ಗೋಷ್ಠಿ – 1: ಕೋಮುವಾದದ ಪ್ರಯೋಗ ಶಾಲೆಯಾಗಿ ಕರ್ನಾಟಕ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶ

“ಕರ್ನಾಟಕ ಈವರೆಗೆ ಕೋಮುವಾದದ ಪ್ರಯೋಗ ಶಾಲೆಯಾಗಿಲ್ಲ. ಆದರೆ ಆ ಪ್ರಯತ್ನಗಳು ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸುಮಾರು 30-40 ವರ್ಷಗಳಿಂದ ಕೋಮುವಾದದ ಪ್ರಯೋಗ ಶಾಲೆಯಾಗಿದೆ. ಇದರ ನಷ್ಟವನ್ನು ನಾವು ನೋಡಿದಾಗ ಮುಂದೆ ಕರ್ನಾಟಕವೂ ಹೀಗೆ ಆದಾಗ ಉಂಟಾಗುವ ನಷ್ಟವನ್ನು ಅರ್ಥ ಮಾಡಿಕೊಳ್ಳಬಹುದು” ಎಂದು ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿ ಹೇಳಿದರು.

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ನಡೆದ “ಕೋಮುವಾದದ ಪ್ರಯೋಗ ಶಾಲೆಯಾಗಿ ಕರ್ನಾಟಕ” ಗೊಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಹಂಪಿ ವಿ.ವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿಯವರು ಮಾತನಾಡಿದರು.

“ಸಾಮಾನ್ಯವಾಗಿ ಎಲ್ಲಾ ಪಕ್ಷಗಳು ಒಂದು ಸಮುದಾಯದ ಸಮಾವೇಶವನ್ನು ಮಾಡುವುದು ಚುನಾವಣೆ ಬಂದಾಗ. ಆದರೆ ಸಿಪಿಐ(ಎಂ) ಇಲ್ಲಿ ಮಾಡುತ್ತಿರುವುದು ವೋಟ್ ಬ್ಯಾಂಕ್ ಸಮಾವೇಶವಲ್ಲ. ಬರೀ ಸೋತವರ ಜೊತೆಯಲ್ಲಿ, ಪರವಾಗಿ ನಿಲ್ಲುವುದು ಸಿಪಿಐಎಂ ಪಕ್ಷದ ಉದ್ಧೇಶವಾಗಿದೆ ಎಂದು ನಾನು ಹಲವಾರು ಮಂದಿಯಲ್ಲಿ ಮಾತನಾಡಿದಾಗ ತಿಳಿದು ಬಂದಿದೆ. ಇದೇ ಕಾರಣಕ್ಕೆ ನಾನು ಇಲ್ಲಿ ಭಾಗಿಯಾಗಿದ್ದೇನೆ” ಎಂದು ತಿಳಿಸಿದರು.

“20 ವರ್ಷದಿಂದ ಬಿಜೆಪಿ ಈ ಅವಿಭಜಿತ ಜಿಲ್ಲೆಯಲ್ಲಿ ಶಾಸಕ, ಸಂಸದ ಸೀಟು ಪಡೆಯುತ್ತಿದೆ. ಆದರೆ ದೊಡ್ಡ ಮಟ್ಟಿನ ಅಭಿವೃದ್ಧಿ ಆಗಿಲ್ಲ. ಬದಲಾಗಿ ಜನರು ಕೋಮುವಾದದ ನೆಲೆಯಲ್ಲಿಯೇ ಆಲೋಚನೆ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಿಜಾಬ್, ಅಝಾನ್, ಹಲಾಲ್ ಎಂಬ ವಿಚಾರ ಮಂಗಳೂರಿನಲ್ಲೇ ಸೃಷ್ಟಿಯಾಗಿದೆ. ಈಗ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡುವ ಪ್ರಯೋಗ ನಡೆಯುತ್ತಿದೆ. ಆ ಪ್ರಯೋಗದಲ್ಲಿ ಬಿಜೆಪಿ ಯಶಸ್ವಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಅಭಿವೃದ್ಧಿ ವಿಚಾರದಲ್ಲಿ ನೋಡಿದಾಗ ಉತ್ತರ ಪ್ರದೇಶ ಪಾತಾಳದಲ್ಲಿದೆ. ಆದರೆ ಗೆಲುವು ಸಾಧಿಸಿದೆ. ಇದು ಭಾರೀ ದೊಡ್ಡ ಆಶ್ಚರ್ಯ. ಈ ಗೆಲುವಿಗೆ ಮುಖ್ಯ ಕಾರಣ ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಎಂಬ ಕಾಯ್ದೆಗಳು ಆಗಿದೆ. ಈಗ ಕರ್ನಾಟಕದಲ್ಲೂ ಅದೇ ರೀತಿ ಮುನ್ನಡೆಯುವಂತೆ ಕಾಣುತ್ತಿದೆ” ಎಂದು ಹೇಳಿದರು.

“ಹಿಜಾಬ್ ವಿಚಾರದಲ್ಲಿ ಕೋರ್ಟ್ ಕೇಳಬೇಕಾದದ್ದು ಸಮವಸ್ತ್ರಕ್ಕೂ ಶಿಕ್ಷಣಕ್ಕೂ ಸಂಬಂಧವಿದೆಯೇ ಎಂದು. ಆದರೆ ಕೋರ್ಟ್ ಧಾರ್ಮಿಕ ಪ್ರಶ್ನೆಯನ್ನು ಕೇಳಿದೆ. ಹಿಜಾಬ್‌ಗೂ ಇಸ್ಲಾಂಗೂ ಸಂಬಂಧ ಇದೆಯೇ ಎಂದು ಕೋರ್ಟ್ ಕೇಳಿದೆ. ಕೋಮುವಾದವನ್ನು ಹರಡುವಲ್ಲಿ ಕೋರ್ಟ್ ಕೂಡಾ ಈ ಮೂಲಕ ಭಾಗಿಯಾಗಿದೆ,” ಎಂದು ಆರೋಪ ಮಾಡಿದರು.

“ರಾಜ್ಯದಲ್ಲಿ ಪಠ್ಯ ಪುಸ್ತಕದ ಪರಿಷ್ಕರಣೆ ಮೂಲಕ ತಮ್ಮ ಕೋಮು ವಿಭಜನೆ ಮುಂದುವರಿಸಿದ್ದಾರೆ. ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಕೋಮುವಾದಿಗಳನ್ನಾಗಿ ಮಾಡುವ ಹುನ್ನಾರ ಇದರ ಹಿಂದೆ ಇದೆ. ಬ್ರಾಹ್ಮಣ್ಯ ತಿರಸ್ಕಾರ ಮಾಡುವ ಎಲ್ಲ ಪಠ್ಯ ತೆಗೆಯಲಾಗಿದೆ. ಬರೀ ಬಿಜೆಪಿ ತಮಗೆ ಬೇಕಾದ ಪಠ್ಯವನ್ನು ಉಳಿಸಿಕೊಂಡಿದೆ. ನೀತಿ ಪಾಠದಿಂದ ಕೋಮುವಾದ ನಿಲ್ಲದು. ಕೋಮುವಾದವನ್ನು ಸೃಷ್ಟಿ ಮಾಡಿದವರು ಚುನಾವಣೆಯಲ್ಲಿ ಸೋತಾಗ ಮಾತ್ರ ಕೋಮುವಾದಕ್ಕೆ ಕೊನೆ. ನಾವು ಆರ್ಥಿಕ ಕಾರಣಕ್ಕಾಗಿ ಕೋಮುವಾದವನ್ನು ವಿರೋಧ ಮಾಡಬೇಕಾಗಿದೆ. ಕೋಮುವಾದ ಹೆಚ್ಚಾದರೆ ಭಾರತದ ಸ್ಥಿತಿ ಶ್ರೀಲಂಕಾದಂತೆ ಆಗುತ್ತದೆ. ಕೋಮುವಾದ ಹೆಚ್ಚಾದರೆ ಅಲ್ಪಸಂಖ್ಯಾತ ರಿಗೆ ಮಾತ್ರ ತೊಂದರೆ ಆಗುವುದಲ್ಲ, ಬಹುಸಂಖ್ಯಾತರಿಗೂ ತೊಂದರೆಯಾಗುತ್ತದೆ” ಎಂದು ಅಭಿಪ್ರಾಯಿಸಿದರು.

Muslim Samavesha 31 05 2022Mಭಾರತವನ್ನು ಹಿಂದೂ ದೇಶವನ್ನಾಗಿಸುವ ಉದ್ಧೇಶ: ಡಾ.ಕೆ.ಪ್ರಕಾಶ್‌

“ದೇಶವನ್ನು ಕೋಮುಗ್ರಸ್ತ ಮಾಡುವಲ್ಲಿ ಅತ್ಯಂತ ಜಾಸ್ತಿ ಪಾಲಿರುವುದು ಸಂಘಪರಿವಾರದ್ದು. ಆರ್‌ಎಸ್‌ಎಸ್‌ಗೆ ಇನ್ನೆರೆಡು ವರ್ಷ ಕಳೆದರೆ ನೂರು ವರ್ಷವಾಗುತ್ತದೆ. ಅವರ ಹಿಂದಿನ ಉದ್ದೇಶ ಈ ದೇಶವನ್ನು ಹಿಂದೂ ದೇಶವನ್ನಾಗಿ ಮಾಡುವುದು ಆಗಿದೆ. ಭಾರತದ ಜಾತ್ಯಾತೀತ ಮತ್ತು ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ಗೆ ಯಾವುದೇ ಗೌರವವಿಲ್ಲ. ಅವರ ಪ್ರಕಾರ ಹಿಂದೂ ದೇಶ ಪ್ರಾಚೀನ ಕಾಲದಲ್ಲಿ ಇತ್ತು. ಅದನ್ನು ಪರಕೀಯರು ನಾಶ ಮಾಡಿದ್ದಾರೆ. ಹಾಗಾಗಿ ನಾವು ಹಿಂದೂ ಧರ್ಮವನ್ನು ಪುನಃಸ್ಥಾಪನೆ ಮಾಡಬೇಕು ಎಂದು ಆರ್‌ಎಸ್‌ಎಸ್ ಹೇಳುತ್ತದೆ. ಇದಕ್ಕಾಗಿಯೇ ಭಾರತದ ಇತಿಹಾಸವನ್ನು ವೈಭವೀಕರಣ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಪಠ್ಯ ಪುಸ್ತಕದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಸಿಪಿಐಎಂ ಸಂಘಟಿಸಿರುವ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಏರ್ಪಡಿಸಿದ್ದ “ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ” ಗೋಷ್ಠಿಯಲ್ಲಿ ವಿಷಯ ಮಂಡಿಸಿ ರಾಜಕೀಯ ವಿಶ್ಲೇಷಕರಾದ ಡಾ.ಕೆ.ಪ್ರಕಾಶ್‌ ಮಾತನಾಡಿದರು.

“ಪ್ರಸ್ತುತ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಾದ ಮಹಿಳೆಯರ ಅಸಮಾನತೆ, ನಿರುದ್ಯೋಗ, ಶಿಕ್ಷಣ, ಅನಾರೋಗ್ಯದ ಸಮಸ್ಯೆ ಕಾರಣ ಮುಸ್ಲಿಮರೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕಾಗಿ ಆರ್‌ಎಸ್‌ಎಸ್‌, ಬಿಜೆಪಿ ಹಲವಾರು ವಾದಗಳನ್ನು ಮಾಡಿದೆ. ಅದುವೇ ಸತ್ಯ ಎಂಬಂತೆ ನಂಬಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಭಾರತದ ಒಳಗೆ ಇರುವ ಶತ್ರುಗಳು ಕಾರಣ ಎಂದು ಕೂಡಾ ಹೇಳುತ್ತಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಷ್ಠರು ಶತ್ರುಗಳು ಎಂದು ಹೇಳುತ್ತಾರೆ. ಅವರನ್ನು ದ್ರೋಹಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ,” ಎಂದು ತಿಳಿಸಿದರು.

“ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು ಅಡಿಪಾಯವಾಗಿ ಕೆಲಸ ಮಾಡಲಾಗುತ್ತಿದೆ. ಸಮಾನತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ಅದು ನಮ್ಮ ದೇಶದ ಮೂಲ ಸಂಸ್ಕೃತಿಯಲ್ಲ ಎಂದು ನಂಬಿಸುತ್ತಿದ್ದಾರೆ. ಜಾತ್ಯಾತೀತತೆ ಎಂಬ ಪರಿಕಲ್ಪನೆಯನ್ನೂ ಅವರು ವಿರೋಧಿಸುವುದು ಅವರು ಅದೇ ಕಾರಣಕ್ಕೆ. ಸಂವಿಧಾನದ ಮೂಲ ಆಧಾರ ಸ್ಥಂಭ ವಿದೇಶಿ ಕಲ್ಪನೆ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಅದಕ್ಕಾಗಿ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಪದೇ ಪದೇ ಜನರ ತಲೆಗೆ ತುಂಬಿಸುತ್ತಾರೆ. ಈ ಸಂವಿಧಾನ ಬದಲಾವಣೆಗೆ ಅವರು ಪಡೆಯನ್ನು ಕಟ್ಟುತ್ತಾರೆ.

ಆರ್‌ಎಸ್‌ಎಸ್ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಕೋಮುಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿದೆ. ಮಕ್ಕಳಿಂದಲೇ ತಲೆಗೆ ಕೋಮು ದ್ವೇಷ ತುಂಬಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ನಡುವೆ ಹಿಜಾಬ್ ವಿಚಾರ ಹರಡಲಾಗಿದೆ. ಗಣ್ಯ ವ್ಯಕ್ತಿಗಳ ಮೂಲಕವೂ ಕೋಮು ದ್ವೇಷ ಹರಡಲಾಗುತ್ತಿದೆ. ದಲಿತ ಮತ್ತು ಬುಡಕಟ್ಟುಗಳ ನಡುವೆ ಎತ್ತಿಕಟ್ಟಿ ಅವರು ತಮ್ಮ ಕಾರ್ಯವನ್ನು ಸಾಧಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಚಿತ್ರದುರ್ಗದ ನಾಯಕ ಸಮುದಾಯವನ್ನು ಹೈದರಾಳಲಿಯನ್ನು ತೋರಿಸಿ ಮುಸ್ಲಿಮರ ವಿರುದ್ದ ಎತ್ತಿಕಟ್ಟಿರುವುದು,” ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಸಮಿತಿಯ ಸದಸ್ಯರಾದ ಮುನೀರ್ ಕಾಟಿಪಳ್ಳ, “ಕರಾವಳಿ ರೀತಿಯಲ್ಲಿ ಇಡೀ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆ ಮಾಡಿಲ್ಲ ಎಂಬುವುದು ನಿಜವೆ ಆಗಿದೆ. ಆದರೆ ಪ್ರಯೋಗಶಾಲೆಯನ್ನಾಗಿ ಮಾಡುವ ಕೆಲಸ ಪ್ರಾರಂಭ ಆಗಿದೆ. ಜಾತ್ಯತೀತ ಪಕ್ಷದಲ್ಲಿ ಗೆದ್ದವರು ಶಾಸನ ಸಭೆಗಳಲ್ಲಿ ಕೋಮುವಾದಿಗಳ ಜೊತೆಗೆ ಕೈಜೋಡಿಸಿದಾಗ ಯಾವುದೂ ಅಸಾಧ್ಯವಿಲ್ಲ. ಕೋಮುವಾದದ ವಿರುದ್ಧದ ಹೋರಾಟದಲ್ಲಿ ಕೇವಲ ಕೋಮುವಾದದ ಬಗ್ಗೆ ಮಾತ್ರವಲ್ಲದೆ, ಜನರ ಬದುಕಿನ ಪ್ರಶ್ನೆಗಳನ್ನೂ ಜೋಡಿಸುವ ಕೆಲಸ ಮಾಡಬೇಕು” ಎಂದರು.

“ನಾರಾಯಣಗುರು ಸ್ಥಬ್ದಚಿತ್ರವನ್ನು ಮೋದಿ ಸರ್ಕಾರ ನಿರಾಕರಿಸಿದಾಗ, ಹಿಜಾಬ್ ವಿಚಾರವನ್ನು ಮುಂದೆ ತರಲಾಯಿತು. ಮುಸ್ಲಿಂ ಮತೀಯವಾದಿಗಳು ಬಹಳ ಹೆಚ್ಚಾಗಿ ಸಂಘಪರಿವಾರಕ್ಕೆ ಏನು ಬೇಕೋ ಅದನ್ನೇ ಮಾಡುತ್ತಿವೆ. ಹಿಂದೂ ಕೋಮುವಾದ ಕರಾವಳಿಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿ ಸುಮಾರು ಮೂರು ದಶಕಗಳಾಗಿದೆ. ಆದರೆ ಈಗ ಮುಸ್ಲಿಂ ಕೋಮುವಾದಿಗಳು ಕೂಡಾ ಕರಾವಳಿಯನ್ನು ಪ್ರಯೋಗಶಾಲೆಯನ್ನಾಗಿ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಕೋಮುವಾದ ಬಹುಸಂಖ್ಯಾತ ಕೋಮುವಾದಕ್ಕೆ ಬಲನೀಡುತ್ತಿದೆ. ಇದಕ್ಕೆ ಪೂರಕವಾಗಿ ಪಿಎಫ್ಐ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

“ಮಾಧ್ಯಮಗಳಿಗೆ ಆರ್‌ಎಸ್‌ಎಸ್‌ನ ಮತೀಯವಾದಕ್ಕೆ ಜಾತ್ಯತೀತರ ಪ್ರತಿಕ್ರಿಯೆಗಿಂತ ಮುಸ್ಲಿಂ ಮತೀಯವಾದದ ಪ್ರತಿಕ್ರಿಯೆ ಬೇಕಾಗಿದೆ. ಹಾಗಾಗಿಯೆ ಮಳಲಿ ಮಸೀದಿಯ ವಿಷಯದಲ್ಲಿ ಎಸ್‌ಡಿಪಿಐ ಮಾತನಾಡಿದಾಗ ಎಲ್ಲೋ ಮೂಲೆಯಲ್ಲಿ ಮಲಗಿದ್ದ ಪ್ರಮೋದ್ ಮುತಾಲಿಕ್ ಎದ್ದು ಪ್ರತಿಕ್ರಿಯೆ ನೀಡುತ್ತಾರೆ. ಕೋಮುವಾದಿಗಳನ್ನು ಕೇವಲ ಚುನಾವಣೆಯಿಂದ ಸೋಲಿಸಲು ಸಾಧ್ಯವಿಲ್ಲ. ಒಂದು ವೇಳೆ ಸೋತರೆ ಅವರು ದುಪ್ಪಟ್ಟು ಶಕ್ತಿಯಿಂದ ವಾಪಾಸು ಬರುತ್ತಾರೆ. ಅಲ್ಪಸಂಖ್ಯಾತ ಸಮುದಾಯಗಳು ಕೋಮುವಾದದ ವಿರುದ್ದ ಹೋರಾಟ ಮಾಡಬೇಕಾದರೆ ಜಾತ್ಯಾತೀತ ಶಕ್ತಿಗಳೊಂದಿಗೆ ಸೇರಬೇಕು” ಎಂದರು.

ಗೋಷ್ಠಿಯನ್ನು ಸುನಿಲ್‌ ಕುಮಾರ್‌ ಬಜಾಲ್ ನಿರ್ವಹಿಸಿದರೆ ಇತ್ತೀಚೆಗೆ ಹಿಂದು ಮತಿಯವಾದಿಗಳಿಂದ ದಾಳಿಗೊಳಗಾಗಿದ್ದ ನಬಿಸಾಬ್ ಕಿಲ್ಲೇದ ಹಾಜರಿದ್ದರು.

Leave a Reply

Your email address will not be published. Required fields are marked *