ಕಾರ್ಮಿಕ-ರೈತ ಐಕ್ಯತೆ ಕ್ರಿಯಾಶೀಲವಾಗಿ ಬೆಳೆಯುತ್ತಿರುವುದನ್ನು ಎತ್ತಿ ತೋರಿದ ಭಾರತ ಬಂದ್

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಸೆಪ್ಟೆಂಬರ್ 27ರ ಭಾರತ ಬಂದ್ ದೊಡ್ಡ ರೀತಿಯಲ್ಲಿ ಯಶಸ್ವಿಯಾಗಿದೆ. ಈ ಬೃಹತ್ ಪ್ರತಿಭಟನಾ ಕಾರ್ಯಾಚರಣೆ ಮೂರು ಕೃಷಿ ಕಾಯ್ದೆಗಳು ಸೆಪ್ಟೆಂಬರ್ 27, 2020 ರಂದು ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಜಾರಿಗೆ ಬಂದು ಸರಿಯಾಗಿ ಒಂದು ವರ್ಷವಾಗಿರುವ ದಿನದಂದು ನಡೆದಿದೆ.

ಇದರಲ್ಲಿ ಕೋಟ್ಯಂತರ ಜನರು-ರೈತರು, ಕೃಷಿ ಕೂಲಿಕಾರರು, ಕೈಗಾರಿಕಾ ಕಾರ್ಮಿಕರು, ಸಾರಿಗೆ ಕಾರ್ಮಿಕರು, ನೌಕರರು, ಅಂಗಡಿಕಾರರು, ವಿದ್ಯಾರ್ಥಿಗಳು, ಯುವಜನರು ಮತ್ತು ಮಹಿಳೆಯರು- ಭಾಗವಹಿಸಿರುವುದು ಕಾಣಬಂದಿದೆ.

ಹೆಚ್ಚಿನ ಪ್ರತಿಪಕ್ಷಗಳು, ಪ್ರಾದೇಶಿಕ ಪಕ್ಷಗಳು ಕೂಡ ಬಂದ್‌ಗೆ ಬೆಂಬಲ ನೀಡಿದರು. ಇದಕ್ಕೆ ಒಂದು ಅಪವಾದವೆಂದರೆ ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್. ಅದು ಬಂದನ್ನು ವಿರೋಧಿಸಿತು ಮತ್ತು ರಾಜ್ಯ ಸರಕಾರ ಪ್ರತಿಭಟನಾಕಾರರ ವಿರುದ್ಧ ಕ್ರಮಕೈಗೊಂಡಿತು.

ಇದರಲ್ಲಿ ಭಾಗವಹಿಸಿದವರ ಪ್ರಮಾಣ ಮತ್ತು ಗಳಿಸಿದ ಬೆಂಬಲದ  ವಿಸ್ತಾರದ ದೃಷ್ಟಿಯಿಂದ ಇದು ಸಂಯುಕ್ತ ಕಿಸಾನ್ ಮೋರ್ಚಾದ ಈ ವರ್ಷದ ಮಾರ್ಚ್ 26ರ ಕರೆಗೆ ಹೋಲಿಸಿದರೆ ಇನ್ನೂ ವ್ಯಾಪಕವಾದ ಸ್ಪಂದನೆಯನ್ನು ಪಡೆದಿದೆ. ಆಗ ಚುನಾವಣೆಗಳು ನಡೆಯಲಿದ್ದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಈ ನಾಲ್ಕು ರಾಜ್ಯಗಳು ಮತ್ತು ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಬಂದ್ ನಿಂದ ವಿನಾಯ್ತಿ ಕೊಡಲಾಗಿತ್ತು. ಈ ಬಾರಿ ಬಂದ್ ಈ ಎಲ್ಲ ರಾಜ್ಯಗಳನ್ನೂ ತಟ್ಟಿದೆ, ಕೇರಳದಲ್ಲಂತೂ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡವು. ಕಾರ್ಮಿಕ ಸಂಘಗಳು, ವ್ಯಾಪಾರಸ್ಥರ ಸಂಘಟನೆಗಳು ಮತ್ತು ಇತರ ವಲಯಗಳ ಭಾಗವಹಿಸುವಿಕೆಯೂ ಹೆಚ್ಚು ವ್ಯಾಪಕವಾಗಿತ್ತು. ಇದು ಕಾರ್ಮಿಕ-ರೈತ ಐಕ್ಯತೆ ಕ್ರಿಯೆಯಲ್ಲಿ ಬೆಳೆಯುತ್ತಿರುವುದನ್ನು  ಎತ್ತಿ ತೋರಿದೆ. ಈ ಬಂದ್, ನವಂಬರ್ 26ರಂದು ದಿಲ್ಲಿಯ ಗಡಿಗಳಲ್ಲಿ ಆರಂಭವಾದ, ಹತ್ತು ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟಗಳು ಇನ್ನೂ ರಭಸ ಕಳಕೊಂಡಿಲ್ಲ ಎಂಬುದನ್ನು ಗಟ್ಟಿಯಾಗಿ ನೆನಪಿಸಿದೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವದಿಲ್ಲವೆಂದು ಮೋದಿ ಸರಕಾರ ಪಟ್ಟು ಹಿಡಿದಿರುವಾಗ, ಈ ಬಂದ್  ಈ ಹೋರಾಟ ಮುಂದುವರೆಯುತ್ತದೆ ಮಾತ್ರವಲ್ಲ, ತೀಕ್ಷ್ಣಗೊಳ್ಳುತ್ತದೆ ಎಂಬುದರ ಸೂಚನೆ. ರೈತರ ಆಂದೋಲನ ಉತ್ತರಪ್ರದೇಶ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಗಳಲ್ಲಿ  ಬಿಜೆಪಿ ವಿರುದ್ಧ ಪ್ರಚಾರಾಂದೋಲನ ಮುಂದುವರೆಸಲು ನಿರ್ಧರಿಸುವುದರೊಂದಿಗೆ, ಅದು ಆಳುವ ಪಕ್ಷವನು ರಾಜಕೀಯವಾಗಿಯೂ ಎದುರಿಸಲು ಸಿದ್ಧಗೊಳ್ಳುತ್ತಿದೆ. ಲಕ್ಷಾಂತರ ರೈತರು ಭಾಗವಹಿಸಿದ ಮುಝಪ್ಪರ್‌ನಗರ ಮಹಾಪಂಚಾಯತ್ ಈ ದೃಢನಿಶ್ಚಯದ ಒಂದು ಶಕ್ತಿಶಾಲಿ ಅಭಿವ್ಯಕ್ತಿ.

(‘ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ)

Leave a Reply

Your email address will not be published. Required fields are marked *