ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣದ ಪ್ರಕ್ರಿಯೆ ದುರ್ಬಲವಾಗದಿರಲಿ

ಸುಪ್ರೀಂಕೋರ್ಟಿನ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಬೃಹತ್ ನಗರಪಾಲಿಕೆಗೆ ಚುನಾವಣೆಗಳನ್ನು ಕೂಡಲೇ ನಡೆಸುವ ಹೊಣೆಗಾರಿಕೆ ಕರ್ನಾಟಕ ಚುನಾವಣಾ ಆಯೋಗ ಮತ್ತು ಕರ್ನಾಟಕ ಸರ್ಕಾರದ ಹೆಗಲ ಮೇಲಿದೆ. ಈ ಚುನಾವಣೆಗಳನ್ನು ಇನ್ನು ಹನ್ನೆರಡು ವಾರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯವು ಗಡುವು ವಿಧಿಸಿದೆ. ಅದರಂತೆ ಈ ಕೂಡಲೇ ಕ್ಷೇತ್ರಗಳ ಪುನರ್ವಿಂಗಡನೆ ಮತ್ತು ಮೀಸಲಾತಿ ಹಂಚಿಕೆಯ ಪಟ್ಟಿಯನ್ನು ಸಿದ್ಧಗೊಳಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆಯನ್ನು ಕೊಡಬೇಕಿದೆ.

ಜನತೆಯ ಕೈಗೆ ಅಧಿಕಾರವನ್ನು ನೀಡುವ ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣದ ಅತ್ಯಂತ ಮಹತ್ವದ ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸಂವಿಧಾನಾತ್ಮಕ ಕರ್ತವ್ಯವನ್ನು ಅದು ನಿರ್ವಹಿಸಿಲ್ಲ. ಈ ಚುನಾವಣೆಗಳು ಕಳೆದ ವರ್ಷವೇ 2021 ರಲ್ಲೇ ನಡೆದು ನೂತನ ಸಮಿತಿಗಳು ಮತ್ತು ನಾಯಕತ್ವ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಅಂತಹ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲದ್ದರಿಂದ ಈ ಪ್ರಕ್ರಿಯೆಯನ್ನು ಅನೇಕ ನೆಪಗಳನ್ನೊಡ್ಡಿ ವಿಳಂಬಿಸುತ್ತಾ ಬಂದದ್ದು ಅತ್ಯಂತ ಖಂಡನೀಯ. ಸರಕಾರದ ನಿರ್ಲಕ್ಷ್ಯತನದಿಂದಾಗಿ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಕಳೆದುಕೊಳ್ಳುವ ಒಂದು ಅಪಾಯಕಾರಿ ಸನ್ನಿವೇಶವೂ ನಿರ್ಮಾಣಗೊಂಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಎಲ್ಲವುಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತು ಕರ್ನಾಟಕ ಸರಕಾರದ ಆಡಳಿತ ಅತ್ಯಂತ ತ್ವರಿತವಾಗಿ ಮತ್ತು ಸಮರ್ಥವಾಗಿ ಕ್ಷೇತ್ರಗಳ ಪುನರ್ ವಿಂಗಡನೆ ಮತ್ತು ಮೀಸಲಾತಿ ಪಟ್ಟಿಯನ್ನು ರೂಪಿಸಿ ಮಂಡಿಸಬೇಕಿದೆ.

ಜನತೆಯ ಕೈಗೆ ಅಧಿಕಾರವನ್ನು ನೀಡುವ ಇಂತಹ ಮಹತ್ವದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬಲಗೊಳಿಸುವುದು ಆಡಳಿತರೂಢ ಬಿಜೆಪಿಗೆ ಸುತರಾಂ ಇಚ್ಛೆಯಿಲ್ಲ ಎನ್ನುವುದನ್ನು ಪ್ರತಿಹಂತದಲ್ಲೂ ತೋರಿಸಿದೆ. ಅದು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವಿಕೆಯನ್ನು ತಾತ್ವಿಕವಾಗಿ ಸಹ ಒಪ್ಪುವುದಿಲ್ಲ. ಈ ಸಂಸ್ಥೆಗಳು ಅದಕ್ಕೆ ಏನಿದ್ದರೂ ಕೇವಲ ತನ್ನ ರಾಜಕೀಯ ಅಧಿಕಾರವನ್ನು ಹಿಡಿಯುವ ಒಂದು ಸಾಧನ ಎಂದಷ್ಟೇ ನೋಡುತ್ತದೆ. ಈ ಕಾರಣದಿಂದಾಗಿಯೂ ಈಗಿರುವ ಹಾಲಿ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆದರೆ ತಾನು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ರಾಜಕೀಯ ಸಂಕುಚಿತತೆ ಉದ್ದೇಶ ಗೊಂದಲ ಹುಟ್ಟುಹಾಕುವಲ್ಲಿ ಮತ್ತು ವಿಳಂಬಿ ಸುವುದರ ಹಿಂದೆ ಇಲ್ಲದಿಲ್ಲ. ಬಿ.ಬಿ.ಎಂ.ಪಿ. ಪ್ರದೇಶ ವ್ಯಾಪ್ತಿಯಲ್ಲಿನ ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ತನ್ನ ಬಲ ಇರುವ ಪ್ರದೇಶಗಳನ್ನು ಒಟ್ಟಿಗೆ ಮಾಡುವ ವಿರೋಧಪಕ್ಷಗಳು ಬಲ ಇರುವಲ್ಲಿ ಅವುಗಳನ್ನು ದುರ್ಬಲಗೊಳಿಸುವ ಹಂಚಿಕೆ ಇದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಮೀಸಲಾತಿ ಹಂಚಿಕೆಯು ಇಂತಹದೇ ಲೆಕ್ಕಾಚಾರಗಳಿಂದ ಹೊರತಾಗಿ ಇರುವುದಿಲ್ಲ ಎನ್ನುವ ಅಭಿಪ್ರಾಯಗಳು ಇವೆ.

ಹಲವಾರು ಪ್ರಾದೇಶಿಕ ವೈಶಿಷ್ಟಗಳು, ವಿಭಿನ್ನತೆಗಳು ಇರುವ ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಅವೆಲ್ಲವನ್ನೂ ಮೂಲೆಗೆ ತಳ್ಳುವಂತೆ ಒಂದು ರಾಷ್ಟ್ರ ಒಂದು ಚುನಾವಣೆ ಯಂತಹ ಏಕಸ್ವಾಮ್ಯ ಸರ್ವಾಧಿಕಾರತ್ವದ ಚುನಾವಣೆಯ ಸ್ವರೂಪವನ್ನು ಹೇರುವುದಕ್ಕೆ ಹಂಬಲಿಸುತ್ತಿರುವ ಬಿಜೆಪಿಗೆ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ತದ್ವಿರುದ್ಧವಾಗಿವೆಯೇ ಕಾಣುತ್ತದೆ. ತಳ ಹಂತದಿಂದಲೂ ಜನತೆಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಮತ್ತು ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತಾ ಒಂದು ಅತ್ಯಂತ ಬಲಿಷ್ಠ ವ್ಯವಸ್ಥೆಯನ್ನಾಗಿ ರೂಪಿಸುವುದಕ್ಕೆ ಅದು ಖಂಡಿತ ಸಿದ್ಧವಿಲ್ಲ.

ರಾಜ್ಯಗಳಿಗೆ ಸಿಗಬೆಕಾದ ಸಂಪನ್ಮೂಲಗಳನ್ನು ನೀಡದೇ ಸೊರಗುವಂತೆ ಕೇಂದ್ರದ ಬಿಜೆಪಿ ನೋಡಿಕೊಳ್ಳುತ್ತಿದೆ. ಹೇಗೆ ದುರ್ಬಲ ರಾಜ್ಯಗಳು ಕೇಂದ್ರದ ಅಧೀನವಾಗಿ ಇರಬೇಕೆಂದು ಬಯಸುತ್ತದೆಯೋ ಹಾಗೆಯೇ ಪಂಚಾಯತ್ ಮತ್ತು ಸ್ಥಳೀಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ನೋಡುತ್ತದೆ. ಹೀಗಾಗಿಯೇ ಪಂಚಾಯತಿಗಳಿಗೆ ಅಗತ್ಯವಿರುವಷ್ಟು ಸಂಪನ್ಮೂಲವನ್ನು ನೀಡಿ ಅಭಿವೃದ್ಧಿಯಾಗುವಂತೆ ನೋಡುವುದಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಅಥವಾ ಆಡಳಿತ ವಿಕೇಂದ್ರೀಕರಣದ ಒಟ್ಟು ವ್ಯವಸ್ಥೆಯನ್ನು ಅದು ತನ್ನ ವೋಟ್ ಬ್ಯಾಂಕಿನ ಉಪಕರಣವೆಂದು ಮತ್ತು ಇವುಗಳ ಹೆಸರಿನಲ್ಲಿ ಮೀಸಲಿಡುವ ಅಪಾರ ಹಣ ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ಒಂದು ಕ್ಷೇತ್ರವೆಂದು ಅದು ಭಾವಿಸಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಶೇ 40ರಷ್ಟು ಕಮಿಷನ್ ಬಾಚುವ ಭ್ರಷ್ಟ ದಂದೆಯಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅಧಿಕಾರ ಕಳೆದುಕೊಂಡದ್ದು ಬಿಜೆಪಿಯ ಅನೈತಿಕತೆಗೆ ಇತ್ತೀಚಿನ ಜ್ವಲಂತ ಉದಾಹರಣೆ. ಹೀಗಿರುವಾಗಲೂ ನ್ಯಾಯಾಲಯಗಳ ನಿರ್ದೇಶನ ಮತ್ತು ಜನತೆಯ ಒತ್ತಡದ ಕಾರಣಗಳಿಂದ ಚುನಾವಣೆ ನಡೆಸುವುದು ಅದಕ್ಕೆ ಅತ್ಯಂತ ಅನಿವಾರ್ಯವಾಗಿದೆ.

ಹೀಗೆ ಪ್ರಜಾಸತ್ತಾತ್ಮಕ ಆಡಳಿತ ವಿಕೇಂದ್ರೀಕರಣದ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕೈಗೊಂಬೆಯನ್ನಾಗಿಸುವ ಹುನ್ನಾರಗಳ ಎದುರು ರಾಜ್ಯದ ಜನತೆ ಅತ್ಯಂತ ಜಾಗರೂಕವಾಗಬೇಕಿದೆ. ಮುಖ್ಯವಾಗಿ, ಕ್ಷೇತ್ರಗಳ ಪುನರ್ ವಿಂಗಡನೆ ನ್ಯಾಯ ಸಮ್ಮತವಾಗಿ ಆಗುವಂತೆ ಮತ್ತು ಮೀಸಲಾತಿ ಪಟ್ಟಿಯು ಸಂವಿಧಾನಾತ್ಮಕ ಮೌಲ್ಯಗಳ ಆಧಾರದಲ್ಲಿ ಆಗುವಂತೆ ಎಚ್ಚರವನ್ನು ವಹಿಸಬೇಕಾಗಿದೆ.

ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಜಾತಿ, ಕೋಮು ಧೃವೀಕರಣ, ಅಪಾರ ಹಣ,ಆಮಿಷಗಳ ಮೂಲಕ ಬುಡ ಮೇಲು ಗೊಳಿಸಬಹುದಾದ ಸಾಧ್ಯತೆಗಳನ್ನು ಗಮನದಲ್ಲಿರಿಸಿ ಮತದಾರರ ಪಟ್ಟಿಯ ಪರಿಷ್ಕರಣೆ ಇಂದ ಹಿಡಿದು ಪ್ರತಿ ಹಂತದಲ್ಲೂ ಎಚ್ಚರಿಕೆಯ ಕ್ರಮಗಳು ಅವಶ್ಯಕ. ಜೊತೆಗೆ ಈ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕ ,ಪ್ರಗತಿಪರ ಶಕ್ತಿಗಳು ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ಪ್ರತಿಪಾದಿಸುವ ಮತ್ತು ಜನತೆಯ ಕೈಗೆ ಅಧಿಕಾರ ಮತ್ತು ಸಂಪನ್ಮೂಲಗಳ ಸದ್ಬಳಕೆ ಮಾಡಿ ಪ್ರಗತಿ ಸಾಧಿಸುವುದು ಮುಖ್ಯ.ಇಂತಹ  ಪ್ರಜಾಸತ್ತಾತ್ಮಕ ವಿಕೇಂದ್ರೀಕರಣಕ್ಕೆ ಎಲ್ಲ ಹಂತದಿಂದ ಸರ್ವರೀತಿಯಲ್ಲೂ ಶಕ್ತಿ ನೀಡಿ ಬಲ ತುಂಬುವ ಅದಕ್ಕಾಗಿ ಶ್ರಮಿಸುವ ಶಕ್ತಿಗಳು ಅಧಿಕಾರಕ್ಕೆ ಬರುವುದು ಅತ್ಯಂತ ಅವಶ್ಯಕತೆ ಇದೆ. ವಿಶೇಷವಾಗಿ ಇಂದು ರಾಜ್ಯಗಳ ಸಂಪನ್ಮೂಲಗಳನ್ನು ಹಿಂಡಿ ಹಿಪ್ಪೆ ಮಾಡುವ ಕೇಂದ್ರೀಕರಣದ ವ್ಯವಸ್ಥೆಯ ವಿರುದ್ಧವಾಗಿ ಪಂಚಾಯತರಾಜ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಅತಿ ಹೆಚ್ಚಿನ ಸಂಪನ್ಮೂಲ ಮತ್ತು ಆ ಕಾಯ್ದೆಯಲ್ಲಿ ಇರುವ ಪ್ರಜಾಸತ್ತಾತ್ಮಕ ಹಕ್ಕು ಮತ್ತು ಅಧಿಕಾರಗಳನ್ನು ಸಂಪೂರ್ಣವಾಗಿ ನಿಜ ಅರ್ಥದಲ್ಲಿ ಬಳಸುವ ಬಲಗೊಳಿಸುವುದೂ ಅಷ್ಟೇ ಮುಖ್ಯವಾಗಿದೆ. ಈ ಚುನಾವಣೆಗಳು ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದಲ್ಲಿ ನಡೆಯುತ್ತಿರುವುದರಿಂದ ಜನತೆ ಇಂದಿನ ಅತ್ಯಂತ ಭ್ರಷ್ಟ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳಿಗೆ ನೆಲೆ ದೊರೆಯದಂತೆ ಮಾಡುವುದು ಇಡೀ ಕರ್ನಾಟಕದ ಭವಿಷ್ಯದ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

Leave a Reply

Your email address will not be published. Required fields are marked *