ಹತ್ಯಾ ಬೆದರಿಕೆಯ ರಾಜಕಾರಣ ಹೆಚ್ಚಿದ ಅಪಾಯ

ಅಧಿಕಾರ ಹಿಡಿಯುವ ಆತುರದಲ್ಲಿರುವ ಬಿಜೆಪಿ ಪಕ್ಷ, ಮತ್ತದರ ನಾಯಕರು ಅಸ್ತಿತ್ವದಲ್ಲಿರುವ ನಾಗರಿಕ ನಡವಳಿಕೆ, ಶಾಸನಬದ್ಧ ಸಂಹಿತೆ, ಸಾರ್ವಜನಿಕ ಭಯ, ಮುಜುಗರ ನಾಚಿಕೆಗಳನ್ನು ಗಾಳಿಗೆ ತೂರಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳನ್ನು, ಅವುಗಳ ನಿಲುವುಗಳನ್ನು ವಿಮರ್ಶಿಸುವ, ವಿರೋಧಿಸುವುದು ಸಹಜ. ಟೀಕೆ ಪ್ರತಿ ಟೀಕೆಗಳಿಗೂ ಅವಕಾಶ ಇರುವುದಾದರೂ ಅದಕ್ಕೊಂದು ಮಿತಿ ಮತ್ತು ಹೊಣೆಗಾರಿಕೆ ಇರುತ್ತದೆ. ಆದರೆ ದ್ವೇಷ, ಹಿಂಸೆಯನ್ನು ಬಿತ್ತಿ ಬೆಳೆಯುವುದರಲ್ಲೇ ತಮ್ಮ ಗೆಲುವು ಇದೆ ಎಂದು ಭಾವಿಸಿರುವ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕರನ್ನು ಕೊಲ್ಲುಲು  ಬಹಿರಂಗವಾಗಿಯೇ ಜನರಿಗೆ ಕರೆ ನೀಡುವುದು ದಿಗ್ಭ್ರಮೆ ಹುಟ್ಟಿಸುವ ಸಂಗತಿಯಾಗಿದೆ. ಇತ್ತೀಚೆಗೆ ಮಂಡ್ಯದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಸಚಿವ ಅಶ್ವಥನಾರಾಯಣ ರವರು ʻಟಿಪ್ಪುʼವನ್ನು ಉರಿಗೌಡ, ನಂಜೇಗೌಡರು ಏನು ಮಾಡಿದರು? ಎಂದು ಜನರನ್ನು ಕೇಳುವುದು, ಟಿಪ್ಪುವನ್ನು ಹೊಡೆದು ಹಾಕಿದರು ಎಂದು ಹೇಳಿಸುವುದು, ಟಿಪ್ಪುವನ್ನು ಬೆಂಬಲಿಸುವ ಸಿದ್ಧರಾಮಯ್ಯನವರನ್ನು ಹಾಗೇ ಹೊಡೆದು ಹಾಕಿ ಎಂದು ಹೇಳುವುದು ಬಾಯಿ ತಪ್ಪಿ ಆಡಿದ  ಮಾತುಗಳಲ್ಲ. ಈ ಕರೆ ನೀಡಿರುವುದು ಬೀದಿಯ ಪೋಕರಿಯಲ್ಲ, ಜವಾಬ್ದಾರಿಯುತ ಸಂಪುಟ ದರ್ಜೆ ಸಚಿವ ಎನ್ನುವುದು ಗಂಭೀರ ವಿಷಯ. ಎಲ್ಲೆಡೆಗಳಲ್ಲಿ ಅವರ ಮಾತುಗಳಿಗೆ ವ್ಯಾಪಕ ವಿರೋಧ ವ್ಯಕ್ತವಾದ ನಂತರವಾದರೂ ವಿಧಾನಸಭೆಯಲ್ಲಿ, ಸಾರ್ವಜನಿಕವಾಗಿಯೂ ಕ್ಷಮೆ ಕೇಳುವ ಬದಲು ‘ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ’ ಎನ್ನುವ ಮಾತನ್ನು ಹೇಳುವಾಗ ದಾಷ್ಟ್ಯತನ,  ಅಸಡ್ಡೆ ಇತ್ತೇ ಹೊರತು ನಿಜಕ್ಕೂ ವಿಷಾಧದ ಛಾಯೆಯೇ ಇರಲಿಲ್ಲ. ದುರಂತವೆಂದರೆ ಅವರಾಡಿದ ಮಾತುಗಳ ಬಗೆಗೆ  ಬಿಜೆಪಿ ನಾಯಕ ಸಿ.ಟಿ.ರವಿಯವರು ಅಸಮ್ಮತಿ ವ್ಯಕ್ತಪಡಿಸಿದ್ದನ್ನು ಬಿಟ್ಟರೆ ಮುಖ್ಯಮಂತ್ರಿಯಾಗಲೀ, ಬಿಜೆಪಿಯ ನಾಯಕರಾಗಲೀ ಖಂಡಿಸಿಲ್ಲ, ತಪ್ಪು ಎಂದೂ ಹೇಳದಿರುವುದು ಮತ್ತಷ್ಟೂ ಗಂಭೀರ ಸಂಗತಿ. ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ಸಿನ ಶಾಸಕರ ಮೇಲೆಯೇ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹರಿಹಾಯ್ದ ರೀತಿಯೂ ಶೋಭೆ ತರುವ ವಿಚಾರವಲ್ಲ.

ಸೋಲುವ ಭಯದಲ್ಲಿರುವ ಬಿಜೆಪಿ ವಿಷನ್-150 ಎನ್ನುವ ಗುರಿ ಇರಿಸಿಕೊಂಡು ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಿದೆ ಎನ್ನುವುದನ್ನು ಜನತೆ ಗಮನಿಸುತ್ತಿದ್ದಾರೆ. ದ್ವೇಷ ಹೆಚ್ಚಿಸುವುದರಿಂದಲೇ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದು ಎಂದು ಹೊರಟಿರುವುದು ಮತ್ತೆ ಸಾಬೀತಾಗಿದೆ. ಉತ್ತರ ಕರ್ನಾಟಕ, ಹೈದ್ರಾಬಾದ್-ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಈಗಿರುವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದನ್ನು ಅರಿತ ಗೃಹ ಸಚಿವ ಅಮಿತ್ ಶಾ ದಕ್ಷಿಣ ಕರ್ನಾಟಕದಲ್ಲಿ ಗಮನ ಕೇಂದ್ರೀಕರಿಸಲು ರೂಪು ರೇಷೆಗಳನ್ನು  ಹಾಕಿ ಕೊಟ್ಟಿದ್ದಾರೆ. ಇದಕ್ಕಾಗಿ ಅಪಾರ ಸಂಪನ್ಮೂಲಗಳನ್ನು ವ್ಯಯಿಸುತ್ತಿದ್ದಾರೆ.

ರಾಜ್ಯದಲ್ಲಿ ಕೋಮುವಾದದ ವಿರುದ್ಧ, ಅದರಲ್ಲೂ ಫ್ಯಾಶಿಸ್ಟ್ ಮಾದರಿಯ ಆರ್.ಎಸ್.ಎಸ್.ನ ನೀತಿ, ಕಾರ್ಯಯೋಜನೆಗಳ ವಿರುದ್ಧ ನಿಷ್ಠುರ ಹಾಗೂ ನಿಖರವಾಗಿ ಮಾತನಾಡುತ್ತಿರುವ ಜನಮನ ಸೆಳೆಯುವ ನಾಯಕ ಸಿದ್ಧರಾಮಯ್ಯನವರು ಸಂಘಪರಿವಾದ ಗುರಿಯಾಗಿದ್ದಾರೆ. ಹೀಗಾಗಿಯೇ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕನ ವಿರುದ್ದ ಧಾಳಿ ಮಾಡಲು, ಅವರ ಖ್ಯಾತಿ, ಬಲ ಕುಗ್ಗಿಸಲು ಒಂದು ವ್ಯವಸ್ಥಿತವಾದ ಕಾರ್ಯ ಯೋಜನೆಯನ್ನು ಬಿಜೆಪಿ ಸಂಘಪರಿವಾರ ರೂಪಿಸಿದಂತಿದೆ. ಹಿಂದೆ ಸತತವಾಗಿ, ಈಗಲೂ ಆಗೊಮ್ಮೆ ಈಗೊಮ್ಮೆ ಈಶ್ವರಪ್ಪನವರು, ನಂತರದಲ್ಲಿ ಸಿದ್ಧರಾಮಯ್ಯನವರಿಗಿಂತಲೂ ಅತ್ಯಂತ ಕಿರಿಯನಾದ ಸಿ.ಟಿ.ರವಿ, ನಳಿನ್ ಕುಮಾರ್‌ ಕಟೀಲ್ ಮುಂತಾದವರಿಂದ ವಾಗ್ಧಾಳಿಯನ್ನು ನಡೆಸುತ್ತಲೇ ಬರುತ್ತಿರುವುದು ನಿತ್ಯವೂ ನಡೆಯುತ್ತಿದೆ. ಇಂತಹ ಕಿರಿಯ ವಯಸ್ಸಿನವರಿಂದಲೇ ವಾಗ್ಧಾಳಿ ಮಾಡಿಸಿದಲ್ಲಿ ಸಿದ್ದರಾಮಯ್ಯನವರ ಘನತೆಗೆ ಕುಂದು ತರುವುದೆಂಬ ಲೆಕ್ಕಾಚಾರವೂ ಇರಬಹುದು. ಸಂವಿಧಾನ, ಪ್ರಜಾಪ್ರಭುತ್ವ, ಸೆಕ್ಯುಲರ್ ತತ್ವಗಳನ್ನು ಪ್ರತಿಪಾದಿಸುತ್ತಿರುವ ಸಿದ್ದರಾಮಯ್ಯನವರನ್ನು ʻʻಸಿದ್ರಾಮುಲ್ಲಾ ಖಾನ್ʼʼ ಪಾಕಿಸ್ಥಾನಕ್ಕೆ ಹೋಗಿ ಎಂದೆಲ್ಲಾ ಹೀಯಾಳಿಸುವ ಕೀಳು ಮಟ್ಟಕ್ಕೂ ಸಂಘಪರಿವಾರ ಇಳಿದಿದೆ. ಇಲ್ಲಿಯೂ ಆರ್.ಎಸ್.ಎಸ್. ತನ್ನ ವೈಧಿಕಶಾಹಿ ಒಡೆದು ಆಳುವ ನೀತಿಯಂತೆ, ವಾಗ್ಧಾಳಿ ಮಾಡುವವರ ಜಾತಿ ಹಿನ್ನೆಲೆಯ ಆಯ್ಕೆಯನ್ನೂ ಮಾಡಿ ಒಂದು ಜಾತಿಯವರನ್ನು ಇನ್ನೊಂದು ಜಾತಿಯ ವಿರುದ್ದ ಎತ್ತಿ ಕಟ್ಟುವ, ಜಾತಿ ನೆಲೆಯಲ್ಲಿ ಇರಬಹುದಾದ ವಿರೋಧವನ್ನೂ ಆಕರ್ಷಿಸಿ ಕ್ರೋಢಿಕರಿಸುವ ಕುತಂತ್ರವೂ ಇಲ್ಲದಿಲ್ಲ. ಸಿದ್ಧರಾಮಯ್ಯ ಕುರುಬರೆಂದು ಕುರುಬರಾದ ಈಶ್ವರಪ್ಪನವರನ್ನು ಮುಂದೆ ಬಿಡುವುದು, ಈಗ ಸಿ.ಟಿ.ರವಿ, ಅಶ್ವಥನಾರಾಯಣ ರವರು ಒಕ್ಕಲಿಗ ಜಾತಿಯವರೆಂದು ಒಕ್ಕಲಿಗ ಪ್ರಾಬಲ್ಯ ಇರುವ ಮಂಡ್ಯ, ಮೈಸೂರು, ಹಾಸನ ಕಡೆಗಳಲ್ಲಿ ಇವರನ್ನು ಮುಂದೆ ಮಾಡುವುದು ಶತಮಾನಗಳ ತಂತ್ರದ ಸಂಘದ ಕಾರ್ಯ ವಿಧಾನವೇ ಆಗಿದೆ. ಅಧಿಕಾರ, ಹಣದ ಆಸೆ, ಭೋಗ ಲೋಭದಲ್ಲಿರುವ ಸ್ವಾಭಿಮಾನವೇ ಇಲ್ಲದ ಇಂತಹ ಶೂದ್ರ ಸಮುದಾಯದ ಆಸೆಬುರುಕರಿಂದ ಸಂತುಷ್ಠ ಸೇವೆಯನ್ನು ನಿರಿಕ್ಷೆಯಂತೆ ಪಡೆಯಲಾಗುತ್ತಿದೆ.

ಮತ್ತೊಂದು ಅಂಶವೆಂದರೆ ಈ ಧಾಳಿಗೆ ಕೋಮುದ್ವೇಷದ ಸೈದ್ಧಾಂತಿಕತೆಯನ್ನು ಹಸಿ ಸುಳ್ಳುಗಳ ಸೃಷ್ಟಿಯ ಮೂಲಕ ಬೆಸೆಯುತ್ತಿದೆ, ಮಲಿನಗೊಳಿಸುತ್ತಿದೆ. ಬ್ರಿಟೀಷ್ ವಸಾಹತುಶಾಹಿ ಭಾರತದಲ್ಲಿ ನೆಲೆಗೊಳ್ಳದಂತೆ ಭಾರೀ ಪ್ರತಿರೋಧ ಒಡ್ಡಿ ಹುತಾತ್ಮನಾದ ಮೈಸೂರಿನ ಹುಲಿ ಟಿಪ್ಪು ಸುಲ್ತಾನರ ದೇಶಪ್ರೇಮವನ್ನು ಧ್ವಂಸಗೊಳಿಸುವುದು, ಹಾಗೂ ಕೆಚ್ಚೆದೆಯಿಂದ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವ ಸ್ಪೂರ್ತಿ ಮುಂದಿನ ಪೀಳಿಗೆಗೆ ವರ್ಗಾವಣೆ ಆಗದಂತೆ ತಡೆಯುವುದು ಅವರ ಉದ್ದೇಶ. ಮೈಸೂರು ಭಾಗ ದಕ್ಷಿಣ ಕರ್ನಾಟಕದ ಮುನ್ನಡೆಗೆ ಅಸ್ತಿಭಾರ ಹಾಕಿದ, ಆಧುನಿಕ ಚಿಂತನೆಗಳು, ತನ್ನ ಜಾತ್ಯಾತೀತ ನಿಲುವು, ಸರ್ವಧರ್ಮ ಸಮಭಾವ ಮೆರೆದು ಜನಮಾನಸದಲ್ಲಿರುವ ಟಿಪ್ಪುವನ್ನು ಹೇಗಾದರೂ ತೊಲಗಿಸಬೇಕೆನ್ನುವುದು ಸಂಘಪರಿವಾರದ ಪ್ರಯತ್ನ. ಹೀಗಾಗಿಯೇ ಮತಾಂಧವಾಗಿರುವ ಸಂಘಪರಿವಾರ  ಸತತವಾಗಿ ಟಿಪ್ಪುವನ್ನು ಹೀಗೆಳೆಯಲು ಅಪಪ್ರಚಾರ ಮಾಡುತ್ತಲೇ ಇರುತ್ತದೆ. ಅಂದು ಬ್ರಿಟೀಷರ ಸೇವೆ ಮಾಡುತ್ತಾ ರಾಷ್ಟ್ರೀಯ ವಿಮೋಚನಾ ಹೋರಾಟಕ್ಕೆ ದ್ರೋಹ ಬಗೆದ ಈ ಶಕ್ತಿಗಳು ಈಗಲೂ  ವಸಾಹತುಶಾಹಿಗಳ ವಿರುದ್ಧ ಹೋರಾಡಿ ತ್ಯಾಗ ಬಲಿದಾನ ಮಾಡಿದ ಕಮ್ಯೂನಿಷ್ಠರನ್ನೂ ಒಳಗೊಂಡು ಎಲ್ಲ ಪ್ರಗತಿಪರ, ದೇಶಪ್ರೇಮಿಗಳ ಮೇಲೂ ಇಲ್ಲಸಲ್ಲದ ಅಪಪ್ರಚಾರ, ಧಾಳಿಗಳನ್ನು ಮಾಡುತ್ತಿವೆ. ಇದು ಅವರ ವರ್ಗ ನೀತಿಗೆ ಅನುಗುಣವಾಗಿಯೇ ಇದೆ. ಟಿಪ್ಪುವನ್ನು ಮತಾಂಧನೆಂದು ಅದೆಷ್ಟೇ ಜರಿದು ವಿಕೃತ ವಿಚಾರಗಳನ್ನು ಹಬ್ಬಿಸಲು ಯತ್ನಿಸಿದರೂ ವಾಸ್ತವದಲ್ಲಿ ಆತನ ಕೊಡುಗೆಗಳನ್ನು ಕಂಡ ಜನತೆ ಮರುಳಾಗದೆ ಉಳಿದಿರುವುದರಿಂದ ಹೊಸ ಹೊಸ ಹಸಿ ಸುಳ್ಳುಗಳನ್ನು ಮತ್ತೆ ಮತ್ತೆ ಸೃಷ್ಟಿಸಲಾಗುತ್ತಿದೆ. ಇಂತಹದರಲ್ಲಿ ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎನ್ನುವ ಒಕ್ಕಲಿಗ ಪಾತ್ರಗಳ ಸೃಷ್ಟಿಯೂ ಕೂಡ ಒಂದು. ಆ ಮೂಲಕ ಒಕ್ಕಲಿಗರು ಟಿಪ್ಪುವನ್ನು ಕೊಂದರು ಎನ್ನುವ ಹಸಿ ಸುಳ್ಳುಗಳನ್ನು ಸೃಷ್ಟಿ ಮಾಡಿ ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಅತ್ಯಂತ ಕುಟಿಲ ಯೋಜನೆಯನ್ನು ಇದರೊಂದಿಗೆ ಹರಿ ಬಿಡಲಾಗಿದೆ. ರಣಾಂಗಣದಲ್ಲಿ ಬ್ರಿಟಿಷರ ಸೈನ್ಯದೆದುರು ಮುಖಾಮುಖಿಯಾಗಿ ಹೋರಾಡುತ್ತಿದ್ದ ಟಿಪ್ಪುವನ್ನು ಯುದ್ಧ ಸಂದರ್ಭದಲ್ಲಿಯೇ ಪೂರ್ಣಯ್ಯ, ಮೀರ್ ಸಾದಿಕ್ ಅಂತಹವರ ದ್ರೋಹ ಮೋಸದಿಂದ ಕೊಂದದ್ದು ಬ್ರಿಟಿಷ್ ಸೈನಿಕರು ಎನ್ನುವ ದಾಖಲೆಗಳು ಇರುವಾಗ ಸಂಘ ಪರಿವಾರ ಇಂಥ ಸುಳ್ಳನ್ನು ಸೃಷ್ಟಿಸಿರುವುದು ಹೇಸಿಗೆ ತರುವ ಸಂಗತಿ. ಮೇಲಾಗಿ ಬ್ರಿಟೀಷರ ಗುಲಾಮಗಿರಿಯ, ದೇಶದ್ರೋಹ ಎಸಗಿದ ಪರಂಪರೆಯೊಂದಿಗೆ ಒಕ್ಕಲಿಗರನ್ನು ಬೆಸೆಯುವ ಬಿಜೆಪಿಯ ಕುಯುಕ್ತಿ ಖಂಡನೀಯ. ಈ ಚುನಾವಣೆ ಟಿಪ್ಪು ಮತ್ತು ಸಾವರ್ಕರ್ ನಡುವಿನ ಚುನಾವಣೆ ಎಂದೆಲ್ಲ ವ್ಯಾಖ್ಯಾನಿಸುವ ಬಿಜೆಪಿ ಟಿಪ್ಪುವಿನ ಸ್ವಾಭಿಮಾನದ ಬದಲು ಸಾವರ್ಕರ್ ರ ಶರಣಾಗತಿಯನ್ನು ಆದರ್ಶೀಕರಿಸುತ್ತಿದೆ. ಅದನ್ನು ಅನುಸರಿಸಬೇಕೆಂದು ಹೇಳುತ್ತಿರುವುದು ಅದರ ನಿಜ ಮುಖವನ್ನು ತೆರೆದಿಟ್ಟಿದೆ. ಇಲ್ಲಿರುವ ಕೃಷಿಕ ರೈತರೇ ಆಗಿರುವ ಒಕ್ಕಲಿಗರು, ಮುಸ್ಲಿಮರ ನಡುವೆ ಶತಶತಮಾನಗಳ ಆರ್ಥಿಕ, ವಾಣಿಜ್ಯದ ಹಾಗೂ ಸಾಮಾಜಿಕ ಬಾಂಧವ್ಯವಿದೆ. ಅದನ್ನು ಮುರಿದು ಮತೀಯ ದ್ವೇಷದ ನೆಲೆಯಲ್ಲಿ ವಿಷ ಉಣಿಸಿ ರಾಜಕೀಯವಾಗಿ ಕ್ರೋಢೀಕರಣ ಮಾಡಿಕೊಳ್ಳಲು ಬಿಜೆಪಿ ನಡೆಸುತ್ತಿರುವ ವಿಷ ಪ್ರಚಾರ ಮತ್ತು ಸಮುದಾಯಕ್ಕೆ ಹಾನಿ ತರುವ ಕೃತ್ಯಗಳನ್ನು ಈ ಭಾಗದ ಜನತೆ ಅರಿಯಬೇಕಿದೆ. ಮತ್ತು ಅದನ್ನು ತಿರಸ್ಕರಿಸಿ ಸೋಲಿಸಬೇಕಿದೆ.

ದೇಶದ ಜನತೆಯ ಒಗ್ಗಟ್ಟು ಕಾಯುವ ಮತ್ತು ಶಾಂತಿಯನ್ನು ಸಂರಕ್ಷಿಸಬೇಕಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರೇ ಬಿಜೆಪಿಗೆ ಹಾಕಿಕೊಟ್ಟ ಚುನಾವಣಾ ಕಾರ್ಯತಂತ್ರದ ನಂತರ ಈ ಪ್ರದೇಶದಲ್ಲಿ ಒಂದಿಲ್ಲ ಒಂದು ನೆಪಗಳಿಂದ ಅಲ್ಪಸಂಖ್ಯಾತರ ಮೇಲೆ ಧಾಳಿಗಳನ್ನು ನಡೆಸಲಾಗುತ್ತಿದೆ ಮತ್ತು ದ್ವೇಷವನ್ನು ಹರಡಲಾಗುತ್ತಿದೆ.

ಈ ಹತ್ಯೆಯ ರಾಜಕಾರಣ ಸಂಘ ಪರಿವಾರಕ್ಕೆ ಹೊಸದಲ್ಲ. ಹಿಂದೆ ಗೌರಿ ಲಂಕೇಶ್, ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸಂಘ ಪರಿವಾರದ ಗುಂಡಾಗಳು ಕೊಲೆ ಮಾಡಿದಾಗ ಅದನ್ನು ಒಂದಲ್ಲ ಒಂದು ಬಗೆಯಲ್ಲಿ ಇವೇ ಶಕ್ತಿಗಳು ಸಮರ್ಥಿಸಿದ್ದವು. ಖಂಡಿಸಿರಲಿಲ್ಲ ಎನ್ನುವುದು ನೆನಪಿಸಿಕೊಳ್ಳಬೇಕು. ಅವರ ಹತ್ಯೆಗೆ ಮೊದಲು ಅವರ ವಿರುದ್ಧ ಭಾರೀ ಅಪಪ್ರಚಾರ ಮತ್ತು ಅವರ ನಿಲುವುಗಳನ್ನು ವಿಕೃತಗೊಳಿಸಿ ಪ್ರಚಾರ ಮಾಡಲಾಗಿತ್ತು ಕೂಡ. ಕೊಲೆಗೆ ಒಂದು ಮನೋ ಭೂಮಿಕೆಯನ್ನು ಸೃಷ್ಟಿಸಿತ್ತು. ಈಗಲೂ ಒಬ್ಬ ಅತ್ಯಂತ ಪ್ರಮುಖ ಪ್ರಭಾವಿ ಸಚಿವರಾಗಿರುವ ಅಶ್ವಥನಾರಾಯಣ ರವರು ಸಿದ್ಧರಾಮಯ್ಯನವರನ್ನು ಹೊಡೆದು ಹಾಕಲು ಪ್ರಚೋದಿಸಿರುವುದು ಯಾರಾದರೂ ಅದರ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಅಲ್ಲದೇ ಸಂಪುಟ ದರ್ಜೆ ಸಚಿವ ಇಂತಹ ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿ ವಿರೋಧ ಪಕ್ಷದ ನಾಯಕನನ್ನೇ ಕೊಲೆ ಮಾಡುವುದಕ್ಕೆ ಪ್ರೇರೇಪಿಸಿದ ಘಟನೆ ನಡೆದಾಗಲೂ ಮುಖ್ಯಮಂತ್ರಿ ಏನೊಂದೂ ಕ್ರಮವನ್ನು ಕೈಗೊಳ್ಳದೆ ಮೌನವಾಗಿರುವುದು ಖಂಡನೀಯ. ಇದಕ್ಕೆ ಮುಖ್ಯಮಂತ್ರಿಗಳು ಕುಮ್ಮಕ್ಕು ಕೊಟ್ಟ ಆರೋಪವನ್ನು ಎದುರಿಸಬೇಕಾಗುತ್ತದೆ ಎನ್ನುವುದು ನೆನಪಿರಬೇಕು. ಈಗಲಾದರೂ ಈ ಸಚಿವನನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ತಳ್ಳ ಬೇಕು, ಶಿಕ್ಷಿಸಬೇಕು. ಹತ್ಯಾ ರಾಜಕಾರಣವನ್ನು ಸಮರ್ಥಿಸಿದ ಆರೋಪಕ್ಕೆ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರೂ ಹೊಣೆ ಹೊರಬೇಕಾಗುತ್ತದೆ ಎಂಬುದು ನೆನಪಿಡಬೇಕು.

Leave a Reply

Your email address will not be published. Required fields are marked *