ತ್ರಿಪುರಾ ಎಡರಂಗ ಅಧ್ಯಕ್ಷ ಬಿಜನ್‌ ಧಾರ್ ನಿಧನ

ತ್ರಿಪುರಾದ ಎಡರಂಗ ಸಮಿತಿಯ ಅಧ್ಯಕ್ಷರೂ, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರೂ ಹಾಗೂ ತ್ರಿಪುರಾ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿಯೂ ಅಗಿದ್ದ ಬಿಜನ್‌ ಧಾರ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಸಿಪಿಐ(ಎಂ) ಪಾಲಿಟ್ ಬ್ಯೂರೋ ಅವರ ನಿಧನಕ್ಕೆ ತೀವ್ರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿದೆ. ಅವರು ಕೋಲ್ಕತಾ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ 70 ವರ್ಷ ವಯಸ್ಸಾಗಿತ್ತು.

1970ರ ದಶಕದಲ್ಲಿ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಿಜನ್‌ ಧಾರ್ 1978ರಲ್ಲಿ ಪಕ್ಷದ 10ನೇ ರಾಜ್ಯ ಸಮ್ಮೇಳನದಲ್ಲಿ ಪಕ್ಷದ ರಾಜ್ಯ ಸಮಿತಿಗೆ ಆಯ್ಕೆಯಾದರು ಮತ್ತು 1995ರಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದರು. 2008ರಲ್ಲಿ 19ನೇ ರಾಜ್ಯ ಸಮ್ಮೇಳನದಲ್ಲಿ ಅವರು ಪಕ್ಷದ ತ್ರಿಪುರಾ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು ಮತ್ತು ಆ ಹುದ್ದೆಯಲ್ಲಿ 2018ರವರೆಗೆ ಮುಂದುವರಿದರು. ಅವರು 2002ರಲ್ಲಿ ಸಿಪಿಐ(ಎಂ)ನ  17ನೇ ಮಹಾಧಿವೇಶನದಲ್ಲಿ ಕೇಂದ್ರ ಸಮಿತಿಗೆ ಆಯ್ಕೆಯಾದರು. ಸುಮಾರು ಒಂದು ದಶಕದ ಕಾಲ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ, ಪಕ್ಷದ ಸಂಘಟನೆಯನ್ನು ಕಟ್ಟುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದರು. 2018 ರಿಂದ ಅವರು ರಾಜ್ಯದಲ್ಲಿ ಎಡರಂಗ ಸಮಿತಿಯ ಸಂಚಾಲಕರಾಗಿದ್ದರು.

1975-77ರಲ್ಲಿ ತುರ್ತುಪರಿಸ್ಥಿತಿಯ ಸಮಯದಲ್ಲಿ, ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಭೂಗತರಾಗಿದ್ದರು ಮತ್ತು ನಂತರ ಅವರನ್ನು ಬಂಧಿಸಲಾಯಿತು, ಐದು ತಿಂಗಳು ಜೈಲು ಶಿಕ್ಷೆ ವಿಧಿಸಲಾಯಿತು.

ವಿದ್ವಾಂಸರೂ ಮತ್ತು ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಚೆನ್ನಾಗಿ ತಿಳಿದಿದ್ದವರೂ ಆಗಿದ್ದ ಬಿಜನ್‌ ಧಾರ್ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಿಕ್ಷಣ ನೀಡುವಲ್ಲಿ ಅಪಾರ ಕೊಡುಗೆ ನೀಡಿದರು.

ವಿವಿಧ ಆರೋಗ್ಯ ತೊಡಕುಗಳ ಹೊರತಾಗಿಯೂ, ಬಿಜನ್‌ ಧಾರ್, ಉನ್ನತ ಮಟ್ಟದ ಬದ್ಧತೆಯೊಂದಿಗೆ ಅವಿರತವಾಗಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಪಕ್ಷವು ತ್ರಿಪುರಾದಲ್ಲಿ ದುಷ್ಟ ಮತ್ತು ಹಿಂಸಾತ್ಮಕ ದಾಳಿಗಳನ್ನು ಎದುರಿಸುತ್ತಿರುವ ಸಮಯದಲ್ಲಿ, ಕಳೆದ ತಿಂಗಳು ಗೌತಮ್‍ ದೇಬ್‍ರವರ ನಿಧನದ  ಬೆನ್ನಲ್ಲೇ ಅವರ ನಿರ್ಗಮನ ಪಕ್ಷಕ್ಕೆ ಒಂದು ಬಹು ದೊಡ್ಡ ನಷ್ಟ ಎಂದಿರುವ ಪೊಲಿಟ್ ಬ್ಯೂರೊ, ಅವರ ಪತ್ನಿ ಇಳಾ ದಾಸ್‍ ಗುಪ್ತ , ಮಗಳು ಗೋಪಾ ಧರ್ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *