ಚೆ ಗವೇರಾ ಹುತಾತ್ಮ ದಿನ

ಅಕ್ಟೋಬರ್ 9, 1967

‘ಹೇಡಿಗಳೇ ಗುಂಡು ಹಾರಿಸಿ, ಏನಿದ್ದರೂ ನೀವು ಒಬ್ಬ ಮನುಷ್ನನನ್ನು ಮಾತ್ರ ಸಾಯಿಸುತ್ತಿದ್ದೀರಾ’ ಎಂದು ಬೊಲಿವಿಯಾದ ಕಾಡಿನಲ್ಲಿ ಹಿಂದಿನ ದಿನ ಸಾಮ್ರಾಜ್ಯಶಾಹಿಗಳ ಏಜೆಂಟರ ಕೈಸೆರೆಯಾದ ಚೆ ತನ್ನನ್ನು ಗುಂಡಿಕ್ಕಿ ಮುಗಿಸಿ ಬಿಡಲು ಬಂದ ಹಂತಕರಿಗೆ ಹೇಳಿದ್ದು.

ಅರ್ಜೆಂಟೇನಾದಲ್ಲಿ ಹುಟ್ಟಿ,  ಮೆಕ್ಸಿಕೊದಲ್ಲಿ ವೈದ್ಯಪದವಿ ಪಡೆದು ಲ್ಯಾಟಿನ್ ಅಮೆರಿಕಾದ್ಯಂತ ಮೋಟಾರು ಸೈಕಲಿನಲ್ಲಿ ಸುತ್ತಾಡಿ, ಕ್ಯೂಬಾ ಕ್ರಾಂತಿಯಲ್ಲಿ ಮತ್ತು ಸಮಾಜವಾದಿ ಕ್ಯೂಬಾದ ಬುನಾದಿ ಹಾಕುವಲ್ಲಿ ಫಿಡೆಲ್ ಕಾಸ್ಟ್ರೊರವರೊಂದಿಗೆ ಕೈಜೋಡಿಸಿ, ನಂತರ ಬೊಲಿವಿಯಾದ ವಿಮೋಚನಾ ಸಮರಕ್ಕೆ ನೇತೃತ್ವ ನೀಡುತ್ತಲೇ ಪ್ರಾಣಾರ್ಪಣೆ ಮಾಡಿದ ಧೀಮಂತ ಮಾರ್ಕ್ಸ್ ವಾದಿ ಚಿಂತಕ.

ಕ್ಯೂಬಾದ ಕ್ರಾಂತಿಯ ಸಫಲ ರೂವಾರಿಯಾಗಿದ್ದು, ಕ್ರಾಂತಿಯ ನಂತರ ಸರಕಾರದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಚೆ ಗವೇರಾ ನಂತಹ ಅಂತರ್ರಾಷ್ಟ್ರೀಯವಾದಿ ಸಾಮ್ರಾಜ್ಯಶಾಹಿ-ವಿರೋಧಿ ಇನ್ನೊಬ್ಬರಿಲ್ಲ. ಆತ ಸಾಮ್ರಾಜ್ಯಶಾಹಿಯ ರಕ್ಷಣೆಯಲ್ಲಿ ತೊಡಗಿದ್ದ ಅಮೆರಿಕನ್ ಸರಕಾರ ಮತ್ತು ಸಿ.ಐ.ಎ.ಗೆ ಸಿಂಹಸ್ವಪ್ನವಾಗಿದ್ದ. ಬೊಲಿವಿಯದಲ್ಲಿ ಗೆರಿಲ್ಲಾ ಹೋರಾಟದಲ್ಲಿ ತೊಡಗಿದ್ದ ಚೆ ಯನ್ನು ಹಿಂಬಾಲಿಸಿ ಭೇಟೆಯಾಡಿ ಕೊನೆಗೂ ಈ ದಿನದಂದು ಕೊಲ್ಲುವಲ್ಲಿ ಸಫಲವಾಯಿತು.

ಆದರೆ ಕ್ರಾಂತಿಕಾರಿಗಳನ್ನು ಕೊಲ್ಲಬಹುದು. ವಿಚಾರಗಳನ್ನಲ್ಲ ಎಂದು ಚೆ ಕೊಲೆಯ ನಂತರ ಅವರಿಗೆ ಅರಿವಾಯಿತು. ಯಾರೂ ನಂಬಲಿಕ್ಕಿಲ್ಲ ಮತ್ತು ಆತನ ಹೆಣ ನೋಡಿದರೆ ಗೆರಿಲ್ಲಾ ಹೋರಾಟಗಳೆಲ್ಲಾ ತಣ್ಣಗಾಗಬಹುದು ಎಂದು ಸಿಐಎ ಆತನ ಹೆಣದ ಫೊಟೊ ಸಾಕಷ್ಟು ವ್ಯಾಪಕವಾಗಿ ಪ್ರಚುರ ಪಡಿಸಿತು. ಆದರೆ ಆದದ್ದು ತಿರುವು ಮುರುವು. ಚೆ ಅಂತರ್ರಾಷ್ಟ್ರೀಯವಾದಿ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ರೂಪಕವಾಗಿ ಬಿಟ್ಟ. ಬಂಡವಾಳಶಾಹಿ ದೇಶಗಳ ಯುವಕರಿಗೂ ಪ್ರತಿಸಂಸ್ಖøತಿಯ ಪ್ರತೀಕವಾಗಿ ಬಿಟ್ಟ. ಚೇ ನೆನಪಿನಲ್ಲಿ ಅಂತರ್ರಾಷ್ಟ್ರೀಯವಾದಿ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟಕ್ಕೆ ಪುನಃ ಅರ್ಪಿಸಿಕೊಳ್ಳುವ ದಿನ ಇದು.

Leave a Reply

Your email address will not be published. Required fields are marked *