ಸೇವೆ ಖಾಯಮಾತಿಗೆ ಮುನಿಸಿಪಲ್ ಕಾರ್ಮಿಕರ ಐಕ್ಯ ಮುಷ್ಕರಕ್ಕೆ ಸಿಪಿಐ(ಎಂ) ಬೆಂಬಲ

ಹತ್ತಾರು ವರ್ಷಗಳಿಂದ ನಗರ-ಪಟ್ಟಣಗಳಲ್ಲಿ ಜನತೆಗೆ ಮೂಲಭೂತ ನಾಗರಿಕ ಸೌಲಭ್ಯಗಳಾದ ಸ್ವಚ್ಚತೆ, ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆಗಾಗಿ ದುಡಿಯುತ್ತಿರುವ ಮುನಿಸಿಪಲ್ ಕಾರ್ಮಿಕರು ತಮ್ಮ ಸೇವೆಗಳ ಖಾಯಂಮಾತಿಗೆ ಇಂದಿನಿಂದ (ಜುಲೈ 1, 2022) ನಡೆಸುತ್ತಿರುವ ಮುಷ್ಕರಕ್ಕೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.

ಅಧುನೀಕ ತಾಂತ್ರಿಕತೆಯ ನಡುವೆಯು ಕಳೆದ 10 ವರ್ಷಗಳಲ್ಲಿ ಮ್ಯಾನ್‌ಹೋಲ್ ಮತ್ತು ಮಲದ ಗುಂಡಿಗಳಲ್ಲಿ 80ಕ್ಕೂ ಹೆಚ್ಚು ಜನ ಪೌರಕಾರ್ಮಿಕರು ತಮ್ಮ ಅಮೂಲ್ಯವಾದ ಜೀವ ಕಳೆದುಕೊಂಡಿರುವುದು ನಾಗರೀಕ ಸಮಾಜ – ಮತ್ತು ಸರ್ಕಾರಗಳು ಗಂಭಿರವಾಗಿ ಪರಿಗಣಿಸಬೇಕಾಗಿದೆ ಮತ್ತು ಇದಕ್ಕೆ ಅಂತ್ಯ ಹಾಡಬೇಕಾಗಿದೆ ಎಂದು ಸಿಪಿಐ(ಎಂ) ತನ್ನ ಕಳವಳವನ್ನು ವ್ಯಕ್ತಪಡಿಸುತ್ತದೆ.

ಘನತೆಯಿಂದ ಬದುಕಲು ಬೇಕಾದ ವೇತನ, ಅತ್ಯಗತ್ಯವಾದ ಸುರಕ್ಷಾ ಸಲಕರಣೆಗಳು, ಕಾರ್ಮಿಕರ ಕಾನೂನುಗಳ ಅನ್ವಯ 8 ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ವಾರದ ರಜೆ, ಸಂದಾರ್ಭಿಕ ರಜೆ, ಗಳಿಕೆ ರಜೆ, ಸಂಬಳದ ಚೀಟಿ, ಗುರುತಿನ ಚೀಟಿ, ಪಿಎಫ್/ಇ.ಎಸ್.ಐ. ಪಾವತಿಗಳಲ್ಲಿ ವಂಚನೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿಗಳ ಸೌಲಭ್ಯಗಳ ಕೊರತೆಯಿಂದಾಗಿ ದಾರುಣ ಸ್ಥಿತಿಯಲ್ಲಿ ಪೌರಕಾರ್ಮಿಕರು ಬದುಕುವಂತಾಗಿದೆ.

ಹಲವು ಸಂಘಟನೆಗಳು ಹತ್ತಾರು ವರ್ಷಗಳಿಂದ ಸತತವಾಗಿ ಖಾಯಮಾತಿಗಾಗಿ ನಡೆಸುತ್ತಿರುವ ಹೋರಾಟದ ಸಮಯದಲ್ಲಿ ಸರ್ಕಾರ ನೀಡುವ ಖಾಯಂ ಮಾಡುವ ಭರವಸೆ ಮಾತ್ರ ಅಲ್ಲೇ ನಿಂತುಹೋಗಿದೆ. ಬದಲಿಗೆ ನೇರ ನೇಮಕಾತಿ, ನೇರ ಪಾವತಿ ಎಂದು ಹಾದಿ ತಪ್ಪಿಸಲಾಗುತ್ತಿದೆ. ಅಲ್ಲದೆ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲಾಗುತ್ತಿದೆ. ಮುಷ್ಕರ ತೆರಳಿರುವ ಕಾರ್ಮಿಕರ ಐಕ್ಯತೆಯನ್ನು ಒಡೆಯಲು ಸರ್ಕಾರ 4500 ಜನ ಪೌರ ಕಾರ್ಮಿಕರ ಮಾತ್ರ ಖಾಯಂ ಮಾಡುವುದಾಗಿ ಹೇಳಿರುವ ಕ್ರಮ ಸರಿಯಾದ್ದುದಲ್ಲ.

ಈ ದೃಷ್ಟಿಯಿಂದ ಸಿಪಿಐ(ಎಂ) ರಾಜ್ಯ ಸಮಿತಿಯು ಜನತೆಯ ಆರೋಗ್ಯ ಮತ್ತು ನಾಗರಿಕರ ಹಿತಕ್ಕಾಗಿ ಮುನಿಸಿಪಲ್ ಕಾರ್ಮಿಕರ ನ್ಯಾಯ ಸಮ್ಮತ ಹಕ್ಕೋತ್ತಾಯಗಳನ್ನು ಪರಿಗಣಿಸುವಂತೆ  ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

ಯು. ಬಸವರಾಜು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *