ದಲಿತ, ಪ್ರಗತಿಪರರಿಗೆ ಭರವಸೆ ಮೂಡಿಸಿದ ಉಡುಪಿ ಚಲೋ ಚಳುವಳಿ

ಅಕ್ಟೋಬರ್ 9, 2016  ಕೋಮುವಾದದ ವಿರುದ್ಧ ದಲಿತ, ಪ್ರಗತಿಪರರ ಹೋರಾಟಕ್ಕೆ ಸ್ಫೂರ್ತಿಯಾದ ದಿನ. ಅಂದು ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆಯ ಅಡಿಯಲ್ಲಿ ಸಾವಿರಾರು ದಲಿತರು, ವಿದ್ಯಾರ್ಥಿ, ಯುವಜನರು ಪ್ರಗತಿಪರ ಹೋರಾಟಗಾರರು ಉಡುಪಿ ಚಲೋ ಚಳುವಳಿಯ ಸಮಾರೋಪದಲ್ಲಿ ಭಾಗವಹಿಸಿದರು. ಉಡುಪಿಯ ಅಜ್ಜರಕಾಡಿನಿಂದ  ಬಸ್‍ಸ್ಟ್ಯಾಂಡ್ ಮಾರ್ಗವಾಗಿ ಬೀಡಿನ ಗುಡ್ಡೆಯಲ್ಲಿರುವ ಬಯಲು ರಂಗದವರೆಗೆ ಆಕರ್ಷಕ ಮೆರವಣಿಗೆಯಲ್ಲಿ ಹೋಗಿ  ಸಾರ್ವಜನಿಕ ಸಭೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರಾಂತಿಗೀತೆಗಳು ಭಾಗವಹಿಸಿದವರ ಗಮನ ಸೆಳೆಯಿತು. ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕುಂದೂರಿನಲ್ಲಿ ದನದ ಮಾಂಸ ಸೇವಿಸಿದ್ದಾರೆಂಬ ಕಾರಣಕ್ಕೆ ಹಲ್ಲೆಗೊಳಗಾದ ಬಾಲರಾಜುರವರು ಮೆರವಣಿಗೆಗೆ ಚಾಲನೆ ನೀಡಿದರು.

ಸಮಾರೋಪ ಸಭೆಯಲ್ಲಿ ಗುಜರಾತಿನ ‘ಉನಾ’ ಚಳುವಳಿಯ ನೇತಾರ ಜಗ್ನೇಶ್ ಮೇವಾನಿ ಪ್ರಮುಖ ಭಾಷಣರರಾಗಿದ್ದರು. ಕರಾವಳಿ ಕರ್ನಾಟಕವನ್ನು ಹಿಂದುತ್ವವಾದಿಗಳ ಪ್ರಯೋಗ ಶಾಲೆಯನ್ನಾಗಿ ಮಾಡುತ್ತಿರುವುದನ್ನು ಪ್ರಗತಿಪರರೆಲ್ಲರೂ ತಡೆಯಬೇಕು ಎಂದು ಕರೆ ನೀಡಿದ ಜಿಗ್ನೇಶ, 2002ರ ಗುಜರಾತ್ ಗಲಭೆಯಲ್ಲಿ ಮುಸ್ಲಿಂರ ಮೇಲೆ ಧಾಳಿ ನಡೆಸಿದಾಗ, ದಲಿತರ ಮೇಲೆ 746 ಮೊಕದ್ದಮೆಗಳು ದಾಖಲಾಗಿವೆ ಎಂದು ಹೇಳಿದರು. ಆದರೆ ಮೇಲ್ಜಾತಿಗೆ ಸೇರಿದ ಹಿಂದೂ ಸಮುದಾಯದವರ ಮೇಲೆ ದಾಖಲಾದ ಮೊಕದ್ದಮೆ 56 ಮಾತ್ರ. ಇದನ್ನು ದಲಿತರು ಅರ್ಥಮಾಡಿಕೊಳ್ಳಬೇಕು” ಎಂದರು. “ಅದಾನಿ, ಅಂಬಾನಿಯವರಿಗೆ ಸಾವಿರಾರು ಎಕ್ರೆ ಭೂಮಿ ಹಂಚುವುದನ್ನು ನಿಲ್ಲಿಸಿ, ಭೂರಹಿತ ದಲಿತರಿಗೆ ನೀಡಬೇಕು” ಎಂದು ಆಗ್ರಹಿಸಿದರು. ಕರ್ನಾಟಕ ಸರಕಾರವು ಹಿಂದುಳಿದ ವರ್ಗ, ಆದಿವಾಸಿ ಹಾಗೂ ದಲಿತರಿಗೆ ಎಷ್ಟು ಭೂಮಿ ನೀಡಿದೆ ಮತ್ತು ಕಾರ್ಪೋರೇಟ್ ಕಂಪೆನಿಗಳಿಗೆ ಎಷ್ಟು ಭೂಮಿ ನೀಡಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದೂ ಅವರು ಒತ್ತಾಯಿಸಿದರು. ಮುಂದುವರಿದು ಮಾತನಾಡಿದ ಅವರು ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಜಾತಿ ಬೇಧದ ಪಂಕ್ತಿಬೇಧದ ಪದ್ಧತಿಯನ್ನು ಕೊನೆಗಾಣಿಸಬೇಕು, ಇಲ್ಲವಾದಲ್ಲಿ ಎರಡು ತಿಂಗಳ ಬಳಿಕ ತೀವ್ರ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಎಚ್ಚರಿಸಿದರು. ಅದಕ್ಕಾಗಿ ತಾನು ಜೈಲು ಸೇರಲು ಸಿದ್ಧನಾಗಿಯೇ ಬರುವುದಾಗಿ ಘೋಷಿಸಿದರು.

ಉಡುಪಿಯ ಡಿ.ಎಸ್.ಎಸ್. ಮುಖಂಡರಾದ ಹಾಗೂ ಸ್ವಾಭಿಮಾನಿ ಸಂಘರ್ಷ ಸಮಿತಿಯ ಸಂಚಾಲಕರಾದ ಸುಂದರ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇನ್ನೋರ್ವ ಸಂಚಾಲಕ ಶ್ಯಾಮರಾಜ್ ಬಿರ್ತಿ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ಡಿ.ಎಸ್.ಎಸ್. ಮುಖಂಡ ಜಯನ್ ಮಲ್ಪೆ, ಡಿ.ವೈ.ಎಫ್.ಐ. ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮತ್ತಿತರರು ಇದ್ದರು. ಈ ಜಾಥಾದ ಪ್ರಮುಖರಲ್ಲಿ ಒಬ್ಬರಾದ ಅನಂತ ನಾಯಕ್ ಮಾತನಾಡಿ “2012ರಲ್ಲಿ ಪಂಕ್ತಿ ಬೇಧದ ವಿರುದ್ಧ ಉಡುಪಿಯ ಶ್ರೀಕೃಷ್ಣ ಮಠದ ಎದುರಿನಲ್ಲಿ ಪೊಲೀಸ್ ದೌರ್ಜನ್ಯ ಎದುರಿಸಿ, ಸಿ.ಪಿ.ಐ.(ಎಂ.) ನಡೆಸಿದ ಹೋರಾಟವನ್ನು ಶ್ಲಾಘಿಸಿದರು. ಅಂದು ನೀಡಿದ್ದ ಎಚ್ಚರಿಕೆಯನ್ನು ಆಡಳಿತ ನಿರ್ಲಕ್ಷಿಸಿರುವುದು ಖಂಡನೀಯ ಎಂದರು.

ಅಕ್ಟೋಬರ್ 4 ರಂದು ಬೆಂಗಳೂರಿನಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‍ರವರಿಂದ  ಉದ್ಘಾಟನೆಗೊಂಡ ಜಾಥಾವು (ಜನಶಕ್ತಿ ಹಿಂದಿನ ಸಂಚಿಕೆ 42ನ್ನು ನೋಡಿ) ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ನಗರಗಳನ್ನು ಹಾದು ಅಕ್ಟೋಬರ್ 7ರ ಮಧ್ಯರಾತ್ರಿ ಉಡುಪಿಯನ್ನು ತಲುಪಿತ್ತು.

ಅಕ್ಟೋಬರ್ 8 ರಂದು ದನ ಸಾಗಾಟ ಮಾಡುತ್ತಿದ್ದನೆಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಹೆತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಮನೆಗೆ ಜಾಥಾ ತಂಡದ ಸದಸ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬವಿಡೀ ಇನ್ನೂ ದುಃಖದ ಮಡುವಿನಲ್ಲೇ ಇದೆ. ತನ್ನ ಮಗನ ಮೇಲಿನ ಸುಳ್ಳು ಆರೋಪಗಳಿಂದ ಬೆಂದು ಬಸವಳಿದಿದೆ. ಮಗ ನಡೆಸುತ್ತಿದ್ದ ಚಿಲ್ಲರೆ ಅಂಗಡಿಯನ್ನು ತಾಯಿಯೇ ನಡೆಸುತ್ತಿರುವುದು, ಕುಟುಂಬದ ಸಂಕಷ್ಟತನಕ್ಕೆ ಹಿಡಿದ ಕನ್ನಡಿಯಾಗಿತ್ತು.

ಯುವಜನರ ಭಾಗವಹಿಸುವಿಕೆ:

ಉಡುಪಿ ಚಲೋ ಕಾರ್ಯಕ್ರಮದ ಒಟ್ಟು ತಯಾರಿ, ಭಾಗವಹಿಸುವಿಕೆ ಇತ್ಯಾದಿಯಲ್ಲಿ ಯುವಕ, ಯುವತಿಯರು ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ಗಮನಿಸಬೇಕು. ಇವರಲ್ಲಿ ದಲಿತರು, ಮುಸಲ್ಮಾನರು, ಹಿಂದುಳಿದವರು, ದಲಿತ-ಬಡವರ ಪರವಾಗಿರುವ ಮೇಲ್ಜಾತಿಯವರು-ಹೀಗೆ ಎಲ್ಲರೂ ಇದ್ದರು. ಉತ್ತಮ ಹಾಡುಗಳ ಹೊಸ ಕವನಗಳ ಸೃಷ್ಟಿಯಾಯಿತು. ಈ ಯುವಜನರು ವಿದ್ಯಾರ್ಥಿ, ಯುವಜನರಿರುವ ಹಾಸ್ಟೆಲ್, ಮೊಹಲ್ಲಾಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಮೆರವಣಿಗೆ, ಸಭೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. ಆದರೂ ಸ್ಥಳೀಯರ ಭಾಗವಹಿಸುವಿಕೆ ಇನ್ನೂ ಹೆಚ್ಚಿರಬೇಕಿತ್ತು.

ಸಾಮಾಜಿಕ ಮಾಧ್ಯಮಗಳ ಸೂಕ್ತ ಬಳಕೆ:

ಸಮಾಜದಲ್ಲಿ ಹೊಸ ವಿದ್ಯಾವಂತ ಮಧ್ಯಮ ವರ್ಗವೊಂದು ಸೃಷ್ಟಿಯಾಗಿದೆ. ಅವರೆಲ್ಲ ಬಹುತೇಕ ಬಡವರ್ಗ ಹಿನ್ನೆಲೆಯಿಂದ ಬಂದವರು. ಆದರೆ ಶಿಕ್ಷಣ, ಉದ್ಯೋಗದ  ಮೂಲಕ ಒಂದಿಷ್ಟು ಆದಾಯ ಗಳಿಸುತ್ತಿರುವವರು. ಈ ವಿಭಾಗ ಬದಲಾವಣೆ ಬಯಸುತ್ತಿದೆ. ಆದರೆ ಈವರೆಗೆ ಯಾವುದೇ ಚಳುವಳಿ/ಸಂಘಟನೆಗಳ ಚೌಕಟ್ಟಿಗೆ ನಿಲುಕದವರು ಅಥವಾ ಆ ಕಟ್ಟುಪಾಡುಗಳಿಗೆ ಒಳಪಡಲು ಇಷ್ಟವಿಲ್ಲದವರು ಇದ್ದಾರೆ. ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲಿ ಬರುವ ಪ್ರಗತಿಪರ ಚಿಂತನೆಗಳಿಗೆ ಪ್ರತಿಕ್ರಿಯೆ ನೀಡುವರು, ಪ್ರೇರಿತರಾಗುವರು. ಉಡುಪಿ ಚಲೋ ಕಾರ್ಯಕ್ರಮದಲ್ಲಿ ಈ ವಿಭಾಗ ಭಾಗವಹಿಸಿ ಬಹುಶಃ ಮೊದಲ ಬಾರಿಗೆ ಬೀದಿಗಿಳಿದಿದೆ. ಇದು ಒಂದು ಸಕಾರಾತ್ಮಕ ಬೆಳವಣಿಗೆ.

ಒಟ್ಟು 16 ‘ವ್ಯಾಟ್ಸಪ್’ ಗುಂಪುಗಳನ್ನು ಮಾಡಲಾಗಿದ್ದು, ಸುಮಾರು 4 ಸಾವಿರ ಜನರನ್ನು ತಲುಪಲಾಗಿದೆ. ಈ ಗುಂಪುಗಳಲ್ಲಿ ಚರ್ಚೆ ನಡೆದಿದೆ. ಬೇರೆ ಗುಂಪುಗಳಿಗೆ ‘ಶೇರ್’ ಮಾಡಿದ್ದಾರೆ. ‘ಲೈಕ್’ ಮಾಡಿದ್ದಾರೆ. ಇದರಿಂದಲೂ ಚಳುವಳಿಯ ಪರವಾಗಿ ಸಾಕಷ್ಟು ಜನರನ್ನು ಪ್ರೇರೇಪಿಸಲು ಸಾಧ್ಯವಾಗಿದೆ.

ಸಮಾರೋಪದ 5 ಪ್ರಮುಖ ನಿರ್ಣಯಗಳು:

  1. ಬಡವರ ಆಹಾರದ ಹಕ್ಕು ರಕ್ಷಣೆಯಾಗಬೇಕು. ಗೋರಕ್ಷಣೆ ಹೆಸರಿನ ಗೂಂಡಾಗಿರಿಯನ್ನು ನಿಷೇಧಿಸಬೇಕು.
  2. ದಲಿತ-ದಮನಿತರಿಗೆ ಭೂಮಿ ಹಂಚಬೇಕು.
  3. ಮೀಸಲಾತಿ ನಿಯಮ ಖಾಸಗಿಕ್ಷೇತ್ರಕ್ಕೂ ಅನ್ವಯವಾಗಬೇಕು. ಸಾರ್ವಜನಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನೀತಿ ಘೋಷಣೆಯಾಗಬೇಕು.
  4. ಎರಡು ತಿಂಗಳಲ್ಲಿ ದಲಿತರಿಗೆ ಭೂಮಿ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ.
  5. ಉಡುಪಿ ಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪಂಕ್ತಿಬೇಧ ನಿಲ್ಲಿಸಬೇಕು. ಇಲ್ಲದಿದ್ದರೆ ಮಠಕ್ಕೆ ಮುತ್ತಿಗೆ.

ಎಡ ಸಾಮೂಹಿಕ ಸಂಘಟನೆಗಳ. ಭಾಗವಹಿಸುವಿಕೆ:

ಎಡ ಸಾಮೂಹಿಕ ಸಂಘಟನೆಗಳ ಸಾಕಷ್ಟು ಕಾರ್ಯಕರ್ತರು ನಾಯಕರು ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಹಿಸಿದ್ದಾರೆ. ದೂರದೂರದ ಜಿಲ್ಲೆಗಳಿಂದ ದಲಿತ ಚಳುವಳಿಯ ಕಾರ್ಯಕರ್ತರು ಮುಖಂಡರೊಂದಿಗೆ ಕೆಲವರು ಬಂದಿದ್ದರೆ, ಸ್ವತಂತ್ರವಾಗಿ ಅನೇಕರು ಬಂದಿದ್ದರು. ಜಾಥಾದಲ್ಲಿ ಸಿ.ಪಿ.ಐ.ಎಂ. ರಾಜ್ಯ ಸಮಿತಿ ಸದಸ್ಯ ಎಸ್. ವೈ. ಗುರುಶಾಂತ್ ಮತ್ತಿತರರು ಜೊತೆಗೂಡಿದ್ದರು. ವಿವಿಧ ಹಂತಗಳ ಕಾರ್ಯಕ್ರಮಗಳಲ್ಲಿ ಜಿ.ಎನ್.ನಾಗರಾಜ್, ಬಾಲಕೃಷ್ಣಶೆಟ್ಟಿ, ಕೆ.ಎಸ್.ಲಕ್ಷ್ಮಿ, ಮುಜೀಬ್, ಬಿ.ರಾಜಶೇಖರಮೂರ್ತಿ, ಕೆ.ಎನ್.ಉಮೇಶ್, ಕೆ.ಮಹಂತೇಶ್, ಧರ್ಮೇಶ್, ನವೀನ್‍ಕುಮಾರ್, ಬಿ.ಎಸ್.ಸೊಪ್ಪಿನ್ ಕೆ.ಎಸ್.ವಿಮಲಾ, ಗೌರಮ್ಮ, ಕೆ.ನೀಲಾ, ಎಸ್.ಸತ್ಯಾ ಮುಂತಾದವರು ಪಾಲ್ಗೊಂಡಿದ್ದರು. ಜಾಥಾದ ಹಾದಿಯುದ್ದಕ್ಕೂ ಸ್ವಾಗತಿಸುವಲ್ಲಿ ಎಡ ಸಾಮೂಹಿಕ ಸಂಘಟನೆಗಳು ಪಾಲ್ಗೊಂಡಿವೆ.

ನೀಲಿ-ಕೆಂಪು ಬಾವುಟ

ಒಟ್ಟಾರೆಯಾಗಿ ದಲಿತರು, ಎಡಪಂಥೀಯರು, ಪ್ರಗತಿಪರರು ಒಂದಾಗಿ, ಭೂಮಿಯ ಹಕ್ಕಿಗಾಗಿ, ಆಹಾರದ ಸ್ವಾತಂತ್ರ್ಯಕ್ಕಾಗಿ, ಕೋಮುವಾದ, ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಬೇಕೆಂಬ ಕಳಕಳಿ ಸಭೆಯಲ್ಲಿ ಮಾತನಾಡಿದ ಎಲ್ಲರ ಭಾಷಣಗಳಲ್ಲಿಯೂ ವ್ಯಕ್ತವಾಗಿದೆ. ಎಲ್ಲ ಬಣ್ಣದ ಬಾವುಟಗಳು ಒಂದಾಗಬೇಕೆಂದು ಜಿಗ್ನೇಶ್ ಮೇವಾನಿ ಕೂಡಾ ಹೇಳಿದರು. ಆದರೆ ‘ಹೂ ಚೆಲ್ಲಿ’ ಸ್ವಾಗತ ಕೋರುತ್ತಿದ್ದ ಸಿ.ಐ.ಟಿ.ಯು. ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದ ಕೆಲವು ವ್ಯಕ್ತಿಗಳು ಬಾವುಟವನ್ನು ಮಡಚಿ ಇಡುವಂತೆ ಒತ್ತಾಯಿಸಿದರು. “ನಾವು ಮೆರವಣಿಗೆಯಲ್ಲಿ ಬರುವಾಗ ಸಿ.ಐ.ಟಿ.ಯು. ಬಾವುಟ ತರುವುದಿಲ್ಲ. ಸ್ವಾಗತ ಕೋರಲು ಮಾತ್ರ ಬಳಸುತ್ತಿದ್ದೇವೆ” ಎಂದು ಹೇಳಿದರೂ ಕೇಳಲಿಲ್ಲ. ಏಕ ಸಂಸ್ಕೃತಿಯ ವಿರುದ್ಧ ಹೋರಾಡುವವರು, ಬೇರೆ ಬಾವುಟಗಳೇ ಕಣ್ಣಿಗೆ ಕಾಣಕೂಡದು ಎಂದು ಆಗ್ರಹಿಸುವುದು ಎಷ್ಟು ನ್ಯಾಯ ಎಂದು ಜನರು ಆಡಿಕೊಳ್ಳುತ್ತಿದ್ದರು. ಸೆಪ್ಟೆಂಬರ್ 2ರ ಮುಷ್ಕರದಲ್ಲಿ ಎಲ್ಲ ಬಣ್ಣದ ಬಾವುಟಗಳು ಒಂದೆಡೆ ಸೇರಿರುವುದರಿಂದಲೇ 18 ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವಂತಾಯಿತು ಎಂಬುದನ್ನು ಮರೆಯಲು ಸಾಧ್ಯವಿಲ್ಲ.

‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬುದು ಸರಿಯಾದ ಘೋಷಣೆ. ಬಹುಶ: ಕರ್ನಾಟಕದಲ್ಲಂತೂ ದಲಿತ ಚಳುವಳಿ, ಸಾಮಾಜಿಕದೊಂದಿಗೆ ದೈನಂದಿನ ಬದುಕಿನ ಮತ್ತು ಆರ್ಥಿಕ ಪ್ರಶ್ನೆಗಳನ್ನು  ಮೊದಲ ಬಾರಿ ಎತ್ತಿಕೊಳ್ಳುತ್ತಿರುವುದರ ಶುಭಸೂಚನೆ. ಆದರೆ ಒಂದೇ ಉದ್ದೇಶವುಳ್ಳವರಲ್ಲಿ ಬಾವುಟ ನಮ್ಮ ಆಯ್ಕೆ ಯಾಕಾಗಬಾರದು? ಅದರಿಂದ ಅಂಬೇಡ್ಕರ್‍ರವರಿಗೆ ಅಗೌರವ ತೋರಿದಂತಾಗುವುದಿಲ್ಲ. ಬದಲಾಗಿ ಚಳುವಳಿಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ಸಾಧ್ಯವಾಗುತ್ತದೆ. ಎಲ್ಲಾ ದಲಿತ, ಎಡ, ಪ್ರಗತಿಪರ, ಪ್ರಜಾಸತ್ತಾತ್ಮಕ, ಸೆಕ್ಯುಲರ್ ವ್ಯಕ್ತಿ, ಶಕ್ತಿ, ಸಂಘಟನೆಗಳು ಒಟ್ಟಾಗಿ ಪ್ರಬಲ ಬಲಪಂಥೀಯ ದಾಳಿ ಎದುರಿಸುವ ಅಗತ್ಯ ಇರುವಾಗ ಇಂತಹ ಧೋರಣೆ ಸೂಕ್ತವಲ್ಲ.

ಆದ್ದರಿಂದ ನೀಲಿ ಬಾವುಟ ಮಾತ್ರವೇ ಇರಬೇಕೆಂದು ಆದೇಶ ಮಾಡಿದ ಸಂಘಟಕರು, ಬೇರೆ ಬಣ್ಣದ ಬಾವುಟಗಳೂ ಜತೆಯಾದಲ್ಲಿ ಅದರ ವ್ಯಾಪಕತೆ ಹೆಚ್ಚುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಹಿಂದೆ ಹಲವು ಬಾರಿ ಅನುಭವ ಹಂಚಿಕೊಳ್ಳುವ ಚರ್ಚೆಯನ್ನು ಮಾಡಲಾಗಿತ್ತು ಕೂಡ. ಒಂದೇ ಉದ್ದೇಶವುಳ್ಳ ವಿವಿಧ ಶಕ್ತಿಗಳ ಒಂದಾಗುವಿಕೆಯಿಂದ ಸಂಕುಚಿತತೆಯ ಗೊಡೆ ಒಡೆದು ವಿಶಾಲತೆ ಪ್ರಾಪ್ತವಾಗುವುದು. ಭಿನ್ನ ಅಭಿಪ್ರಾಯಗಳೂ ಕೂಡ ಪ್ರಜಾಸತ್ತಾತ್ಮಕ ಸಂವಾದದಲ್ಲಿ ಹೊಸ ಅರಿವು, ಸ್ವರೂಪ ಪಡೆಯಲು ಸಾಧ್ಯ.

Leave a Reply

Your email address will not be published. Required fields are marked *