ಯಶಸ್ವಿ ಸಾರ್ವತ್ರಿಕ ಮುಷ್ಕರದಿಂದ ಸರಕಾರ ಎಚ್ಚೆತ್ತುಕೊಳ್ಳಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ದೇಶದ ಕಾರ್ಮಿಕ ವರ್ಗ ಮಾರ್ಚ್ 28-29ರಂದು ನಡೆದ 48 ಗಂಟೆಗಳ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಿದ್ದಾರೆ ಎಂದಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದಕ್ಕಾಗಿ ಅವರನ್ನು ಅಭಿನಂದಿಸಿದೆ. 10 ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ವಿವಿಧ ವಲಯಗಳ ಒಕ್ಕೂಟಗಳು ನೀಡಿದ ಕರೆಗೆ ಲಕ್ಷಾಂತರ ಕಾರ್ಮಿಕರು ಸ್ಪಂದಿಸಿದ್ದಾರೆ.

ವರದಿಗಳ ಪ್ರಕಾರ, ಕೇರಳದಲ್ಲಿ ಸಂಪೂರ್ಣ ಮುಚ್ಚಿಕೆಯಾಯಿತು ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು, ಹರಿಯಾಣ, ತೆಲಂಗಾಣ, ಕರ್ನಾಟಕ, ಅಸ್ಸಾಂ ಮತ್ತು ತ್ರಿಪುರದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಮುಷ್ಕರವು ಭಾರಿ ಪರಿಣಾಮ ಬೀರಿತು. ವಿಮೆ ಮತ್ತು ಬ್ಯಾಂಕಿಂಗ್ ಸೇವೆಗಳಲ್ಲೂ ನೌಕರರು ಮುಷ್ಕರದಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದು ಕಂಡುಬಂತು. ಸಾರಿಗೆ, ವಿದ್ಯುತ್, ರಾಜ್ಯ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ನೌಕರರು, ಸ್ಕೀಮ್ ವರ್ಕರ್‌ ಗಳಂತಹ ಪ್ರಮುಖ ಕ್ಷೇತ್ರಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಭಾಗವಹಿಸಿದರು.

ಮುಷ್ಕರದ ಯಶಸ್ಸು ಬಿಜೆಪಿ ಸರ್ಕಾರದ ರಾಷ್ಟ್ರೀಯ ಆಸ್ತಿಗಳ ನಗದೀಕರಣ, ಸಾರ್ವಜನಿಕ ವಲಯದ ಖಾಸಗೀಕರಣ, ನಾಲ್ಕು ಕಾರ್ಮಿಕ ಸಂಹಿತೆಗಳು ಮತ್ತು ಬೆಲೆ ಏರಿಕೆಯ ನೀತಿಗಳ ವಿರುದ್ಧ ಹೆಚ್ಚುತ್ತಿರುವ ಕೋಪವನ್ನು ಪ್ರತಿಬಿಂಬಿಸುತ್ತದೆ. ಮುಷ್ಕರ ಕರೆಯನ್ನು ವಿವಿಧ ರೈತ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಸಕ್ರಿಯವಾಗಿ ಬೆಂಬಲಿಸಿದವು.

ಕೆಲವು ರಾಜ್ಯಗಳಲ್ಲಿ ಪೋಲೀಸರು ಅಟ್ಟಹಾಸ ನಡೆಸಿದರು ಎನ್ನುತ್ತ ಅದನ್ನು ಪೊಲಿಟ್‍ ಬ್ಯುರೊ ಖಂಡಿಸಿದೆ. ಸರಕಾರ ದಬ್ಬಾಳಿಕೆ ನಡೆಸುವ ಬದಲು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಈ ಸಾರ್ವತ್ರಿಕ ಮುಷ್ಕರವು ಕಾರ್ಮಿಕ ವರ್ಗ-ವಿರೋಧಿ ನೀತಿಗಳನ್ನು ಅನುಸರಿಸದಂತೆ ಸರ್ಕಾರಕ್ಕೆ ಎಚ್ಚರಿಕೆಯಾಗಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *