ಜನರ ಜೀವನೋಪಾಯಗಳ ಮೇಲೆ ಮತ್ತಷ್ಟು ಹಲ್ಲೆಗಳು

ಜುಲೈ 16ರಂದು ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ, ನಂತರ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:

2020-22ರ ಅವಧಿಯಲ್ಲಿ ಭಾರತೀಯ ಅರ್ಥವ್ಯವಸ್ಥೆಯ ವಾರ್ಷಿಕ ಬೆಳವಣಿಗೆಯು ಕೇವಲ 0.8 ಪ್ರತಿಶತ ಎಂದು ವಿಶ್ವ ಬ್ಯಾಂಕ್ ಮಾಹಿತಿಗಳು ತೋರಿಸುತ್ತವೆ.

ನಿರುದ್ಯೋಗ: ಜನವರಿ-ಏಪ್ರಿಲ್ 2022 ರ ಸಿ.ಎಂ.ಐ.ಇ. ವರದಿಯ ಪ್ರಕಾರ 20-24 ವರ್ಷ ವಯೋಗುಂಪಿನ ನಿರುದ್ಯೋಗಿಗಳ ಸಂಖ್ಯೆ 2 ಕೋಟಿಗೂ ಹೆಚ್ಚು – 42 ಶೇಕಡಾದಷ್ಟು ಭಾರೀ ಪ್ರಮಾಣದ ನಿರುದ್ಯೋಗ ದರ. 25-29 ವಯೋಮಾನದವರಲ್ಲಿ, ಇದು ಅರವತ್ತು ಲಕ್ಷಕ್ಕಿಂತ ಹೆಚ್ಚಿತ್ತು – ನಿರುದ್ಯೋಗ ದರ ಶೇಕಡಾ 12.72. ಒಟ್ಟಾರೆಯಾಗಿ 20-29 ವಯಸ್ಸಿನ ನಿರುದ್ಯೋಗವು 15 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗವನ್ನು ಸಕ್ರಿಯವಾಗಿ ಅರಸುತ್ತಿರುವ 3 ಕೋಟಿಗೂ ಹೆಚ್ಚು ನಿರುದ್ಯೋಗಿ ಭಾರತೀಯರಲ್ಲಿ ಸುಮಾರು 80 ಶೇಕಡಾದಷ್ಟು.

ಭಾರತದ ದುಡಿಯುವ ವಯಸ್ಸಿನ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇಕಡಾ 36 ರಷ್ಟಿದೆ. ಈ ಪೈಕಿ ಶೇ 61.2ರಷ್ಟು ಮಂದಿ ಉದ್ಯೋಗ ಹುಡುಕುವುದನ್ನೇ ನಿಲ್ಲಿಸಿದ್ದಾರೆ. ಏಕೆಂದರೆ ಉದ್ಯೋಗಗಳಿಲ್ಲ. ಕಾರ್ಮಿಕರ ಭಾಗವಹಿಸುವಿಕೆ ದರವು 38.8 ಶೇಕಡಾಕ್ಕೆ ಇಳಿದಿದೆ. ಇದು ಸಾರ್ವಕಾಲಿಕ ಕನಿಷ್ಠ ಪ್ರಮಾಣ.

ಬೆಲೆ ಏರಿಕೆಯ ನಾಗಾಲೋಟ: ವಾರ್ಷಿಕ ಸಗಟು ಬೆಲೆ ಸೂಚ್ಯಂಕ ಮೇ 2022 ರಲ್ಲಿ ಶೇಕಡಾ 15.8 ಕ್ಕೆ ಏರಿದೆ – ಇದು 1998ರ ನಂತರದ ಅತ್ಯಧಿಕ ಮಟ್ಟ. ಆಹಾರದ ಬೆಲೆಗಳು ಶೇಕಡಾ 14.4 ರಷ್ಟು ಏರುತ್ತಿವೆ; ಪ್ರಾಥಮಿಕ ವಸ್ತುಗಳು ಶೇ.19.71, ಇಂಧನ ಮತ್ತು ಶಕ್ತಿ ಶೇ.40.63 ಮತ್ತು ತಯಾರಿಕೆಯ ಉತ್ಪನ್ನಗಳ ಬೆಲೆಗಳು ಶೇ.10.11.ರಷ್ಟು ಏರಿವೆ.

ಈ ಬೆಲೆ ಏರಿಕೆಯು ಮತ್ತಷ್ಟು ಸಂಕಷ್ಟಗಳನ್ನು ಹೇರುತ್ತಿದೆ ಮತ್ತು ಭಾರತೀಯ ಜನರ ಕೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ. ಆಂತರಿಕ ಬೇಡಿಕೆಯು ಕುಗ್ಗಿ  ತಯಾರಿಕಾ ಚಟುವಟಿಕೆಗಳನ್ನು ಕೆಳಕ್ಕೆ ತಳ್ಳುತ್ತಿರುವುದು ಮತ್ತಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ.

ಅಸಮಾನತೆಯ ಹೊಲಸು ಮಟ್ಟಗಳು: ಕೋಮುವಾದಿ-ಕಾರ್ಪೊರೇಟ್ ನಂಟು, ಬಂಟ ಬಂಡವಾಳಶಾಹಿ ಮತ್ತು ನಮ್ಮ ರಾಷ್ಟ್ರೀಯ ಸೊತ್ತುಗಳ ಲೂಟಿಯು  ಆದಾಯ ಮತ್ತು ಸಂಪತ್ತಿನ ಅಸಮಾನತೆಗಳನ್ನು ಇನ್ನಷ್ಟುವೇಗಗೊಳಿಸಿ ಮತ್ತು ವಿಸ್ತರಿಸಿ ಹೊಲಸು ಮಟ್ಟಕ್ಕೆ ಒಯ್ಯುತ್ತಿವೆ. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳು 2021-22ರಲ್ಲಿ 9.3 ಲಕ್ಷ ಕೋಟಿಗಳಿಗಿಂತಲೂ ಹೆಚ್ಚು ಸಾಮೂಹಿಕ ಲಾಭಗಳನ್ನು ವರದಿ ಮಾಡಿವೆ- ಇದು ಹಿಂದಿನ ವರ್ಷಕ್ಕಿಂತ ಶೇಕಡಾ 70 ಕ್ಕಿಂತಲೂ  ಹೆಚ್ಚು ಮತ್ತು ಮಹಾಸೋಂಕಿನ ಮೊದಲು ಒಂದು ದಶಕದವರೆಗೆ, ಅಂದರೆ 2010-2022 ರ ನಡುವೆ ವಾರ್ಷಿಕವಾಗಿ ಗಳಿಸಿದ ಸರಾಸರಿ ಲಾಭಕ್ಕಿಂತ ಮೂರು ಪಟ್ಟು ಹೆಚ್ಚು.

ಕೇಂದ್ರ ಸರ್ಕಾರವು ತಕ್ಷಣವೇ ಅತಿ ಶ್ರೀಮಂತರ ಮೇಲೆ ತೆರಿಗೆಯನ್ನು ವಿಧಿಸಬೇಕು ಮತ್ತು ಅದರ ಆದಾಯವನ್ನುನಮ್ಮ ಬಹು ಅಗತ್ಯದ ಮೂಲಸೌಕರ್ಯಗಳನ್ನು ನಿರ್ಮಿಸಲು, ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಲು ಆದಾಯವನ್ನು ಬಳಸಬೇಕು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ)

ಈಗಾಗಲೇ ಮನರೇಗ ದ ಅಡಿಯಲ್ಲಿ ಕೆಲಸ ಮಾಡಿದವರಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಕೂಲಿಗಳನ್ನು ನೀಡಲು ಕೇಂದ್ರ ಸರ್ಕಾರ ತಕ್ಷಣ ಹಣವನ್ನು ಬಿಡುಗಡೆ ಮಾಡಬೇಕು.

ಮನರೇಗಕ್ಕೆ ಬಜೆಟ್ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು, ಏಕೆಂದರೆ ಇದು ಕೋಟಿಗಟ್ಟಲೆ ಗ್ರಾಮೀಣ ಯುವಕರಿಗೆ ಉದ್ಯೋಗ ಮತ್ತು ಜೀವನೋಪಾಯದ ಏಕೈಕ ಮೂಲವಾಗಿದೆ.

ಕಡ್ಡಾಯ ಆಧಾರ್ ಹಿಂಪಡೆಯಬೇಕು

ಮಕ್ಕಳ ಪೂರಕ ಪೌಷ್ಠಿಕ ಕಾರ್ಯಕ್ರಮಕ್ಕೆ ಆಧಾರ್ ಕಡ್ಡಾಯಗೊಳಿಸಿದ ಆದೇಶವನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು. 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಜೊತೆಗೆ ಜಾರಿಗೆ ತರಲಾದ ಆರು ತಿಂಗಳಿಂದ ಆರು ವರ್ಷದೊಳಗಿನ ಲಕ್ಷಗಟ್ಟಲೆ ಮಕ್ಕಳ ಕಾನೂನಾತ್ಮಕ ಅರ್ಹತೆಯನ್ನು ನಕಲಿ ಫಲಾನುಭವಿಗಳ ಕಳೆ ತೆಗೆಯುವ ಹೆಸರಿನಲ್ಲಿ  ನಿರಾಕರಿಸಲಾಗುತ್ತದೆ. ಪ್ರಸ್ತುತ, 7.9 ಕೋಟಿ ಮಕ್ಕಳು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಾರೆ ಆದರೆ, ಅಧಿಕೃತ ದಾಖಲೆಗಳ ಪ್ರಕಾರ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 23 ಪ್ರತಿಶತ ಮಕ್ಕಳು ಮಾತ್ರ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಭಾರತವು ಇಂದು ವಿಶ್ವದ ಮಕ್ಕಳ ಅಪೌಷ್ಟಿಕತೆಯ ಕೆಟ್ಟ ದಾಖಲೆಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಶಿಕ್ಷಣದ ಮೇಲಿನ ದಾಳಿಗಳು

ಸಾಂಕ್ರಾಮಿಕ ಸಮಯದಲ್ಲಿ ನಿರ್ಬಂಧಗಳನ್ನು ಬಳಸಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ, 2020 ರ ಆಕ್ರಮಣಕಾರಿ ಅನುಸರಣೆ , ಜೊತೆಗೆ ಆನ್‌ಲೈನ್ ಶಿಕ್ಷಣವನ್ನು ಪರಿಚಯಿಸುವ ಎಲ್ಲಾ ಪ್ರಯತ್ನಗಳು ಹಾನಿಯನ್ನುಂಟುಮಾಡುತ್ತಿವೆ. ಲಕ್ಷಗಟ್ಟಲೆ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಹಂತಗಳಲ್ಲಿ ಡ್ರಾಪ್ ಔಟ್‌ಗಳು ಅಪಾಯಕಾರಿ ಪ್ರಮಾಣದಲ್ಲಿ ಬೆಳೆಯುತ್ತಿವೆ. ಶಿಕ್ಷಣದಲ್ಲಿ  ಜಾತ್ಯತೀತ ಮತ್ತು ವೈಜ್ಞಾನಿಕ ವಿಷಯಗಳ ಮೇಲೆ  ಅಸಹ್ಯಕರ ಆಕ್ರಮಣಕಾರಿ ಪ್ರಹಾರ ಮಾಡಲಾಗುತ್ತಿದೆ

ಆದಿವಾಸಿಗಳ ಹಕ್ಕುಗಳ ಮೇಲೆ ದಾಳಿ

ಅರಣ್ಯ ಸಂರಕ್ಷಣಾ ಕಾಯ್ದೆಯಡಿ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಮೋದಿ ಸರ್ಕಾರವು ಬುಡಕಟ್ಟು ಹಕ್ಕುಗಳ ಮೇಲೆ ಕೆಟ್ಟ ದಾಳಿ ನಡೆಸಿದೆ. ಈ ತಿದ್ದುಪಡಿಗಳು ಖಾಸಗಿ ಕಾರ್ಪೊರೇಟ್‌ಗಳಿಗೆ ತಮ್ಮ ಲಾಭಗಳನ್ನು ಗರಿಷ್ಟಗೊಳಿಸಿಕೊಳ್ಳುವುದಕ್ಕಾಗಿ ಭಾರತದ ಅರಣ್ಯಗಳನ್ನು ಪ್ರವೇಶಿಸಲು ಮತ್ತು ನಿಯಂತ್ರಿಸಲು ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿವೆ. ಈ ನಿಯಮಗಳು ಗ್ರಾಮ ಸಭೆಗಳು, ಬುಡಕಟ್ಟು ಸಮುದಾಯಗಳು ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳ ಹಕ್ಕುಗಳನ್ನು ನಿರ್ಮೂಲಗೊಳಿಸುತ್ತವೆ, ಅವರ ಪೂರ್ವಾನುಮತಿಯು ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳತ್ತ ತಿರುಗಿಸಲು ಕಡ್ಡಾಯವಾಗಿತ್ತು. ಇದು ಬುಡಕಟ್ಟು ಸಮುದಾಯಗಳಿಗೆ ನೀಡಿರುವ ಸಾಂವಿಧಾನಿಕ ಖಾತರಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕೂಡಲೇ ಈ ನಿಯಮಗಳನ್ನು ಹಿಂಪಡೆಯಬೇಕು.

ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹೆಚ್ಚುತ್ತಿರುವ ಆಕ್ರಮಣಗಳು

ತೀಸ್ತಾ ಸೆಟಲ್ವಾಡ್, ಜುಬೇರ್ ಮೊಹಮ್ಮದ್ ಮತ್ತು ಇತರರ ಮೇಲಿನ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಪೊಲಿಟ್ ಬ್ಯೂರೋ ಒತ್ತಾಯಿಸಿದೆ. ಈ ಬಂಧನಗಳು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಗುರಿಯನ್ನು ಹೊಂದಿವೆ. ದ್ವೇಷ ಹೊತ್ತಿಸುವ ಮತ್ತು ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸುವ ಹಿಂದುತ್ವದ ಕೋಮುವಾದಿ ಸಂಘಟನೆಗಳು ಪ್ರಚಾರ ಮಾಡುವ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು ಜನರ ಮುಂದೆ ಸತ್ಯವನ್ನು ತರುತ್ತಿರುವವರು ಹೆಚ್ಚೆಚ್ಚಾಗಿ ಬಿಜೆಪಿ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ದ್ವೇಷ ಭಾಷಣಗಳನ್ನು ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಅವನ್ನು ವಿರೋಧಿಸುವವರ ವಿರುದ್ಧ ಕಿರುಕುಳ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ. ದ್ವೇಷ ಪ್ರಚೋದಕರಿಗೆ ಈ ಅಧಿಕೃತ ಕೃಪಾಪೋಷಣೆ  ನಿಲ್ಲಬೇಕು.

ವಿನಾಶಕಾರಿ ಪ್ರವಾಹಗಳು

ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಪೊಲಿಟ್ ಬ್ಯೂರೋ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಸ್ಸಾಂನಲ್ಲಿ ಪ್ರವಾಹವು ವ್ಯಾಪಕ ಹಾನಿಯನ್ನುಂಟುಮಾಡಿದೆ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ, ಆಸ್ತಿಪಾಸ್ತಿಗಳನ್ನು ನಾಶಪಡಿಸಿದೆ ಮತ್ತು ಲಕ್ಷಗಟ್ಟಲೆ ಜನರನ್ನು ಸ್ಥಳಾಂತರಿಸಿದೆ. ಅದೇ ರೀತಿ ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಇತರೆಡೆಗಳಲ್ಲಿ ಪ್ರವಾಹವು ಹಾನಿಯನ್ನುಂಟುಮಾಡುತ್ತಿದೆ. ಕೇಂದ್ರ ಸರ್ಕಾರವು ಪೀಡಿತ ರಾಜ್ಯಗಳಿಗೆ ಅಗತ್ಯ ಸಂಪನ್ಮೂಲಗಳು ಮತ್ತು ಸಾಮಗ್ರಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.

ಆಧಾರ ರಹಿತ ಆರೋಪಗಳಿಗೆ ಖಂಡನೆ

ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿಯವರ ಮೇಲೆ ಆಡಳಿತಾರೂಢ ಬಿಜೆಪಿಯವರು ಮಾಡಿರುವ ಆಧಾರಗಳಿಲ್ಲದ ಮತ್ತು ಬುಡಹೀನ ಆರೋಪಗಳನ್ನು ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಶ್ರೀ ಅನ್ಸಾರಿಯವರು ಜಾಗತಿಕವಾಗಿ ಗೌರವಾನ್ವಿತ ರಾಜತಾಂತ್ರಿಕರು, ವಿದ್ವಾಂಸರು ಮತ್ತು ಕೇಂದ್ರ ಸರ್ಕಾರವು ತಮಗೆ ನೀಡಿದ ಪ್ರತಿಯೊಂದು ಜವಾಬ್ದಾರಿಯಲ್ಲಿಯೂ ದೇಶಪ್ರೇಮದ ದೋಷರಹಿತ ಸೇವೆ ಸಲ್ಲಿಸಿದ ದಾಖಲೆ ಹೊಂದಿರುವವರು.

ಶ್ರೀ ಅನ್ಸಾರಿಯವರ ಮೇಲೆ  ಅವರ ಅಸ್ಮಿತೆ ಮತ್ತು ಭಾರತೀಯ ಸಂವಿಧಾನ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಅವರ ದೃಢವಾದ ಬದ್ಧತೆಯ ಕಾರಣದಿಂದಾಗಿ ಗುರಿಯಿಟ್ಟಿರುವುದನ್ನು  ಒಪ್ಪಲು ಸಾಧ್ಯವಿಲ್ಲ.

ಕೇರಳದ ಬೆಳವಣಿಗೆಗಳು

ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕೇರಳದಲ್ಲಿ ಎಲ್‌ಡಿಎಫ್ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. 2021 ರಲ್ಲಿ ಮತ್ತೊಮ್ಮೆ ಇನ್ನೂ ದೊಡ್ಡ ಜನಾದೇಶದೊಂದಿಗೆ ಸರ್ಕಾರ ರಚಿಸುವ ಮೂಲಕ ಕೇರಳದ ಜನರ ವಿಶ್ವಾಸ ಗಳಿಸಿದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ ತಾಳಮೇಳದಿಂದ  ಕಾರ್ಯನಿರ್ವಹಿಸುತ್ತಿವೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳು

ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಸಾಂವಿಧಾನಿಕ ಗಣರಾಜ್ಯ, ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಭಾರತೀಯ ಜನರಿಗೆ ಕರೆ ನೀಡುವ ವ್ಯಾಪಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಗಸ್ಟ್ 1-15 ನ್ನು ಆಚರಿಸಲು ಇಡೀ ಪಕ್ಷಕ್ಕೆ ಪೊಲಿಟ್ ಬ್ಯೂರೋ ಕರೆ ನೀಡಿದೆ.

Leave a Reply

Your email address will not be published. Required fields are marked *