ಉತ್ತರ ಪ್ರದೇಶ: ಕೋಮುವಾದಿ ಅಜೆಂಡಾಕ್ಕೇ ಜೋತು ಬಿದ್ದ ಬಿಜೆಪಿ

ಪ್ರಕಾಶ್ ಕಾರಟ್

prakash karatರೈತ ಚಳವಳಿಯ ಪ್ರಭಾವ ಮತ್ತು ಸಾಮಾಜಿಕ-ಆರ್ಥಿಕ ರಂಗದಲ್ಲಿ ಕಳಪೆ ದಾಖಲೆಯನ್ನು ಇಟ್ಟುಕೊಂಡು ಮೋದಿ-ಷಾ-ಆದಿತ್ಯನಾಥ ತ್ರಿಮೂರ್ತಿಗಳು ಅಯೋಧ್ಯೆಯಲ್ಲಿ ಭವ್ಯ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಭವಿಷ್ಯದಲ್ಲಿ ಮಥುರಾ ಮಂದಿರ ಸಹಿತ ಹಿಂದೂ ಗುರಿಸಾಧನೆಗೆ ತಾವು ನೀಡಿದ ಕೊಡುಗೆಗಳೆಂದು ವೈಭವೀಕರಿಸುವ ಮಾರ್ಗ ಅನುಸರಿಸುತ್ತಿದ್ದಾರೆ. ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಇವನ್ನೆಲ್ಲ ಸಾಧಿಸಲಾಗಿದೆ ಎಂಬ ಗೋಪ್ಯ ಸಂದೇಶವನ್ನೂ ಅದು ಸಾರುತ್ತಿದೆ. ಅಮಿತ್ ಷಾ ಮಾತಿನಲ್ಲೇ ಹೇಳುವುದಾದರೆ ಇದು ಬಿಜೆಪಿಗೆ ಒಂದು ವಿಧಾನಸಭೆ ಚುನಾವಣೆ ಅಷ್ಟೇ ಅಲ್ಲ; ಭಾರತದ ಭವಿಷ್ಯವನ್ನು ನಿರ್ಧರಿಸುವ ವಿದ್ಯಮಾನವಾಗಿದೆ. ಹಿಂದುತ್ವದ ಭವಿಷ್ಯದ ವಿಚಾರವೇ ಅದರಲ್ಲಿ ಒಳಗೊಂಡಿರುವುದರಿಂದ ಬಿಜೆಪಿ ಇದನ್ನು ಬಹಳ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದೆ. ಅದುವೇ ಬಿಜೆಪಿ ನಾಯಕತ್ವದ ಹತಾಶೆಯನ್ನು ವಿವರಿಸುತ್ತದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳಿಗೆ ಸಜ್ಜಾಗಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಮತದಾನ ನಡೆಯಲಿದ್ದು ಬಿಜೆಪಿ ಮತ ಸೆಳೆಯಲು ಕೇವಲ ಹಿಂದುತ್ವ ಕೋಮುವಾದಿ ಅಜೆಂಡಾದ ಮೇಲೆಯೇ ಅವಲಂಬಿಸಿರುವುದು ಸ್ಪಷ್ಟವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಮುಖ್ಯಮಂತ್ರಿ ಆದಿತ್ಯನಾಥ ಬಿಜೆಪಿ ಪ್ರಚಾರ ಕಾರ್ಯ ಆರಂಭಿಸಿದ್ದು ಅವರ ಭಾಷಣಗಳು ಕೋಮುವಾದಿ ಗೋಪ್ಯ ಸಂದೇಶಗಳನ್ನು ಬಿತ್ತರಿಸುವ  ಹಾಗೂ ಮುಸ್ಲಿಂ-ವಿರೋಧಿ ಅಂಶಗಳಿಂದ ಕೂಡಿವೆ. ಇದು 80% ವರ್ಸಸ್ 20% ನಡುವಿನ ಹೋರಾಟವಾಗಲಿದೆ ಎಂದು ಘೋಷಿಸುವ ಮೂಲಕ ಆದಿತ್ಯನಾಥ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇದು ರಾಜ್ಯದ ಹಿಂದೂ ಮತ್ತು ಮುಸ್ಲಿಮರ ಜನಸಂಖ್ಯೆಯ ಅಂದಾಜು ಅನುಪಾತವಾಗಿದೆ. 20 ಶೇಕಡ ಜನರು ಎಂದರೆ ರಾಮ ಮಂದಿರ, ಕಾಶಿ ವಿಶ್ವನಾಥ ಧಾಮ,  ಮಥುರಾ ಬೃಂದಾವನ ವಿರೋಧಿಸುವವರು ಎಂದು ಆದಿತ್ಯನಾಥ ನಂತರ ಸಮಜಾಯಿಷಿ ನೀಡಿದ್ದರು.  ಅವರು, ಅಂದರೆ ಶೇಕಡ 20 ಜನರು ಮಾಫಿಯಾಗಳು ಮತ್ತು ಭಯೋತ್ಪಾದಕರ ಹಿತಚಿಂತಕರೂ ಎಂದೂ ಹೇಳಿದ್ದರು.

80-20wahyogiji130122
ಜನಸಾಮಾನ್ಯರಿಗೆ 20% ಮಾಧ್ಯಮಗಳಿಗೆ 80%     ವಾಹ್! ಯೋಗೀಜೀ! ವಾಹ್!   ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಆದಿತ್ಯನಾಥ-ಅಮಿತ್‌ಷಾ ಕೋಮುವಾದಿ ಪ್ರಚಾರ

ಆದಿತ್ಯನಾಥರ ಕೋಮುವಾದಿ ಪ್ರಚಾರದ ಉದ್ದೇಶ ಇದು. ಒಂದು ಕಡೆ ಹಿಂದೂಗಳು, ಮತ್ತೊಂದು ಕಡೆ ಹಿಂದೂ ದೇವಸ್ಥಾನಗಳನ್ನು ವಿರೋಧಿಸುವವರು, ಭಯೋತ್ಪಾದಕರು ಹಾಗೂ ಮಾಫಿಯಾಗಳೊಂದಿಗೆ ಸಂಪರ್ಕ ಇರುವವರು ಎಂದು ಬಿಂಬಿಸುವುದು ಅವರ ಗುರಿಯಾಗಿದೆ. ಸಮಾಜವಾದಿ ಪಕ್ಷವನ್ನು ಜಿನ್ನಾ ಪ್ರೇಮಿಗಳು ಹಾಗೂ ಮಾಫಿಯಾ ಹಾಗೂ ಭಯೋತ್ಪಾದನೆ ಬೆಂಬಲಿಗರು  ಎಂದು ಬಿಂಬಿಸಲು ಯತ್ನಿಸಲಾಗಿದೆ. ತನ್ನ ಉದ್ದೇಶ ಏನೆಂಬುದನ್ನು ಇನ್ನೂ ಸ್ಪಷ್ಟಪಡಿಸಲು ಆದಿತ್ಯನಾಥ ಒಂದು ಟ್ವೀಟ್ ಮಾಡಿದ್ದಾರೆ: ‘ಅವರು ಜಿನ್ನಾ ಪ್ರೇಮಿಗಳು. ನಾವು ಸರ್ದಾರ್ ಪಟೇಲ್‌ರ ಆರಾಧಕರು’ ಎಂಬುದೇ ಆ ಟ್ವೀಟ್.

ಕೋಮುವಾದಿ ಪ್ರಚಾರದಲ್ಲಿ ಅಮಿತ್ ಷಾ ಕೂಡ ಹಿಂದೆ ಬಿದ್ದಿಲ್ಲ. ಅಸೆಂಬ್ಲಿ ಚುನಾವಣೆ ಘೋಷಣೆಯಾದ ನಂತರ ಷಾ ಕೈರಾನಾ ಪಟ್ಟಣದಲ್ಲಿ ಮೊದಲ ಸಭೆ ನಡೆಸಿದರು. ಸಮಾಜವಾದಿ ಪಕ್ಷದ ಆಡಳಿತವಿದ್ದಾಗ ಬೆದರಿಕೆಗಳಿಂದಾಗಿ ಸಾವಿರಾರು ಹಿಂದೂಗಳು ಕೈರಾನಾದಿಂದ ವಲಸೆ ಹೋಗಿದ್ದರು ಎಂದು 2017ರ ಅಸೆಂಬ್ಲಿ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಪಪ್ರಚಾರ ಮಾಡಿತ್ತು.

ಬಿಜೆಪಿ ಆಡಳಿತದಿಂದಾಗಿ ಜನರು ಸುರಕ್ಷಿತವಾಗಿ ಇರಬಹುದು ಎಂದು ಕೈರಾನಾ ಸಭೆಯಲ್ಲಿ ಷಾ ಹೇಳಿದರು. ದೇವಬಂದ್‌ನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಮಾತನಾಡಿದ ಷಾ, 2013ರಲ್ಲಿ ಮುಜಾಫರ್‌ನಗರದಲ್ಲಿ ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರದ ಪಿತೂರಿಗಾರರನ್ನು ಸಮರ್ಥಿಸಿ ಬೆಂಬಲಿಸಿದರು. ಬಿಜೆಪಿ ನಾಯಕರ ವಿರುದ್ಧ ಸುಳ್ಳು ಕೇಸ್‌ಗಳನ್ನು ಹೂಡಲಾಗಿತ್ತು ಎಂದು ಆರೋಪಿಸಿದ ಷಾ, ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟವನ್ನು ಶ್ಲಾಘಿಸಿದ್ದರು. ಅಖಿಲೇಶ್ ಯಾದವ್ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ಗಳು ಮುಕ್ತವಾಗಿ ಓಡಾಡುತ್ತಿದ್ದರು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾದ್ದರಿಂದ ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡಲಾಗಿತ್ತು ಎಂಬ ಭಾವನೆ ಬರುವಂತೆ ಷಾ ಮಾತನಾಡಿದರು.

ಮೊದಲ ಮೂರು ಹಂತದ ಚುನಾವಣೆಗಳು ರಾಜ್ಯದ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವುದರಿಂದ ಮಥುರಾದ ಈದ್ಗಾ ಇರುವ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವ ವಿಚಾರವನ್ನು ಬಿಜೆಪಿ ಕೆದಕಿದೆ. ಸ್ವತಃ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರೇ ಈ ವಿಚಾರವನ್ನು ಎತ್ತಿದ್ದಾರೆ. ಅಂದರೆ ಇಡೀ ಚುನಾವಣಾ ಪ್ರಚಾರದಲ್ಲಿ ಅಯೋಧ್ಯೆ, ಕಾಶಿ ಮತ್ತು ಮಥುರಾ ವಿಚಾರ ಪ್ರಮುಖ ಸ್ಥಾನ ಪಡೆಯಲಿವೆ ಎಂದಾಯಿತು. ಕೋಮುವಾದಿ ಅಜೆಂಡಾ ಬಗ್ಗೆ ಬಿಜೆಪಿ ಒತ್ತು ಹಾಗೂ ಕೋಮುವಾದಿ ಧ್ರುವೀಕರಣಕ್ಕೆ ನಡೆಸುತ್ತಿರುವ ಅದರ ಪ್ರಯತ್ನಗಳು, ವಸ್ತುಸ್ಥಿತಿ ಬದಲಾದ ಹಿನ್ನೆಲೆಯಲ್ಲಿ ಬಿಜೆಪಿಯ ಹತಾಶೆಯನ್ನು ಬಿಂಬಿಸುತ್ತದೆ.

ರೈತ ಚಳವಳಿಯ ಪ್ರಭಾವ

ಐತಿಹಾಸಿಕ ರೈತ ಚಳವಳಿಯು ಜಾಟ್-ಮುಸ್ಲಿಂ ನಡುವಿನ ಒಡಕನ್ನು ಬಹುತೇಕವಾಗಿ ಮುಚ್ಚಿದೆ. 2013ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ದೊಂಬಿಗಳ ನಂತರ ಜಾಟ್-ಮುಸ್ಲಿಂ ಬಿರುಕು ದೊಡ್ಡದಾಗಿತ್ತು. ವಿಶೇಷವಾಗಿ ಲಖಿಂಪುರ ಖೇರಿಯಲ್ಲಿ ನಾಲ್ಕು ರೈತರ ಸಾವಿಗೆ ಕಾರಣವಾದ ದೌರ್ಜನ್ಯದ ನಂತರ, ರೈತರ ಆಕ್ರೋಶ ಎದ್ದು ಕಾಣುತ್ತಿದೆ. ಬಿಜೆಪಿ ಅಭ್ಯರ್ಥಿಗಳು ಕಾಲಿಟ್ಟ ಗ್ರಾಮಗಳಲ್ಲಿ ಜನರು ವಿರೋಧದೊಂದಿಗೆ ಸ್ವಾಗತ ನೀಡುತ್ತಿದ್ದಾರೆ. ಬಿಜೆಪಿಗರು ಹಳ್ಳಿಗಳಿಗೆ ಪ್ರವೇಶಿಸುವುದಕ್ಕೇ ಬಿಡುತ್ತಿಲ್ಲ. ಮುಸ್ಲಿಂ-ವಿರೋಧಿ ವಿಚಾರವನ್ನು ಹಾಗೂ ಹಳೆಯ ವಿವಾದಗಳನ್ನು ಕೆದಕುವುದು ಕೋಮುವಾದಿ ಒಡಕು ಹುಟ್ಟಿಸುವ ಸ್ಪಷ್ಟ ತಂತ್ರವಾಗಿದೆ.

ಹಲವು ಹಿಂದುಳಿದ ವರ್ಗಗಳ ಸಚಿವರು ಮತ್ತು ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರುತ್ತಿರುವುದು ಯಾದವೇತರ ಹಿಂದುಳಿದ ಜಾತಿಗಳ ಮತಗಳನ್ನು ಸೆಳೆಯುವ ಅವಕಾಶ ಕುಗ್ಗುತ್ತಿದೆ ಎನ್ನುವುದರ ಸ್ಪಷ್ಟ ಸೂಚನೆಯಾಗಿದೆ. 2017ರ ಚುನಾವಣೆಯಲ್ಲಿ ಆ ವಿಭಾಗಗಳ ಮತಗಳನ್ನು ಬಿಜೆಪಿ ಸೆಳೆದಿತ್ತು.

moghuls& up bjp280122-vb
ವ್ಯಂಗ್ಯಚಿತ್ರ: ಪಿ.ಮಹಮ್ಮದ್, ವಾರ್ತಾಭಾರತಿ

ಬೊಗಳೆಗಳೂ ಲೊಳಲೊಟ್ಟೆಗಳೂ

ಆದಿತ್ಯನಾಥರ ನಾಯಕತ್ವದಲ್ಲಿ ‘ವಿಕಾಸ’ ಎಂಬ ಬೊಗಳೆ, ಉದ್ಯೋಗ ಸೃಷ್ಟಿಯಾಗಿದೆ ಎಂದು ತೋರಿಸುವ ಸುಳ್ಳು ಅಂಕಿ-ಸಂಖ್ಯೆಗಳು, ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು ಅವರು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಬಹುದು ಎಂದು ಬಿಂಬಿಸುವುದು – ಈ ಎಲ್ಲ ಪ್ರಯತ್ನಗಳು ಜನರಿಂದ ನಿರೀಕ್ಷಿತ  ಪ್ರತಿಕ್ರಿಯೆ ಹುಟ್ಟಿಸುವಲ್ಲಿ ವಿಫಲವಾಗಿರುವುದರಿಂದ ಬಿಜೆಪಿ ಗಲಿಬಿಲಿಗೊಂಡಿದೆ.

ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಉತ್ತರ ಪ್ರದೇಶದಲ್ಲಿ ಉದ್ಯೋಗ ದರ 2016 ಡಿಸೆಂಬರ್‌ನಲ್ಲಿದ್ದ ಶೇಕಡ 38.5ರಿಂದ 2021 ಡಿಸೆಂಬರ್‌ನಲ್ಲಿ ಶೇಕಡ 32.8ಕ್ಕೆ ಕುಸಿದಿದೆ. ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಪ್ರತಿಭಟಿಸಿ ಸಾವಿರಾರು ಯುವಜನರು ಬೀದಿಗಿಳಿದ ಹಾಗೂ ಅವರು ಉಳಿದುಕೊಂಡಿದ್ದ ಲಾಡ್ಜ್‌ಗಳ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯ ವಿಡಿಯೋ ದೃಶ್ಯಗಳು ಲಕ್ಷಾಂತರ ಉದ್ಯೋಗ ಸೃಷ್ಟಿಸಿರುವುದಾಗಿ ಹೇಳಿರುವ ಉತ್ತರ ಪ್ರದೇಶ ಸರ್ಕಾರದ ಹೇಳಿಕೆಗಳು ಬರೀ ಬೊಗಳೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಜಿನ್ನಾ ವಿರುದ್ಧ ವಿಷ ಕಾರುವುದು ಹಾಗೂ ಬಿಜೆಪಿ ವಿರೋಧಿಸುವ ಎಲ್ಲರನ್ನು ಜಿನ್ನಾ ಹಿಂಬಾಲಕರು ಎಂದು ಬಿಂಬಿಸುವುದು ಸುರಕ್ಷಿತ ಎಂದು ಬಿಜೆಪಿ ಭಾವಿಸಿದೆ.

ಗಂಗೆಯಲ್ಲಿ ತೇಲಿದ ಶವಗಳು

ಕೋವಿಡ್ ಮಹಾ ಸೋಂಕಿನ ಎರಡನೇ ಅಲೆ ವೇಳೆ ಗಂಗಾ ನದಿಯಲ್ಲಿ ಸಾಲು ಸಾಲು ಹೆಣಗಳು ತೇಲಿ ಬಂದಿದ್ದ ಘೋರ ದೃಶ್ಯಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿತ್ತು. ಅದಲ್ಲದೆ, ನದಿ ದಂಡೆ ಮೇಲೆ ಮರಳಿನಲ್ಲಿ ಇನ್ನೂ ನೂರಾರು ಹೆಣಗಳನ್ನು ಹೂಳಲಾಗಿತ್ತು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲಾಗಿದೆ ಹಾಗೂ ವಿಸ್ತರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ ಆದಿತ್ಯನಾಥ ಆಡಳಿತದಲ್ಲಿ ‘ನಾತ’ ಹರಡಿರುವುದಕ್ಕೆ ನೀತಿ ಆಯೋಗದ ಆರೋಗ್ಯ ಸೂಚ್ಯಂಕವೇ ಕನ್ನಡಿ ಹಿಡಿದಿದೆ. ನೀತಿ ಆಯೋಗದ ಆರೋಗ್ಯ ಸೂಚ್ಯಂಕದಲ್ಲಿ ಆರೋಗ್ಯ ಕಾಳಜಿ ವಿಚಾರದಲ್ಲಿ ಉತ್ತರ ಪ್ರದೇಶವು ದೊಡ್ಡ ರಾಜ್ಯಗಳ ಪೈಕಿ ತೀರಾ ಕೆಳಗಿನ ಸ್ಥಾನದಲ್ಲಿದೆ. ಬಹು-ಆಯಾಮದ ಬಡತನದ ಸೂಚ್ಯಂಕದಲ್ಲಿ ಉತ್ತರ ಪ್ರದೇಶ ಕೆಳಗಿನಿಂದ ಮೂರನೇ ರ‍್ಯಾಂಕ್‌ನಲ್ಲಿದೆ. ರಾಜ್ಯದ ಶೇಕಡ 38 ಜನರು ಬಡವರಾಗಿದ್ದಾರೆ.

ಹತಾಶೆಗೆ ಕಾರಣ

ಇಂಥ ಕಳಪೆ ದಾಖಲೆಯನ್ನು ಇಟ್ಟುಕೊಂಡು ಮೋದಿ-ಷಾ-ಆದಿತ್ಯನಾಥ ತ್ರಿಮೂರ್ತಿಗಳು ಅಯೋಧ್ಯೆಯಲ್ಲಿ ಭವ್ಯ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಭವಿಷ್ಯದಲ್ಲಿ ಮಥುರಾ ಮಂದಿರ ಸಹಿತ ಹಿಂದೂ ಉದ್ದೇಶಕ್ಕೆ ತಾವು ನೀಡಿದ ಕೊಡುಗೆಗಳೆಂದು ವೈಭವೀಕರಿಸುವ ಮಾರ್ಗ ಅನುಸರಿಸುತ್ತಿದ್ದಾರೆ. ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಇವನ್ನೆಲ್ಲ ಸಾಧಿಸಲಾಗಿದೆ ಎಂಬ ಗೋಪ್ಯ ಸಂದೇಶವನ್ನೂ ಅದು ಸಾರುತ್ತಿದೆ.

ಅಮಿತ್ ಷಾ ಮಾತಿನಲ್ಲೇ ಹೇಳುವುದಾದರೆ ಇದು ಬಿಜೆಪಿಗೆ ಒಂದು ವಿಧಾನಸಭೆ ಚುನಾವಣೆ ಅಷ್ಟೇ ಅಲ್ಲ; ಭಾರತದ ಭವಿಷ್ಯವನ್ನು ನಿರ್ಧರಿಸುವ ವಿದ್ಯಮಾನವಾಗಿದೆ. ಹಿಂದುತ್ವದ ಭವಿಷ್ಯದ ವಿಚಾರವೇ ಅದರಲ್ಲಿ ಒಳಗೊಂಡಿರುವುದರಿಂದ ಬಿಜೆಪಿ ಇದನ್ನು ಬಹಳ ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದೆ. ಅದುವೇ ಬಿಜೆಪಿ ನಾಯಕತ್ವದ ಹತಾಶೆಯನ್ನು ವಿವರಿಸುತ್ತದೆ.

ಅನು: ವಿಶ್ವ

Leave a Reply

Your email address will not be published. Required fields are marked *