ಎನ್.ಪಿ.ಆರ್. ಸಮಕಾಲಿಕಗೊಳಿಸುವುದು ಬೇಡವೇ ಬೇಡ

ಪ್ರಕಾಶ್ ಕಾರಟ್

KaratA copy
ಪ್ರಕಾಶ್ ಕಾರಟ್

ಜನಗಣತಿಯ ಮೊದಲ ಹಂತ ನಡೆಯಲಿರುವಾಗ ಎನ್‌ಪಿಆರ್ ಅದ್ಯತನ (ಸಮಕಾಲಿಕಗೊಳಿಸುವ) ಕೆಲಸವೂ ಕೂಡ ನಡೆಯುತ್ತದೆ ಎಂದು ಸ್ಪಷ್ಟವಾಗಿದೆ. ಇದು ನಡೆಯಕೂಡದು. ಏಕೆಂದರೆ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌ನ  ಸಂಕಲನದ ಮೊದಲ ಹಂತವು ಒಂದು ವಿಭಜನಕಾರಿ ಹಾಗೂ ಹೊರಗಿಡುವ ಪ್ರಕ್ರಿಯೆಯಾಗಲಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಸಿದ್ಧಪಡಿಸುವ ವೇಳೆ 19 ಲಕ್ಷ ಜನರನ್ನು ಕೈಬಿಟ್ಟಾಗ ಏನಾಯ್ತು ಎಂಬ ಅನುಭವ ಈಗಾಗಲೇ ನಮ್ಮ ಕಣ್ಣ ಮುಂದಿದೆ. ಅವರೆಲ್ಲರೂ ಎಲ್ಲ ಸಮುದಾಯಗಳಿಗೆ ಸೇರಿದ ಬಡವರಾಗಿದ್ದು ಸರ್ಕಾರ ಕೇಳಿದ ದಾಖಲೆ ಪತ್ರಗಳನ್ನು ಸಲ್ಲಿಸುವ ಸಾಮರ್ಥ್ಯ ಇಲ್ಲದವರಾಗಿದ್ದರು.

ಪೌರತ್ವಕ್ಕೆ ಧರ್ಮ ಆಧರಿತ ಮಾನದಂಡವನ್ನು ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದಿಲ್ಲಿಯ ಶಾಹೀನ್‌ಬಾಗ್‌ನ ಹೋರಾಟ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್-ಎನ್‌ಪಿಆರ್)ಯ ಅದ್ಯತನ(ಸಮಕಾಲಿಕಗೊಳಿಸುವ) ವಿಚಾರ ಮತ್ತೆ 2021ರ ಜನಗಣತಿಯ ಕಾರ್ಯಸೂಚಿಗೆ ಮರಳಿದೆ. ಜನಗಣತಿ ಅಧಿಕಾರಿಗಳಿಗೆ ನೀಡುವ ಕೈಪಿಡಿಯ ಭಾಗವಾಗಿ ಸಮಕಾಲಿಕಗೊಳಿಸುವ ನಮೂನೆ ಪತ್ರವನ್ನು (ಅಪ್‌ಡೇಷನ್ ಫಾರ್ಮ್) ಜನಗಣತಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಈ ಕೈಪಿಡಿಯನ್ನು ಆಗಸ್ಟ್ 18ರಂದು ಆನ್‌ಲೈನ್ ವ್ಯವಸ್ಥೆ ಮೂಲಕ ರಚಿಸಿ ಎಲ್ಲ ರಾಜ್ಯಗಳಿಗೆ ಕೊಡಲಾಗಿತ್ತು.

