ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಕಳಚಿ ಹಾಕುವ ವಿಲೀನ ಪ್ರಕ್ರಿಯೆ

ಕೋಟ್ಯಂತರ ಭಾರತೀಯರನ್ನು ಹಣಕಾಸು ವ್ಯವಸ್ಥೆಯಿಂದ ಹೊರಗಿಡುವ ಸರಕಾರದ ನಡೆಯನ್ನು ಒಟ್ಟಾಗಿ ಪ್ರತಿರೋಧಿಸಬೇಕು

ಹತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ ನಾಲ್ಕು ಬ್ಯಾಂಕ್‍ಗಳಾಗಿ ಮಾಡುವ ಸರಕಾರದ ನಿರ್ಧಾರಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ. ಈ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆಯನ್ನು 27 ರಿಂದ 12ಕ್ಕೆ ಇಳಿಸಲಾಗುತ್ತಿದೆ ಎಂದು ಅದು ಹೇಳಿದೆ.

ಸಾರ್ವತ್ರಿಕ ಹಣಕಾಸು ಒಳಗೊಳ್ಳುವಿಕೆ ತರಲಿಕ್ಕಾಗಿ ಎಂಬ ಪ್ರಚಾರಕ್ಕೆ ತದ್ವಿರುದ್ಧವಾಗಿ ಇದು ಕೋಟ್ಯಂತರ ಭಾರತೀಯರನ್ನು ಮತ್ತಷ್ಟು ಪ್ರಮಾಣದಲ್ಲಿ ಹೊರಗಿಡುತ್ತದೆ. ಈಗಾಗಲೇ ಜಗತ್ತಿನಲ್ಲಿ ಬ್ಯಾಂಕಿಂಗ್‍ ಅನುಕೂಲ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು.  ಸರಕಾರದ ನಡೆ ಗ್ರಾಮೀಣ ಭಾರತದ ಸಣ್ಣ ಉಳಿತಾಯಗಳನ್ನು ನೀಚ ಚಿಟ್‍ ಫಂಡ್‍ವಾಲಾಗಳು ಮತ್ತು ಹಣದಾಹದ ಪಿಶಾಚಿಗಳ ತೆಕ್ಕೆಗೆ ಇನ್ನಷ್ಟು ತಳ್ಳುತ್ತದೆ.

ರಾಷ್ಟ್ರೀಕೃತ ಬ್ಯಾಂಕಿಂಗ್‍ ವಲಯವನ್ನು ಖಾಸಗೀಕರಿಸಲಿಕ್ಕಾಗಿಯೇ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಈ ವಿಲೀನಗಳು ಬ್ಯಾಂಕ್‍ ಶಾಖೆಗಳ ಜಾಲವನ್ನು ಕುಂಠಿತಗೊಳಿಸುತ್ತವೆ, ಈ ಮೂಲಕ ಈ ಸೌಲಭ್ಯ ಸಿಗದಂತೆ,  ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ, ವಂಚಿಸಲಾಗುತ್ತದೆ. ಸ್ಟೇಟ್‍ ಬ್ಯಾಂಕ್ ಆಫ್‍ ಇಂಡಿಯಾದೊಂದಿಗೆ ಅವುಗಳ ಐದು ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸಿದ ನಂತರ ಸುಮಾರು 1000 ಶಾಖೆಗಳನ್ನು ಮುಚ್ಚಲಾಯಿತು. ಇತ್ತೀಚೆಗೆ ದೇನಾ ಬ್ಯಾಂಕ್‍ ಮತ್ತು ವಿಜಯಾ ಬ್ಯಾಂಕನ್ನು ಬ್ಯಾಂಕ್‍ ಆಫ್ ಬರೋಡದೊಂದಿಗೆ ವಿಲೀನ ಮಾಡಿದ್ದರ ಫಲಿತಾಂಶವಾಗಿ 800 ಶಾಖೆಗಳು ಮುಚ್ಚುತ್ತವೆ ಎಂದು ವರದಿಯಾಗಿದೆ.

ಬ್ಯಾಂಕುಗಳ ವಿಲೀನದಿಂದ ಅವುಗಳ ಬಲ ಹೆಚ್ಚುತ್ತದೆ, ದೊಡ್ಡ ಬ್ಯಾಂಕುಗಳು ಮೂಡಿ ಬರುತ್ತವೆ ಎಂದು ಈ ವಿಲೀನವನ್ನು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಸಾರ್ವಜನಿಕ ವಲಯದ ಬ್ಯಾಂಕುಗಳ ಶೇರು ಹಿಂಪಡೆತ ಮತ್ತು ಅವುಗಳಲ್ಲಿ ಸರಕಾರದ ಪಾಲನ್ನು ಇಳಿಸಿ 50ಶೇ.ಕ್ಕಿಂತ ಕೆಳಗಿಳಿಸುವುದೇ ಸರಕಾರದ ಧೋರಣೆಯಾಗಿದೆ. ದೊಡ್ಡ ಬ್ಯಾಣಕುಗಳನ್ನು ರಚಿಸಿದ ಮೇಲೆ ಈ ಖಾಸಗೀಕರಣದ ಪ್ರಕ್ರಿಯೆಯನ್ನು ಆರಂಭಿಸುವ ಯೋಜನೆ ಈ ಸರಕಾರದ್ದು.

ಈ ನಡೆಯ ಮೂಲಕ ಸರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳನ್ನು ಕೂಡ ಸರಕಾರ ಮರೆಮಾಚುತ್ತಿದೆ. ದೊಡ್ಡ ಕಾರ್ಪೊರೇಟ್‍ ಗುಂಪುಗಳು ತಾವು ಪಡೆದ ಸಾಲಗಳನ್ನು ಮರುಪಾವತಿ ಮಾಡದೆ ವ್ಯಾಪಕ ಪ್ರಮಾಣದಲ್ಲಿ ಸುಸ್ತಿ ಮಾಡಿಕೊಂಡಿರುವುದರಿಂದಾಗಿ ಮತ್ತು ಸರಕಾರ ಈ ಅಪಾರ ಸಾಲಗಳ ವಸೂಲಿಯಾಗುವಂತೆ ಖಾತ್ರಿಪಡಿಸಿಕೊಳ್ಳುವಲ್ಲಿ ವಿಫಲವಾಗಿರುವುದರಿಂದಾಗಿ ಅಪಾರ ಪ್ರಮಾಣದಲ್ಲಿ ಬ್ಯಾಂಕುಗಳ ಎನ್,ಪಿ,ಎ,ಗಳು(ಕಾರ್ಯ ನಿರ್ವಹಿಸದ  ಆಶ್ತಿಗಳು) ರಾಶಿ ಬೀಳುತ್ತಿವೆ.

ಎನ್‍.ಪಿ.ಎ. ಗಳು ಕಳೆದ ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿವೆ. ಮತ್ತು ಕನಿಷ್ಟ 5.5ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್ ಬಂಟರುಗಳ ಸಾಲಗಳನ್ನು ಬಿಟ್ಟು ಕೊಡಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಐ.ಬಿ.ಸಿ.(ಪಾಪರು ಮತ್ತು ದಿವಾಳಿ ಸಂಹಿತೆ) ಪ್ರಕ್ರಿಯೆಯ ಮೂಲಕ ತಾವು ನೀಡಿದ ಸಾಲಗಳ ಒಂದು ಗಮನಾರ್ಹ ಭಾಗವನ್ನು ಬಿಟ್ಟು ಬಿಡುವಂತೆ ಬಲವಂತ ಮಾಡಲಾಗುತ್ತಿದೆ. ಬ್ಯಾಂಕುಗಳ ವಿಲೀನ ಸಾಲಮೊತ್ತಗಳ ವಸೂಲಿಯ ಸಮಸ್ಯೆಯನ್ನೇನನ್ನೂ ಪರಿಹರಿಸುವುದಿಲ್ಲ.

ಇದು ಬ್ಯಾಂಕ್‍ ರಾಷ್ಟ್ರೀಕರಣದ 50ನೇ ವಾರ್ಷಿಕೋತ್ಸವದ ವರ್ಷ. ಆದರೆ ಮೋದಿ ಸರಕಾರ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನತೆಯ ಹಿತದೃಷ್ಟಿಯಿಂದ ಬಲಪಡಿಸುವ ಬದಲು ಅದನ್ನು ಕಳಚಿ ಹಾಕಲು ಉದ್ಯುಕ್ತವಾಗಿದೆ. ಇದನ್ನು ಬ್ಯಾಂಕ್‍ ನೌಕರರು, ಕಾರ್ಮಿಕ ಸಂಘಗಳು ಮತ್ತು ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಟ್ಟಾಗಿ ಕಾರ್ಯಾಚರಣೆಗಳನ್ನು ನಡೆಸಿ ಪ್ರತಿರೋಧಿಸಬೇಕು   ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *