ರಾಜ್ಯ ಸರಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ

ದಲಿತರ ಮೇಲಿನ ದೌರ್ಜನ್ಯಗಳು, ರೈತರ ಆತ್ಮಹತ್ಯೆಗಳು, ಬರಗಾಲ, ನೀರಾವರಿ ಪ್ರಶ್ನೆ, ಬೀಡಿ ಕಾರ್ಮಿಕರ ಪ್ರಶ್ನೆ ಮುಂತಾದ ಕೆಲವು ತುರ್ತು ಪ್ರಶ್ನೆಗಳನ್ನು ಚರ್ಚಿಸಲು ಸಮಯ ನೀಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಪರವಾಗಿ ಪತ್ರ ಬರೆದು ಸುಮಾರು ಒಂದು ತಿಂಗಳು ಕಳೆದರೂ ಇದುವರೆಗೂ ಮುಖ್ಯಮಂತ್ರಿ ಸ್ಪಂದಿಸದಿರುವುದನ್ನು ಖಂಡಿಸಿ ಇಂದು ಗುರುವಾರ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು. ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದವರನ್ನು ಬಂಧಿಸಲಾಗಿದೆ.

ಮಹದಾಯಿ ನದಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಎಲ್ಲ ರಾಜಕೀಯ ಪಕ್ಷಗಳನ್ನು ಮತ್ತು ಹೋರಾಟ ನಿರತ ಸಂಘಟನೆಗಳನ್ನು ಒಟ್ಟಾಗಿಸಿ ಪ್ರಧಾನ ಮಂತ್ರಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಬೇಕು.

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ನಿರಂತರ ಬರಪೀಡಿತ ಬಯಲು ಸೀಮೆಯ ರೈತರ ಭೂಮಿಗೆ ನೀರಾವರಿ ಮತ್ತು ಕುಡಿಯುವ ನೀರು ಒದಗಿಸಲು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಮಾಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ದಕ್ಷಿಣ ಕನ್ನಡ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ರೂಪಿಸಿ ಜಾರಿಮಾಡಬೇಕು.

ಸಣ್ಣ ಮತ್ತು ಮಧ್ಯಮ ರೈತರ ಎಲ್ಲ ಸಾಂಸ್ಥಿಕ ಹಾಗೂ ಖಾಸಗಿ ಸಾಲವನ್ನು ಇದೊಂದು ಬಾರಿ ಸರ್ಕಾರವೇ ವಹಿಸಿಕೊಂಡು ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು. ಅನಾವೃಷ್ಠಿ ಮತ್ತು ಇತ್ತೀಚಿನ ಅತಿವೃಷ್ಠಿಯಿಂದ ಬೆಳೆಹಾನಿ ಅನುಭವಿಸಿದ ಎಲ್ಲ ರೈತರಿಗೆ ಎಕರೆಗೆ ರೂ. 10 ಸಾವಿರದಂತೆ ಪರಿಹಾರ ನೀಡಬೇಕು.

ಭೀಕರ ಬರದ ಹಿನ್ನೆಲೆಯಲ್ಲಿ ಗ್ರಾಮೀಣ ಕೆಲಸಗಾರರಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಬದಲು 200 ದಿನಗಳ ಕೆಲಸವನ್ನು ಒದಗಿಸಿ ಯೋಜನೆಯನ್ನು ಭ್ರಷ್ಟಾಚಾರ ಮುಕ್ತವಾಗಿ ಜಾರಿಗೊಳಿಸಲು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು. ಬೆಲೆ ಏರಿಕೆ, ಬರಗಾಲದ ಹಿನ್ನಲೆಯಲ್ಲಿ ವ್ಯಕ್ತಿಗೆ ತಿಂಗಳಿಗೆ ಉಚಿತವಾಗಿ 5ಕೆ.ಜಿ ಅಕ್ಕಿ ನೀಡುವ ಪದ್ಧತಿಯನ್ನು ಕೈಬಿಟ್ಟು ಬಿಪಿಎಲ್ ಕಾರ್ಡುದಾರ ಕುಟುಂಬಕ್ಕೆ ಮೊದಲಿನಂತೆ ಕೆ.ಜಿ.ಗೆ 1ರೂ. ದರದಲ್ಲಿ 30 ಕೆ.ಜಿ ಅಕ್ಕಿ ಕೊಡುವ ಯೋಜನೆಯನ್ನು ಪುನರಾಂಭಿಸಬೇಕು.

ಸರ್ಕಾರಿ/ಅರಣ್ಯ ಭೂಮಿಯಲ್ಲಿ ಬೇಸಾಯ ಮಾಡಿ ಜೀವನ ಸಾಗಿಸಲು ಪ್ರಯತ್ನಿಸುತ್ತಿರುವ ಬಡವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ ಅಂತಹ ಪ್ರಕರಣಗಳನ್ನು ಸಕ್ರಮಗೊಳಿಸಬೇಕು. ಸ್ವಂತ ಮನೆ/ನಿವೇಶನ ಇಲ್ಲದ ಬಡವರು ಮನೆ ನಿವೇಶನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸಿ ಅವರಿಗೆ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ನಿವೇಶನಗಳಿಗಾಗಿ ಖಾಸಗಿ ಭೂಮಿಯನ್ನು ಖರೀದಿಸಲು 2013ರ ಕಾಯ್ದೆಗೆ ಅನುಗುಣವಾಗಿ 4 ಪಟ್ಟು ಹಣ ನೀಡಲು ಮುಂದಾಗಬೇಕು.

ಕೊಪ್ಪಳ ಜಿಲ್ಲೆ ಮರಕುಂಬಿಯ ದಲಿತ ದೊಡ್ಡ ವಿರೇಶನ ಹತ್ಯೆ ಕುರಿತಾದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಿ ಅಪರಾಧಿಯನ್ನು ತ್ವರಿತವಾಗಿ ಪತ್ತೆಹಚ್ಚಬೇಕು. ದೊಡ್ಡ ವಿರೇಶನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ, ಅವರ ಮಕ್ಕಳಲ್ಲಿ ಒಬ್ಬನಿಗೆ ಸರ್ಕಾರಿ ನೌಕರಿ ನೀಡಬೇಕು. ಮರಕುಂಬಿ ಗ್ರಾಮದ ದಲಿತ ಕುಟುಂಬಗಳಿಗೆ ಮನೆ ನಿವೇಶನಗಳನ್ನು ವಿತರಿಸಲು ಅಗತ್ಯ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು.

ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ಕೂಲಿಕಾರರ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಿ ಅಪರಾಧಿಗಳನ್ನು ಕೂಡಲೇ ಪತ್ತೆಹಚ್ಚಬೇಕು. ಸಮುದಾಯ ಭವನ ಪ್ರವೇಶಕ್ಕೆ ಅಡ್ಡಿಪಡಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬೀಡಿ ಕಾರ್ಮಿಕರಿಗೆ ಕೊಡಬೇಕಾದ ತುಟ್ಟಿಭತ್ಯೆಯನ್ನು ತಡೆಹಿಡಿದಿರುವ ಅನ್ಯಾಯದ ಕ್ರಮವನ್ನು ಕೂಡಲೇ ಕೈಬಿಟ್ಟು ಏಪ್ರಿಲ್ 2015ರಿಂದ ಬಾಕಿ ಇರುವ ತುಟ್ಟಿಭತ್ಯೆಯನ್ನು ಸಂದಾಯ ಮಾಡುವಂತೆ ಬೀಡಿ ಮಾಲೀಕರಿಗೆ ಆದೇಶ ನೀಡಬೇಕು. ಬೀಡಿ ಕಾರ್ಮಿಕರ ಕನಿಷ್ಠ ವೇತನವನ್ನು ಕಡಿತ ಮಾಡುವ ದುರಾಲೋಚನೆಯನ್ನು ಕೈಬಿಡಬೇಕು.

‘ಎಸ್ಮಾ’ ಕರಾಳ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ರಸ್ತೆ ಸಾರಿಗೆ ನೌಕರರಿಗೆ ‘ಎಸ್ಮಾ’ ಅನ್ವಯ ಮಾಡಿರುವ ಕ್ರಮವನ್ನು ಕೈಬಿಡಬೇಕು. ರಸ್ತೆ ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಒಪ್ಪಂದ ಮಾಡಿಕೊಳ್ಳಬೇಕು. ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶಕ್ಕೆ ಚ್ಯುತಿ ತರುವ ತಿದ್ದುಪಡಿಯನ್ನು ಕೈಬಿಡಬೇಕು. ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ರಾಮಚಂದ್ರಾಪುರ ಮಠದ ರಾಘವೇಶ್ವರರನ್ನು, ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ ಕೂಡಲೇ ಬಂಧಿಸಿ ಆತ ಮತ್ತು ಆತನ ಬೆಂಬಲಿಗರು ಸಾಕ್ಷಿ ನಾಶಮಾಡುವುದನ್ನು ತಡೆಗಟ್ಟಬೇಕು.

ಇತ್ತೀಚೆಗೆ ಬೆಳಗಾವಿ ಮತ್ತು ಮುಧೋಳ್ ನಗರಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ ಸಂತೃಸ್ತರಾದವರಿಗೆ ಗರಿಷ್ಠ ಪರಿಹಾರ ನೀಡಬೇಕು. ಗಲಭೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ಜರುಗಿಸಬೇಕು. ಡಾ. ಎಂ.ಎಂ. ಕಲ್ಬುರ್ಗಿ ಹಂತಕರನ್ನು ಪತ್ತೆ ಹಚ್ಚುವ ಕೆಲಸವನ್ನು ಚುರುಕುಗೊಳಿಸಬೇಕು. ಮೌಢ್ಯ ಪ್ರತಿಬಂಧಕಾ ಮಸೂದೆಯನ್ನು ಕೂಡಲೇ ಅಂಗೀಕರಿಸಬೇಕು. ಮೇಲಿನ ಪ್ರಶ್ನೆಗಳನ್ನು ಚರ್ಚಿಸಲು ಮುಖ್ಯ ಮಂತ್ರಿಗಳು ಕೂಡಲೇ ಸಿಪಿಐ(ಎಂ) ನಿಯೋಗವನ್ನು ಆಮಂತ್ರಿಸಬೇಕು.

ರಾಜ್ಯದಲ್ಲಿ ಕುಡಿಯುವ ಹಾಗೂ ನೀರಾವರಿ ನೀರಿನ ಪ್ರಶ್ನೆ ಬಗೆಹರಿಯುತ್ತಿಲ್ಲ. ದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಮುಂದುವರೆದಿವೆ. 136 ತಾಲೂಕುಗಳಲ್ಲಿ ಬರಗಾಲ ಬೀಕರವಾದರೂ ಪರಿಹಾರಗಳು ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬಗರಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಅವರ ಬದುಕುವ ಹಕ್ಕಿನ ಮೇಲೆ ಧಾಳಿಗಳು ನಡೆಯುತ್ತಿವೆ. ಶ್ರಮಜೀವಿ ಕಾರ್ಮಿಕರ ಬೇಡಿಕೆಗಳು ನೆನಗುದಿಗೆ ಬಿದ್ದಿವೆ. ವಸತಿಹೀನರು ತಲೆಗೊಂದು ಸೂರಿನ ಆಶ್ರಯಕ್ಕಾಗಿ ಕಾಯುತ್ತಿದ್ದಾರೆ. ಡಾ.. ಕಲಬುರ್ಗಿ ಹಂತಕರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಹಾಗೂ ಅತ್ಯಾಚಾರಿ ರಾಘವೇಶ್ವರರನ್ನು ಬಂದಿಸಲು ಸರಕಾರ ಮೀನಾವೇಶ ಏಣಿಸುತ್ತಿರುವ ರಾಜ್ಯ ಸರಕಾರದ ಬೆಜವಾಬ್ದಾರಿ ಆಡಳಿತದ ವಿರುದ್ದ ಸಿಪಿಐಎಂ ನಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರೈತ ಕಾರ್ಮಿಕರ ಜನರ ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ನಿಗದಿಮಾಡಬೇಕೆಂದು ಆಗ್ರಹಿಸಲಾಯಿತು.

Leave a Reply

Your email address will not be published. Required fields are marked *