ಭಟ್ಟಂಗಿತನದ ಪ್ರದರ್ಶನ ರಂಗವಾದ ಬಿಜೆಪಿ ರಾಷ್ಟ್ರೀಯ ಅಧಿವೇಶನ

ಪ್ರಕಾಶ್ ಕಾರಟ್

KaratA copy
ಪ್ರಕಾಶ್ ಕಾರಟ್

ಎರಡು ವರ್ಷಗಳ ನಂತರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷರ ಭಾಷಣ, ರಾಜಕೀಯ ಗೊತ್ತುವಳಿ ಮತ್ತು ಮೋದಿಯ ಸಮಾರೋಪ ಭಾಷಣ, ಈ ಯಾವುದರಲ್ಲೂ ಸ್ವಯಂ-ವಿಮರ್ಶೆಯ ಲವಲೇಶವೂ ಇರಲಿಲ್ಲ. ಅಲ್ಲಿ ಪ್ರದರ್ಶನಗೊಂಡದ್ದು ಅಸಂಬದ್ಧ ಮಟ್ಟ ತಲುಪಿದ ಸ್ವಯಂಪ್ರಶಂಸೆ, ಸರ್ವೋಚ್ಚ ಮುಖಂಡ’ನ ವ್ಯಕ್ತಿ ಪೂಜೆಯಷ್ಟೇ. ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆಯೇರಿಕೆ ಮತ್ತು ಜನಗಳ ಆರ್ಥಿಕ ಸಂಕಷ್ಟಗಳ ಬಗ್ಗೆ ಬಿಜೆಪಿ ಏನೇನೂ ಕಾಳಜಿ ಹೊಂದಿಲ್ಲ, ಸದ್ಯದಲ್ಲೇ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅದು ತನ್ನ ಎಂದಿನ ಕೋಮು ಧ್ರುವೀಕರಣ ಮತ್ತು ‘ಹಿಂದೂ’ ರಾಷ್ಟ್ರೀಯತಾವಾದದ ಸೂತ್ರವನ್ನೇ ಪ್ರಧಾನ ಸಾಧನವಾಗಿ ಅವಲಂಬಿಸಲು ನಿರ್ಧರಿಸಿದಂತೆ ಕಾಣುತ್ತದೆ. ಆದರೆ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿನ ಆತ್ಮಸಂತೃಪ್ತಿಯ ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ ಜನಸಮುದಾಯದಲ್ಲಿ ಬಿಜೆಪಿ ವಿರುದ್ಧ ಅತೃಪ್ತಿ ಮಡುಗಟ್ಟಿರುವುದು ಇತ್ತೀಚಿನ ಉಪಚುನಾವಣೆ ಫಲಿತಾಂಶಗಳಲ್ಲಿ ವ್ಯಕ್ತಗೊಂಡಿದೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನವೆಂಬರ್ 7ರಂದು ನಡೆಯಿತು. ಎರಡು ವರ್ಷಗಳ ಅಂತರದ ನಂತರ ಕಾರ್ಯಕಾರಿಣಿ ಸಭೆ ನಡೆದಿದ್ದರಿಂದ ಕೇಂದ್ರದ ಆಳುವ ಪಕ್ಷವು ರಾಜಕೀಯ ವಿದ್ಯಮಾನಗಳು ಮತ್ತು ಕೋವಿಡ್-ಪೀಡಿತ ಅವಧಿಯಲ್ಲಿ ನಡೆದ ಕೆಲಸಕಾರ್ಯಗಳನ್ನು ಹೇಗೆ ಅಂದಾಜು ಮಾಡಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು.

ಆದರೆ, ಈ ಅವಧಿಯಲ್ಲಿ ಸರ್ಕಾರದ ಕೆಲಸಗಳು ಹಾಗೂ ನೀತಿಗಳ ವಸ್ತುನಿಷ್ಠ ವಿಮರ್ಶೆ ನಡೆಯಬಹುದೆಂದು ನಿರೀಕ್ಷಿಸಿದ್ದ ಯಾರಿಗೇ ಆದರೂ ಕಾದಿದ್ದು ನಿರಾಶೆಯೇ ಹೊರತು ಬೇರೇನೂ ಅಲ್ಲ. ಬಿಜೆಪಿ ಅಧ್ಯಕ್ಷರ ಭಾಷಣ, ರಾಜಕೀಯ ಗೊತ್ತುವಳಿ ಮತ್ತು ಮೋದಿಯ ಸಮಾರೋಪ ಭಾಷಣ -ಇವೆಲ್ಲವನ್ನೂ ಒಟ್ಟಾಗಿ ತೆಗೆದುಕೊಂಡರೂ ಸ್ವಯಂ-ವಿಮರ್ಶೆಯ ಲವಲೇಶವೂ ಅಲ್ಲಿ ಕಂಡು ಬಂದಿಲ್ಲ.

ಸಭೆಯಲ್ಲಿ ಅಂಗೀಕರಿಸಿದ ರಾಜಕೀಯ ಗೊತ್ತುವಳಿಯಲ್ಲಂತೂ ಎಲ್ಲ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯ ನೀತಿಗಳು ಮತ್ತು ಸಾಧನೆಗಳ ಮುಖಸ್ತುತಿ ತುಂಬಿ ತುಳುಕುತ್ತಿತ್ತು. ಕೋವಿಡ್ ನಿರ್ವಹಣೆ, ಆರೋಗ್ಯ ವ್ಯವಸ್ಥೆ, ಉದ್ಯೋಗ, ಉಚಿತ ಆಹಾರಧಾನ್ಯ ವಿತರಣೆ ಇತ್ಯಾದಿ ಎಲ್ಲ ರಂಗಗಳಲ್ಲಿನ ಸಾಧನೆಯನ್ನು ಗೊತ್ತುವಳಿ ಹಾಡಿ ಹೊಗಳಿದೆ. ಗೊತ್ತುವಳಿಯ ಪ್ರತಿಯೊಂದು ಪ್ಯಾರಾದಲ್ಲೂ ಮೋದಿ ಉಪಕ್ರಮಗಳಿಗಾಗಿ ಅವರನ್ನು ಹೊಗಳುವ ಉಲ್ಲೇಖ ಇದ್ದೇ ಇದೆ. ಒಟ್ಟಿನಲ್ಲಿ ಹೇಳುವುದಾದರೆ, ಇದೊಂದು ಭಟ್ಟಂಗಿತನದ ಕಸರತ್ತು.

ಸರ್ವೋನ್ನತ ನಾಯಕನ ವ್ಯಕ್ತಿ ಪೂಜೆ ಮತ್ತು ಪಕ್ಷದಲ್ಲಿ ಮೋದಿ ಹೊಂದಿರುವ ಹಿಡಿತ ಏನೆಂಬುದನ್ನು ಇದು ಪೂರ್ಣವಾಗಿ ಪ್ರದರ್ಶಿಸಿದೆ. ಕೋವಿಡ್ ನಿರ್ವಹಿಸುವಲ್ಲಿ ಮೋದಿ ಸರ್ಕಾರ ಮಾಡಿದ ‘ಒಳ್ಳೆಯ’ ಕೆಲಸಗಳನ್ನು ಅದರಲ್ಲಿ ವಿವರಿಸಲಾಗಿದೆ. ಲಸಿಕೆಗಾಗಿ 35,000 ಕೋಟಿ ರೂಪಾಯಿ ಒದಗಿಸಿದ್ದು, 80 ಕೋಟಿ ಬಡವರಿಗೆ ಎಂಟು ತಿಂಗಳ ಕಾಲ ಉಚಿತ ಆಹಾರ ಧಾನ್ಯ ವಿತರಣೆ, ಆರೋಗ್ಯ ವಿಮೆ ಯೋಜನೆ ಅದರಲ್ಲಿ ಸೇರಿವೆ. ನೂರು ಕೋಟಿ ಡೋಸ್ ಲಸಿಕೆ ನೀಡಿರುವುದನ್ನು ಸಂಭ್ರಮಿಸಲಾಗಿದೆ. ಆದರೆ, ದೇಶದ ವಯಸ್ಕ ಜನಸಂಖ್ಯೆಯ ಶೇಕಡ 30 ಜನರಿಗೆ ಮಾತ್ರವೇ ಎರಡೂ ಡೋಸ್ ಲಸಿಕೆ ಹಾಕಲಾಗಿದೆ ಎಂಬ ವಾಸ್ತವಾಂಶವನ್ನು ಗೊತ್ತುವಳಿಯಲ್ಲಿ ಎಲ್ಲೂ ನಮೂದಿಸಿಲ್ಲ. ಲಸಿಕೆ ನೀಡಿಕೆಯ ಈಗಿನ ದರದಲ್ಲಿ 2021ರೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ಹಾಕುವ ಸರ್ಕಾರದ ಗುರಿ ತಲುಪುವುದು ಕನಸಿನ ಮಾತು ಎನ್ನುವುದನ್ನು ಕೂಡ ಅದು ಎಲ್ಲೂ ಹೇಳಿಲ್ಲ.

ಕೋವಿಡ್ ಮಹಾಸೋಂಕಿಗೆ ಬಲಿಯಾದ ಲಕ್ಷಾಂತರ ಜನರಿಗೆ ಸಹಾನುಭೂತಿ ವ್ಯಕ್ತಪಡಿಸುವ, ಲಸಿಕೆ ಸಂಗ್ರಹದಲ್ಲಿ ಆಗಿರುವ ಅವಾಂತರದ ಬಗ್ಗೆ ಮತ್ತು ಆರೋಗ್ಯ ಸೇವಾ ವ್ಯವಸ್ಥೆ ಹಾಗೂ ಆಮ್ಲಜನಕ ಪೂರೈಕೆಯಲ್ಲಿನ ಅವ್ಯವಸ್ಥೆ ಕುರಿತು ಒಂದೇ ಒಂದು ಮಾತನ್ನೂ ಆಡಿಲ್ಲ.

ನಿಭಾಯಿಸಬೇಕಾದ ಪ್ರಮುಖ ಆರ್ಥಿಕ ಸಮಸ್ಯೆಗಳ ಬಗ್ಗೆಯೂ ಅದು ಚಕಾರವೆತ್ತಿಲ್ಲ. ರೈತರು ನಡೆಸುತ್ತಿರುವ ಸುದೀರ್ಘ ಚಳವಳಿ ಬಗ್ಗೆಯೂ ಏನನ್ನೂ ಹೇಳಿಲ್ಲ. ಆದರೆ ಸರ್ಕಾರ ರೈತರ-ಪರ ಕೈಗೊಂಡ ಕ್ರಮಗಳ ಉದ್ದ ಪಟ್ಟಿಯನ್ನೇ ನೀಡಲಾಗಿದೆ. ಉದ್ಯೋಗಕ್ಕೆ ಸಂಬಂಧಿಸಿ ಹೇಳುವುದಾದರೆ, ಡಿಜಿಟಲೀಕರಣ ಹಾಗೂ ಸ್ಟಾರ್ಟ್-ಅಪ್‌ಗಳಿಂದಾಗಿ “ಯುವಜನರು ಉದ್ಯೋಗ ನಿರೀಕ್ಷಿಸುವ ಬದಲು ಉದ್ಯೋಗದಾತರಾಗಿದ್ದಾರೆ’ ಎಂದು ಬಿಜೆಪಿ ಗೊತ್ತುವಳಿ ಹೇಳಿದೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಭದ್ರತೆ, ಶಾಂತಿ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ ಎನ್ನುತ್ತದೆ ಬಿಜೆಪಿ. ಸಾವಿರಾರು ಜನರ ಬಂಧನ, ಇಂಟರ್‌ನೆಟ್ ಸೇವೆ ಸ್ಥಗಿತ ಮತ್ತು ಜನರ ಓಡಾಟದ ಮೇಲಿನ ನಿರ್ಬಂಧ ಮೊದಲಾದವುಗಳಿಂದಾಗಿ ಅಲ್ಲಿ ಸ್ಮಶಾನಮೌನ ಆವರಿಸಿರುವುದನ್ನು ಉಲ್ಲೇಖಿಸಿಲ್ಲ.

ಸ್ವಯಂಪ್ರಶಂಸೆಯ ದನಿಯನ್ನಂತೂ ಅಸಂಬದ್ಧ ಮಟ್ಟದ ವರೆಗೆ ಒಯ್ಯಲಾಗಿದೆ. ಜಾಗತಿಕ ತಾಪಮಾನ ನಿರ್ವಹಣೆಗೆ ಮೋದಿ ಇಡೀ ಜಗತ್ತಿಗೆ ದಾರಿ ತೋರಿದ್ದಾರಂತೆ. ಮೋದಿಯ ವಿದೇಶಾಂಗ ನೀತಿಯಿಂದಾಗಿ ಭಾರತವು ಅಧಿಕಾರ ಸಮತೋಲನದ ಶಕ್ತಿಯಷ್ಟೇ ಮಾತ್ರವಲ್ಲ ಜಗತ್ತಿನ ಒಂದು ದೊಡ್ಡ ಶಕ್ತಿಯಾಗಲು ಯತ್ನಿಸುತ್ತಿದೆ ಎನ್ನುತ್ತದೆ ಈ ನಿರ್ಣಯ.

ಜನತೆಯ ಸಂಕಟಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಹಾಗೂ ಕಳೆದ ಎರಡು ವರ್ಷಗಳಲ್ಲಿ ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಬೇಕೆಂದೇ ಮರೆಮಾಚುವ ಪ್ರವೃತ್ತಿ ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುವಂಥ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆಯೇರಿಕೆ ಮತ್ತು ಜನಗಳ ಆರ್ಥಿಕ ಸಂಕಷ್ಟಗಳ ಬಗ್ಗೆ ಬಿಜೆಪಿ ಏನೇನೂ ಕಾಳಜಿ ಹೊಂದಿಲ್ಲ ಎನ್ನುವುದೇ ಆ ಅಂಶವಾಗಿದೆ. ಆ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ತನ್ನ ಬಹುಕಾಲದ ಕೋಮು ಧ್ರುವೀಕರಣ ಮತ್ತು ‘ಹಿಂದೂ’ ರಾಷ್ಟ್ರೀಯತಾವಾದದ ಸೂತ್ರವನ್ನೇ ಓಟು  ಕ್ರೋಡೀಕರಣದ ಪ್ರಧಾನ ಸಾಧನವಾಗಿ ಅವಲಂಬಿಸಬೇಕೆಂದಿದೆ ಎನ್ನುವುದು ಗೊತ್ತುವಳಿಯಲ್ಲಿ ಅಳವಡಿಸಲಾಗಿರುವ ಧೋರಣೆಯಿಂದ ತಿಳಿಯುತ್ತದೆ. ಅಲ್ಲದೆ ಇದಕ್ಕೆ ಪೂರಕವಾಗಿ ಅಪಾರ ಪ್ರಮಾಣದ ಹಣದ ಶಕ್ತಿಯನ್ನು ಹಾಗೂ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಜಾತಿ-ಸಾಮಾಜಿಕ ಸಮೀಕರಣವನ್ನಂತೂ ಅದು ಬಳಸಿಕೊಳ್ಳಲಿದೆ ಎನ್ನುವುದು ಸ್ಪಷ್ಟ. ಯೋಗಿ ಆದಿತ್ಯನಾಥ ಅವರೇ ರಾಜಕೀಯ ಗೊತ್ತುವಳಿಯನ್ನು ಮಂಡಿಸಿದ್ದು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಯಾವುದಕ್ಕೆ ಒತ್ತು ನೀಡಲಿದೆ ಎನ್ನುವುದರ  ಸೂಚಕವಾಗಿದೆ. ಆದಿತ್ಯನಾಥ ಈಗಾಗಲೇ ಕೋಮುವಾದಿ ರಾಜಕೀಯವನ್ನು ಕೆದಕಲು ಆರಂಭಿಸಿದ್ದಾರೆ. ಹಿಂದಿನ ಸರ್ಕಾರಗಳಲ್ಲಿ ಪಡಿತರ ಸಾಮಗ್ರಿ ಪಡೆಯಲು ‘ಅಬ್ಬಾ ಜಾನ್’ಗಳಿಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ಹೇಳುವ ಹಾಗೂ 2017ರಲ್ಲಿ ಮಾಡಿದಂತೆ ಕೈರಾನಾದಿಂದ ಹಿಂದೂಗಳ ವಲಸೆ ಮುಂತಾದ ಪಕ್ಕಾ ಕೋಮುವಾದಿ ಅಬ್ಬರದಲ್ಲಿ ಅವರು ಈಗಾಗಲೇ ತೊಡಗಿದ್ದಾರೆ.

ಏನೇ ಇರಲಿ, ಮೂರು ಲೋಕಸಭೆ ಹಾಗೂ 29 ಅಸೆಂಬ್ಲಿ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ “ಒಂದು ದೊಡ್ಡ ವಿಜಯ” ಸಿಕ್ಕಿದೆ ಎಂದು ಹೇಳಿಕೊಂಡರೂ, ಕಳವಳಕ್ಕೆ ಕಾರಣವಂತೂ ಇದ್ದೇ ಇದೆ. ಕೋಮು-ಜಾತಿ ಕ್ರೋಡೀಕರಣದ ಸೂತ್ರದ ಮೇಲಷ್ಟೇ ತಾನು ಅವಲಂಬಿಸಬಹುದೇ ಎನ್ನುವುದರ ಬಗ್ಗೆ ಬಿಜೆಪಿ ನಾಯಕತ್ವ ಚಿಂತನೆ ನಡೆಸುವಂತೆ ಇದು ಮಾಡಬೇಕು. ಅಸ್ಸಾಂ, ಮತ್ತು ಸ್ವಲ್ಪ ಮಟ್ಟಿಗೆ ಮಧ್ಯ ಪ್ರದೇಶ ಹೊರತು ಪಡಿಸಿದರೆ ಹಿಮಾಚಲ ಪ್ರದೇಶ, ರಾಜಸ್ಥಾನ, ಬಂಗಾಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ತನ್ನ ಸಾಧನೆ ಬಗ್ಗೆ ಬಿಜೆಪಿಗೆ ಚಿಂತೆಯಾಗಬೇಕಿತ್ತು.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿನ ಆತ್ಮಸಂತೃಪ್ತಿಯ ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ ಜನಸಮುದಾಯದಲ್ಲಿ ಬಿಜೆಪಿ ವಿರುದ್ಧ ಅತೃಪ್ತಿ ಮಡುಗಟ್ಟಿರುವುದು ಉಪಚುನಾವಣೆ ಫಲಿತಾಂಶಗಳಲ್ಲಿ ವ್ಯಕ್ತಗೊಂಡಿದೆ.

ಅನು: ವಿಶ್ವ

Leave a Reply

Your email address will not be published. Required fields are marked *