ಸರಕಾರದ ಇಲಾಖೆ-ಸಂಸ್ಥೆಗಳ ಸರ್ವರ್ ಹ್ಯಾಕಿಂಗ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಿ: ಸಿಪಿಐ(ಎಂ)

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹಣಕಾಸು ಸಂಸ್ಥೆಗಳು ಹಾಗೂ ಸರ್ವರ್‌ಗಳ ಹ್ಯಾಕಿಂಗ್ ಹಗರಣದಲ್ಲಿ ಪಾಲ್ಗೊಂಡ ಶ್ರೀಕೃಷ್ಣ(ಶ್ರೀಕಿ) ಎಂಬ ಆರೋಪಿಯು ರಾಜ್ಯ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್‌ಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣವನ್ನು ಲಪಟಾಯಿಸಿರುವುದು ಮತ್ತು ಈತನ ಜೊತೆ ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಕೈಜೋಡಿಸಿ ಪಾಲು ಪಡೆದಿದ್ದಾರೆಂಬುದು ಬಹಳ ಗಂಭೀರವಾದ   ವಿಚಾರವಾಗಿದೆ.

ಇದು, ಸರಕಾರದ ಬೊಕ್ಕಸವನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದ ಸಂಚಿನ ಪ್ರಕರಣವಾಗಿದೆ. ಜನ್‌ಧನ್‌ ಖಾತೆಯೊಂದರಿಂದಲೇ ಸುಮಾರು 6,000 ಕೋಟಿ ರೂಪಾಯಿ ಲಪಟಾಯಿಸಲಾಗಿದೆಯೆನ್ನಲಾಗಿದೆ. ಇದರಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಪ್ರಭಾವಿ ರಾಜಕಾರಣಿಗಳು ಮತ್ತು ಮಂತ್ರಿಗಳು ಸೇರಿದ್ದಾರೆನ್ನಲಾಗಿದೆ.

ಸಾರ್ವಜನಿಕ ಬೊಕ್ಕಸದ ಹಣದ ಲೂಟಿಯ ಹಗರಣವನ್ನು ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಮುಚ್ಚಿ ಹಾಕುವ ಆಡಳಿತ ಮತ್ತು ವಿರೋಧ ಪಕ್ಷಗಳ ಕ್ರಮವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ರಾಜ್ಯದ ನಾಗರೀಕರು ಮತ್ತು ಜನತೆ ಇದರಿಂದ ಆತಂಕಿತರಾಗಿದ್ದು ಸದರಿ ಲೂಟಿಕೋರ ಹಗರಣದ ಸತ್ಯಾಸತ್ಯತೆಯನ್ನು ತಿಳಿಯಲು ಬಯಸಿದ್ದಾರೆ. ಆದ್ದರಿಂದ ಈ ಲೂಟಿಕೋರ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು, ಮಂತ್ರಿಗಳು, ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಭಾವಿಗಳು ಶಾಮೀಲಾಗಿರುವುದರಿಂದ, ಇದನ್ನು ಕೇವಲ ಸರಕಾರಿ ಇಲಾಖೆಗಳ ತನಿಖೆಯ ಕ್ರಮಗಳ ಮೂಲಕ ನಿಜವನ್ನು ಬಯಲಿಗೆಳೆಯಲಾಗುವುದೆಂಬುದು ಅಸಾಧ್ಯದ ವಿಚಾರ. ಬದಲಿಗೆ ಈ ಪ್ರಭಾವಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಈ ಹಗರಣ ಮುಚ್ಚಿಹಾಕಲು ನೆರವಾಗಬಹುದಾದ ಅಪಾಯವಿದೆ. ಈ ಪ್ರಕರಣದ ಆರೋಪಿಗೆ, ಈಗಾಗಲೇ ಆತನಿಗೆ ತಿಳಿಯದಂತೆ ಜಾಮೀನು ನೀಡಲಾಗಿದೆಯೆಂಬುದು ಇದನ್ನು ಮತ್ತಷ್ಠು ಪುಷ್ಠೀಕರಿಸುತ್ತದೆ.

ಆದ್ದರಿಂದ, ಸದರಿ ಪ್ರಕರಣವನ್ನು ಸರಕಾರದ ಇಲಾಖಾ ತನಿಖೆಯ ಬದಲಿಗೆ, ನ್ಯಾಯಾಂಗ ಸುಪರ್ಧಿಯಲ್ಲಿ, ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ), ರಾಜ್ಯ ಘಟಕ  ಬಲವಾಗಿ ಒತ್ತಾಯಿಸುತ್ತದೆ.

ಡಿಜಿಟಲ್ ಕರೆನ್ಸಿ ವಹಿವಾಟಿನ ಮೇಲೆ ನಿಯಂತ್ರಣವಿರಲಿ

ಅದೇ ರೀತಿ, ಅಧಿಕೃತ ಕರೆನ್ಸಿಗೆ ಸಮಾನಾಂತರವಾಗಿ ನಡೆಯುತ್ತಿರುವ ಡಿಜಿಟಲ್ ಕರೆನ್ಸಿಯ ಮುಕ್ತ ವಹಿವಾಟಿನ ಮೇಲೆ ಸರಕಾರಗಳ ಯಾವುದೇ ನಿಯಂತ್ರಣವಿಲ್ಲದೇ ಇರುವುದು ಆತಂಕದ ವಿಷಯ. ಲಕ್ಷಾಂತರ ಕೋಟಿ ರೂ.ಗಳ ಭಾರೀ ಮೊತ್ತದ ಇಂತಹ ವಹಿವಾಟುಗಳಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಿಗಬೇಕಾದ ಸಾವಿರಾರು ಕೋಟಿ ತೆರಿಗೆಯು ದೊರೆಯದಂತೆ ವಂಚಿಸಲ್ಪಡುತ್ತಿದೆ. ಇದರಿಂದಲೂ ಸರಕಾರಗಳ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ.

ಇಂತಹ ಕ್ರಮಗಳ ಮೂಲಕ ಸರಕಾರ ಬೊಕ್ಕಸವನ್ನು ತುಂಬಿಕೊಳ್ಳುವ ಬದಲು ಬಡವರು ಮತ್ತು ಸಾಮಾನ್ಯ ನಾಗರೀಕರನ್ನು ಸುಲಿಯುವ ಬೆಲೆ ಏರಿಕೆಯಂತಹ ಕ್ರಮಗಳಿಗೆ ಮುಂದಾಗುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ.

ಈ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಸಾರ್ವಜನಿಕ ಬೊಕ್ಕಸಕ್ಕೆ ನೆರವು ಪಡೆಯುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

 

ಯು. ಬಸವರಾಜ,
ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *