಲಿ ಶೇಕಡ 59.6ರಷ್ಟು ಏರಿಕೆಯಾಗಿದೆ.

ಕೋಮುವಾದಿ ವಿಭಜನೆಗೆ ಬಿಜೆಪಿ-ಆರ್‌ಎಸ್‌ಎಸ್ ಕೂಟ ನಿರಂತರವಾಗಿ ಪ್ರಯತ್ನಿಸುತ್ತದೆ. ಆರ್‌ಎಸ್‌ಎಸ್ ಸಂಘಟನೆಗಳು ಪ್ರತಿ ವರ್ಷ ಸೆಪ್ಟೆಂಬರ್ 25ನ್ನು “ಮಲಬಾರ್ ಹಿಂದೂ ನರಹತ್ಯೆ ದಿನ’ವಾಗಿ ಆಚರಿಸುತ್ತವೆ. 1921ರ ಮಲಬಾರ್ ಬಂಡಾಯವನ್ನು ವಿಕೃತವಾಗಿ ಬಿಂಬಿಸುವುದೇ ಅವುಗಳ ಉದ್ದೇಶವಾಗಿದೆ. ಮಲಬಾರ್ ಬಂಡಾಯವು ಬ್ರಿಟಿಷ್ ಆಡಳಿತ ಮತ್ತು ಮುಸ್ಲಿಂ ರೈತರನ್ನು ಶೋಷಿಸುತ್ತಿದ್ದ ಭೂಮಾಲಿಕ ವ್ಯವಸ್ಥೆಯ ವಿರುದ್ಧ ನಡೆದ ಬಂಡಾಯವಾಗಿದೆ. ಆದರೆ ಮಲಬಾರ್ ಬಂಡಾಯವು ಹಿಂದೂ-ವಿರೋಧಿ ಮಾತ್ರವಲ್ಲದೆ ಕ್ರಿಶ್ಚಿಯನ್-ವಿರೋಧಿಯೂ ಆಗಿದೆ ಎಂದು ಹೇಳಿ ಕೇರಳದಲ್ಲಿ ಕ್ರೈಸ್ತರ ಸಹಾನುಭೂತಿ ಪಡೆಯಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಕ್ಯಾಥೊಲಿಕ್ ಚರ್ಚ್ ಮತ್ತು ಇತರ ಕ್ರೈಸ್ತ ಪಂಥದ ಒಳಗಡೆಯಿಂದಲೇ ‘ಇಸ್ಲಾಮ್ ಭೀತಿ’ಯ ಅಪಾಯದ ಮತ್ತು ಹಿಂದುತ್ವ ಶಕ್ತಿಗಳ ವಿಭಜನಕಾರಿ ತಂತ್ರಗಳ ವಿರುದ್ಧ ದನಿ ಕೇಳಿ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಚರ್ಚ್ ನಾಯಕರು ಸಂಘಪರಿವಾರದ ತಂತ್ರದ ಖೆಡ್ಡಾಕ್ಕೆ ಬೀಳುವ ಅಪಾಯದ ಸಾಧ್ಯತೆ ಬಗ್ಗೆ ಮೊದಲಿಗೆ ಎಚ್ಚರಿಕೆ ಕೊಟ್ಟವರು ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‍ ನ ತ್ರಿಶೂರ್ ಡಯಾಸಿಸ್‌ನ ಮೆಟ್ರೋಪಾಲಿಟನ್ ಯೊಹಾನನ್ ಮೊರ್ ಮೆಲೆಟಿಯಸ್.

ಬಹುಸಂಖ್ಯಾತವಾದಿ ಕೋಮುವಾದದ ಹಿಂದುತ್ವ ಆವೃತ್ತಿಯು ಒಡ್ಡಿರುವ ಅಪಾಯದ ಬಗ್ಗೆ ಕೇರಳದ ಸಿಪಿಐ(ಎಂ)ಗೆ ಸ್ಪಷ್ಟವಾದ ಅರಿವಿದೆ. ಬಿಜೆಪಿ-ಆರ್‌ಎಸ್‌ಎಸ್ ಕೂಟವನ್ನು ರಾಜಕೀಯ ಹಾಗೂ ಸೈದ್ಧಾಂತಿಕವಾಗಿ ಹಣಿಯಲು ಎಲ್ಲ ಜಾತ್ಯತೀತ-ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿಗೊಳಿಸುವುದು ಅದರ ಉದ್ದೇಶವಾಗಿದೆ. ಆ ರೀತಿ ಮಾಡುವಾಗಲೇ, ಮುಸ್ಲಿಮರ ನಡುವೆ ಉಗ್ರಗಾಮಿ ಸಂಘಟನೆಗಳು ಮತ್ತು ಸಿದ್ಧಾಂತಗಳು ಒಡ್ಡಿರುವ ಅಪಾಯದ ಅರಿವೂ ಪಕ್ಷಕ್ಕಿದೆ. ಅವುಗಳಲ್ಲಿ ಕೆಲವು ವಿದೇಶಗಳಲ್ಲಿನ ಇಸ್ಲಾಮಿಕ್ ಉಗ್ರವಾದಿತ್ವದ ಉತ್ಪನ್ನಗಳಾಗಿವೆ.

ಕ್ರೈಸ್ತರ ನಡುವೆ ಕೂಡ ಸಣ್ಣ ಪ್ರಮಾಣದಲ್ಲಿ ಉಗ್ರವಾದಿ ನಿಲುವು ಕಂಡು ಬಂದಿದೆ. ಹೆಚ್ಚುತ್ತಿರುವ ಧಾರ್ಮಿಕತೆ ಮತ್ತು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಂದ ಸಮಾಜದಲ್ಲಿ ಉಂಟಾಗುತ್ತಿರುವ ಅಭದ್ರತೆಗಳಿಂದಾಗಿ ಜಾತ್ಯತೀತ ಬಂಧವನ್ನು ನಾಶ ಮಾಡಲು ಹಾಗೂ ಅಂತರ್-ಧರ್ಮೀಯ ಬಿಗುವುಗಳನ್ನು ಹೆಚ್ಚಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ.

ಬಿಷಪ್‌ರ ಭಾಷಣದ ಪ್ರಸಕ್ತ ಪ್ರಸಂಗವು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಬಗೆಯ ಸ್ಪಂದನೆ-ಪ್ರತಿ-ಸ್ಪಂದನೆಗಳನ್ನು ಕಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ವಿಷಕಾರೀ ಮತ್ತು ಪ್ರಚೋದನಕಾರಿ ಕೋಮುವಾದಿ ಅಂಶಗಳನ್ನು ಮಟ್ಟ ಹಾಕಲು ಮುಂದಾಗುವುದು ಸರ್ಕಾರದ ಕರ್ತವ್ಯವಾಗಿದೆ. ಅದೇ ವೇಳೆಗೆ, ಎಲ್ಲ ಕ್ಷೇತ್ರಗಳಲ್ಲಿ ಕೋಮುವಾದಿ ಹಾಗೂ ವಿಭಜನಕಾರಿ ಶಕ್ತಿಗಳನ್ನು ಎದುರಿಸುವುದು ಎಡ-ಪ್ರಜಾಸತ್ತಾತ್ಮಕ ಶಕ್ತಿಗಳ ಪ್ರಮುಖ ಕಾರ್ಯಭಾರವಾಗಿದೆ. ಸಮಾಜದ ಎಲ್ಲ ಪ್ರಗತಿಪರ ಶಕ್ತಿಗಳ ಸಹಕಾರ ಪಡೆದು ಅದನ್ನು ಮಾಡಬೇಕಾಗಿದೆ.

Pinarayi vijayana Kerala cmಪಾಲ ಬಿಷಪ್ ಜೋಸೆಫ್ ಕಲ್ಲರಂಗಟ್ಟ್ ಅವರ `ಮಾದಕ ದ್ರವ್ಯ ಜಿಹಾದ್’ ಹೇಳಿಕೆ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳದ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಷಪ್ ಹೇಳಿಕೆ ದುರಾದೃಷ್ಟಕರ ಎಂದರಲ್ಲದೆ ಇಂತಹ ಹೇಳಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಧಾರ್ಮಿಕ ಮತಾಂತರ ಮತ್ತು ಡ್ರಗ್ಸ್ ಕಳ್ಳಸಾಗಣಿಕೆ ಕುರಿತಾದ ಅಂಕಿಅಂಶಗಳನ್ನು ಪರಿಶೀಲಿಸಿದಾಗ ರಾಜ್ಯದ ಅಲ್ಪಸಂಖ್ಯಾತ ಧರ್ಮಗಳು ಅದರಲ್ಲಿ ಯಾವುದೇ ವಿಶೇಷ ಶಾಮೀಲಾತಿ ಹೊಂದಿಲ್ಲ ಎಂದು ತಿಳಿದು ಬರುತ್ತದೆ ಎಂದರು.

“ರಾಜ್ಯದಲ್ಲಿ 2020ರಲ್ಲಿ ನಾರ್ಕಾಟಿಕ್ ಡ್ರಗ್ಸ್ ಎಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅನ್ವಯ 4,941 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ 5,422 ಆರೋಪಿಗಳ ಪೈಕಿ 2,700 (ಶೇ 49.80) ಹಿಂದುಗಳು, 869 (ಶೇ 34.47) ಮುಸ್ಲಿಮರು ಮತ್ತು 853 (ಶೇ 15.73) ಕ್ರೈಸ್ತರಾಗಿದ್ದಾರೆ. ಈ ಅನುಪಾತದಲ್ಲಿ ಯಾವುದೇ ಅಸಹಜತೆಯಿಲ್ಲ, ಡ್ರಗ್ಸ್ ಕಳ್ಳಸಾಗಣಿಕೆ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ,” ಎಂದು ಪಿಣರಾಯಿ ವಿಜಯನ್ ಹೇಳಿದರು.

ಅನು: ವಿಶ್ವ

Leave a Reply

Your email address will not be published. Required fields are marked *