ಗೋರಕ್ಷಣೆಯ ಹೆಸರಲ್ಲಿ ಅಸಹ್ಯ ಪ್ರಚಾರ

ಹರಿಯಾಣ ಸರಕಾರ ರಾಜ್ಯದ ಮೇವತ್ ಪ್ರದೇಶದಲ್ಲಿ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಬಿರಿಯಾನಿ ಸ್ಯಾಂಪಲ್‍ಗಳನ್ನು ಸಂಗ್ರಹಿಸಲು ಮುಂದಾಗಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಇವುಗಳಲ್ಲಿ ಗೋಮಾಂಸ ಇದೆಯೇ ಎಂದು ಪರಿಶೀಲಸಲು ಇದನ್ನು ಮಾಡಲಾಗುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಗೋಸಂರಕ್ಷಣ ಮತ್ತು ಗೋವಂಶವೃದ್ಧಿ ಕಾನೂನು ತರುವಾಗಲೇ ಪಕ್ಷ ಇದನ್ನು ಧಾರ್ಮಿಕ ಅಲ್ಪಸಂಖ್ಯಾತರನ್ನು ಭಯಪಡಿಸಲು ಮತ್ತು ಸಮಾಜವನ್ನು ಧ್ರುವೀಕರಿಸಲು ಬಳಸಬಹುದು ಎಂದು ಪ್ರತಿಭಟಿಸಿತ್ತು. ಈ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ ಸಂಖ್ಯೆ ಬಹಳ ಕಡಿಮೆ ಮತ್ತು ಅದು ಈ ಮೇವತ್ ಪ್ರದೇಶದಲ್ಲಿಯೇ ಸೇರಿಕೊಂಡಿದೆ ಎಂಬುದನ್ನು ಗಮನಿಸಬೇಕು.

ಆರೆಸ್ಸೆಸ್-ಬಿಜೆಪಿಗೆ ಗೋವಂಶದ ರಕ್ಷಣೆಯ ಕಾಳಜಿಯೇನೂ ಇಲ್ಲ ಎಂಬುದು ಸ್ಪಷ್ಟ. ಗೋವಾದಲ್ಲಿ ಇವರೇ ಗೋಮಾಂಸ ತಿನ್ನುವ ಜನರ ಹಕ್ಕುಗಳನ್ನು ರಕ್ಷಿಸುವ ಮಾತಾಡುತ್ತಾರೆ. ಈಶಾನ್ಯ ಭಾರತದಲ್ಲೂ ಅದು ಗೋಮಾಂಸ ಭಕ್ಷಣೆಯ ಪರವಾಗಿ ಇದೆ. ಆದರೆ ಹರಿಯಾಣದಲ್ಲಿ ಇದನ್ನು ಭಯ ಹುಟ್ಟಿಸಲು ಮತ್ತು ಕೋಮು ಧ್ರುವೀಕರಣ ತರಲು, ಆಮೂಲಕ ರಾಜಕೀಯ ಮತ್ತು ಚುನಾವಣಾ ಪ್ರಯೋಜನ ಗಿಟ್ಟಿಸಲು ಬಳಸುತ್ತಿದೆ ಎಂಬುದು ಸ್ಪಷ್ಟ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸರಕಾರೀ ಪೋಷಣೆಯಿಂದ ನಡೆಯುತ್ತಿರುವ ಈ ಅಸಹ್ಯ ಹುಟ್ಟಿಸುವ ಪ್ರಚಾರವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಈ ಪ್ರದೇಶದ ಡಿಂಗರ್‍ಹೇಡಿ ಗ್ರಾಮದ ಒಂದು ಬಡ ಭೂಹೀನ ಮುಸ್ಲಿಮ್ ಕುಟುಂಬದ ಮೇಲೆ ನಡೆಸಿದ ಕೊಲೆ,ಅತ್ಯಾಚಾರದ ಘಟನೆಯಲ್ಲಿ ರಾಜ್ಯ ಸರಕಾರ ಮತ್ತು ಪೋಲೀಸರ ನಿಷ್ಕ್ರಿಯತೆಯ ಬಗ್ಗೆ ಎದ್ದಿರುವ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಇದೊಂದು ತಂತ್ರವಾಗಿದೆ ಎಂಬ ಭಾವನೆ ಇಲ್ಲಿನ ಜನಗಳಲ್ಲಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *