ಬೇಡಿಕೆ ಪ್ರೇರಿತವಾಗಿ ರೈಲು ದರಗಳು ಒಂದೂವರೆ ಪಟ್ಟು

ಫ್ಲೆಕ್ಸಿ ವ್ಯವಸ್ಥೆಯ ಮುಖವಾಡ ಕಳಚಿ-ಸಿಪಿಐ(ಎಂ) ಆಗ್ರಹ

ರೈಲ್ವೆ ಇಲಾಖೆ ಸೆಪ್ಟಂಬರ್ 9ರಿಂದ ದುರೊಂತೊ, ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಿಗೆ ‘ಫ್ಲೆಕ್ಸಿ’ ದರಗಳನ್ನು ವಿಧಿಸುವುದಾಗಿ ಪ್ರಕಟಿಸಿದೆ. ಅಂದರೆ ಬೇಡಿಕೆಗೆ ಅನುಗುಣವಾಗಿ ದರಗಳಲ್ಲಿ ಏರಿಕೆಯ ಪದ್ಧತಿಯನ್ನು ರೈಲ್ವೆ ಇಲಾಖೆಯಲ್ಲೂ ಆರಂಭಿಸಲಾಗಿದೆ. ಇದರ ಪ್ರಕಾರ 90ಶೇ. ಪ್ರಯಾಣಿಕರು ಈಗಿನ ದರಕ್ಕಿಂತ 50ಶೇ. ದವರೆಗೆ ಹೆಚ್ಚು ದರಗಳನ್ನು ತೆರಬೇಕಾಗುತ್ತದೆ. ಇದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಅಲ್ಲದೆ ಎಸಿ ಮೊದಲ ತರಗತಿ ಮತ್ತು ಎಕ್ಸಿಕ್ಯುಟಿವ್ ಚೇರ್‍ಗಳಿಗೆ ಈ ಏರಿಕೆ ಅನ್ವಯಿಸುವುದಿಲ್ಲ ಎಂಬುದು ಸರಕಾರದ ಶ್ರೀಮಂತ ಪರ ಪಕ್ಷಪಾತವನ್ನು ಬಿಂಬಿಸುತ್ತದೆ ಎಂದು ಟೀಕಿಸಿದೆ. ಈ ಬೇಡಿಕೆ ಪ್ರೇರಿತ ಸ್ಕೀಮು 90ಶೇ. ಪ್ರಯಾಣಿಕರಿಗೆ ದರಗಳನ್ನು ತೀವ್ರವಾಗಿ ಹೆಚ್ಚಿಸುವ ಮುಖವಾಡ ಎಂದು ಸಿಪಿಐ(ಎಂ) ವರ್ಣಿಸಿದೆ.

ಭಾರತೀಯ ರೈಲ್ವೆ ನಮ್ಮ ದೇಶವನ್ನು ಏಕೀಕೃತಗೊಳಸುವಲ್ಲಿ ಒಂದು ಬಹಳ ಮಹತ್ವದ ಪಾತ್ರ ವಹಿಸುತ್ತಿದೆ, ಮತ್ತು ನಮ್ಮ ಬಹುಪಾಲು ಜನರಿಗೆ ಇದು ಒಂದು ಸಾರ್ವಜನಿಕ ಸೇವೆ. ಇದನ್ನು ಸರಕಾರದ ಒಂದು ಲಾಭ ಮಾಡುವ ಉದ್ದಿಮೆಯಂತೆ ಪರಿಗಣಿಸಲಾಗದು. ಈ ಮಾದರಿಯನ್ನು ಇತರ ಸಾರ್ವಜನಿಕ ಸೇವೆಗಳಿಗೆ, ಅಂದರೆ ಸರ್ಕಾರಿ ಆಸ್ಪತ್ರೆಗಳು, ಅಗ್ನಿಶಾಮಕ ಮತ್ತು ಪೊಲಿಸ್ ಮುಂತಾದ ಇಲಾಖೆಗಳಿಗೂ ಒಂದು ನಿರ್ದಿಷ್ಟ ಕಾಲಾವಧಿಯ ಬೇಡಿಕೆಯ ಆಧಾರದಲ್ಲಿ ಅನ್ವಯಿಸಿದರೆ ಅದು ಜನತೆಗೆ ಸಾರ್ವಜನಿಕ ಸೇವೆಗಳನ್ನು ಒದಗಿಸುವ ತನ್ನ ಜವಾಬ್ದಾರಿಯನ್ನು ಸರಕಾರ ಸಂಪೂರ್ಣವಾಗಿ ಕೈಬಿಟ್ಟಂತಾಗುತ್ತದೆ ಎಂದು ಸಿಪಿಐ(ಎಂ) ಹೇಳಿದೆ.

ಮುಂಬರುವ ದಿನಗಳಲ್ಲಿ ಈ ‘ಫ್ಲೆಕ್ಸಿ ದರ’ಗಳನ್ನು ಇತರ ಎಲ್ಲ ರೈಲುಗಳಿಗೂ ವಿಸ್ತರಿಸುವ ಮುನ್ಸೂಚನೆ ಇದು ಎಂದು ಸಿಪಿಐ(ಎಂ) ಜನತೆಯನ್ನು ಎಚ್ಚರಿಸಿದೆ. ಅಂದರೆ ಈಗಾಗಲೇ ಭಾರೀ ಹಣದುಬ್ಬರ, ಕಡಿಮೆ ಸಂಬಳ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಇತರ ಸಂಕಟಗಳಿಗೆ ಒಳಗಾಗಿ ನರಳುತ್ತಿರುವ ಜನಗಳ ಮೇಲೆ ಮತ್ತಷ್ಟು ಹೊರೆಗಳ ಹೇರಿಕೆ. ಇಂತಹ ಜನ-ವಿರೋಧಿ ಕ್ರಮವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *