ಡಿಸೆಂಬರ್ 1 – ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ಅಖಿಲ ಭಾರತ ಪ್ರತಿಭಟನೆ: ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕರೆ

ಸಂಘ ಪರಿವಾರಕ್ಕೆ ಸಂಯೋಜಿತವಾಗಿರುವ ಸಂಸ್ಥೆಗಳಿಂದ ಅಲ್ಪಸಂಖ್ಯಾತ- ಕ್ರಿಶ್ಚಿಯನ್ ಮತ್ತು ಮುಸ್ಲಿಂ- ಸಮುದಾಯಗಳ ವಿರುದ್ಧ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಇವು ಭಾರತದ ಸಂವಿಧಾನದ ಮೇಲಿನ ದಾಳಿಗಳಾಗಿವೆ,  ಡಿಸೆಂಬರ್‍ 1ನ್ನು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ  ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಗಳ ವಿರುದ್ಧ ಪ್ರತಿಭಟನೆಯ ದಿನವಾಗಿ ಆಚರಿಸಲು  ಕರೆ ನೀಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್‌ನ ಆಂತರಿಕ ದಾಖಲೆಗಳಲ್ಲಿ ಇತ್ತೀಚಿಗೆ ಬಯಲಿಗೆ ಬಂದಿರುವ ಸಂಗತಿಗಳು ಕೂಡ, ಬಿಜೆಪಿ ನಾಯಕರು ಹೇಗೆ ಅತ್ಯಂತ ಕೋಮುವಾದಿ ಸಂದೇಶಗಳನ್ನು ಉತ್ತೇಜಿಸಿದ್ದಾರೆ, ಅನೇಕ ಸಂದರ್ಭಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂಬುದನ್ನು ಒತ್ತಿಹೇಳುತ್ತವೆ. ಇಂತಹ ಕೋಮುವಾದಿ ಕೃತ್ಯಗಳನ್ನು ಎಸಗಿದವರು ಕಾನೂನಿನಿಂದ ವಿನಾಯಿತಿಯನ್ನು ಪಡೆಯುತ್ತಾರೆ ಮಾತ್ರವಲ್ಲ, ಸಂತ್ರಸ್ತರನ್ನು ರಕ್ಷಿಸುವ ಬದಲು, ಬಿಜೆಪಿ ಆಳ್ವಿಕೆಯ ಅನೇಕ ರಾಜ್ಯಗಳಲ್ಲಿನ ಆಡಳಿತವು ಸಂತ್ರಸ್ತರನ್ನು ಮತ್ತು ಅವರನ್ನು ಬೆಂಬಲಿಸುವವರನ್ನು ಸುಳ್ಳು ಪ್ರಕರಣಗಳ ಮೂಲಕ ಶಿಕ್ಷಿಸುತ್ತದೆ ಮತ್ತು ಕರಾಳ ಕಾನೂನುಗಳ ಅಂಶಗಳ ಅಡಿಯಲ್ಲಿ ಬಂಧಿಸುತ್ತದೆ.

ಮಾನವ ಹಕ್ಕುಗಳ ಗುಂಪುಗಳ ಇತ್ತೀಚಿನ ವರದಿಗಳು 2021ರಲ್ಲಿ ಮೊದಲ ಒಂಬತ್ತು ತಿಂಗಳೊಳಗೆ ಕ್ರಿಶ್ಚಿಯನ್ ಸಮುದಾಯಗಳು ಮತ್ತು ಅವರ ಧಾರ್ಮಿಕ ಆರಾಧನಾ ಸ್ಥಳಗಳ ಮೇಲೆ 300 ದಾಳಿಗಳನ್ನು ದಾಖಲಿಸಿವೆ. ಇವುಗಳಿಗೆ ಗುರಿಯಾದವರು  ಹೆಚ್ಚಿನವರು ಆದಿವಾಸಿ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು. ಪ್ರಾರ್ಥನಾ ಸಭೆಗಳನ್ನು ನಿಯಮಿತವಾಗಿ ತಡೆಯಲಾಗುತ್ತಿದೆ ಮತ್ತು ಮತಾಂತರವನ್ನು ತಡೆಯುವ ಹೆಸರಿನಲ್ಲಿ ಭಾಗವಹಿಸುವವರನ್ನು ಥಳಿಸಲಾಗುತ್ತಿದೆ.

ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ದೊಂಬಿ ಹತ್ಯೆ, ಪೊಲೀಸ್ ಹತ್ಯೆಗಳು, ಸುಳ್ಳು ಬಂಧನಗಳು ಮತ್ತು ಅವರ ವಿರುದ್ಧ ಗೋ ರಕ್ಷಣೆ’ ಮತ್ತು `ಲವ್ ಜಿಹಾದ್’ ಹೆಸರಿನಲ್ಲಿ ದೊಂಬಿ ಹಿಂಸಾಚಾರದ ಪ್ರಕರಣಗಳು ಮುಂದುವರಿದಿವೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ತ್ರಿಪುರಾದಲ್ಲಿ, ವಿಎಚ್‌ಪಿ ಗಲಭೆಕೋರರು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿ ಮಾಡಿದ್ದಾರೆ, ಕೆಲವು ಮಸೀದಿಗಳನ್ನು ಹಾಳುಗೆಡವಿದ್ದಾರೆ. ಈ ದಾಳಿಗಳನ್ನು ವರದಿ ಮಾಡಿದವರ ವಿರುದ್ಧ ಯು.ಎ.ಪಿ.ಎ. ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಉದಾಹರಣೆಯೆಂದರೆ, ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾದ ಗುರ್‌ಗಾಂವ್‌ನಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವ ಹಕ್ಕನ್ನು ತಡೆಗಟ್ಟುತ್ತಿರುವುದು. ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮುಸ್ಲಿಂ ಬೀದಿಬದಿ ವ್ಯಾಪಾರಿಗಳಿಗೆ ಬೆದರಿಕೆ ಹಾಕಲಾಗಿದೆ ಮತ್ತು ಅವರ ಜೀವನೋಪಾಯವನ್ನು ಮುಂದುವರಿಸದಂತೆ ತಡೆಯಲಾಗುತ್ತಿದೆ. ಅಸ್ಸಾಂನಲ್ಲಿ, ದಶಕಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದ ಬಡ ರೈತ ಕುಟುಂಬಗಳನ್ನು ಅವರು  ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಅವರನ್ನು ಅಮಾನುಷವಾಗಿ ಹೊರಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಎನ್‌ಎಸ್‌ಎ ಬಳಕೆ ಸಾಮಾನ್ಯವಾಗಿದೆ.

ಅಲ್ಪಸಂಖ್ಯಾತರ ಮೇಲಿನ ಈ ದಾಳಿಗಳು ಭಾರತದ ಸಂವಿಧಾನದ ಮೇಲಿನ ಒಂದು ದಾಳಿಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಗಳ ವಿರುದ್ಧ ಡಿಸೆಂಬರ್ 1 ನ್ನು ಪ್ರತಿಭಟನೆಯ ದಿನವಾಗಿ ಆಚರಿಸಬೇಕು ಎಂದು  ಸಿಪಿಐ(ಎಂ) ಪೊಲಿಟ್‍ ಬ್ಯುರೊ ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *