ದೇಶ ಮಾರಾಟದ ಈ ಪರಿಯ ತಡೆಯೋಣ

KaratA copy
ಪ್ರಕಾಶ್ ಕಾರಟ್

ಮಾರ್ಚ್ 15-16 ರಂದು ಬ್ಯಾಂಕ್‌ಗಳ, 17 ರಂದು ಸಾಮಾನ್ಯ ವಿಮಾ ವಲಯದ ಮತ್ತು 18 ರಂದು ಎಲ್‌ಐಸಿ ನೌಕರರು ಮತ್ತು ಅಧಿಕಾರಿಗಳು ಖಾಸಗೀಕರಣದ ವಿರುದ್ದ ಮುಷ್ಕರ ನಡೆಸಿದ್ದಾರೆ. ಇದುವರೆಗೆ ಸಮಾಜ ಮತ್ತು ಸರ್ಕಾರದ ನಿಯಂತ್ರಣದಲ್ಲಿದ್ದ ಜನರ ಉಳಿತಾಯ ಹಾಗೂ ಸಾರ್ವಜನಿಕ ಸಂಪನ್ಮೂಲಗಳನ್ನು ಹಿಡಿಯಷ್ಟು ಹಣಕಾಸು-ಕಾರ್ಪೊರೇಟ್‌ಗಳ ಕೂಟದ ಕೈಗೆ ಮೋದಿ ಸರಕಾರ ಒಪ್ಪಿಸಹೊರಟಿರುವುದನ್ನು ಪ್ರತಿಭಟಿಸಿ ಅವರು ಈ ಹೋರಾಟ ನಡೆಸುತ್ತಿದ್ದಾರೆ. ಮಾರ್ಚ್ 15ರಂದು ರೈತರು ಮತ್ತು ಇತರ ಕಾರ್ಮಿಕರೂ ಖಾಸಗೀಕರಣ-ವಿರೋಧಿ ದಿನಾಚರಣೆ ನಡೆಸಿದ್ದಾರೆ. ಖಾಸಗೀಕರಣದ ವಿರುದ್ಧದ ಈ ಸಂಘರ್ಷವು ಜನತೆಯ ಪ್ರಶ್ನೆಯಾಗಿ ಮೇಲೆದ್ದು ಬರಬೇಕು.

ಪ್ರಕಾಶ್ ಕಾರಟ್

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಸುಮಾರು ಹತ್ತು ಲಕ್ಷ ಬ್ಯಾಂಕ್ ನೌಕರರು ಮತ್ತು   ಅಧಿಕಾರಿಗಳು ಮಾರ್ಚ್ 15 ಮತ್ತು 16 ರಂದು ದೇಶವ್ಯಾಪಿ ಮುಷ್ಕರ ನಡೆಸಿದರು. ಮಾರ್ಚ್ 17 ರಂದು ಸಾಮಾನ್ಯ ವಿಮಾ ನೌಕರರು, 18 ರಂದು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದರು. ಹೀಗೆ ಸತತ ನಾಲ್ಕು ದಿನ ಹಣಕಾಸು ವಲಯದ ಉದ್ಯೋಗಿಗಳು ಮತ್ತು ಅಧಿಕಾರಿಗಳು ಹೋರಾಟದ ಕಣಕ್ಕೆ ಇಳಿದಿದ್ದಾರೆ.

ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣದ ಘೋಷಣೆ ಮಾಡಲಾಗಿದ್ದು ಅದಕ್ಕೆ ಪ್ರತಿಕ್ರಿಯೆಯಾಗಿ ಈ ಸಂಪುಗಳು ನಡೆದಿವೆ. ಈ ಹಣಕಾಸು ವರ್ಷದೊಳಗೆ ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಿಸಲಾಗುವುದೆಂದು ಹಣಕಾಸು ಸಚಿವೆ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಇದೇ ಮೊದಲ ಬಾರಿಗೆ ಖಾಸಗೀಕರಣ ಪದವನ್ನು ಬಳಸಲಾಗಿದೆ. ನಾಲ್ಕು ಸಾಮಾನ್ಯ ವಿಮಾ ಕಂಪನಿಗಳಲ್ಲಿ (ಜನರಲ್ ಇನ್ಶೂರೆನ್ಸ್) ಒಂದನ್ನು ಮಾರಲಾಗುತ್ತದೆಂದೂ ಅವರು ಹೇಳಿದ್ದರು. ಎಲ್‌ಐಸಿಯಲ್ಲಿ ಸರ್ಕಾರ ಹೊಂದಿರುವ ಷೇರುಗಳನ್ನು ಮಾರಲು ಷೇರುಗಳ ಐಪಿಒ ಉದ್ದೇಶವನ್ನೂ ಸಚಿವೆ ಹೊರಹಾಕಿದ್ದರು. ಇದರೊಂದಿಗೆ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣವನ್ನು ಶೇಕಡ 74ಕ್ಕೆ ಏರಿಸಲಾಗುತ್ತದೆ. ಈ ಸಂಬಂಧದ ಕಾನೂನನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈ ಎಲ್ಲ ಕ್ರಮಗಳೊಂದಿಗೆ, ಹಣಕಾಸು ಕ್ಷೇತ್ರದ ಉದಾರೀಕರಣ ಪ್ರಕ್ರಿಯೆ ಒಂದು ತಿರುವು ಬಿಂದನ್ನು ತಲುಪಿದೆ. 1991ರಲ್ಲಿ ಉದಾರೀಕರಣದ ಅಲೆ ಆರಂಭವಾದಾಗಿನಿಂದ ಹಣಕಾಸು ವಲಯವೇ ಅದರ ಒಂದು ದೊಡ್ಡ ಗುರಿಯಾಗಿತ್ತು. ನವ-ಉದಾರವಾದಿ ಅಡಳಿತಗಾರರಿಗಂತೂ ಬ್ಯಾಂಕ್‌ಗಳು ಸಾರ್ವಜನಿಕ ಒಡೆತನ ಹೊಂದಿರುವುದು ಬೇಕಾಗಿಯೇ ಇಲ್ಲ.

ಭಾರತದಲ್ಲಿ 1961ರಲ್ಲಿ 14 ಪ್ರಮುಖ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಗಿತ್ತು. ಇದು ಬ್ಯಾಂಕಿಂಗ್ ಜಾಲದ ವಿಸ್ತರಣೆಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹರಡಲು ಹಾದಿ ಮಾಡಿಕೊಟ್ಟಿತ್ತು.

ಅಭಿವೃದ್ಧಿ ಪಥದ ಒಟ್ಟಾರೆ ಬಂಡವಾಳಶಾಹಿ ಪ್ರವೃತ್ತಿಯನ್ನು ಪರಿಗಣಿಸಿದಾಗ ಬ್ಯಾಂಕ್ ರಾಷ್ಟ್ರೀಕರಣವು ನಿಜವಾಗಿಯೂ ಸಾಲ ಲಭ್ಯತೆಯ ಪ್ರಜಾಪ್ರಭುತ್ವೀಕರಣ ಎಂದೇನೂ ಆಗಿರಲಿಲ್ಲ. ಆದರೂ ಕೃಷಿ ಕ್ಷೇತ್ರ ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಾಲ ಲಭ್ಯವಾಗುವ ಮೂಲಕ ಅದು ಬಂಡವಾಳಶಾಹಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿತು.

ಹಣಕಾಸು ವ್ಯವಸ್ಥೆಯನ್ನು ರಕ್ಷಿಸಿದ ಚಳವಳಿ

1991ರಿಂದಲೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸರ್ಕಾರಗಳು ಬ್ಯಾಂಕ್‌ಗಳನ್ನು ಖಾಸಗಿಗೆ ಮುಕ್ತಗೊಳಿಸಬೇಕೆಂಬ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಒತ್ತಡಕ್ಕೆ ಒಳಗಾಗುತ್ತಲೇ ಬಂದಿವೆ. ಸರ್ಕಾರಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳನ್ನು ಹಿಂಪಡೆಯಲು ಖಾಸಗಿ ಬ್ಯಾಂಕ್‌ಗಳ ಆರಂಭಕ್ಕೆ ಮತ್ತು ವಿದೇಶಿ ಬ್ಯಾಂಕ್‌ಗಳ ಕಾರ್ಯಾಚರಣೆಗೆ ಅವಕಾಶ ನೀಡಲು ಆರಂಭಿಸಿದ್ದವು. ಯುಪಿಎ-1 ಮತ್ತು ಯುಪಿಎ-2 ಅಧಿಕಾರಾವಧಿಯಲ್ಲಿ ಸರ್ಕಾರದ ಈ ನಿಟ್ಟಿನ ಪ್ರತಿಯೊಂದು ಕ್ರಮವನ್ನೂ ಬ್ಯಾಂಕಿಂಗ್ ಯೂನಿಯನ್‌ಗಳು, ದುಡಿಯುವ ವರ್ಗದ ಚಳವಳಿ ಮತ್ತು ಎಡಪಕ್ಷಗಳು ಪ್ರಬಲವಾಗಿ ಪ್ರತಿರೋಧಿಸಿದ್ದವು.

ಈ ಪ್ರತಿರೋಧದಿಂದಾಗಿ ಹಣಕಾಸು ಕ್ಷೇತ್ರವನ್ನು ವಿದೇಶಿ ಬಂಡವಾಳಕ್ಕೆ ಮುಕ್ತಗೊಳಿಸಲು ಸಾಧ್ಯವಾಗಿರಲಿಲ್ಲ. ಇಂಥ ಪ್ರಬಲ ಪ್ರತಿರೋಧವು, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆ  ಭಾರತೀಯ ಹಣಕಾಸು ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಯುಪಿಎ-2 ಅವಧಿಯಲ್ಲಿ ವಿಮಾ ಕ್ಷೇತ್ರವನ್ನು ಖಾಸಗಿಗೆ ಮುಕ್ತಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ವಿಮಾ ವಲಯದಲ್ಲಿ ಶೇಕಡ 26 ಎಫ್‌ಡಿಐ ಹೂಡಿಕೆಗೆ ಅನುಮತಿ ನೀಡಲು ಸರ್ಕಾರ ಮುಂದಾಗಿತ್ತು. ಆದರೆ, ಎಡಪಕ್ಷಗಳ ವಿರೋಧದಿಂದಾಗಿ ಅದು ಅನುಷ್ಠಾನಕ್ಕೆ ಬರಲಿಲ್ಲ. 1999ರಲ್ಲಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿಮಾ ಕ್ಷೇತ್ರದಲ್ಲಿ ಶೇ.26 ಎಫ್‌ಡಿಐಗೆ ಅನುಮತಿ ನೀಡಲಾಯಿತು. 2015ರಲ್ಲಿ ಮೋದಿ ಸರ್ಕಾರ ಅದನ್ನು ಶೇ. 49ಕ್ಕೆ ಏರಿಸಿತು.

against privatisationಎನ್‌ಪಿಎ ಏರಿಕೆ: ಸರ್ಕಾರಿ ವಲಯದ ಬ್ಯಾಂಕ್‌ಗಳ ಉಸ್ತಿಯಾದ ಆಸ್ತಿಗಳು(ಎನ್.ಪಿ.ಎ-ಮರಳಿ ಬಾರದ ಸಾಲಗಳು) ಒಂದೇ ಸಮನೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಎನ್‌ಪಿಎ ಮೊತ್ತ 2021ರಲ್ಲಿ ಬ್ಯಾಂಕ್‌ಗಳ ಒಟ್ಟು ಆಸ್ತಿಯ ಶೇಕಡ 13.5 ಆಗುವ ನಿರೀಕ್ಷೆಯಿದೆ. ಯುಪಿಎ ಸರ್ಕಾರದ ಕಾಲದಿಂದಲೂ ಅನುಸರಿಸಿಕೊಂಡು ಬಂದ ನೀತಿಗಳ ಫಲವಾಗಿ ಎನ್‌ಪಿಎ ಹೊರೆ ಹೆಚ್ಚಾಗಿದೆ. ಮೋದಿ ಸರ್ಕಾರದ ಕಾಲದಲ್ಲಿ ಅದು ಇನ್ನಷ್ಟು ಉಲ್ಬಣಿಸಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯ ನೆಪದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಪೊರೇಟ್ ಕಂಪೆನಿಗಳಿಗೆ ದೊಡ್ಡ ಪ್ರಮಾಣದ ಸಾಲವನ್ನು ನೀಡುವಂತೆ ಮಾಡಲಾಯಿತು. ಅದರಲ್ಲಿ ಬಹಳಷ್ಟು ಸಾಲಗಳು ಮರಳಿ ಬಾರದ ಸಾಲಗಳಾಗುತ್ತಿವೆ (ಬ್ಯಾಡ್ ಡೆಟ್). ಅಂಥ ಶೇಕಡ 75ಕ್ಕೂ ಅಧಿಕ ಸಾಲ ಕಾರ್ಪೊರೇಟ್‌ಗಳಿಗೆ ನೀಡಿದ್ದಾಗಿದೆ.

ಲೂಟಿ ಮಾಡಿದವರ ಕೈಗೇ ನಿಯಂತ್ರಣ

ಮೋದಿ ಸರ್ಕಾರ 2014ರಿಂದ ಇದುವರೆಗೆ ಇಂಥ 6.6 ಲಕ್ಷ ಕೋಟಿ ರೂಪಾಯಿ ಸಾಲವನ್ನು ವಜಾ ಮಾಡಿದೆ. ಇದೀಗ ಬ್ಯಾಂಕ್‌ಗಳನ್ನು ಖಾಸಗೀಕರಿಸಿದರೆ ಸರ್ಕಾರಿ ಬ್ಯಾಂಕ್‌ಗಳನ್ನು ಲೂಟಿ ಮಾಡಿದವರೇ ಅವುಗಳ ನಿಯಂತ್ರಣ ಸಾಧಿಸಲು ನೆರವಾಗುತ್ತದೆ.

ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರವನ್ನು ಖಾಸಗೀಕರಿಸಲು ಮೋದಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ದೇಶದ ಆರ್ಥಿಕತೆಯ ವಿವಿಧ ವಲಯಗಳ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಭಾಗವಾಗಿ ಇದನ್ನು ನೋಡಬೇಕು. ನರೇಂದ್ರ ಮೋದಿ ಸರ್ಕಾರದ ಖಾಸಗೀಕರಣದ ಧಾವಂತವು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅಮೆರಿಕದ ಷರತ್ತುಗಳಿಗೆ ನಾಚಿಕೆಗೇಡಿನ ಶರಣಾಗತಿಯಾಗಿದೆ. ಬ್ಯಾಂಕ್‌ಗಳನ್ನು ಖಾಸಗೀಕರಿಸುವಂತೆ, ಹಣಕಾಸು ಕ್ಷೇತ್ರವನ್ನು ಖಾಸಗಿಗೆ ಮುಕ್ತಗೊಳಿಸುವಂತೆ ಮತ್ತು ಸಾರ್ವಜನಿಕ ಕ್ಷೇತ್ರವನ್ನೇ ಇಡಿಯಾಗಿ ಕಳಚಿ ಹಾಕುವಂತೆ ಅವು ಸತತವಾಗಿ ಒತ್ತಾಯಿಸುತ್ತಿವೆ.

ಇದುವರೆಗೆ ಸಮಾಜ ಮತ್ತು ಸರ್ಕಾರದ ನಿಯಂತ್ರಣದಲ್ಲಿದ್ದ ಜನರ ಉಳಿತಾಯ ಹಾಗೂ ಸಾರ್ವಜನಿಕ ಸಂಪನ್ಮೂಲಗಳನ್ನು ಹಿಡಿಯಷ್ಟು ಹಣಕಾಸು-ಕಾರ್ಪೊರೇಟ್‌ಗಳ ಕೂಟದ ಕೈಗೆ ಮೋದಿ ಸರಕಾರ ಒಪ್ಪಿಸುತ್ತಿದೆ. ಕಾರ್ಪೊರೇಟ್‌ಗಳು ಬ್ಯಾಂಕ್‌ಗಳನ್ನು ಆರಂಭಿಸಲು ಅನುಮತಿ ನೀಡಬಹುದೆಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಸಮಿತಿಯೊಂದು ಕೆಲವು ತಿಂಗಳ ಹಿಂದೆ ಶಿಫಾರಸು ಮಾಡಿತ್ತು.

ನೌಕರರ ಮುಂದೆ ಈಗ ಅತಿ ದೊಡ್ಡ ಸವಾಲು

ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣದ ವಿರುದ್ಧ ಬ್ಯಾಂಕ್ ಮತ್ತು ವಿಮಾ ಕ್ಷೇತ್ರದ ನೌಕರರು ಕಳೆದ ಮೂರು ದಶಕಗಳಿಂದ ಧೀರೋದಾತ್ತ ಹೋರಾಟ ನಡೆಸುತ್ತಿದ್ದಾರೆ. ಈ ಪ್ರತಿರೋಧದಿಂದಾಗಿ ಉದಾರೀಕರಣದ ವೇಗ ತಗ್ಗಿತ್ತು. ಆದರೆ ಈಗ ಖಾಸಗೀಕರಣದ ಹೊಸ ಉಪಕ್ರಮಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ ರಾಜಕೀಯ ಪ್ರಾಬಲ್ಯ ಹೊಂದಿರುವ ಸರ್ಕಾರ ಇರುವುದೇ ಈ ನೌಕರ ವರ್ಗ ಎದುರಿಸಬೇಕಾದ ಅತಿ ದೊಡ್ಡ ಸವಾಲಾಗಿದೆ.

ಆದ್ದರಿಂದ, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ ನೌಕರರು ತಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಹಾಗೂ ಅದನ್ನು ಸಾರ್ವಜನಿಕ ವಲಯದ ಇತರ ಸಂಸ್ಥೆಗಳ ಖಾಸಗೀಕರಣದ ವಿರುದ್ಧ ನಡೆಯುವ ವ್ಯಾಪಕ ಹೋರಾಟದ ಭಾಗವಾಗಿ ಜೋಡಿಸಬೇಕು.

ಖಾಸಗೀಕರಣ-ವಿರೋಧಿ ದಿನ

ಖಾಸಗೀಕರಣ ಹುನ್ನಾರ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಕೇಂದ್ರೀಯ ಟ್ರೇಡ್ ಯೂನಿಯನ್‌ಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ಮಾರ್ಚ್ 15ರಂದು  ರೈಲ್ವೆ ಸ್ಟೇಷನ್‌ಗಳ ಹೊರಗೆ ಪ್ರದರ್ಶನಗಳು ನಡೆದಿವೆ. ಖಾಸಗೀಕರಣದ ವಿರುದ್ಧದ ಸಂಘರ್ಷವು ಜನತೆಯ ಪ್ರಶ್ನೆಯಾಗಿ ಮೇಲೆದ್ದು ಬರಬೇಕು. ಹಾಗೂ ಎಲ್ಲ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಪ್ರತಿಪಕ್ಷಗಳು ಅದನ್ನು ರಾಜಕೀಯವಾಗಿ ಕೈಗೆತ್ತಿಕೊಳ್ಳಬೇಕು.

ಲಕ್ಷಾಂತರ ಬ್ಯಾಂಕ್ ಮತ್ತು ವಿಮಾ ನೌಕರರು ಹೋರಾಟವನ್ನು ಮುಂದುವರಿಸುವ ಜೊತೆಜೊತೆಯಲ್ಲೇ, ವಿಶ್ವಾಸದ್ರೋಹಕ್ಕಾಗಿ ಬಿಜೆಪಿಯು ರಾಜಕೀಯ ಬೆಲೆ ತೆರುವಂತೆ ಮಾಡುವುದನ್ನು ಖಾತರಿಪಡಿಸಬೇಕು. ಅವರು ಮತ್ತು ಕುಟುಂಬ ಸದಸ್ಯರು -ಅವರಲ್ಲಿ  ಹಲವರು 2019ರ ಲೋಕಸಭೆ ಚುನಾವಣೆಗಳಲ್ಲಿ ಮೋದಿಯವರ ರಾಷ್ಟ್ರವಾದಿ ಅಬ್ಬರಗಳಿಗೆ ಮಾರು ಹೋಗಿ ಬಿಜೆಪಿ ಪರವಾಗಿ ಮತ ನೀಡಿದ್ದಿರಬಹುದು- ಇತರರೂ ಬೀದಿಗೆ ಬರುವಂತೆ ಅಣಿನೆರೆಯಿಸಬೇಕು ಹಾಗೂ ಮುಂಬರುವ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಮತ ಹಾಕುವಂತೆ ಮಾಡಬೇಕು.

ಹಿಂದುತ್ವ-ರಾಷ್ಟ್ರೀಯವಾದಿ ಪ್ರಚಾರ ಅಬ್ಬರದ ಹುಸಿತನವನ್ನು ಬಯಲು ಮಾಡಲು ಪರಿಣಾಮಕಾರಿ ರಾಜಕೀಯ ಪ್ರಚಾರವನ್ನು ನಡೆಸುವುದು ಅಗತ್ಯ. ದೇಶದ ಅಮೂಲ್ಯ ರಾಷ್ಟ್ರೀಯ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಮಾರಾಟ ಮಾಡುವುದರಿಂದ ರಾಷ್ಟ್ರೀಯ ಸಾರ್ವಭೌಮತೆ ಅಪಾಯಕ್ಕೆ ಸಿಲುಕುತ್ತದೆ. ಸ್ವಾತಂತ್ರ್ಯವನ್ನು ಮೊಟಕುಗೊಂಡಂತಾಗುತ್ತದೆ. ಅಲ್ಲದೆ ಜನರನ್ನು ಇನ್ನಷ್ಟು ಆರ್ಥಿಕ ಶೋಷಣೆಗೆ ತಳ್ಳಿದಂತಾಗುತ್ತದೆ.

ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುತ್ತಲೇ ದೇಶವನ್ನು ದೊಡ್ಡ ಕಾರ್ಪೊರೇಟ್‌ಗಳು ಮತ್ತು ಅವರ ವಿದೇಶಿ ಹಣಕಾಸು ಶಾಮೀಲುಕೋರರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಅವುಗಳಿಗೆ ದಾಸರಾಗುವಂತೆ ಮಾಡುವ ಸರ್ಕಾರವೊಂದು ಭಾರತದಲ್ಲಿದೆ. ಇದಲ್ಲವೇ ಮಹಾ ದುರಂತ?.

ಅನು: ವಿಶ್ವ

Leave a Reply

Your email address will not be published. Required fields are marked *