ಕಲ್ಲಿದ್ದಲು ಕೊರತೆ: ಮೋದಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು

ದೇಶವನ್ನು ಅಪ್ಪಳಿಸಿರುವ ವಿದ್ಯುತ್ ಉತ್ಪಾದನೆಯ ಬೃಹತ್ ಕೊರತೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಸ್ತುತ, ರಾಜಸ್ಥಾನ, ಜಾರ್ಖಂಡ್, ಬಿಹಾರ ಮತ್ತು ಪಂಜಾಬ್‌ನಲ್ಲಿ ತೀವ್ರ ವಿದ್ಯುತ್ ಕಡಿತವು ಹಲವು ಗಂಟೆಗಳವರೆಗೆ ವಿಸ್ತರಿಸುತ್ತಿದೆ. ಮಹಾರಾಷ್ಟ್ರ, ಕೇರಳ ಮತ್ತು ದೆಹಲಿ ಸೇರಿದಂತೆ ಇತರ ಹಲವೆಡೆಗಳಲ್ಲಿ ಸಂಪೂರ್ಣ ಕತ್ತಲು ಆವರಿಸುವ ಭೀತಿ ಉಂಟಾಗಿದೆ. ಸಿ.ಇ.ಎ.(ಕೇಂದ್ರೀಯ ವಿದ್ಯುತ್ ಪ್ರಾಧಿಕಾರ- 6ನೇ ಅಕ್ಟೋಬರ್ ವರದಿ) ಪ್ರಕಾರ, ಈ ವೈಫಲ್ಯದಿಂದಾಗಿ 16,880 ಮೆ.ವಾ. ಉತ್ಪಾದನಾ ಸಾಮರ್ಥ್ಯದ 16 ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ದಾಸ್ತಾನು ಸೊನ್ನೆಗೆ ಇಳಿಯುವಂತಾಗಿದೆ. 97,819 ಮೆ.ವಾ. ಸಾಮರ್ಥ್ಯದ 76 ಸ್ಟೇಷನ್‌ಗಳು ನಾಲ್ಕು ದಿನಗಳಿಗಿಂತ ಕಡಿಮೆ ಕಲ್ಲಿದ್ದಲು ದಾಸ್ತಾನು ಹೊಂದಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲಿನ ಬೆಲೆಯು ಪ್ರತಿ ಟನ್‌ಗೆ 60 ಡಾಲರ್‌ನಿಂದ 180-200 ಡಾಲರ್‌ಗಳಿಗೆ ಏರಿಕೆಯಾಗಿರುವುದು ಕೂಡ ಸಮಸ್ಯೆಯನ್ನು ಹೆಚ್ಚಿಸಿದೆ, ಉದಾಹರಣೆಗೆ, ಟಾಟಾದ ಮುಂದ್ರಾ ನಿಲ್ದಾಣವು ಆಮದು ಮಾಡಿದ ಕಲ್ಲಿದ್ದಲನ್ನು ಅವಲಂಬಿಸಿರುವುದರಿಂದ ತನ್ನ ಎಲ್ಲ ಸ್ಥಾವರಗಳನ್ನು ಮುಚ್ಚಿದೆ.

ಭಾರತವು ತನ್ನ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಾಮರ್ಥ್ಯವನ್ನು ಹೊಂದಿದೆ. ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ಇಲ್ಲದಿರುವ ಸಮಸ್ಯೆ ಕೇವಲ ಯೋಜನೆಯ ಕೊರತೆ ಮತ್ತು ಅಸಮರ್ಥತೆಯದ್ದು. ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯಗಳ ನಡುವೆ ಸಮನ್ವಯ ತರುವ  ತನ್ನ ಮೂಲಭೂತ ಕಾರ್ಯದಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ತನ್ನ  ಈ ವೈಫಲ್ಯಕ್ಕೆ ಕೋಲ್ ಇಂಡಿಯಾವನ್ನು ಬಲಿಪಶುವನ್ನಾಗಿ ಮಾಡಲು ಬಯಸಿದೆ.

ಸಚಿವಾಲಯಗಳ ನಡುವಿನ ಸಮನ್ವಯ ಮತ್ತು ಯೋಜನೆಯ ಸರಳ ಪ್ರಶ್ನೆಗಳನ್ನು ನಿಭಾಯಿಸುವಲ್ಲಿ ಸರ್ಕಾರದ ಅಸಮರ್ಥತೆಗೆ ದೇಶವು ಬೆಲೆ ತೆರಬೇಕಾಗಿದೆ ಎಂದು ಖೇದ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)  ಪಾಲಿಟ್ ಬ್ಯೂರೋ ಮೋದಿ ಸರ್ಕಾರವು ತನ್ನ ಜವಾಬ್ದಾರಿಯನ್ನು ನೆರವೇರಿಸಬೇಕು ಮತ್ತು ಈ ಕಲ್ಲಿದ್ದಲು ಕೊರತೆಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸಬೇಕೆಂದು ಒತ್ತಾಯಿಸಿದೆ.

Leave a Reply

Your email address will not be published. Required fields are marked *