ಹರ್ಯಾಣ ಮುಖ್ಯಮಂತ್ರಿಯ ಬೆದರಿಕೆ ಮತ್ತು ವಿಭಜನೆಯ ಸಂಕುಚಿತ ರಾಜಕೀಯ

ಬೃಂದಾ ಕಾರಟ್

ಕಳೆದ ಕೆಲವು ವಾರಗಳಲ್ಲಿ ಭಾರತದ ರಾಜಕೀಯದಲ್ಲಿ ಎರಡು ಸಮಾನಾಂತರ ಪ್ರವೃತ್ತಿಗಳು ಕಂಡುಬಂದಿವೆ.  ಮೊದಲನೆಯದು ಐಕ್ಯತೆಯ  ರಾಜಕೀಯ- ಕಾರ್ಮಿಕರ ಬೆಂಬಲಿತ ರೈತರ ಐಕ್ಯ ಹೋರಾಟಗಳ ಐತಿಹಾಸಿಕ ವಿಜಯ ಇದಕ್ಕೆ ನಿದರ್ಶನ. ಎರಡನೆಯದು,  ಮತ್ತೊಮ್ಮೆ ಸಂಕುಚಿತ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವ ಮತ್ತು ದುರುಪಯೋಗ ಪಡಿಸಿಕೊ ಳ್ಳುವ ಕೇಂದ್ರದ ಆಳ್ವಿಕೆಯ ಮುಖಂಡರು ಮತ್ತೆ ಆರಂಬಿಸಿರುವ   ಆಕ್ರಮಣ. ಮುಸ್ಲಿಮರಿಗೆ ಹರ್ಯಾಣ ಮುಖ್ಯಮಂತ್ರಿ ಎಚ್ಚರಿಕೆ ಅಥವಾ ಮಾಂಸಾಹಾರದ ಮಾರಾಟಗಾರರ ವಿರುದ್ಧ ಗುಜರಾತ್ ರಾಜ್ಯದ ಕಂದಾಯ ಸಚಿವರ  ಕ್ರಮಗಳಲ್ಲಿ ಇದು ಕಂಡುಬರುತ್ತದೆ.  ವಿಭಜನೆಯ ಕೋಮು ಶಕ್ತಿಗಳು ನಡೆಸುವ ಅಲ್ಪಸಂಖ್ಯಾತ-ವಿರೋಧಿ ಅಣಿನೆರಿಕೆಗಳ  ವಿರುದ್ಧ ಪ್ರಜ್ಞಾಪೂರ್ವಕ ಹೋರಾಟದ ರಾಜಕೀಯ ನೆಲೆಗಟ್ಟು  ಖಂಡಿತವಾಗಿಯೂ ಅಗತ್ಯವಿದೆ.

2018 ರಿಂದ ಅಧಿಕೃತವಾಗಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವುದನ್ನು ಬಲವಂತವಾಗಿ ತಡೆಯುವುದು ಕೇವಲ ಅಂಚಿನಲ್ಲಿರುವ ಇಸ್ಲಾಮ್‍-ಭೀತಿಯ ಕಾಯಿಲೆಗ್ರಸ್ತವಾದ ದ್ವೇಷ-ಆಧಾರಿತ ಗುಂಪುಗಳ ಕೈವಾಡ ಎಂದು ಯಾರಾದರೂ ಭಾವಿಸಿದ್ದರೆ, ಅದು ನಿಜವಲ್ಲ ಎಂದು   ಹರಿಯಾಣ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್  ನೇರವಾಗಿಯೇ ತೋರಿಸಿದ್ದಾರೆ. ಡಿಸೆಂಬರ್‍ 11ರಂದು,ಒಂದು ಬೆದರಿಕೆ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ, ಅವರ ಸರ್ಕಾರವು ತೆರೆದ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು “ಸಹಿಸಿಕೊಳ್ಳುವುದಿಲ್ಲ”,  ಮನೆಗಳಲ್ಲಿಯೇ ಪ್ರಾರ್ಥಿಸಬೇಕು ಎಂದು ಮುಸ್ಲಿಮರಿಗೆ ಎಚ್ಚರಿಸಿದರು.

ಜನರನ್ನು ದಾರಿತಪ್ಪಿಸಲೆಂದೇ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಈ ರೀತಿ ಬಿಂಬಿಸಿದ್ದಾರೆ. ಆಸ್ತಿಕರು ಶುಕ್ರವಾರದಂದು ಪ್ರಾರ್ಥನಾ ಸಭೆಗಳಿಗೆ ಹಾಜರಾಗುವುದು ವಾಡಿಕೆಯಾಗಿದೆ, ಅಲ್ಲಿ ಸಾಮಾನ್ಯವಾಗಿ ಧರ್ಮೋಪದೇಶವನ್ನು ಸಹ ನೀಡಲಾಗುತ್ತದೆ.  ಇತರ ದಿನಗಳಲ್ಲಿ, ಹೆಚ್ಚಿನವರು ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ. ದೇಶಾದ್ಯಂತ ಇರುವುದು ಇದೇ ಕ್ರಮ. ಮುಸ್ಲಿಮರು ಪ್ರತಿದಿನವೂ ದಿನಕ್ಕೆ ಐದು ಬಾರಿ  ಎಂಬಂತೆ ಬೀದಿಗೆ ಬಂದು, ಬಯಲುಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎನ್ನುವ ಅರ್ಥ ಬರುವ ರೀತಿಯಲ್ಲಿ ಹರ್ಯಾಣದ ಮುಖ್ಯಮಂತ್ರಿಗಳು ನಿರ್ದಿಷ್ಟವಾಗಿ ಮುಸ್ಲಿಮರನ್ನೇ  ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕೆಂದು ಏಕೆ ಆದೇಶಿಸಬೇಕು?

ಎರಡನೆಯದಾಗಿ, ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಉದ್ದೇಶಪೂರ್ವಕವಾಗಿ ವಾಸ್ತವಾಂಶಗಳನ್ನು ಹೇಳದೆ ತಪ್ಪಿಸಿಕೊಂಡರು. ಗುರುಗ್ರಾಮ್‌ನಲ್ಲಿ, ಜನಸಂಖ್ಯೆಯ ಶೇಕಡಾ 5 ಕ್ಕಿಂತ ಕಡಿಮೆ ಇರುವ ಮುಸ್ಲಿಮರು, ಹೆಚ್ಚೇನೂ ಮಸೀದಿಗಳಿಲ್ಲದ ಕಾರಣ  ಶುಕ್ರವಾರದ ಪ್ರಾರ್ಥನೆಗಳಿಗೆ ಸೇರಲಾಗದ  ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಸೀದಿಗಳಿಗೆ ಭೂಮಿ ಖರೀದಿಸಲು ಸಮುದಾಯದ ಪ್ರತಿನಿಧಿಗಳು  ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಅಧಿಕೃತ ಏಜನ್ಸಿಗಳು ಅಡ್ಡಿ ಮಾಡುತ್ತಿವೆ. ಆದರೆ. ಇತರ ಪೂಜಾ ಸ್ಥಳಗಳಿಗೆ ಭೂಮಿಯನ್ನು ನೀಡಲಾಗಿದೆ. ಪ್ರಸ್ತುತ ಒತ್ತುವರಿಗೊಂಡಿರುವ ಅಥವಾ ಸರ್ಕಾರಿ ಏಜೆನ್ಸಿಗಳು ಅಧೀನಪಡಿಸಿಕೊಂಡಿರುವ  ವಖ್ಫ್ ಭೂಮಿಯನ್ನು ಹಿಂದಿರುಗಿಸಿ ಎಂದೂ ಮನವಿಗಳನ್ನು ಮಾಡಲಾಗಿದೆ.  ಅಲ್ಲಿ ಮಸೀದಿ ಗಳನ್ನು ಕಟ್ಟಬಹುದು ಅಥವಾ ಪ್ರಾರ್ಥನೆಗಾಗಿ ಗೋಡೆ ನಿರ್ಮಿಸಬಹುದು ಎಂದು ಸರ್ಕಾರಕ್ಕೆ ಹೇಳಲಾಗಿದೆ.  ಸರ್ಕಾರ 2018ರಲ್ಲಿ ಭೂಮಿ ವಾಪಸ್ ಕೊಡಿಸುವುದಾಗಿ ಭರವಸೆಯನ್ನೂ ನೀಡಿತ್ತು, ಆದರೂ, ಆ ಬಳಿಕ ಏನೂ ಮಾಡಿಲ್ಲ.

ಮೂರನೆಯದಾಗಿ, 2018 ರಲ್ಲಿ ತೆರೆದ ಸ್ಥಳಗಳಲ್ಲಿ ಪ್ರಾರ್ಥನೆಗೆ ಸಂಬಂಧಿಸಿದಂತೆ ಒಂದು ಪರಸ್ಪರ ತಿಳುವಳಿಕೆಗೆ ಬರಲಾಗಿತ್ತು. ಆಡಳಿತವು  ಏಕಾಏಕಿಯಾಗಿ ಇದನ್ನು  ಕಡೆಗಣಿಸಿರುವುದಕ್ಕೆ ಮುಖ್ಯಮಂತ್ರಿಗಳ ಬಳಿ  ಯಾವುದೇ ವಿವರಣೆಯೂ ಇಲ್ಲ.  ಮೇ 2018 ರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗಳಿಗೆ ಕೆಲವು ಸಂಸ್ಥೆಗಳು ಆಕ್ಷೇಪಣೆಗಳನ್ನು ಸಲ್ಲಿಸಿದವು.  ಆಡಳಿತವು ಶುಕ್ರವಾರದ ಪ್ರಾರ್ಥನೆಗಾಗಿ 37 ಸ್ಥಳಗಳನ್ನು ಗೊತ್ತುಪಡಿಸಿತು. ಎರಡು ರಕಾತ್‌ಗಳ ಪಠಣದ ಶುಕ್ರವಾರದ ಪ್ರಾರ್ಥನೆಗಳು ಐದು ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯುವುದಿಲ್ಲ.  ಒಂದು ಉಪದೇಶ ಅಥವಾ ಖುತ್ಬಾವನ್ನು ಪಠಿಸಿದರೆ, ಅದು ಸಾಮಾನ್ಯವಾಗಿ ಸುಮಾರು 15-20 ನಿಮಿಷಗಳವರೆಗೆ ಇರುತ್ತದೆ.

gurugram-namazಗುರುಗ್ರಾಮ್‌ನಲ್ಲಿ ಗೊತ್ತುಪಡಿಸಿದ ಹೆಚ್ಚಿನ ಸ್ಥಳಗಳು ವಸತಿ ಕಾಲೋನಿಗಳಲ್ಲಿ ಇಲ್ಲ. , ಬದಲಾಗಿ ಮುಖ್ಯ ರಸ್ತೆಗಳು ಮತ್ತು ಕೈಗಾರಿಕಾ ಪ್ರದೇಶಗಳಿಗೆ ಹೊಂದಿಕೊಂಡಂತೆ ಇರುವ ಟ್ರಕ್‌ಗಳನ್ನು ನಿಲ್ಲಿಸಲು ಬಳಸುವ ಅಥವಾ ಖಾಲಿ ಇರುವ ಸ್ಥಳಗಳಾಗಿವೆ. ಹಾಗಾಗಿ ಸಾರ್ವಜನಿಕರಿಗೆ ಅನಾನುಕೂಲ ಅಥವಾ ಸಂಚಾರಕ್ಕೆ ಅಡ್ಡಿಯಾಗುವ ಸಮಸ್ಯೆ ಇಲ್ಲ. ಹಾಗಾದರೆ,  ಒಪ್ಪಂದದಿಂದ ಹಿಂದೆ ಸರಿಯಲು ಕಾರಣವೇನು?  ಆಡಳಿತವು ಈಗ ಗೊತ್ತುಪಡಿಸಿದ ಸ್ಥಳಗಳ ಸಂಖ್ಯೆಯನ್ನು ಹತ್ತಕ್ಕಿಂತಲೂ ಕೆಳಕ್ಕೆ  ಇಳಿಸಿದೆ ಎಂದು ವರದಿಯಾಗಿದೆ.  ಇದು ಅನ್ಯಾಯ, ಸರಿಯಲ್ಲದ  ಮತ್ತು ಮೇಲಾಗಿ ಸಂಪೂರ್ಣವಾಗಿ ಪಕ್ಷಪಾತದ ನಡೆಯಾಗಿದೆ.

ಮುಖ್ಯಮಂತ್ರಿಗಳು ಪರಿಹಾರ ಕಂಡುಕೊಳ್ಳುವ ಬದಲು ಒತ್ತಡ ಮತ್ತು ಬೆದರಿಕೆ ಹಾಕುತ್ತಿದ್ದಾರೆ.  ಇದಕ್ಕೆ ವಿರುದ್ಧವಾಗಿ, ಹಲವು ನಾಗರಿಕರು ಸಹಾನುಭೂತಿ ಮತ್ತು ಬೆಂಬಲವನ್ನು ನೀಡಿದ್ದಾರೆ..  ಶುಕ್ರವಾರದ ಪ್ರಾರ್ಥನೆಗೆ ಸೇರುವವರಲ್ಲಿ ಹಲವರು ಉಡುಪು ಮತ್ತು ಇತರ ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಕೈಗಾರಿಕಾ ಕಾರ್ಮಿಕರು ಅಥವಾ ಅಸಂಘಟಿತ ವಲಯದ ಕೆಲಸಗಾರರು.

ಸಾಕಷ್ಟು ಸ್ಥಳಾವಕಾಶವಿರುವ ಕೆಲವು ಕಾರ್ಖಾನೆಗಳಲ್ಲಿ, ಕಾರ್ಖಾನೆಯ ಮಾಲೀಕರು, ಅವರಲ್ಲಿ ಹೆಚ್ಚಿನವರು ಹಿಂದೂಗಳು, ತಮ್ಮ ಕಾರ್ಮಿಕರಿಗೆ ಛಾವಣಿಯ ಮೇಲೆ ಪ್ರಾರ್ಥನೆ ಮಾಡಲು ಅನುಮತಿ ನೀಡುತ್ತಾರೆ.  ಇದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದರೆ ಈಗ ಇಂತಹ ಕೋಮು ವಿಭಜನೆಗಳು ತಮ್ಮ ಕಾರ್ಖಾನೆಗಳಲ್ಲಿ ಕೆಲಸದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಅವರು ಸಹಜವಾಗಿ ಚಿಂತಿತರಾಗಿದ್ದಾರೆ. ಕಾರ್ಖಾನೆಗಳಲ್ಲಿನ ಸಹೋದ್ಯೋಗಿಗಳು, ಹಿಂದೂಗಳು ಒಳಗೊಂಡಂತೆ ವಿರೋಧಿಸಿದ ಒಂದೇ ಒಂದು ಘಟನೆ ನಡೆದಿಲ್ಲ. ಗುರುಗ್ರಾಮ್‌ನ ಅನೇಕ ನಿವಾಸಿಗಳು ಸಹ ಪ್ರಾರ್ಥನೆಗಾಗಿ ಸ್ಥಳಗಳನ್ನು ನೀಡಲು ಬೆಂಬಲವಾಗಿ ನಿಂತಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಭಾರತದ ರಾಜಕೀಯದಲ್ಲಿ ಎರಡು ಸಮಾನಾಂತರ ಪ್ರವೃತ್ತಿಗಳು ಕಂಡುಬಂದಿವೆ.  ಮೊದಲನೆಯದು ಐಕ್ಯತೆಯ  ರಾಜಕೀಯ- ಕಾರ್ಮಿಕರ ಬೆಂಬಲಿತ ರೈತರ ಐಕ್ಯ ಹೋರಾಟಗಳ ಐತಿಹಾಸಿಕ ವಿಜಯ ಇದಕ್ಕೆ ನಿದರ್ಶನ. ಈ ಐಕ್ಯತೆ ಹಲವು ಪ್ರದೇಶಗಳಲ್ಲಿ ನಿರ್ಮಿಸಲಾಗಿದ್ದ  ಕೋಮು ಗೋಡೆಗಳನ್ನು ಮುರಿದಿದೆ, ಇದು  ಸರ್ಕಾರವನ್ನು ಹಿಮ್ಮೆಟ್ಟುವಂತೆ ಮಾಡುವಲ್ಲಿ ನಿರ್ಣಾಯಕ ಅಂಶವಾಗಿದೆ.

ಎರಡನೆಯದು,  ಮತ್ತೊಮ್ಮೆ ಸಂಕುಚಿತ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವ ಮತ್ತು ದುರುಪಯೋಗ ಪಡಿಸಿಕೊ ಳ್ಳುವ ಕೇಂದ್ರದ ಆಳ್ವಿಕೆಯ ಮುಖಂಡರು ಮತ್ತೆ ಆರಂಬಿಸಿರುವ   ಆಕ್ರಮಣ.. ಹರ್ಯಾಣ ಮುಖ್ಯಮಂತ್ರಿ ಅಥವಾ ಗುಜರಾತ್ ರಾಜ್ಯದ ಕಂದಾಯ ಸಚಿವ ರಾಜೇಂದ್ರ ತ್ರಿವೇದಿಯಂತವರ  ಮಾತುಗಳಲ್ಲಿ ಇದು ಕಂಡುಬರುತ್ತದೆ.  ರಸ್ತೆಗಳಲ್ಲಿ ಮಾಂಸಾಹಾರವನ್ನು ಬಹಿರಂಗವಾಗಿ ಮಾರಾಟ ಮಾಡುವುದರಿಂದ ಹಿಂದೂಗಳ “ಭಾವನೆಗಳಿಗೆ ಧಕ್ಕೆ”ಯಾಗುತ್ತದೆ ಎಂದು ತ್ರಿವೇದಿ ಹೇಳಿದ್ದಾರೆ.

gujarat-veg 171121
ಶುದ್ಧ ಶಾಕಾಹಾರಿ-ಅಹಮದಾಬಾದ್-ಅವರೀಗ ಈ ಕೈಗಾಡಿಯನ್ನು ಚುನಾವಣೆ ನಡೆಯಲಿರುವ ಗೋವಾಕ್ಕೆ ತಳ್ಳುತ್ತಾರೆಯೇ? ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್‌ ಪ್ರೆಸ್

ಇದು ಒಂದು ಅರ್ಥಹೀನ ಹೇಳಿಕೆಯಾಗಿದ್ದರೂ, ಒಂದು ವೋಟಿನ ವಿಭಾಗವನ್ನು  ಬಲಪಡಿಸಿಕೊಕೊಳ್ಳುವ    ತಂತ್ರವನ್ನು ಹೊಂದಿದೆ. ಗುರುಗ್ರಾಮದಲ್ಲಿ, ಆಕ್ರಮಣಕಾರಿ ಹಿಂದುತ್ವ ಗುಂಪುಗಳು ಪ್ರಾರ್ಥನೆಯನ್ನು ನಿಲ್ಲಿಸಿದರೆ, ಗುಜರಾತ್‌ನಲ್ಲಿ, ಸರ್ಕಾರದ ಆದೇಶದ ಮೇರೆಗೆ ಪೊಲೀಸರು ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡದಂತೆ ಬೀದಿ ಮಾರಾಟಗಾರರನ್ನು ನಿಷೇಧಿಸಿದರು ಮತ್ತು ಅವರ ಸರಕುಗಳನ್ನು ವಶಪಡಿಸಿಕೊಂಡರು. ಗುಜರಾತಿನ  ಪ್ರಕರಣದಲ್ಲಿ,  ಅಲ್ಲಿನ ಹೈಕೋರ್ಟ್ ಇದರ ವಿರುದ್ಧ ತೀಕ್ಷ್ಣವಾದ ಟಿಪ್ಪಣಿಗಳನ್ನು ಮಾಡಿತು

ಉತ್ತರಪ್ರದೇಶದಲ್ಲಿ  ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ಸುಮಾರಾಗಿ ಪ್ರತಿಯೊಂದು ಭಾಷಣವೂ ಕೋಮು ಒತ್ತನ್ನು ಹೊಂದಿರುತ್ತದೆ.  ಇಂತಹ ಅನೇಕ ಉದಾಹರಣೆಗಳಿವೆ.  ಆದರೆ ಇದರಲ್ಲಿ ಮತ್ತಷ್ಟು ಆತಂಕದ ವಿಷಯವೆಂದರೆ ಒಂದಿಡೀ ಸಮುದಾಯವನ್ನು “ಭದ್ರತಾ ಬೆದರಿಕೆ” ಒಡ್ಡುವ ರಾಕ್ಷಸರೆಂಬಂತೆ ಚಿತ್ರಿಸುವ ಅಪಾಯಕಾರಿ ಪ್ರವೃತ್ತಿ. ಗುರುಗ್ರಾಮ್‌ನಲ್ಲಿ ನಿಂದನೆಗಳಿಂದ ತುಂಬಿದ  ಪ್ರತಿಭಟನೆಗಳನ್ನು ಸಂಘಟಿಸುವವರು ಹಂಚಿಕೊಂಡಿರುವ  ಒಂದು ವಿಡಿಯೋದಲ್ಲಿ ವಿಎಚ್‌ಪಿ ನಾಯಕನೊಬ್ಬ “ಇದು ನಮಾಜ್ ಅಲ್ಲ, ಜಿಹಾದ್, ಇದು ಭಯೋತ್ಪಾದನೆ” ಎಂದು ಹೇಳುವುದನ್ನು ನೋಡಬಹುದು. ಮುಸ್ಲಿಂ ಬೀದಿಬದಿ ವ್ಯಾಪಾರಿಗಳು  ಹಿಂದೂ ಪ್ರದೇಶಗಳಿಗೆ ಬರುವುದನ್ನು ಬಲವಂತವಾಗಿ  ತಡೆಗಟ್ಟುವಾಗ ಅಥವಾ ಬೇರೆ ಪ್ರದೇಶಗಳಲ್ಲಿ  ಮುಸ್ಲಿಮರಿಗೆ ಮನೆಗಳನ್ನು  ಬಾಡಿಗೆಗೆ ಕೊಡಲು ನಿರಾಕರಿಸುವಾಗಲೂ ಸಹ ಇದೇ ರೀತಿಯ ಅಪಪ್ರಚಾರವನ್ನು ಬಳಸಲಾಗುತ್ತಿದೆ. ಒಂದು ಸಮುದಾಯದ ಬಗ್ಗೆ ಭೀತಿಯ ಭಾವನೆಯನ್ನು ಸೃಷ್ಟಿಸಲು  ಸಾಮಾನ್ಯವಾಗಿ ಇಂತಹ ಭದ್ರತೆಯ ಹುಸಿ ಭೀತಿಯನ್ನು ಹರಡಿಸಲಾಗುತ್ತದೆ. ಇದು ರಾಷ್ಟ್ರವಾದ ಮತ್ತು ಬಹು ಸಂಖ್ಯಾಕವಾದವನ್ನು ಬೆರೆಸುವ ಹಿಂದುತ್ವ ಶಕ್ತಿಗಳ ಎಂದಿನ ದುರುದ್ದೇಶಪೂರ್ಣ ಕಾರ್ಯತಂತ್ರಕ್ಕೆ ಅನುಗುಣವಾಗಿದೆ.

ಸಾಮೂಹಿಕ ಹೋರಾಟಗಳ ರಾಜಕೀಯ ಶಕ್ತಿಯು  ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ಜಯಿಸಬಲ್ಲದು, ಮತ್ತು ರೈತ ಹೋರಾಟದಲ್ಲಿ ಕಂಡುಬರುವಂತೆ  ಜಯಿಸಿದೆ ಕೂಡ. ಆದರೆ ಇದು ಶಾಶ್ವತವಾದ ಪರಿಣಾಮವನ್ನು ಬೀರಲು, ಹೋರಾಟದ ಸಮಯದಲ್ಲಿ ಮೂಡಿಬರುವ  ಭ್ರಾತೃತ್ವದ ಸ್ವಯಂಸ್ಫೂರ್ತ ಭಾವನೆಗಳಿಗಿಂತಲೂ ಮುಂದಕ್ಕೆ ಹೋಗುವುದು ಅವಶ್ಯಕ.

ವಿಭಜನೆಯ ಕೋಮು ಶಕ್ತಿಗಳು ನಡೆಸುವ ಅಲ್ಪಸಂಖ್ಯಾತ-ವಿರೋಧಿ ಅಣಿನೆರಿಕೆಗಳ  ವಿರುದ್ಧ ಪ್ರಜ್ಞಾಪೂರ್ವಕ ಹೋರಾಟದ ರಾಜಕೀಯ ನೆಲೆಗಟ್ಟು  ಖಂಡಿತವಾಗಿಯೂ ಅಗತ್ಯವಿದೆ. ಸಮಸ್ಯೆ ತಂತಾನೇ ಹೋಗಿಬಿಡಬಹುದೆಂದು ಆಶಿಸುವ ಮೂಲಕ ಅದನ್ನು ನಿರ್ಲಕ್ಷಿಸುವ ಯಾವುದೇ ರಕ್ಷಣಾತ್ಮಕ ನಿಲುವು ಜನರನ್ನು ವಿವಿಧ ಸಂಕುಚಿತ ಆಧಾರಗಳಲ್ಲಿ ವಿಭಜಿಸಿ ಅದರಿಂದ ಪ್ರಯೋಜನ ಪಡೆಯುವ ಶಕ್ತಿಗಳಿಗೆ ಬಲ ನೀಡುತ್ತದೆ.

ಅನು: ಶೃಂ.ಶ.ನಾ

Leave a Reply

Your email address will not be published. Required fields are marked *