ಯುಸುಫ್ ತರಿಗಾಮಿ ಶ್ರೀನಗರದಿಂದ ದಿಲ್ಲಿಯ ಏಮ್ಸ್‌ಗೆ : ಸುಪ್ರಿಂಕೋರ್ಟ್ ಆದೇಶ

ಜಮ್ಮು ಮತ್ತು ಕಾಶ್ಮೀರದ ಹಿರಿಯ ಸಿಪಿಐ(ಎಂ) ಮುಖಂಡರು ಹಾಗೂ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿರುವ ಮಹಮ್ಮದ್ ಯುಸುಫ್ ತರಿಗಾಮಿಯವರನ್ನು  ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಗೆ ವರ್ಗಾಯಿಸುವ ಆದೇಶವನ್ನು ಸುಪ್ರಿಂ ಕೋರ್ಟ್ ಸೆಪ್ಟಂಬರ್ 5ರಂದು ನೀಡಿದೆ.

ತರಿಗಾಮಿಯವರಿಗೆ ಇಂತಹ ಬಿಡುಗಡೆಯನ್ನು ನೀಡಿರುವ ಸುಪ್ರಿಂ ಕೋರ್ಟ್ ಆದೇಶವನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸ್ವಾಗತಿಸಿದೆ. ಅವರಿಗೆ ಸರಿಯಾದ ವೈದ್ಯಕೀಯ ಪಾಲನೆ ದೊರೆಯಲೆಂದು ಈ ಆದೇಶವನ್ನು ನೀಡಲಾಗಿದ್ದು, ಅವರು ಬಯಸಿದ ಒಬ್ಬ ಕುಟುಂಬದ ಸದಸ್ಯರು ಅವರ ಜತೆಯಲ್ಲಿ ಇರಲು ಕೂಡ ಅವಕಾಶ ನೀಡಲಾಗಿದೆ.

ಆಗಸ್ಟ್ 5ರಂದು ಕಲಮು 370ನ್ನು ರದ್ದು ಮಾಡುವ ಕೇಂದ್ರ ಸರಕಾರದ ಕ್ರಮಕ್ಕೆ ಪೂರ್ವಭಾವಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ವ್ಯಾಪಕವಾದ ನಿರ್ಬಂಧಗಳನ್ನು ಹೇರಿದ ನಂತರ ತರಿಗಾಮಿಯವರು ಎಲ್ಲಿದ್ದಾರೆಂದು ತಿಳದಿರಲಿಲ್ಲ. ಅವರ ಆರೊಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು, ರಾಜ್ಯಪಾಲರಿಗೆ ಮುಂದಾಗಿ ತಿಳಿಸಿಯೇ  ಹೋದ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರನ್ನು ನಿರ್ಬಂಧಿಸಿದ ರಾಜ್ಯದ ಆಡಳಿತ ಅವರನ್ನು ಎರಡು ಬಾರಿ ಶ್ರೀನಗರ ವಿಮಾನ ನಿಲ್ದಾಣದಿಂದಲೇ ಹಿಂದಕ್ಕೆ ಕಳಿಸಿತು. ಕಳೆದ ವಾರ ಕೊನೆಗೂ ಸುಪ್ರಿಂ ಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ ಮೇಲೆಯೇ ಅವರು ತರಿಗಾಮಿಯವರನ್ನು ಭೇಟಿಯಾಗಲು ಸಾಧ್ಯವಾಗಿರುವುದು.

ಆಗಸ್ಟ್ 28ರಂದು ಈ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರಿಂ ಕೋರ್ಟ್ ಕಾಶ್ಮೀರದಲ್ಲಿ ತರಿಗಾಮಿಯವರನ್ನು ಭೇಟಿ ಮಾಡಲು ಯೆಚುರಿಯವರಿಗೆ ಅನುಮತಿ ನೀಡಬೇಕು ಎಂದು ಆದೇಶ ನೀಡಿತು. ಅವರು ಮರಳಿ ಬಂದು ನ್ಯಾಯಾಲಯಕ್ಕೆ ತರಿಗಾಮಿಯವರ ಆರೋಗ್ಯದ ಕುರಿತು ಅಫಿಡವಿಟ್ ಸಲ್ಲಿಸಬೇಕು ಎಂದು ಅದು ಹೇಳಿತು.

ಈ ಪ್ರಕಾರ ಮರುದಿನ 29ರಂದು ಶ್ರೀನಗರಕ್ಕೆ ಹೋದ ಯೆಚುರಿಯವರು ತರಿಗಾಮಿಯವರನ್ನು ಭೇಟಿ ಮಾಡಿ ಮರುದಿನ ದಿಲ್ಲಿಗೆ ಮರಳಿ ಸೆಪ್ಟಂಬರ್ 2ರಂದು ಸುಪ್ರಿಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದರು. ಇದನ್ನು ಸೆಪ್ಟಂಬರ್ 5ರಂದು ವಿಚಾರಣೆಗೆ ಎತ್ತಿಕೊಂಡ ಸುಪ್ರಿಂ ಕೋರ್ಟ್ ಮೇಲೆ ಹೇಳಿದಂತೆ ಆದೇಶ ನೀಡಿದೆ.

ಈ ವಿಚಾರಣೆಯಲ್ಲಿ ಯೆಚುರಿಯವರು ಸಲ್ಲಿಸಿರುವ ಅಫಿಡವಿಟ್ ಆಧಾರದಲ್ಲಿ, ತರಿಗಾಮಿಯವರ ಗೃಹಬಂಧನ ಮೇಲ್ನೋಟಕ್ಕೇ ಕಾನೂನುಬಾಹಿರವಾಗಿ ಕಾಣುತ್ತದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಏಕೆಂದರೆ ಅವರ ಮೇಲೆ ಆರೋಪಗಳೇನನ್ನೂ ಹಾಕಿಲ್ಲ, ಅವರನ್ನು ಮನೆಯಿಂದ ಹೊರಗೆ ಹೋಗದಂತೆ ನಿರ್ಬಂಧಿಸಿರುವ ಬಗ್ಗೆ ಆದೇಶವನ್ನೂ ಕೊಟ್ಟಿಲ್ಲ. ನಿಜಸಂಗತಿಯೆಂದರೆ, ಅವರನ್ನು ಗೃಹಬಂಧನದಲ್ಲಿರಿಸುವಂತೆ ಭದ್ರತಾ ಸಿಬ್ಬಂದಿಗೆ ಮುಖತಃ ನಿರ್ದೇಶನಗಳನ್ನಷ್ಟೇ ನೀಡಲಾಗಿದೆ, ಯಾವುದೇ ಕಾನೂನಾತ್ಮಕ ಅಧಿಕಾರದ ಬೆಂಬಲ  ನಿರ್ದೇಶನಗಳಿಗೆ ಇಲ್ಲ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೋ ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸುಪ್ರಿಂ ಕೋರ್ಟ್ ಈ ವಿಚಾರಣೆಯ ನಂತರ ಯೆಚುರಿಯವರು ತನ್ನ  ಹೆಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಎತ್ತಿದ ಅಂಶಗಳ ಮೇಲೆ ಭಾರತ ಸರಕಾರಕ್ಕೆ ನೋಟೀಸ್ ಕಳಿಸಿದೆ. ಸರಕಾರದ ಉತ್ತರ ಬಂದ ಮೇಲೆ ಈ ಅರ್ಜಿಯ ಮೇಲಿನ ವಿಚಾರಣೆ ಮುಂದುವರೆಯುತ್ತದೆ ಎಂದು ಪೊಲಿಟ್‌ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *