ಅರಣ್ಯ ಸಂರಕ್ಷಣಾ ಕಾಯ್ದೆಈಗ ಅರಣ್ಯ ಕಾರ್ಪೊರೇಟೀಕರಣ ಕಾಯ್ದೆಯಾಗುತ್ತಿದೆ – ಅರಣ್ಯ ಮಂತ್ರಿಗಳಿಗೆ ಬೃಂದಾ ಕಾರಟ್‍ ಪತ್ರ

brinda-karat-cpim
ಬೃಂದಾ ಕಾರಟ್

ಅರಣ್ಯ ಸಂರಕ್ಷಣಾ ಕಾಯ್ದೆ(ಎಫ್‌ಸಿಎ)ಯ ನಿಯಮಗಳಲ್ಲಿ  ಮಾಡಿರುವ ಬದಲಾವಣೆಗಳನ್ನು ಕೇಂದ್ರ ಸರಕಾರ ಜೂನ್ 28, 2022ರಂದು ಗೆಜೆಟ್ ಮಾಡಿದೆ. ಇದು  ಕಾರ್ಪೊರೇಟ್‌ಗಳು ಮತ್ತು ಖಾಸಗಿ ಕಂಪನಿಗಳಿಗೆ ಭಾರತದ ಅರಣ್ಯಗಳನ್ನು ಲಭ್ಯಗೊಳಿಸಲು ಮತ್ತು ಅವುಗಳ ಮೇಲೆ ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುವ ದೂರಗಾಮಿ ಗುರಿಯಿಟ್ಟುಕೊಂಡು ಮಾಡಿರುವ ತಿದ್ದುಪಡಿಗಳು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಿ ಭೂಪೇಂದರ್ ಯಾದವ್ ಅವರಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಜುಲೈ 11, 2022 ಬರೆದ ಪತ್ರದಲ್ಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.

ತಿದ್ದುಪಡಿ ಮಾಡಿದ ನಿಯಮಗಳು ಗ್ರಾಮ ಸಭೆಗಳು ಮತ್ತು ಬುಡಕಟ್ಟು ಸಮುದಾಯಗಳ ಮತ್ತು ಅರಣ್ಯಗಳಲ್ಲಿ ವಾಸಿಸುವ ಇತರ ಪಾರಂಪರಿಕ ಅರಣ್ಯ ನಿವಾಸಿಗಳ ಹಕ್ಕುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿವೆ ಎಂಬುದು ಈ ತಿದ್ದುಪಡಿಗಳನ್ನು ಕುರಿತ ಪ್ರಮುಖ ಆಕ್ಷೇಪ. ಬುಡಕಟ್ಟು ಜನಗಳ ದನಿಗಳನ್ನು ಮತ್ತು ಹಕ್ಕುಗಳನ್ನು ಮೌನವಾಗಿಸುವ ಕೆಲಸವನ್ನು ಈ ನಿಯಮ ಬದಲಾವಣೆಗಳು ಸದ್ದಿಲ್ಲದೆ ಮಾಡಿವೆ.

ಇದು ಸಂಪೂರ್ಣವಾಗಿ ಬುಡಕಟ್ಟು ಸಮುದಾಯಗಳಿಗೆ ನೀಡಿದ ಸಂವಿಧಾನಿಕ ಖಾತರಿಗಳಿಗೆ ವಿರುದ್ಧವಾಗಿದೆ. ಇದು ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್‌ಗಳು, ಪಂಚಾಯತು ರಾಜ್ಯ(ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ(ಪಿಇಎಸ್‍ಎ), ತಿದ್ದುಪಡಿಯಾದ ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು ಅಂತಿಮವಾಗಿ ಹಾಗೂ  ಮುಖ್ಯವಾಗಿ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‍ಆರ್‌ಎ)ಯ ಉಲ್ಲಂಘನೆಯಾಗಿದೆ. ಇದು 2013ರ ನಿಯಮಗಿರಿ ಗಣಿಗಾರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಉದಾಹರಣೆಗಳ ಸಹಿತ ಬೃಂದಾ ಅವರು ಈ ಪತ್ರದಲ್ಲಿ ಅರಣ್ಯ ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಪರಿಹಾರಾರ್ಥ  ಅರಣ್ಯೀಕರಣಕ್ಕೆ ಭೂ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ಮುಂದಿಟ್ಟಿರುವ ಈ ತಿದ್ದುಪಡಿಗಳು ಕಡ್ಡಾಯ ಪರಿಹಾರಾರ್ಥ ಅರಣ್ಯೀಕರಣದ ಹೆಸರಿನಲ್ಲಿ  ಭೂಮಿಯ ಮೇಲಿನ ಜನರ ಅಸ್ತಿತ್ವದಲ್ಲಿರುವ ಹಕ್ಕುಗಳ ಮೇಲೆ ಅತ್ಯಂತ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ.

ಇದುವರೆಗೆ “ಅನುಲ್ಲಂಘನೀಯ ಪ್ರದೇಶ” ಎಂದು ಪರಿಗಣಿಸಿರುವ ಭೂಮಿಯನ್ನೂ ಈ ನಿಯಮ ಬದಲಾವಣೆಗಳು ಖಾಸಗಿ ವಲಯದ ಯೋಜನೆಗಳಿಗೆ. ತೆರೆದು ಕೊಡುತ್ತವೆ.. ಇದು ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ  ಸಾವಿರಾರು ಬುಡಕಟ್ಟು ಕುಟುಂಬಗಳನ್ನು ಎಬ್ಬಿಸಿ ಹೊರಹಾಕಲು ಸಚಿವಾಲಯವು ಅನುಸರಿಸುವ ದಬ್ಬಾಳಿಕೆಯ ಕ್ರಮಗಳಿಗೆ  ತೀರಾ ವ್ಯತಿರಿಕ್ತವಾಗಿದೆ.

ನಿಯಮಗಳಲ್ಲಿನ ಈ ಬದಲಾವಣೆಯು ಬಾಧಿತರೊಂದಿಗೆ ಪೂರ್ವಭಾವಿ ಸಮಾಲೋಚನೆ ಅಥವಾ ಚರ್ಚೆ ನಡೆಸದೇ ಇರುವ ಅಪಾರದರ್ಶಕ ಪ್ರಕ್ರಿಯೆಯಾಗಿದೆ. ಸಂಸತ್ತಿನ ಮಂಜೂರಾತಿಯ ಪ್ರಕ್ರಿಯೆಯನ್ನು ಕೇವಲ ಔಪಚಾರಿಕತೆಗೆ ಇಳಿಸಲಾಗಿದೆ. ಈ ನಿಯಮಗಳನ್ನು ಜಾರಿಗೊಳಿಸಿದಾಗ ಖಂಡಿತವಾಗಿಯೂ ಉದ್ಭವಿಸುವ ಪರಿಣಾಮಗಳಿಂದಾಗಿ,  ಸರ್ಕಾರವು   ಸಾರ್ವಜನಿಕ ಚರ್ಚೆ ನಡೆಯುವ ಮತ್ತು ಅಭಿಪ್ರಾಯಗಳನ್ನು ಪಡೆಯುವ ವರೆಗೆ ಅವುಗಳನ್ನು ತಡೆ ಹಿಡಿಯಬೇಕು. ಇವನ್ನು ಸಂಬಂಧಪಟ್ಟ ಸಂಸದೀಯ ಸ್ಥಾಯೀ ಸಮಿತಿಗೆ ಪರೀಕ್ಷಣೆಗೂ ಕಳಿಸಬೇಕು ಮತ್ತು ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿಯಿರುವ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಭಿಪ್ರಾಯಗಳನ್ನು ಕೂಡ ಒಳಗೊಳ್ಳಬೇಕು ಎಂದು ಬೃಂದಾ ಕಾರಟ್‍ ಅರಣ್ಯ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಅವರ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಆತ್ಮೀಯ ಶ್ರೀ ಭೂಪೇಂದರ್ ಯಾದವ್‍ ಜಿ

ನಮಸ್ಕಾರ. ಅರಣ್ಯ ಸಂರಕ್ಷಣಾ ಕಾಯ್ದೆಗೆ ಜೂನ್ 28, 2022 ರಂದು ಗೆಜೆಟ್ ಮಾಡಲಾದ ಹೊಸ ತಿದ್ದುಪಡಿ ನಿಯಮಗಳಿಗೆ ಸಂಬಂಧಿಸಿದಂತೆ ನಾನು ನಿಮಗೆ ಬರೆಯುತ್ತಿದ್ದೇನೆ.

1. ನಿಯಮಗಳಲ್ಲಿನ ಬದಲಾವಣೆಗಳ ಗುರಿ ಕಾರ್ಪೊರೇಟ್‌ಗಳು ಮತ್ತು ಖಾಸಗಿ ಕಂಪನಿಗಳಿಗೆ ಭಾರತದ ಅರಣ್ಯಗಳನ್ನು ಲಭ್ಯಗೊಳಿಸಲು  ಮತ್ತು ಅವುಗಳ ಮೇಲೆ ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುವ ಗುರಿಯಲ್ಲಿ ಎಷ್ಟು ದೂರಗಾಮಿಯಾಗಿವೆಯೆಂದರೆ  ಒಂದು  ಹೊಸ ಕಾನೂನನ್ನೇ ತರಬಹುದಿತ್ತು, ಈ ಮೂಲಕ ಭಾರತದ ಜನರು ಸರ್ಕಾರದ ಆದ್ಯತೆಯನ್ನು ಅರ್ಥಮಾಡಿಕೊಳ್ಳಬಹುದಾಗಿತ್ತು ಎಂದೇ ಹೇಳಬಹುದು. ವಾಸ್ತವವಾಗಿ ಈ ನಿಯಮಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಇದು ಅರಣ್ಯ ಸಂರಕ್ಷಣಾ ಕಾಯ್ದೆಗಿಂತ ಅರಣ್ಯ ಕಾರ್ಪೊರೇಟೀಕರಣ ಕಾಯ್ದೆಗೆ ಹೆಚ್ಚು ಸೂಕ್ತವಾಗಿದೆ. ಉದಾಹರಣೆಗೆ, ಹಿಂದಿನ ನಿಯಮಗಳಲ್ಲಿ 100 ಹೆಕ್ಟೇರ್‌ ಅಥವ ಹೆಚ್ಚನ್ನು ಬೇರೆ ಉದ್ದೇಶಕ್ಕೆ ತಿರುಗಿಸಲು ಅವಕಾಶವಿದ್ದರೆ, ಹೊಸ ನಿಯಮಗಳಲ್ಲಿ “ಹೆಚ್ಚನ್ನು”  ಈಗ “1000 ಹೆಕ್ಟೇರಿಗಿಂತ ಹೆಚ್ಚು” ಎಂದು ಪ್ರಮಾಣೀಕರಿಸಲಾಗಿದೆ. ಅಂದರೆ  ಅಪಾರ ಪ್ರಮಾಣದ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಕ್ಕೆ ತಿರುಗಿಸಬಹುದು. ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2019 ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸೂಚಿಸಿದ್ದ ಕೆಲವು ನಿಬಂಧನೆಗಳನ್ನು ಆಕ್ಷೇಪಿಸಿತ್ತು ಎಂಬುದು ಗಮನಾರ್ಹವಾಗಿದೆ. (F.No.23011/23/2012 FRA)

2. ತಿದ್ದುಪಡಿ ಮಾಡಿದ ನಿಯಮಗಳು ಹೇಗೆ ಗ್ರಾಮ ಸಭೆಗಳು ಮತ್ತು ಬುಡಕಟ್ಟು ಸಮುದಾಯಗಳ ಮತ್ತು ಕಾಡುಗಳಲ್ಲಿ ವಾಸಿಸುವ ಇತರ ಪಾರಂಪರಿಕ ಅರಣ್ಯ ನಿವಾಸಿಗಳ ಹಕ್ಕುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದೆ ಎಂಬುದು ಆಕ್ಷೇಪಾರ್ಹ, ಖಂಡನೀಯವಾಗಿದೆ , ಇದು ಸ್ವೀಕಾರಾರ್ಹವಾಗಿಲ್ಲ. 2003 ರ ನಿಯಮಗಳನ್ನುಅರಣ್ಯ ಹಕ್ಕುಗಳ ಕಾಯಿದೆ 2006 ರ ಅಂಗೀಕಾರದ ನಂತರ ತಿದ್ದುಪಡಿ ಮಾಡಲಾಗಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದ ಆಗಸ್ಟ್ 3, 2009 ರ ಸುತ್ತೋಲೆ ತತ್ವಶಃ ಅನುಮೋದನೆಗೆ ಮೊದಲು ಪ್ರತಿ ಗ್ರಾಮ ಸಭೆಯಿಂದ ಒಪ್ಪಿಗೆ ಪತ್ರವನ್ನು ಪಡೆಯುವ ಅಗತ್ಯವನ್ನು ಸ್ಪಷ್ಟವಾಗಿ ಹೇಳಿದೆ. 2017 ರಲ್ಲಿ ನಿಮ್ಮ ಸರ್ಕಾರದ ಅಡಿಯಲ್ಲಿ ಇದನ್ನು ದುರ್ಬಲಗೊಳಿಸಲಾಯಿತು, ಆದರೆ ಗ್ರಾಮಸಭೆಯ ಅನುಮೋದನೆಯ ಅಗತ್ಯವನ್ನು ಉಳಿಸಿಕೊಳ್ಳಲಾಗಿತ್ತು.

ಪರಿಯೋಜನೆಗೆ “ತತ್ವಶಃ ಅನುಮೋದನೆ” ಪಡೆಯುವ ಆರಂಭಿಕ ಪ್ರಕ್ರಿಯೆಯ ಭಾಗವಾಗಿ ಈ ನಿಯಮಾವಳಿ ನಿರ್ದಿಷ್ಟವಾಗಿ ಹೀಗೆ ಹೇಳಿತ್ತು:

3.e.(i) “ಜಿಲ್ಲಾಧಿಕಾರಿಗಳು ಎಸ್‌ಟಿ ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ 2006 ಪ್ರಕಾರ ಹಕ್ಕುಗಳ ಇತ್ಯರ್ಥದ ಪ್ರಕ್ರಿಯೆಯನ್ನು  ಪ್ರಸ್ತಾವದಲ್ಲಿನ ಇಡೀ ಅರಣ್ಯ ಭೂಮಿಗೆ ಪೂರ್ಣಗೊಳಿಸುತ್ತಾರೆ.

(ii) ಪ್ರಸ್ತಾವದಲ್ಲಿ ಬೇರೆ ಉದ್ದೇಶಕ್ಕೆ ತಿರುಗಿಸಬೇಕೆಂದು ಸೂಚಿಸಿರುವ ಅರಣ್ಯ ಭೂಮಿಯ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪ್ರತಿ ಗ್ರಾಮ ಸಭೆ ಅದರ ಉದ್ದೇಶದ ಪರಿಹಾರಾತ್ಮಕ ಕ್ರಮಗಳ ವಿವರಗಳನ್ನು ಅರ್ಥಮಾಡಿಕೊಂಡಿರುವ ಒಪ್ಪಿಗೆಯನ್ನು ಪಡೆಯಬೇಕು ಮತ್ತು  “ಸ್ಥಳ ತಪಾಸಣೆ, ಕಾರ್ಯಸಾಧ್ಯತೆ ಇತ್ಯಾದಿಗಳಿಗಾಗಿ”  ಅರಣ್ಯ ಸಂರಕ್ಷಕರಿಗೆ ಕಳಿಸಬೇಕು.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ತತ್ವಶಃ ಅನುಮೋದನೆಯ ಮೊದಲು ಗ್ರಾಮ ಸಭೆಯ ಒಪ್ಪಿಗೆ ಅಗತ್ಯವಾಗಿತ್ತು.

forest generic

ಹೊಸ ನಿಯಮಗಳು ಎರಡು ಹಂತದ ಅನುಮೋದನೆ ಪ್ರಕ್ರಿಯೆಯನ್ನು ವಿಧಿಸುತ್ತವೆ- ತತ್ವಶಃ  ಅನುಮೋದನೆ ಮತ್ತು ಅಂತಿಮ ಅನುಮೋದನೆ. ಆಘಾತಕಾರಿ ಸಂಗತಿಯೆಂದರೆ,  ಕೇಂದ್ರ ಸರಕಾರದಿಂದ ಈ ಯಾವುದೇ  ಅನುಮೋದನೆ ಪಡೆಯಲು ಪೂರೈಸಬೇಕಾದ ಆವಶ್ಯಕತೆಗಳ ಪಟ್ಟಿಯಲ್ಲಿ ಗ್ರಾಮ ಸಭಾದ ಒಪ್ಪಿಗೆಯ ಮತ್ತು ಹಕ್ಕುಗಳ ಇತ್ಯರ್ಥದ ಷರತ್ತನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ತತ್ವಶಃ ಅನುಮೋದನೆಯ ಮೊದಲಿನ ಪ್ರಕ್ರಿಯೆಯಲ್ಲಿ ಅಥವಾ ಅದರ ಭಾಗವಾಗಿ ಮಾತ್ರವಲ್ಲ, ಅಂತಿಮ ಅನುಮೋದನೆಯನ್ನು ಕೂಡ ಈಗ ಕೇಂದ್ರ ಸರಕಾರ ಕಲಂ 9 (ಬಿ) (i) ಅಡಿಯಲ್ಲಿ ಗ್ರಾಮ ಸಭೆಯ ಅಥವ ಹಕ್ಕುಗಳ ಇತ್ಯರ್ಥದ ಉಲ್ಲೇಖವಿಲ್ಲದೆ ಕೊಡುತ್ತದೆ. ಬುಡಕಟ್ಟು ಜನಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ದುರವಸ್ಥೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವನ್ನು  ಒತ್ತಿ ಹೇಳಬೇಕೆಂದರೆ, ಕಲಮು 9.5 ಎ ರಲ್ಲಿನ ನಿಯಮಗಳು. ತತ್ವಶಃ ಅನುಮೋದನೆಗೆ “ರಾಜ್ಯ ಸರ್ಕಾರವು ಅರಣ್ಯ, ವನ್ಯಜೀವಿ ಮತ್ತು ಪರಿಸರದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮ ಹೊಂದಿರುವ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಬೇಕು” ಎನ್ನುತ್ತದೆ. ಆದರೆ ಇಲ್ಲಿ ಆದಿವಾಸಿಗಳ ಉಲ್ಲೇಖವೇ ಇಲ್ಲ. ಆದ್ದರಿಂದ ಯಾವುದೇ ಹಂತದಲ್ಲಿ ಆದಿವಾಸಿಗಳು ಅಥವಾ ಇತರ ಪಾರಂಪರಿಕ ಅರಣ್ಯ ವಾಸಿಗಳಿಗೆ ಸಮ್ಮತಿ ಕೊಡುವ ಅಥವ ಕೊಡದಿರುವ ಯಾವುದೇ ಹಕ್ಕಿಲ್ಲ. ಮೇಲಾಗಿ, ಕೇಂದ್ರ ಸರ್ಕಾರವು ಬುಡಕಟ್ಟು ಜನಗಳ ಹಕ್ಕುಗಳ ರಕ್ಷಣೆಯ ಯಾವುದೇ ಜವಾಬ್ದಾರಿಯಿಲ್ಲದೆ ತನ್ನ ಅಂತಿಮ ಅನುಮೋದನೆಯನ್ನು ನೀಡುತ್ತದೆ ಮತ್ತು ಪರಿಹಾರಾರ್ಥ  ಅರಣ್ಯೀಕರಣಕ್ಕಾಗಿ ಪಾವತಿಯನ್ನು ಸಂಗ್ರಹಿಸುತ್ತದೆ. ಬುಡಕಟ್ಟು ಜನಗಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾಗಿದೆ.

ಕಲಂ 9(ಬಿ)(ii) ಅಡಿಯಲ್ಲಿ “ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ, ಸಂದರ್ಭಾನುಸಾರ,  ಕೇಂದ್ರ ಸರಕಾರದಿಂದ  ಅಂತಿಮ ಅನುಮೋದನೆ ಪಡೆದ ನಂತರ, ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿ ಸಮುದಾಯಗಳು(ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ, 2006 ಅಡಿಯಲ್ಲಿ  ಹಕ್ಕುಗಳ ಇತ್ಯರ್ಥ ಸೇರಿದಂತೆ ಎಲ್ಲಾ ಇತರ ಕಾಯಿದೆಗಳು ಮತ್ತು ಅವುಗಳ ಅಡಿಯಲ್ಲಿನ ನಿಬಂಧನೆಗಳ ಅನುಸರಣೆಯ ನಂತರ ಬೇರೆ ಉದ್ದೇಶಗಳಿಗೆ ತಿರುಗಿಸುವ, ಭೋಗ್ಯಕ್ಕೆ ಕೊಡುವ ಅಥವ ಮೀಸಲಿಟ್ಟದ್ದನ್ನು ತೆಗೆಯುವ ಆದೇಶವನ್ನು ಹೊರಡಿಸುತ್ತದೆ. ಹೀಗೆ ಬುಡಕಟ್ಟು ಜನಗಳ ದನಿಗಳನ್ನು ಮತ್ತು ಹಕ್ಕುಗಳನ್ನು ಮೌನವಾಗಿಸುವ ಕೆಲಸ ತಂತಾನೇ ಈಡೇರುತ್ತದೆ. ಹಿಂದಿನ ನಿಬಂಧನೆಗಳಲ್ಲಿದ್ದ “ಗ್ರಾಮ ಸಭೆಯ ಒಪ್ಪಿಗೆ” ಎಂಬ ಪದಗಳನ್ನು ಕೈಬಿಡಲಾಗಿದೆ.

ಶ್ರೀ ಭೂಪೇಂದರ್ ಯಾದವ್ ಜೀ, ಇದು ಸಂಪೂರ್ಣವಾಗಿ ಬುಡಕಟ್ಟು ಸಮುದಾಯಗಳಿಗೆ ನೀಡಿದ ಸಂವಿಧಾನಿಕ ಖಾತರಿಗಳಿಗೆ ವಿರುದ್ಧವಾಗಿದೆ.  ಇದು ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್‌ಗಳು, ಪಂಚಾಯತು ರಾಜ್ಯ(ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ(ಪಿಇಎಸ್‍ಎ), ತಿದ್ದುಪಡಿಯಾದ ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು ಅಂತಿಮವಾಗಿ ಮತ್ತು ಮುಖ್ಯವಾಗಿ ಅರಣ್ಯ ಹಕ್ಕುಗಳ ಕಾಯ್ದೆ(ಎಫ್‍ಆರ್‍ಎ)ಯ ಉಲ್ಲಂಘನೆಯಾಗಿದೆ. ಇದು 2013ರ ನಿಯಮಗಿರಿ ಗಣಿಗಾರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ.

3. ಹೊಸ ನಿಯಮಗಳು ಪರಿಹಾರಾರ್ಥ  ಅರಣ್ಯೀಕರಣಕ್ಕೆ ಭೂ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿವೆ. ಬಳಕೆದಾರ ಏಜೆನ್ಸಿಯು ಅರಣ್ಯೀಕರಣಕ್ಕಾಗಿ ಸೂಕ್ತವಾದ ಅರಣ್ಯೇತರ ಭೂಮಿಯನ್ನು ಒದಗಿಸಲು ಸಾಧ್ಯವಾಗದಿದ್ದರೆ ಆಗ ಹಣಪಾವತಿ ಪಡೆದು ರಾಜ್ಯ ಸರ್ಕಾರಗಳು ಮಾಡಬಹುದು. ಅನೇಕ ರಾಜ್ಯಗಳಲ್ಲಿ, ಅಂತಹ ಭೂಮಿ ಖರಾಬು, ಅಧಿಸೂಚಿತ, ಅಥವ ವರ್ಗೀಕೃತವಲ್ಲದ ಅರಣ್ಯ ಭೂಮಿಯೂ ಆಗಬಹುದು. ಇವು ಹೆಚ್ಚಾಗಿ ವಾಸಸ್ಥಾನಗಳ ಸಮೀಪದಲ್ಲಿರುತ್ತವೆ ಮತ್ತು ಹಲವು ಸಂದರ್ಭಗಳಲ್ಲಿ ಅವುಗಳ ಮೇಲೆ ಜನಗಳ ಹಕ್ಕುಗಳೂ ದಾಖಲಾಗಿರುತ್ತವೆ. ಇಂತಹ ಜಮೀನುಗಳಲ್ಲಿ ಸಾವಿರಾರು ಕುಟುಂಬಗಳು ದಶಕಗಳಿಂದ ವಾಸಿಸುತ್ತಿವೆ. ಆಗಿನ ಯೋಜನಾ ಆಯೋಗವು ಖರಾಬು ಭೂಮಿಯನ್ನು ತೋಟಗಾರಿಕೆಗಾಗಿ ಖಾಸಗಿ ಕಂಪನಿಗಳಿಗೆ ಭೋಗ್ಯಕ್ಕೆ ಕೊಡುವ ಪ್ರಶ್ನೆಯನ್ನು ಪರಿಶೀಲಿಸಲು ರಚಿಸಿದ ಎನ್.ಸಿ.ಸಕ್ಸೇನಾ ಕಾರ್ಯಗುಂಪು  ಹೇಳಿರುವುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ. “ಕೆಲವು ಮಣ್ಣಿನ ಆಳವನ್ನು ಹೊಂದಿರುವ ಖರಾಬು ಅರಣ್ಯಗಳು  ಚದುರಿಹೋಗಿವೆ, ಅವುಗಳು ತೀವ್ರ ಜೈವಿಕ ಒತ್ತಡವನ್ನು ಹೊಂದಿವೆ, ಮತ್ತು ಆದರಿಂದಾಗಿ ಅವು ಜನಗಳೊಂದಿಗೆ ಕೆಲಸ ಮಾಡಿದರೆ ಪುನಶ್ಚೇತನಕ್ಕ ಅತ್ಯಂತ  ಸೂಕ್ತವಾಗಿರುತ್ತವೆ.  ಅಂತಹ ಕಾಡುಗಳು ಖಂಡಿತವಾಗಿಯೂ “ಅನುಪಯುಕ್ತ” ಅಲ್ಲ, ಏಕೆಂದರೆ ಅವು ಸುಮಾರು 100 ಮಿಲಿಯನ್ ಜನರ ಜೀವನೋಪಾಯದ ಅಗತ್ಯಗಳನ್ನು ಪೂರೈಸುತ್ತವೆ.” ಎಂದು ಅದು ಹೇಳಿತ್ತು. ಈ ಮಿಲಿಯಗಟ್ಟಲೆ ಜನರ ಗತಿಯೇನು ಎಂಬುದರ ಕುರಿತು ಈ ನಿಯಮ ಗಳಲ್ಲಿ ಯಾವುದೇ ಉಲ್ಲೇಖ ಇಲ್ಲ. ಅರಣ್ಯ ಹಕ್ಕುಗಳ ಕಾಯ್ದೆಯಲ್ಲಿ ಅರಣ್ಯಗಳು ಎಂದರೆ ಅವುಗಳಲ್ಲಿ ವರ್ಗೀಕೃತವಲ್ಲದ ಅರಣ್ಯಗಳೂ ಸೇರುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬುಡಕಟ್ಟು ಸಮುದಾಯಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಈ ಅರಣ್ಯಗಳಲ್ಲಿ ಕಾನೂನಾತ್ಮಕ ಹಕ್ಕುಗಳನ್ನು ಹೊಂದಿದ್ದಾರೆ. ಈ ನಿಯಮಾವಳಿಗಳಲ್ಲಿ ಇದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಈ ಭೂ ಬ್ಯಾಂಕುಗಳು ಮತ್ತು ಕಡ್ಡಾಯ ಪರಿಹಾರಾರ್ಥ ಅರಣ್ಯೀಕರಣದ ಹೆಸರಿನಲ್ಲಿ  ಬಳಕೆದಾರ ಏಜೆನ್ಸಿಗಳಿಗೆ ಇಂತಹ ಭೂಮಿಯನ್ನು ಲಭ್ಯಗೊಳಿಸುವುದು ಕೂಡ  ಭೂಮಿಯ ಮೇಲಿನ ಜನರ ಅಸ್ತಿತ್ವದಲ್ಲಿರುವ ಹಕ್ಕುಗಳ ಮೇಲೆ ಅತ್ಯಂತ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಇದಲ್ಲದೆ, ನಿಯಮಗಳು ಬಳಕೆದಾರ ಏಜೆನ್ಸಿಗೆ ಪರಿಹಾರಾರ್ಥ ಅರಣ್ಯೀಕರಣಕ್ಕಾಗಿ ಭೂಮಿ ಯೋಜನೆಯನ್ನು ಪ್ರಾರಂಭಿಸಬೇಕಾದ ರಾಜ್ಯದಲ್ಲಿ ಲಭ್ಯವಿಲ್ಲದಿದ್ದರೆ, ಅದನ್ನು ಪಡೆಯಲು ಬೇರೆ ಯಾವುದೇ ರಾಜ್ಯದಲ್ಲಿ ಮಾತುಕತೆ ನಡೆಸುವ ಹಕ್ಕನ್ನು ನೀಡುತ್ತದೆ. ಹೀಗಾಗಿ  ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಕಾರ್ಪೊರೇಟ್ ಮತ್ತು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವುದು ವ್ಯಾಪಕ ಪರಿಣಾಮ ಬೀರುತ್ತದೆ. ಏಕೆಂದರೆ ಇತರ ರಾಜ್ಯಗಳಲ್ಲಿಯೂ ಅರಣ್ಯೇತರ ಭೂಮಿಯನ್ನು  ಪರಿಹಾರಾರ್ಥ ಅರಣ್ಯೀಕರಣದ ಹೆಸರಿನಲ್ಲಿ ಹಣಪಾವತಿ ಮಾಡಿದರೆ ಅದು ಅವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಅರಣ್ಯೀಕರಣ. ಹಣಪಾವತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಸಂತ್ರಸ್ತರಿಗೆ ಪರಿಹಾರದಲ್ಲಿ ಯಾವುದೇ ಪಾಲು ಇರುವುದಿಲ್ಲ. ಭೂರಹಿತರಿಗೆ ಹಂಚಬೇಕಾದ ಭೂಮಿ ಅರಣ್ಯೀಕರಣಕ್ಕಾಗಿ ಕಾರ್ಪೊರೇಟ್‌ಗಳಿಗೆ ಹೋಗುತ್ತದೆ.

forest generic14. ಈ ಮೊದಲು ನಮೂದಿಸಿದಂತೆ 1000 ಹೆಕ್ಟೇರ್‌ಗಿಂತ ಹೆಚ್ಚಿನ ಅಪಾರ ಪ್ರಮಾಣದ ಭೂಮಿಯಲ್ಲದೆ ಈ ನಿಯಮಗಳು, ಇದುವರೆಗೆ ಅನುಲ್ಲಂಘನೀಯ ಎಂದು ಪರಿಗಣಿಸಲಾದ ನಿರ್ಬಂಧಿತ ಪ್ರದೇಶಗಳಲ್ಲಿಯೂ ಯೋಜನೆಗಳಿಗೆ ಅನುಮತಿ ಕೊಡುತ್ತದೆ.  ಸಲಹಾ ಸಮಿತಿಯು ಯೋಜನೆಯನ್ನು ಪರೀಕ್ಷಿಸುವಾಗ “ಅರಣ್ಯೇತರ ಉದ್ದೇಶಗಳಿಗೆ  ಬಳಸಬೇಕೆಂದಿರುವ ಭೂಮಿ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ, ಗೊತ್ತುಪಡಿಸಿದ ಅಥವಾ ಗುರುತಿಸಲಾದ ಹುಲಿ ಅಥವಾ ವನ್ಯಜೀವಿ ಕಾರಿಡಾರ್ ಅಥವಾ ಯಾವುದಾದರೂ ಅಳಿವಿನಂಚಿನಲ್ಲಿರುವ ಅಥವಾ ಅಪಾಯದಲ್ಲಿರುವ ವೃಕ್ಷ ಜಂತು ಜಾಲವಿರುವ ಸ್ಥಳವಾಗಿದ್ದರೆ ಸಾಕಷ್ಟು ಸಮರ್ಥನೆಯನ್ನು ನೀಡಲಾಗಿದೆಯೇ ಮತ್ತು ಸೂಕ್ತ ಉಪಶಮನ ಕ್ರಮಗಳ ಪ್ರಸ್ತಾವ ಇದೆಯೇ” ಎಂದು ನೋಡಬೇಕು” ಎಂದು ಕಲಮು 9 (5) (E) ಅಡಿಯಲ್ಲಿ ಹೇಳಲಾಗಿದೆ. . ಇದರ ಅರ್ಥವೇನೆಂದರೆ ಸಮರ್ಥನೆಯು ಸಾಕಷ್ಟಿದ್ದರೆ, ಈ ಎಲ್ಲಾ “ಅನುಲ್ಲಂಘನೀಯ ಪ್ರದೇಶ”ಗಳನ್ನು ಖಾಸಗಿ ವಲಯದ ಯೋಜನೆಗಳಿಗೆ. ತೆರೆದು ಕೊಡಲಾಗುವುದು. ಇದು ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ  ಸಾವಿರಾರು ಬುಡಕಟ್ಟು ಕುಟುಂಬಗಳನ್ನು ಎಬ್ಬಿಸಿ ಹೊರಹಾಕಲು ಸಚಿವಾಲಯವು ಅನುಸರಿಸುವ ದಬ್ಬಾಳಿಕೆಯ ಕ್ರಮಗಳಿಗೆ  ತೀರಾ ವ್ಯತಿರಿಕ್ತವಾಗಿದೆ.

ಮೇಲಿನವು ಈ ನಿಯಮಗಳಿಗೆ ಇರುವ ಆಕ್ಷೇಪಗಳಿಗೆ  ಕೆಲವೇ ಉದಾಹರಣೆಗಳಷ್ಟೇ. ಸಂಪೂರ್ಣ ಪಟ್ಟಿಯಲ್ಲ. ನಿಯಮಗಳಲ್ಲಿನ ಬದಲಾವಣೆಯು ಬಾಧಿತರೊಂದಿಗೆ ಪೂರ್ವಭಾವಿ ಸಮಾಲೋಚನೆ ಅಥವಾ ಚರ್ಚೆ ನಡೆಸದೇ ಇರುವ ಅಪಾರದರ್ಶಕ ಪ್ರಕ್ರಿಯೆಯಾಗಿದೆ. ಸಂಸತ್ತಿನ ಮಂಜೂರಾತಿಯ ಪ್ರಕ್ರಿಯೆಯನ್ನು ಕೇವಲ ಔಪಚಾರಿಕತೆಗೆ ಇಳಿಸಲಾಗಿದೆ. ಈ ನಿಯಮಗಳನ್ನು ಜಾರಿಗೊಳಿಸಿದಾಗ ಖಂಡಿತವಾಗಿಯೂ ಉದ್ಭವಿಸುವ ಪರಿಣಾಮಗಳಿಂದಾಗಿ,  ಸರ್ಕಾರವು   ಸಾರ್ವಜನಿಕ ಚರ್ಚೆ ನಡೆಯುವ ಮತ್ತು ಅಭಿಪ್ರಾಯಗಳನ್ನು ಪಡೆಯುವ ವರೆಗೆ ಅವುಗಳನ್ನು ತಡೆ ಹಿಡಿಯಬೇಕು. ಇವನ್ನು ಸಂಬಂಧಪಟ್ಟ ಸಂಸದೀಯ ಸ್ಥಾಯೀ ಸಮಿತಿಗೆ ಪರೀಕ್ಷಣೆಗೂ ಕಳಿಸಬೇಕು ಮತ್ತು ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿಯಿರುವ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಭಿಪ್ರಾಯಗಳನ್ನು ಕೂಡ ಒಳಗೊಳ್ಳಬೇಕು.

ನಿಮ್ಮ ವಿಶ್ವಾಸಿ,
ಬೃಂದಾ ಕಾರಟ್

Leave a Reply

Your email address will not be published. Required fields are marked *