ಮಾಧ್ಯಮ ವರದಿಯ ಪ್ರಕಾರ, ಭಾರತದ ಮಹಾ ನೋಂದಣಾಧಿಕಾರಿ (ಆರ್‌ಜಿಐ) ಜಿಲ್ಲಾ ಜನಗಣತಿ ಅಧಿಕಾರಿಗಳಿಗೆ ನೀಡಿರುವ ಈ ದಸ್ತಾವೇಜಿನಲ್ಲಿ ಕುಟುಂಬದ ಎಲ್ಲ ಸದಸ್ಯರಿಗೆ ಸಂಬಂಧಿಸಿ 14 ಪ್ರಮಾಣಾಂಶಗಳಲ್ಲಿ ವಿವರಗಳನ್ನು  ಸಂಗ್ರಹಿಸುವ ನಮೂನೆ ಪತ್ರವಿದೆ. ಇದರಲ್ಲಿ 2010ರಲ್ಲಿ ಪ್ರಥಮ ಬಾರಿಗೆ ಸಂಗ್ರಹಿಸಿ, 2015ರಲ್ಲಿ ಸಮಕಾಲಿಕಗೊಳಿಸಲಾಗಿರುವ ಕುಟುಂಬದ ಎಲ್ಲ ಸದಸ್ಯರ ಎನ್‌ಪಿಆರ್ ದತ್ತಾಂಶ ಸಂಚಯ(ಡೇಟಾಬೇಸ್)ವನ್ನು  ಸಮಕಾಲಿಕಗೊಳಿಸಲಾಗುತ್ತದೆ. ಜನಗಣತಿಯ ಮೊದಲ ಹಂತದಲ್ಲಿ ಮನೆಗಳನ್ನು ಪಟ್ಟಿ ಮಾಡುವುದು ಹಾಗೂ ಮನೆಗಳ ಗಣತಿ ನಡೆಸುವುದು ಸೇರಿರುತ್ತದೆ. ಅವನ್ನು ಕೂಡ ಎನ್‌ಪಿಆರ್‌ನ್ನು ಸಮಕಾಲಿಕಗೊಳಿಸಲು ಬಳಸಲಾಗುತ್ತದೆ. 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಅವೆರಡನ್ನೂ ಏಕಕಾಲದಲ್ಲಿ ನಡೆಸಲು ಈ ಮುಂಚೆ ನಿರ್ಧರಿಸಲಾಗಿತ್ತು. ಆದರೆ ಕೊವಿಡ್ ಸಾಂಕ್ರಾಮಿಕದ ಕಾರಣಕ್ಕೆ ಅದನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲಾಯಿತು.

ಮೋದಿ ಸರ್ಕಾರ ಮುಂದಿನ ದಿನಗಳಲ್ಲಿ ಜನಗಣತಿಯ ಮೊದಲ ಹಂತದೊಂದಿಗೆ ಎನ್‌ಪಿಆರ್ ಸಮೀಕ್ಷೆಯನ್ನು ಕೂಡ ನಡೆಸಲಿದೆ ಎನ್ನುವುದು ಇದರ ಅರ್ಥವಾಗಿದೆ. ಮನೆ ಮನೆ ಸಮೀಕ್ಷೆಯ ಅವಧಿಯನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.

nrc-2Aಆಕ್ಷೇಪವೇನು?

ಎನ್‌ಪಿಆರ್ ಸಮಕಾಲಿಕಗೊಳಿಸುವುದಕ್ಕೆ ಇರುವ ಆಕ್ಷೇಪವಾದರೂ ಏನು? 2019ರ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾನೂನಿಗೆ(ಸಿಎಎ) ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಸಿಎಎ ಮತ್ತು ಎನ್‌ಪಿಆರ್ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧ ಕಲ್ಪಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಸಿಎಎ ಮತ್ತು ಎನ್‌ಆರ್‌ಸಿ ಅಂತರ್‌ ಸಂಬಂಧವಿರುವ ಎರಡು ಕ್ರಮಗಳಾಗಿದ್ದು ಎನ್‌ಆರ್‌ಸಿ ಸಿದ್ಧಪಡಿಸಲು ಎನ್‌ಪಿಆರ್ ಮೊದಲ ಹಂತವಾಗಿದೆ.

ಪೌರತ್ವದ ವ್ಯಾಖ್ಯಾನವನ್ನೇ ಬದಲಾಯಿಸುವ ಮೋದಿ ಸರ್ಕಾರದ ಯೋಜನೆಗೂ ಈ ಮೂರಕ್ಕೂ ಸಂಬಂಧವಿದೆ.  ನಿರ್ದಿಷ್ಟವಾಗಿ ಮುಸ್ಲಿಮರನ್ನು, ಪೌರತ್ವ ಪಡೆಯುವುದರಿಂದ ಹೊರತುಪಡಿಸುವುದು ಸಿಎಎ ಉದ್ದೇಶವಾಗಿದೆ. ನೆರೆಯ ದೇಶಗಳಿಂದ ದಸ್ತಾವೇಜುಗಳಿಲ್ಲದೆ ಬರುವ ಹಿಂದೂ, ಸಿಖ್, ಕ್ರೈಸ್ತ ಅಥವಾ ಬೌದ್ಧರಂತಲ್ಲದೆ, ಮುಸ್ಲಿಮರಿಗೆ ಮಾತ್ರ ಪೌರತ್ವ ಕೊಡದಿರುವುದು ಇದರ ಹುನ್ನಾರವಾಗಿದೆ. ಆ ಮೂಲಕ ಪೌರತ್ವಕ್ಕೆ ಧರ್ಮ ಆಧಾರಿತ ಮಾನದಂಡವನ್ನು ತರಲಾಗುತ್ತಿದೆ. ದೇಶದೊಳಗೆ ತಮ್ಮ ನಾಗರಿಕರ ಹಕ್ಕುಗಳನ್ನು ಚಲಾಯಿಸುತ್ತ ಬಂದಿರುವ ತಥಾಕಥಿತ ಮುಸ್ಲಿಂ ʻನುಸುಳುಕೋರರನ್ನು’ ತೊಲಗಿಸುವುದು ಎನ್‌ಆರ್‌ಸಿಯ ಉದ್ದೇಶವಾಗಿದೆ.

ಸಿಎಎ ಮತ್ತು ಎನ್‌ಆರ್‌ಸಿ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸರ್ಕಾರದ ಇತರ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳುವ ಮಟ್ಟಿಗೂ ಅವರು ಹೋಗಿದ್ದಾರೆ. ಆದರೆ ಈ ಎಲ್ಲ ಪ್ರತಿಪಾದನೆಗಳು ಅಪ್ಪಟ ಸುಳ್ಳು ಎನ್ನುವುದನ್ನು ಸಂಸತ್ತಿನಲ್ಲಿ ಅಮಿತ್ ಷಾ ನೀಡಿದ ಹೇಳಿಕೆಗಳು ಹಾಗೂ ಕೇಂದ್ರ ಗೃಹ ಸಚಿವಾಲಯದ ವರದಿಗಳಲ್ಲಿ ಸ್ಪಷ್ಟವಾಗಿ ನಮೂದಿಸಿರುವ ಎನ್‌ಪಿಆರ್ ಮತ್ತು ಎನ್‌ಸಿಆರ್ ನಡುವಿನ ಸಂಬಂಧಗಳೇ ಬಯಲಿಗೆಳೆದಿವೆ.

2003ರಲ್ಲಿ ಅಂದಿನ ವಾಜಪೇಯಿ ಸರ್ಕಾರ 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ನಿಯಮಗಳನ್ನು ರೂಪಿಸಿ ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಪರಿಕಲ್ಪನೆಗಳನ್ನು ಪರಿಚಯಿಸಿತು. ಎನ್‌ಪಿಆರ್ ಪರಿಶೀಲಿಸಿದ ನಂತರವೇ ಎನ್ಆರ್‌ಸಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ನಿಯಮಗಳು ಸ್ಪಷ್ಟಪಡಿಸಿದ್ದವು. ಗೃಹ ಸಚಿವಾಲಯದ ಮಾತುಗಳಲ್ಲೇ ಹೇಳುವುದಾದರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (ಎನ್‌ಪಿಆರ್) ಎನ್‌ಆರ್‌ಸಿಯ ಮೊದಲ ಹಂತವಾಗಿದೆ.

ಕೈಪಿಡಿಯಲ್ಲಿ ಅಳವಡಿಸಲಾಗಿರುವ ಎನ್‌ಪಿಆರ್ ಪ್ರಶ್ನಾವಳಿಯು ಕಳೆದ ವರ್ಷ ಅಂತಿಮಗೊಳಿಸಲಾದ 14 ಪ್ರಮಾಣಾಂಶಗಳ ರೀತಿಯಲ್ಲೇ ಇದೆ. ತಂದೆ-ತಾಯಿಯ ಜನ್ಮ ದಿನಾಂಕ ಹಾಗೂ ಸ್ಥಳ, ಮಾತೃ ಭಾಷೆ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಮುಂತಾದ ಗುರುತು ಸಾಬೀತುಪಡಿಸುವ ದಾಖಲೆಪತ್ರಗಳನ್ನು ಪ್ರಶ್ನಾವಳಿ ಒಳಗೊಂಡಿದೆ. ಸ್ಥಳೀಯ ಜನಸಂಖ್ಯಾ ರಿಜಿಸ್ಟರ್‌ ಅನ್ನು ಸಿದ್ಧಪಡಿಸುವಾಗ ‘ಅನುಮಾನಾಸ್ಪದ’ ನಾಗರಿಕ ಎಂದು ಗುರುತಿಸಲು ಅವಕಾಶವನ್ನು ತಾಲೂಕು ಮಟ್ಟದ ಅಧಿಕಾರಿಗೆ ಈ ನಿಯಮಗಳಲ್ಲಿ ಕಲ್ಪಿಸಲಾಗಿದೆ. ಇಂತಹ ವ್ಯಕ್ತಿ ತಾನು ಭಾರತೀಯ ಪ್ರಜೆ ಎನ್ನುವುದನ್ನು ಸಾಬೀತುಪಡಿಸಲು ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

anti-caa-shaheen bagh
ಪೌರತ್ವಕ್ಕೆ ಧರ್ಮ ಆಧರಿತ ಮಾನದಂಡವನ್ನು ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದಿಲ್ಲಿಯ ಶಾಹೀನ್‌ಬಾಗ್‌ನ ಹೋರಾಟ

ವಿಸ್ತರಿಸಿದ ಚಳವಳಿ

ಸಿಎಎ ವಿರುದ್ಧ ಆರಂಭವಾಗಿದ್ದ ಚಳವಳಿಯು ಎನ್‌ಆರ್‌ಸಿ ವಿರುದ್ಧವೂ ವಿಸ್ತರಿಸಿತ್ತು. ಅವೆರಡೂ ಹಿಂದುತ್ವ ಸಿದ್ಧಾಂತದ ಆಧಾರದಲ್ಲಿ ಕೆಲವರನ್ನು ಪೌರತ್ವದಿಂದ ಹೊರಗಿಡುವ ಅವಳಿ ಕ್ರಮಗಳಾದ್ದರಿಂದ ಚಳವಳಿ ವಿಸ್ತರಣೆಯಾಗಿತ್ತು. ಎನ್‌ಪಿಆರ್ ಅನ್ನು ಸಮಕಾಲಿಕಗೊಳಿಸಲು 2019ರಲ್ಲಿ ಕೇಂದ್ರ ಸಚಿವ ಸಂಪುಟ ನಿರ್ಧರಿಸಿ ಅದಕ್ಕಾಗಿ 8,500 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಆಗ ಭಾರತ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಇದನ್ನು ಪ್ರಬಲವಾಗಿ ವಿರೋಧಿಸಿತ್ತು. ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಅನುಷ್ಠಾನ ಮಾಡುವುದಿಲ್ಲ ಎಂದು ಘೋಷಿಸಿದ್ದ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯಗಳಲ್ಲಿ ಎನ್‌ಪಿಆರ್ ಸಮೀಕ್ಷೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆಯೂ ಕ್ರಮಗಳನ್ನು ಕೈಗೊಳ್ಳುವಂತೆ ಸಿಪಿಐ(ಎಂ) ಕರೆ ನೀಡಿತ್ತು. ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಸಂಕಲಿಸುವುದಿಲ್ಲ ಎಂದು ಆ ವರ್ಷ ಡಿಸೆಂಬರ್ ಹೊತ್ತಿಗೆ 13 ಮುಖ್ಯಮಂತ್ರಿಗಳು ಘೋಷಿಸಿದ್ದರು. ತಮ್ಮ ರಾಜ್ಯಗಳಲ್ಲಿ ಎನ್‌ಪಿಆರ್ ಅದ್ಯತನ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಕೇರಳ ಮತ್ತು  ಬಂಗಾಳ ಮುಖ್ಯಮಂತ್ರಿಗಳು ಪ್ರಕಟಿಸಿದ್ದರು. ಕೇರಳದ ಎಲ್‌ಡಿಎಫ್ ಸರಕಾರವಂತೂ ರಾಜ್ಯದಲ್ಲಿ ಎನ್‌ಪಿಆರ್ ಪ್ರಕ್ರಿಯೆಯನ್ನು ಅಮಾನತುಗೊಳಿಸಲಾಗುವುದು,  ಜನಗಣತಿಯನ್ನು ಮಾತ್ರವೇ ನಡೆಸಲಾಗುವುದು ಎಂದು ಕೇರಳದ ಅಧಿಸೂಚನೆಯನ್ನೇ ಹೊರಡಿಸಿ ಈ ವಿಚಾರದಲ್ಲಿ ನೇತೃತ್ವ ನೀಡಿತು.

ಅಸ್ಸಾಂ ಅನುಭವ ನೆನಪಿಸಿಕೊಂಡು

ಈ ವಿಚಾರ ಮಹಾ ಸಾಂಕ್ರಾಮಿಕದಿಂದಾಗಿ ಇಡೀ ಜನಗಣತಿ-ಎನ್‌ಪಿಆರ್ ಪ್ರಕ್ರಿಯೆಯನ್ನೇ ಅನಿರ್ದಿಷ್ಟವಾಗಿ ಮುಂದೂಡಿದ್ದರಿಂದ ಜನರ ಮನಸ್ಸಿನಿಂದ ದೂರ ಸರಿದಿತ್ತು. ಈಗ ಜನಗಣತಿಯ ಮೊದಲ ಹಂತ ನಡೆಯಲಿರುವಾಗ ಎನ್‌ಪಿಆರ್ ಅದ್ಯತನ ಕೆಲಸವೂ ಕೂಡ ನಡೆಯುತ್ತದೆ ಎಂದು  ಸ್ಪಷ್ಟವಾಗಿದೆ.

ಇದು ನಡೆಯಕೂಡದು. ಏಕೆಂದರೆ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌ನ  ಸಂಕಲನದ ಮೊದಲ ಹಂತವು ಒಂದು ವಿಭಜನಕಾರಿ ಹಾಗೂ ಹೊರಗಿಡುವ ಪ್ರಕ್ರಿಯೆಯಾಗಲಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಸಿದ್ಧಪಡಿಸುವ ವೇಳೆ 19 ಲಕ್ಷ ಜನರನ್ನು ಕೈಬಿಟ್ಟಾಗ ಏನಾಯ್ತು ಎಂಬ ಅನುಭವ ಈಗಾಗಲೇ ನಮ್ಮ ಕಣ್ಣ ಮುಂದಿದೆ. ಅವರೆಲ್ಲರೂ ಎಲ್ಲ ಸಮುದಾಯಗಳಿಗೆ ಸೇರಿದ ಬಡವರಾಗಿದ್ದು ಸರ್ಕಾರ ಕೇಳಿದ ದಾಖಲೆ ಪತ್ರಗಳನ್ನು ಸಲ್ಲಿಸುವ ಸಾಮರ್ಥ್ಯ ಇಲ್ಲದವರಾಗಿದ್ದರು. ಎನ್‌ಆರ್‌ಸಿಯನ್ನು ವಿರೋಧಿಸುವ ರಾಜ್ಯ ಸರ್ಕಾರಗಳು ಎನ್‌ಪಿಆರ್ ಅದ್ಯತನ ಪ್ರಕ್ರಿಯೆ  ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಜನಗಣತಿ ಮತ್ತು ಎನ್‌ಪಿಆರ್ ಸಮಕಾಲಿಕಗೊಳಿಸುವ  ಕೆಲಸ ಮಾಡಬೇಕಾದವರು ರಾಜ್ಯ ಸರ್ಕಾರಗಳ ಸಿಬ್ಬಂದಿ. ಕೇರಳದಂತೆ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಜನಗಣತಿಗೆ ಮಾತ್ರವೇ ಅನುಕೂಲ ಕಲ್ಪಿಸಬೇಕೇ ಹೊರತು ಎನ್‌ಪಿಆರ್ ಅದ್ಯತನಕ್ಕಲ್ಲ.

ಸರ್ಕಾರವು ಎನ್‌ಪಿಆರ್ ಯೋಜನೆ ಬಗ್ಗೆ ಹಠ ಹಿಡಿದರೆ ಎನ್‌ಪಿಆರ್ ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಸಹಕರಿಸಬಾರದು, ಜನಗಣತಿಗೆ ಸಂಬಂಧಿಸಿದ ಪ್ರಶ್ನಾವಳಿಗೆ ಮಾತ್ರವೇ ಉತ್ತರಿಸಬೇಕು ಎಂದು ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಜನರಿಗೆ ಮನವಿ ಮಾಡಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *