ಚುನಾವಣಾ ಆಯುಕ್ತರುಗಳ ನೇಮಕದ ಬಗ್ಗೆ ಸುಪ್ರೀಂ ಕೋರ್ಟಿನ ಸ್ವಾಗತಾರ್ಹ ತೀರ್ಪು

ಭಾರತದ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕರು (ಅಥವಾ ಅತಿ ದೊಡ್ಡ ವಿರೋಧ ಪಕ್ಷದ ನಾಯಕರು) ಮತ್ತು ಭಾರತದ ಮುಖ್ಯ ನ್ಯಾಯಾಧೀಶರು ಇವರುಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ಬಹು ಪರಿಣಾಮ ಬೀರಲಿರುವ ತೀರ್ಪಿನಲ್ಲಿ ಆದೇಶಿಸಿದೆ. ಈ ಸಂಬಂಧ ಸಂಸತ್ತು ಕಾನೂನು ರೂಪಿಸುವವರೆಗೆ ಈ ಪದ್ಧತಿ ಜಾರಿಯಲ್ಲಿರುತ್ತದೆ ಎಂದು ಅದು ಹೇಳಿದೆ.

ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗ ಮಾತ್ರವೇ ಹೊಂದಿದೆ. ಇದು ಅದರ ಸ್ವತಂತ್ರ ಅಧಿಕಾರವನ್ನು ಮತ್ತು ಕಾರ್ಯನಿರ್ವಹಣೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಒಂದು ಮುಂದಣ ಹೆಜ್ಜೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಚುನಾವಣಾ ಆಯೋಗವು ಕಾರ್ಯಾಂಗದ ಎಲ್ಲಾ ಸ್ವರೂಪಗಳ ಅಧೀನತೆಯಿಂದ ದೂರವಿರಬೇಕು ಎಂದು ಕೂಡ ಸಂವಿಧಾನ ಪೀಠ ಹೇಳಿದೆ.

ಚುನಾವಣಾ ಆಯೋಗದ ನೇಮಕಾತಿಯು ಸಿಬಿಐ ನಿರ್ದೇಶಕ, ಲೋಕಪಾಲ್ ಇತ್ಯಾದಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಸತ್ತು ರೂಪಿಸಿರುವ ಶಾಸನಗಳಂತೆಯೇ ಪಾರದರ್ಶಕ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಇರಬೇಕು ಎಂದು ಸಿಪಿಐ(ಎಂ) ಪ್ರತಿಪಾದಿಸುತ್ತ ಬಂದಿದೆ ಎಂಬುದನ್ನು ಈ ಸಂದರ್ಭದಲ್ಲಿ ಪೊಲಿಟ್‌ ಬ್ಯುರೊ ನೆನಪಿಸಿದೆ.

Leave a Reply

Your email address will not be published. Required fields are marked *