ಭ್ರಷ್ಟಾಚಾರ: ವಿಶ್ವಾಸಾರ್ಹತೆ ಕಳೆದುಕೊಂಡ ಸರಕಾರ

ಕರ್ನಾಟಕದಲ್ಲೀಗ ಬಯಲಿಗೆ ಬರುತ್ತಿರುವ ಭ್ರಷ್ಟಾಚಾರದ ಹಗರಣಗಳು ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸುತ್ತಿವೆ. ಈ ಭಾರೀ ಹಗರಣಗಳಲ್ಲಿ ಭಾಗಿಯಾದ ಇಬ್ಬರು ಉನ್ನತ ಅಧಿಕಾರಿಗಳು ತನಿಖಾ ಸಂಸ್ಥೆಗಳಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ. ತನಿಖೆ ನಿಖರತೆ ಮತ್ತು ತೀವ್ರತೆಯನ್ಮು ಪಡೆದರೆ ಮತ್ತಷ್ಟು ದೊಡ್ಡ ಕುಳಗಳೂ ಅವರನ್ನು ಹಿಂಬಾಲಿಸಬಹುದು. ಕೇವಲ ಬಂಧನವೇ ಶಿಕ್ಷೆಯಲ್ಲ ಎಂಬುದು ಲಜ್ಜಾಹೀನರಾದ ಅಂತಹವರಿಗೆ ಅನಿಸಿದರೂ ತಮಗಿಂತ ಕಿರಿಯ ಆಧಿಕಾರಿಗಳಿಂದ ಬಂಧನಕ್ಕೆ ಒಳಗಾಗುವುದು ತೀರಾ ಮುಜುಗರದ, ನಾಚಿಗೆಗೇಡಿನ ಸಂಗತಿಯಾಗಿದೆ. ಇಂತಹ ಎಲ್ಲ ಸಂವೇದನೆಗಳನ್ನು ಕಳೆದುಕೊಂಡವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.

ಈಗ ತನಿಖೆ ನಡೆಯುತ್ತಿರುವ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕರಣದಲ್ಲಿ ಪ್ರಶ್ನೆ-ಉತ್ತರ ಪತ್ರಿಕೆಗಳ ಸಂರಕ್ಷಣೆಯ ಸಂಪೂರ್ಣ ಹೊಣೆ ಇದ್ದ ಎ.ಡಿ.ಜಿ.ಪಿ. ಅಮೃತ್ ಪೌಲ್ ಬೀಗದ ಕೈ ನೀಡಿ ಅಕ್ರಮ ಎಸಗಲು ಅವಕಾಶ ಕಲ್ಪಿಸಿದ ಆರೋಪದಲ್ಲಿ ಸಿಐಡಿಯಿಂದ ಬಂಧಿಸಲ್ಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭೂ ವ್ಯಾಜ್ಯದಲ್ಲಿ ಅನುಕೂಲಕರ ತೀರ್ಪು ನೀಡಲು ಲಂಚ ಪಡೆದ ಆರೋಪದಲ್ಲಿ ಬಂಧಿತರಾಗಿದ್ದಾರೆ. ತಾನು ಲಂಚ ಪಡೆದದ್ದು ಜಿಲ್ಲಾಧಿಕಾರಿ ಪರವಾಗಿ ಎಂದು ಉಪ ತಹಶೀಲ್ದಾರ್ ಹೇಳಿದ ಬಳಿಕ ಈ ಬಂಧನ ನಡೆದಿದೆ ಎನ್ನುವುದು ಅಧಿಕಾರಶಾಹಿ ವಲಯದ ಭ್ರಷ್ಟ ಕೊಂಡಿಗಳ ಒಂದು ನಿದರ್ಶನ. ಈ ಹಿಂದೆಯೂ ಐ.ಎಂ.ಎ. ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಐ.ಎ.ಎಸ್. ಅಧಿಕಾರಿ ಬಿ.ಎಂ. ವಿಜಯಶಂಕರ್, ಬೆಂಗಳೂರಿನ ಜಿಲ್ಲಾಧಿಕಾರಿ ಎಂ.ಕೆ. ಅಪ್ಪಯ್ಯ ಸಹ ಬಂಧಿತರಾಗಿದ್ದರು. ಬಂಧನದ ಬಳಿಕ ವಿಜಯಶಂಕರ್ ಮನೆಯಲ್ಲಿ ‘ಆತ್ಮಹತ್ಯೆ’ ಮಾಡಿಕೊಂಡಿದ್ದರು. ಜೆ.ಮಂಜುನಾಥ್ ಪ್ರಕರಣದಲ್ಲಿ ಈಗಲೂ ಹೈಕೋರ್ಟ್ ಚಾಟಿ ಬೀಸದಿದ್ದರೆ ಮೊಕದ್ದಮೆ ಕುಂಟುತ್ತಾ ಹೋಗುತ್ತಿತ್ತು ಮತ್ತು ಈ ಬಂಧನಗಳು ಆಗುತ್ತಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸಂದೇಶ್ ಅವರು ಬಳಸಿದ ಕಠಿಣ ಮಾತುಗಳು ಎ.ಸಿ.ಬಿ.ಯ ಪ್ರಾಮಾಣಿಕತೆ, ವೃತ್ತಿ ಧರ್ಮ, ಸಂಸ್ಥೆಯ ಸಮಗ್ರತೆಯನ್ನೇ ಪ್ರಶ್ನಿಸಿದೆ. ಅಧಿಕಾರಿಯೊಬ್ಬರ ಭ್ರಷ್ಟಾಚಾರದ ಮೊಕದ್ದಮೆಗೆ ಬಿ ರಿಪೋರ್ಟ್ ಸಲ್ಲಿಸಿದ ಎಸಿಬಿಯ ಕ್ರಮವನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು ಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದೂ ತೀಕ್ಷ್ಣವಾಗಿ ಟೀಕೆ ಮಾಡಿದ್ದರು. ಆರೋಪ ಅದರ ಕೆಟ್ಟ ಪಕ್ಷಪಾತವನ್ನು ಚುಚ್ಚಿದ್ದು ತಲೆತಗ್ಗಿಸುವಂತಿದೆ. ಅತ್ಯಂತ ಅಘಾತಕಾರಿ ಸಂಗತಿಯೆಂದರೆ ಮೊಕದ್ದಮೆ ನಡೆಸುತ್ತಿದ್ದ ಬೆಂಚ್ ನ ನ್ಯಾಯಮೂರ್ತಿಗೆ ಪ್ರಕರಣ ಬಿಡದಿದ್ದರೆ ತಮ್ಮ ವರ್ಗಾವಣೆ ಆದೀತು ಎಂಬ ವಿಪರೀತ ಒತ್ತಡ, ಬೆದರಿಕೆ ಇರುವುದಾಗಿಯೂ, ತಾವು ಅದಕ್ಕೆ ಬಗ್ಗುವುದಿಲ್ಲ, ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಸರಕಾರದ, ತನಿಖಾ ಸಂಸ್ಥೆಗಳ, ಸ್ವತಃ ನ್ಯಾಯಾಂಗದ ತಳಹದಿಯೇ ಭ್ರಷ್ಟ, ಪಕ್ಷಪಾತ ಹಾಗೂ ಮೌಲ್ಯಗಳು ಶಿಥಿಲವಾಗಿರುವುದನ್ನು ಎತ್ತಿ ತೋರಿಸಿದೆ. ಈ ಭಾರೀ ಭ್ರಷ್ಟಾಚಾರದ ಪ್ರಕರಣಗಳು ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಶಾಹಿಗಳ ಆಳ ಶಾಮೀಲಿನಿಂದಲೇ ನಡೆದಿರುವ ಬಗ್ಗೆ ಅನುಮಾನವಿಲ್ಲ. ಆದರೆ ಅನೇಕ ಪ್ರಕರಣಗಳಲ್ಲಿ ಶಿಕ್ಷಿಸಬೇಕಾದ ನ್ಯಾಯಾಂಗದ ವಿವಿಧ ಅಂಗಗಳ ವೈಫಲ್ಯತೆ ಸಾರ್ವಜನಿಕ ವಿಶ್ವಾಸಾರ್ಹತೆ ಕುಗ್ಗಿಸಿ ಅನುಮಾನಗಳನ್ನು ಹೆಚ್ಚಿಸುತ್ತಿರುವುದು ಆತಂಕಕಾರಿ.

ಪಿ.ಎಸ್.ಐ. ನೇಮಕಾತಿ ಪ್ರಕರಣದಲ್ಲಿ ತನಿಖೆ ಹಗರಣದ ಮೂಲಕ್ಕೆ ಹೋಗುತ್ತಿಲ್ಲ. ಆ ಖದೀಮರನ್ನು ತಲುಪುತ್ತಿಲ್ಲ ಸರಕಾರದೊಳಗೇ ಇರುವ, ಭಾಗವಾಗಿರುವ ಭಾರಿ ಕುಳಗಳನ್ನು ಹಿಡಿಯುತ್ತಿಲ್ಲ ಎನ್ನುವ ಟೀಕೆಗಳು ವ್ಯಾಪಕವಾಗಿವೆ. ತನಿಖೆ ವೈಖರಿ ನೋಡಿದರೆ ಸಿಐಡಿ ತನಿಖೆ ಹುತ್ತದ ಸುತ್ತ ಬಡಿಯುವ ವ್ಯರ್ಥ ಕಸರತ್ತು ಎನ್ನುವುದು ಗೊತ್ತಾಗುತ್ತದೆ. ಆದರೆ ತಾವೇ ಸ್ವಯಂ ತನಿಖೆಗೆ ಆದೇಶ ನೀಡಿದ್ದು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬೊಗಳೆತನದ್ದಾಗಿದೆ. ಈ ಹಗರಣದ ಒಂದೊಂದು ವಿಷಯಗಳು ಸಾರ್ವಜನಿಕರೆದುರು ಬಯಲಾಗ ತೊಡಗಿದಂತೆ ವಿಷಯ ತೀವ್ರ ಮುಜುಗರ ತರುತ್ತಿರುವುದು, ಪ್ರಕರಣ ತಮ್ಮ ಕೈ ತಪ್ಪಿ ಹೋಗುವ ಭೀತಿಯಿಂದ ತಮ್ಮದೇ ಅಡಿಯ ತನಿಖಾ ಸಂಸ್ಥೆಗೆ ವಹಿಸಿದ್ದು ಎನ್ನುವುದನ್ನು ಮರೆಸಲಾಗುವುದಿಲ್ಲ. ಟೀಕಿಸಿದವರ ಮೇಲೆ ಗೃಹಮಂತ್ರಿ, ಮುಖ್ಯಮಂತ್ರಿಗಳ ಸಮರ್ಥನಾ ಆಕ್ರಮಣಕಾರೀ ಹೇಳಿಕೆಗಳು ಆಡಳಿತ ಪಕ್ಷ ಹಾಗೂ ಸರಕಾರದ ಭಾಗಿತ್ವದ ಬಗ್ಗೆ ದಟ್ಟವಾದ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಮಾತೆತ್ತಿದರೆ ಸಿ.ಬಿ.ಐ, ಎನ್.ಐ.ಎ., ಇ.ಡಿ. ಯಂತಹ ತನಿಖೆಗಳಿಗೆ ಹೋಗುವ ಕೇಂದ್ರದ ಸರಕಾರದ ಘೋರ ಮೌನವೂ ‘ಅರ್ಥಪೂರ್ಣ’ ವಾಗಿದೆ!’ ನ ಖಾವೂಂಗಾ, ಖಿಸಿಕೂ ಖಾನೇ ದೂಂಗಾ’ ಎಂದು ಗುಡುಗಿದ ಪ್ರಧಾನಿ ಈಗೆಲ್ಲಿ ಎಂಬ ಪ್ರಶ್ನೆಗೆ ಉತ್ತರ ಕೊಡುವವರಾರು?

ಬಿಜೆಪಿ ಪಕ್ಷ ಅಧಿಕಾರ ನಡೆಸಿದ, ನಡೆಸುವ ಕೆಂದ್ರ ಅಥವಾ ರಾಜ್ಯಗಳಲ್ಲಿ ಭಾರಿ ಹಗರಣಗಳೇ ಸ್ಪೋಟಗೊಂಡಿವೆ. ಅವನ್ನು ಮುಚ್ಚಿ ಹಾಕಿಕೊಳ್ಳುವ, ಇಲ್ಲವೇ ಬಾಯಿ ಮುಚ್ಚಿಸುವ ಕೃತ್ಯದಲ್ಲಿ ಇವರು ನಿಸ್ಸೀಮರು ಎನ್ನುವುದೂ ತಿಳಿದಿದೆ. ಮದ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣದ ಪ್ರಕರಣ ಸಾಗಿದ, ಸಾಗುತ್ತಿರುವ ವಿದ್ಯಮಾನಗಳ ಹಾದಿ ತಲ್ಲಣಿಸುವಂತೆ ಮಾಡುವಂತಹದ್ದು. ಇದರಲ್ಲಿ ನೇರ ಅಥವಾ ಪರೋಕ್ಷ ಸಾಕ್ಷಿಗಳಾಗಿದ್ದ ಐವತ್ತಕ್ಕೂ ಹೆಚ್ಚಿನವರು `ಅನುಮಾನಾಸ್ಪದ’ ವಾಗಿ ಕೊಲೆಯಾದರು ಅಥವಾ `ಜೀವ ಕಳೆದುಕೊಂಡರು’. ಅದರಲ್ಲಿ ಉನ್ನತ ರಾಜಕಾರಣಿಗಳು, ಅಧಿಕಾರಿಗಳೂ ಅಲ್ಲದೇ `ಬಿಜೆಪಿಗೆ ನೈತಿಕ, ಸೈದ್ಧಾಂತಿಕ ಮಾರ್ಗದರ್ಶನ ಮಾಡುತ್ತಿರುವ’ ಸಾಂಸ್ಕೃತಿಕ ಸಂಘ’ದ ಹೆಸರೂ ಕೇಳಿ ಬಂತು. ಆದರೆ ಹಗರಣದ ತನಿಖೆ, ಕ್ರಮಗಳು ಅಲ್ಲೇ ಗಿರಕಿ ಹೊಡೆಯುತ್ತಿದೆ. ಕರ್ನಾಟಕದ ಪ್ರಕರಣವೂ ಆ ದಾರಿಯಲ್ಲಿ ಸಾಗುವುದೇ?

ಪಿ.ಎಸ್.ಐ. ಹಗರಣದಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಅಮೃತ್ ಪೌಲ್ ಅವರ ಡೈರಿಯಲ್ಲಿ ಪ್ರಮುಖರ ಹೆಸರುಗಳೂ ಇವೆ ಎನ್ನಲಾಗುತ್ತಿದೆ. ಪ್ರಕರಣದ ಹೊಣೆಗಾರಿಕೆ, ಆರೋಪಿತರ ಜೊತೆ ನಂಟು ಇರುವ ಗೃಹ ಸಚಿವ ಆರಗ ಜ್ಞಾನೇಂದ್ರರು ಇಷ್ಟರೊಳಗೆ ರಾಜೀನಾಮೆ ನೀಡಬೇಕಿತ್ತು. ಹಾಗೇ ಬಿಜೆಪಿಯ ಪ್ರಮುಖ ನಾಯಕಿಯೂ ಬಂಧನವಾಗಿರುವುದು ಅದರ ನಾಯಕತ್ವ ಕೆಳಗಿಳಿಯಬೇಕಿತ್ತು ಕನಿಷ್ಠ ತಲೆ ತಗ್ಗಿಸಬೇಕಿತ್ತು. ಆದರೆ ಅಂತಹ ಕನಿಷ್ಠ ಸೌಜನ್ಯ, ಸಾರ್ವಜನಿಕ ಉತ್ತರದಾಯಿತ್ವವೇ ಇಲ್ಲದೇ ಬೊಮ್ಮಾಯಿಯವರ ಸರಕಾರ ಲಜ್ಜಾಹೀನವೂ, ಭಂಡತನದ್ದೂ ಆಗಿದೆ. ಇವು ಸಂಘಪರಿವಾರಕ್ಕೆ ದೇಶದ್ರೋಹ ಅನಿಸುವುದಿಲ್ಲ. ಬದಲಾಗಿ ಮತೀಯ ದ್ವೇಷದ ವಾತಾವರಣ ಸೃಷ್ಟಿಸಿ, ಅಬ್ಬರದ ಡೋಲು ಬಡಿದು ಕಿವಿ, ಕಣ್ಣು ಮುಚ್ವುವಂತೆ ಮಾಡಲಾಗುತ್ತಿದೆ.

ಈ ಸರಕಾರ ವಿಶ್ವಾಸವನ್ನು ಕಳೆದುಕೊಂಡಿದೆ. ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಬ್ರಹ್ಮಾಂಡ ಭ್ರಷ್ಟಾಚಾರದ ಹೊರೆ ಮತ್ತು ಹೊಣೆ ಇರುವವರು ರಾಜಿನಾಮೆ ನೀಡಬೇಕು. ಇಷ್ಟೆಲ್ಲಾ ಆದ ನಂತರವಾದರೂ ಪ್ರಕರಣವನ್ನು ನಿಷ್ಪಕ್ಷಪಾತದ, ಉನ್ನತ ತನಿಖೆಗೆ ಒಪ್ಪಿಸಬೇಕು. ತನಿಖೆಯ ವೃತ್ತಿ ದಕ್ಷತೆಯ ಹಿರಿಮೆ ಹೊಂದಿದ್ದ ಬಹುತೇಕ ಎಲ್ಲಾ ಉನ್ನತ ಸಂವಿಧಾನಿಕ ಸಂಸ್ಥೆಗಳನ್ನೂ ಭ್ರಷ್ಟಗೊಳಿಸಿ ಸಾಕು ನಾಯಿಗಳನ್ನಾಗಿಸಿದ `ಅಪಕೀರ್ತಿ’ ಕೇಂದ್ರಕ್ಕೆ, ಮೋ-ಶಾ ರಿಗಿದೆ ಎಂಬ ಕಳಂಕದಿಂದ ಭಾರತ ಮುಕ್ತವಾಗುವುದೆಂತು?

Leave a Reply

Your email address will not be published. Required fields are marked *