ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಜನ-ವಿರೋಧಿ ಬಜೆಟ್‍

ಫೆಬ್ರುವರಿ 22-28 : ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕರೆ

ಕೇಂದ್ರ ಬಜೆಟ್‍ 2023-24 ಭಾರತದ ಅರ್ಥವ್ಯವಸ್ಥೆಯ ಸದ್ಯದ ಸನ್ನಿವೇಶವನ್ನು ಎದುರಿಸುವಲ್ಲಿ ವಿಫಲವಾಗಿರುವ ಜನ-ವಿರೋಧಿ ಬಜೆಟ್‍ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೋ  ಬಲವಾಗಿ ಟೀಕಿಸಿದೆ.

ಭಾರತದ ಅರ್ಥವ್ಯವಸ್ಥೆ ಮಹಾಸೋಂಕು ಎರಗುವ ಮೊದಲೇ ನಿಧಾನಗತಿಗಿಳಿದಿತ್ತು. ಮಹಾಸೋಂಕಿನ ಎರಡು ವರ್ಷಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ತದನಂತರದ ಚೇತರಿಕೆಯ ಮೇಲೆ ಜಾಗತಿಕ  ಆರ್ಥಿಕ ಹಿಂಜರಿತ  ಮತ್ತು ಆರ್ಥಿಕ ಸ್ಥಗಿತತೆಯತ್ತ ಸಾಗುವ ಸಾಧ್ಯತೆಯು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಬಜೆಟ್ ಉದ್ಯೋಗ ಸೃಷ್ಟಿಯೊಂದಿಗೆ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಆಂತರಿಕ ಬೇಡಿಕೆಯ ಬೆಳವಣಿಗೆಗೆ ಒತ್ತಾಸೆ ನೀಡುವ ಕೇಂದ್ರೀಯ ಪ್ರಶ್ನೆಗಳನ್ನು ಎತ್ತಿಕೊಳ್ಳಬೇಕಿತ್ತು ಎಂದು ಅದು ಹೇಳಿದೆ.

ಈ ಬಜೆಟ್ ಅದರಲ್ಲಿ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಇದು ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಸರ್ಕಾರದ ವೆಚ್ಚಗಳನ್ನು ಹಿಂಡುತ್ತದೆ ಮತ್ತು ಶ್ರೀಮಂತರಿಗೆ ಮತ್ತಷ್ಟು ತೆರಿಗೆ ರಿಯಾಯಿತಿಯನ್ನು ನೀಡುತ್ತದೆ. ಆಕ್ಸ್‌ಫಾಮ್ ವರದಿಯು ಭಾರತದಲ್ಲಿ ಶೇಕಡಾ 1 ರಷ್ಟು ಶ್ರೀಮಂತರು ಕಳೆದ 2 ವರ್ಷಗಳಲ್ಲಿ ಉತ್ಪತ್ತಿಯಾದ ಸಂಪತ್ತಿನ ಶೇಕಡಾ 40.5 ಅನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ತೋರಿಸಿರುವ  ಈ ಬಜೆಟ್‍ ಬಂದಿದೆ.  ಹೀಗೆ, ಇದು ಸಂಕೋಚನಗೊಳಿಸುವ ಬಜೆಟ್ ಆಗಿದ್ದು ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

2023-24ರಲ್ಲಿ ಸರಕಾರದ ಒಟ್ಟು ವೆಚ್ಚದ ಹೆಚ್ಚಳವು ಕೇವಲ 7ಶೇ. ಈ ಅವಧಿಯಲ್ಲಿ ಜಿಡಿಪಿ (ಹಣದುಬ್ಬರದೊಂದಿಗೆ) ಹೆಚ್ಚಳ 10.5 ಶೇ. ಎಂದು ಅಂದಾಜಿಸಲಾಗಿದೆ. ಹೀಗಾಗಿ,  ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಸರ್ಕಾರದ  ವೆಚ್ಚದಲ್ಲಿ ಇಳಿಕೆಯಾಗಿದೆ. ಬಡ್ಡಿ ಪಾವತಿಗಳನ್ನು ಹೊರತುಪಡಿಸಿದರೆ, ಈ ವೆಚ್ಚವು ಕಳೆದ ವರ್ಷಕ್ಕಿಂತ ಕೇವಲ 5.4 ಶೇಕಡಾ ಹೆಚ್ಚು. ಸೂಚ್ಯ ಹಣದುಬ್ಬರ ದರ 4 ಶೇ.  ಮತ್ತು ಸುಮಾರು 1 ಶೇ. ಜನಸಂಖ್ಯಾ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡರೆ, “ಜನಕೇಂದ್ರಿತ” ಬಜೆಟ್ ಎಂದು ಕರೆಯಲ್ಪಡುವ ಇದು ನಮ್ಮ ಬಹುಪಾಲು ಜನರ ಜೀವನೋಪಾಯದ ಮೇಲೆ ಮತ್ತಷ್ಟು ದಾಳಿಗಳನ್ನು ಮಾಡುತ್ತದೆ.

ನಿರುದ್ಯೋಗ ದರವು ಇದುವರೆಗೆ ಕಾಣದ ಎತ್ತರಕ್ಕೆ ಏರಿರುವಾಗ  ಈ ಬಜೆಟ್ ಮನರೇಗ ಯೋಜನೆಗೆ  ಹಂಚಿಕೆಯನ್ನು ಶೇಕಡಾ 33 ರಷ್ಟು ಕಡಿಮೆ ಮಾಡುತ್ತದೆ. ಆಹಾರ ಸಬ್ಸಿಡಿಯಲ್ಲಿ ರೂ. 90,000 ಕೋಟಿ, ರಸಗೊಬ್ಬರ ಸಬ್ಸಿಡಿಯಲ್ಲಿ  ರೂ. 50,000 ಕೋಟಿ ಮತ್ತು ಪೆಟ್ರೋಲಿಯಂ ಸಬ್ಸಿಡಿಯಲ್ಲಿ ರೂ. 6,900 ಕೋಟಿ ಕಡಿತ ಮಾಡುತ್ತದೆ.

ಸಾಂಕ್ರಾಮಿಕ ರೋಗದಿಂದ ಉಂಟಾದ ವಿನಾಶದ ಹೊರತಾಗಿಯೂ ಕಳೆದ ವರ್ಷ ಆರೋಗ್ಯಕ್ಕಾಗಿ ಮೀಸಲಿಟ್ಟ ರೂ. 9255 ಕೋಟಿ ಖರ್ಚಾಗದೆ ಉಳಿದಿದೆ. ಅಂತೆಯೇ, ಶಿಕ್ಷಣ ಬಜೆಟ್‌ನಲ್ಲಿ ರೂ. 4297 ಕೋಟಿ ಖರ್ಚಾಗದೇ ಉಳಿದಿದೆ.

ಐಸಿಡಿಎಸ್ ಯೋಜನಾ ಕಾರ್ಯಕರ್ತರಿಗೆ ಈಗಾಗಲೇ ನೀಡಲಾಗುತ್ತಿರುವ ಅಲ್ಪ ಸಂಭಾವನೆ ಯಾವುದೇ ಏರಿಕೆ ಕಾಣುತ್ತಿಲ್ಲ. ಲಿಂಗ ಬಜೆಟ್ ಒಟ್ಟು ಖರ್ಚಿನ ಶೇಕಡಾ 9 ಮಾತ್ರ. 16 ಶೇ. ದಷ್ಟಿರುವ ಪರಿಶಿಷ್ಟ ಜಾತಿಗಳ ಬಜೆಟಿಗೆ ಕೇವಲ 3.5 ಶೇಕಡಾ ಮತ್ತು 8.6 ಶೇ. ಪರಿಶಿಷ್ಟ ಬುಡಕಟ್ಟು ಜನಗಳ ಬಜೆಟಿಗೆ ಕೇವಲ 2.7 ಶೇ.. ರೈತರ ಆದಾಯವನ್ನು ದ್ವಿಗುಣಗೊಳಿಸುವ ಅಬ್ಬರದ ಹೇಳಿಕೆಗಳ ಟೊಳ್ಳುತನವು ಪ್ರಧಾನ ಮಂತ್ರಿ ಕಿಸಾನ್ ನಿಧಿಗೆ ಹಂಚಿಕೆಯನ್ನು ರೂ. 68,000 ಕೋಟಿ ರೂ. ಗಳಿಂ ದ ರೂ.60,000 ಕೋಟಿಗೆ ಇಳಿಸಿರುವದರಲ್ಲಿ ಕಾಣಬಹುದು.

ಬಂಡವಾಳ ವೆಚ್ಚಗಳಲ್ಲಿ ಗಣನೀಯ ಹೆಚ್ಚಳ ಮಾಡಲಾಗಿದೆ, ಇದು ಉದ್ಯೋಗ ಸೃಷ್ಟಿಗೆ ಅನುವು ಮಾಡಿಕೊಡುತ್ತದೆ ಎಂಬ ಸರ್ಕಾರದ ಹೇಳಿಕೆ ಕೇವಲ ತೋರಿಕೆ, ಏಕೆಂದರೆ 2022-2023 ರಲ್ಲಿ ಸಾರ್ವಜನಿಕ ಉದ್ಯಮದ ಸಂಪನ್ಮೂಲಗಳನ್ನು ಒಳಗೊಂಡಂತೆ ಒಟ್ಟು ಬಂಡವಾಳ ವೆಚ್ಚಗಳು ಕೇವಲ 9.6 ಶೇಕಡಾ ಹೆಚ್ಚಿವೆ ಎಂದು ಪರಿಷ್ಕೃತ ಅಂದಾಜುಗಳೇ ತೋರಿಸುತ್ತವೆ, ಇದು ಜಿಡಿಪಿ ಹೆಚ್ಚಳಕ್ಕಿಂತ ಕೆಳಮಟ್ಟದಲ್ಲಿಯೇ ಇದೆ.

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ. 5 ರಿಂದ 7 ಲಕ್ಷ ರೂ. ಗೆ ಏರಿಸಿರುವುದು  ಸಂಬಳದಾರ ವಿಭಾಗಗಳಿಗೆ ಸ್ವಲ್ಪ ಪರಿಹಾರವನ್ನು ಒದಗಿಸಿದೆ. ಆದಾಗ್ಯೂ,  ಹಣದುಬ್ಬರ ಮತ್ತು ಸಾಮಾಜಿಕ ವಲಯದ ವೆಚ್ಚದಲ್ಲಿ ಕಡಿತದಿಂದ ಜನರು ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳಿಗೆ ಹೆಚ್ಚು ಖರ್ಚು ಮಾಡಬೇಕಾಗಿ ಬರುತ್ತದೆ ಎಂಬುದನ್ನು ಗಣನೆಗೆ ತಗೊಂಡರೆ ಕಡಿತವೇ ಹೆಚ್ಚು.  ಈ ಬಜೆಟ್ ರಾಜ್ಯ ಸರ್ಕಾರಗಳಿಗೆ ಸಂಪನ್ಮೂಲ ವರ್ಗಾವಣೆಯನ್ನು ಹಿಸುಕುವ ಮೂಲಕ ಹಣಕಾಸು ಒಕ್ಕೂಟ ತತ್ವದ ಮೇಲೆ ಮತ್ತಷ್ಟು ದಾಳಿಗಳನ್ನು ಹೇರುವುದನ್ನು ಮುಂದುವರೆಸಿದೆ. ಈ ವರ್ಗಾವಣೆಗಳು 2022-23 ರಲ್ಲಿ 8.4 ಶೇಕಡಾ ಹಣದುಬ್ಬರ ದರದ ಹೊರತಾಗಿಯೂ 2021-22 ರ ಮಟ್ಟದಲ್ಲೇ ಇವೆ ಎಂದು 2022-23 ರ ಪರಿಷ್ಕೃತ ಅಂದಾಜು ತೋರಿಸುತ್ತದೆ. ಅಲ್ಲದೆ ಸಾಲ ಪಡೆಯಲು ರಾಜ್ಯ ಸರ್ಕಾರಗಳಿಗೆ ಮತ್ತಷ್ಟು ಷರತ್ತುಗಳನ್ನು ವಿಧಿಸಲಾಗಿದೆ.

ಹಣಕಾಸು ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಶ್ರೀಮಂತರಿಗೆ ತೆರಿಗೆ ರಿಯಾಯಿತಿಗಳು ಮತ್ತು ಒಟ್ಟಾರೆ ತೆರಿಗೆ ಪ್ರಸ್ತಾವನೆಗಳು 2023-24ರಲ್ಲಿ 35,000 ಕೋಟಿ ರೂ ಆದಾಯ ನಷ್ಟಕ್ಕೆ ಕಾರಣವಾಗುತ್ತವೆ.

ಜನರಿಗೆ ಬಹಳಷ್ಟು ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸಲು ಮತ್ತು ಅರ್ಥವ್ಯವಸ್ಥೆ ಸುಧಾರಿಸಿಕೊಳ್ಳುವಂತೆ  ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಬಜೆಟ್ ಈ ಕೆಳಗಿನವುಗಳನ್ನು ಮಾಡಬೇಕಿತ್ತು:

  1. ಉದ್ಯೋಗ ಸೃಷ್ಟಿಸುವ ಯೋಜನೆಗಳಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಗಣನೀಯವಾಗಿ ಹೆಚ್ಚಿಸುವುದು.
  2. ಹೆಚ್ಚಿನ ಕೂಲಿಯೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಹಂಚಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು
  3. 5 ಕೆಜಿ ಉಚಿತ ಆಹಾರ ಧಾನ್ಯಗಳ ಜೊತೆಗೆ 5 ಕೆಜಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಮತ್ತೆಒದಗಿಸುವುದು.
  4. ಸಂಪತ್ತು ಮತ್ತು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದು.
  5. ಆಹಾರ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವುದು.

ಈ ಬಜೆಟ್‌ನ ಜನವಿರೋಧಿ ಮತ್ತು ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಅಂಶಗಳ ವಿರುದ್ಧ ಮತ್ತು ಮೇಲಿನ ಬೇಡಿಕೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಸಿಪಿಐ(ಎಂ) ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ಫೆಬ್ರುವರಿ  22 ರಿಂದ 28 ರ ವರೆಗೆ ಸಂಘಟಿಸುತ್ತದೆ ಎಂದಿರುವ ಪೊಲಿಟ್‍ಬ್ಯುರೊ ಜನರ ಜೀವನೋಪಾಯಗಳನ್ನು ಕಾಪಾಡಬೇಕೆಂಬ ಕಾಳಜಿ ಹೊಂದಿರುವ ಎಲ್ಲಾ ವಿಭಾಗಗಳ ಜನರು ಪ್ರತಿಭಟಿಸಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *