ಪರ್ಯಾಯ ವ್ಯವಸ್ಥೆ ರೂಪಿಸುವ ವರೆಗೆ ನೋಟುಗಳ ಬಳಕೆಗೆ ಅವಕಾಶ ನೀಡಿ

1000 ಮತ್ತು 500 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಂಡಿರುವ ಸರಕಾರದ ಕ್ರಮದಿಂದಾಗಿ ಪಾವತಿ ಮತ್ತು ಇತ್ಯರ್ಥದ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದು ಎಲ್ಲ ನಾಗರಿಕರನ್ನು ಒಂದಿಲ್ಲ ಒಂದು ರೀತಿಯಲ್ಲಿ ತಟ್ಟಿದೆ ಎಂದು ದೇಶದ ವಿವಿಧೆಡೆಗಳಿಂದ ಬರುತ್ತಿರುವ ವರದಿಗಳು ತೋರಿಸುತ್ತಿವೆ. ಆದ್ದರಿಂದ ಅಗತ್ಯ ಕರೆನ್ಸಿ ನೋಟುಗಳ ಲಭ್ಯತೆ ಮತ್ತು ಹೊಸ ನೋಟುಗಳಿಗೆ ಅನುಗುಣವಾಗಿ ಎಟಿಎಂಗಳ ಮರುವ್ಯವಸ್ಥೆ ಆಗುವ ವರೆಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು, ಸರಕಾರವೇ ನಿಗದಿಪಡಿಸಿರುವ ಡಿಸೆಂಬರ್30ರ ಸಮಯ ಮಿತಿಯ ವರೆಗೆ 500 ಮತ್ತು 1000ದ ನೋಟುಗಳಲ್ಲಿ ವ್ಯವಹಾರ ನಡೆಸಲು ಜನಗಳಿಗೆ ಅವಕಾಶ ಕೊಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಅಲ್ಲದೆ ಕೇರಳ ಮತ್ತು ತ್ರಿಪುರ ಮುಖ್ಯಮಂತ್ರಿಗಳು ಪರ್ಯಾಯ ವ್ಯವಸ್ಥೆ ದೃಢವಾಗಿ ಜಾರಿಗೊಳ್ಳುವ ವರೆಗೆ 500 ಮತ್ತು 1000 ರೂ.ಗಳ ನೋಟುಗಳನ್ನು ಸ್ವೀಕರಿಸಲು ತಮ್ಮ ರಾಜ್ಯ ಸರಕಾರಗಳಿಗೆ ಅನುಮತಿ ನೀಡಬೇಕೆಂದು ಮುಂದಿಟ್ಟಿರುವ ವಿನಂತಿಯನ್ನು ಒಪ್ಪಬೇಕು ಎಂದೂ ಪೊಲಿಟ್‍ಬ್ಯುರೊ ಕೇಳಿದೆ. ಇತರ ಬಿಜೆಪಿಯೇತರ ರಾಜ್ಯಸರಕಾರಗಳೂ ಕೂಡ ಈ ನೋಟು ಹಿಂಪಡಿಕೆಯಿಂದ ತಂತಮ್ಮ ರಾಜ್ಯಗ¼ಲ್ಲಿ  ಕಷ್ಟಪಡುತ್ತಿರುವ ಜನರಿಗೆ ಪರಿಹಾರ ಒದಗಿಸಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದು ಅದು ನಿರೀಕ್ಷೆ ವ್ಯಕ್ತಪಡಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಹಲವೆಡೆಗಳಲ್ಲಿ ಮಾರುಕಟ್ಟೆಗಳು ಮುಚ್ಚಿವೆ. ಜನಗಳಿಗೆ ಕನಿಷ್ಟ ಆವಶ್ಯಕತೆಗಳನ್ನು ಖರೀದಿಸಲು, ಜೀವವುಳಿಸುವ ಔಷಧಿ ಇತ್ಯಾದಿಗಳನ್ನು ಖರೀದಿಸಲೂ ಆಗುತ್ತಿಲ್ಲ. ನಮ್ಮ ಜನಗಳಲ್ಲಿ ಹೆಚ್ಚಿನವರು ಬ್ಯಾಂಕಿಂಗ್ ಮತ್ತು ನಗದೇತರ ವ್ಯವಸ್ಥೆಯ ಹೊರಗೆ ಇರುವವರು. ಕೃಷಿ ಕಾರ್ಮಿಕರು, ಮೀನುಗಾರರು, ದಿನಗೂಲಿಯವರು, ತರಕಾರಿ ಮಾರುವವರು, ಟ್ರಕ್‍ಡ್ರೈವರ್‍ಗಳು ಮುಂತಾದ ಹಲವಾರು ಜನವಿಭಾಗಗಳು ಇದರಲ್ಲಿ ಸೇರಿವೆ. ಇವರೆಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಕ್ರಮ ಪ್ರಧಾನ ಮಂತ್ರಿಗಳು ಹೇಳಿರುವ ನಾಲ್ಕು ಗುರಿಗಳನ್ನೂ ಕೂಡ, ಅಂದರೆ, ಕಪ್ಪು ಹಣ, ಭ್ರಷ್ಟಾಚಾರ, ನಕಲಿ ನೋಟುಗಳು ಮತ್ತು ಭಯೋತ್ಪಾದನೆಗೆ ಹಣ ಪೂರೈಕೆಯ ಮೇಲೆ ದಾಳಿಯ ಗುರಿಗಳನ್ನು ಕೂಡ ಈಡೇರಿಸುವುದಿಲ್ಲ ಎಂದಿದೆ.

ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಕಪ್ಪು ಹಣದ ಬಹುಪಾಲು ವಿದೇಶಿ ಕರೆನ್ಸಿಯಲ್ಲಿ ಸಾಗರದಾಚೆಗಿನ ಖಾತೆಗಳಲ್ಲಿ ಜಮಾ ಆಗುತ್ತಿವೆ. ಇದನ್ನು ಹಿಂದಕ್ಕೆ ತರಲು ಯಾವುದೇ ಪ್ರಯತ್ನ ನಡೆದಿಲ್ಲ. ಕಪ್ಪು ಹಣದಲ್ಲಿ ನಗದು ಕೇವಲ 6ಶೇ. ಮಾತ್ರ. ಅಲ್ಲದೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಪರವಾಗಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‍ಸ್ಟಿಟ್ಯುಟ್, ಕೊಲ್ಕತ ನಡೆಸಿರುವ ಅಧ್ಯಯನದ ಪ್ರಕಾರ ಈಗ ಹಿಂತೆಗೆದುಕೊಂಡಿರುವ ಕರೆನ್ಸಿಗಳಲ್ಲಿ 0.028 ಶೇ. ಮಾತ್ರ ನಕಲಿ ನೋಟುಗಳು.

ಕಪ್ಪು ಹಣದ ಮುಖ್ಯ ಮೂಲಗಳ ಮೇಲೆ ದಾಳಿ ನಡೆಸಿಯೇ ಇಲ್ಲ

ಪಾರ್ಟಿಸಿಪೇಟರಿ ನೋಟ್‍ಗಳು ಮತ್ತು ತೆರಿಗೆ ತಪ್ಪಿಸುವ  ಪ್ರದೇಶಗಳ ಮೂಲಕ ಹಣದ ರವಾನೆ ಕಪ್ಪು ಹಣವನ್ನು ಬಿಳಿ ಮಾಡುವ ಮೂಲ ದಾರಿಗಳು. ಅವನ್ನು ಮುಟ್ಟಿಯೇ ಇಲ್ಲ. ಕಪ್ಪು ಹಣವನ್ನು ಉತ್ಪತ್ತಿಯಾಗುವ ಮೂಲಗಳಾದ ರಿಯಲ್ ಎಸ್ಟೇಟ್ ಮುಂತಾದವುಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ನಡೆಸಿಲ್ಲ ಎಂಬ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.

ಹಲವು ರಾಜ್ಯಗಳಲ್ಲಿ ಸ್ಥಳೀಯ ಬಿಜೆಪಿ ಘಟಕಗಳು ಪ್ರಧಾನ ಮಂತ್ರಿಗಳ ಪ್ರಕಟಣೆಯ ಕೆಲವೇ ಗಂಟೆಗಳ ಮೊದಲು 500 ಮತ್ತು 1000ದ ನೋಟುಗಳಲ್ಲಿ ಅಪಾರ ಹಣವನ್ನು ಜಮಾ ಮಾಡಿವೆ ಎಂಬುದನ್ನು ವರದಿಗಳು ತೋರಿಸಿವೆ. ಈ ವಿಷಯದಲ್ಲಿ ಪಶ್ಚಿಮ ಬಂಗಾಲದ ಬಿಜೆಪಿ ಘಟಕದ ಬಗ್ಗೆ ಮೂರ್ತ ಸಾಕ್ಷ್ಯ ಮಾಧ್ಯಮಗಳಲ್ಲಿ ಬಯಲಾಗಿದೆ ಎಂಬ ಸಂಗತಿಯತ್ತವೂ ಸಿಪಿಐ(ಎಂ) ಗಮನ ಸೆಳೆದಿದೆ.

ಶಾರದಾ ಮೊದಲಾದ ಚಿಟ್‍ಪಂಡ್‍ಗಳ ಮೂಲಕ ಹಣವನ್ನು ತೊಳೆಯುವ ಕೇಸುಗಳು ಎಲ್ಲರಿಗೂ ಗೊತ್ತಿವೆ. ಶಾರದಾ ಕೇಸಿನಲ್ಲಿ ಕರೆನ್ಸಿ ನೋಟುಗಳನ್ನು ಬಹಿರಂಗವಾಗಿಯೇ ಸ್ವೀಕರಿಸಲಾಗಿದೆಯೆಂಬುದು ನಾರದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇವು ಯಾವುದರ ತನಿಖೆಯನ್ನೂ ನಡೆಸಿಲ್ಲ. ಜನಸಾಮಾನ್ಯರ ಉಳಿತಾಯದ ಹಣವನ್ನು ಲೂಟಿ ಮಾಡಲಾಗಿದೆ. ಆದರೆ ಆ ಹಣವನ್ನು ಅವರು ಮರಳಿ ಪಡೆಯುವಂತೆ ಮಾಡಲು ಈ ಸರಕಾರ ಏನೂ ಮಾಡಿಲ್ಲ, ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ.

ಕಪ್ಪು ಹಣವನ್ನು ಹಿಂದಕ್ಕೆ ತರುವಲ್ಲಿ ಈ ಸರಕಾರದ ಅಪ್ರಾಮಾಣಿಕತೆಯೂ ಎದ್ದು ಕಾಣುತ್ತಿದೆ. ತೆರಿಗೆ ತಪ್ಪಿಸುವ ಪ್ರದೇಶಗಳಲ್ಲಿ ಬ್ಯಾಂಕ್ ಠೇವಣಿಗಳನ್ನು, ಖಾತೆಗಳನ್ನು ಹೊಂದಿರುವವರ ಪಟ್ಟಿಯನ್ನು ಸಾರ್ವಜನಿಕಗೊಳಿಸಲು ಅದು ಹಿಂದೆ-ಮುಂದೆ ನೋಡುತ್ತಿದೆ, ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಅಪಾರ ಮೊತ್ತದ ಸಾಲಗಳಲ್ಲಿ ಅಂದಾಜು ಸುಮಾರು 11ಲಕ್ಷ ಕೋಟಿ ರೂ.ಗಳಷ್ಟನ್ನು ಹಿಂದಿರುಗಿಸಲು ನಿರಾಕರಿಸುತ್ತಿರುವವರ ಪಟ್ಟಿಯನ್ನು ಬಿಡುಗಡೆ ಮಾಡಲು ಕೂಡ ಈ ಸರಕಾರ ಹಿಂಜರಿಯುತ್ತಿದೆ.

ಹೆಚ್ಚಿನ ಸರಕಾರೀ ಒಡೆತನದ ಬ್ಯಾಂಕುಗಳಲ್ಲಿ ಮರುಪಾವತಿಯಾಗದ ‘ಕೆಟ್ಟ ಸಾಲ’ಗಳಿಗಾಗಿ ಒದಗಿಸಲಿಟ್ಟಿರುವ ಮೊತ್ತ 2015-16ರಲ್ಲಿ ದುಪ್ಪಟ್ಟಾಗಿದೆ, ಕೆಲವು ಕಡೆ ಮೂರು ಪಟ್ಟೂ ಆಗಿದೆ ಎಂಬುದನ್ನು ಇತ್ತೀಚಿನ ವರದಿಗಳು ತೋರಿಸುತ್ತಿವೆ. ಈ ಕೆಟ್ಟ ಸಾಲಗಳನ್ನು ವಸೂಲಿ ಮಾಡುವ ಒಂದು ಸತತ ಪ್ರಯತ್ನವೂ ಕಾಣುತ್ತಿಲ್ಲ. ಬದಲಾಗಿ, ಬಿಜೆಪಿ ಸರಕಾರ 2014-16ರ ಎರಡು ವರ್ಷಗಳಲ್ಲಿ ಒಟ್ಟು 1,12,078 ಕೋಟಿ ರೂ.ಗಳಷ್ಟು ಸಾಲಗಳನ್ನು ಮನ್ನಾ ಮಾಡಿದೆ.

ಭಾರತ ಸರಕಾರ/ ರಿಝರ್ವ್ ಬ್ಯಾಂಕ್ ಶೆಡ್ಯೂಲ್ಡ್ ಬ್ಯಾಂಕ್‍ಗಳಿಗೆ 500, 1000ದ ನೋಟುಗಳನ್ನು ಸ್ವೀಕರಿಸಿ ವಿನಿಮಯ ಮಾಡಲು ಅನುಮತಿ ನೀಡಿದೆ, ನಗರ ಸಹಕಾರಿ ಬ್ಯಾಂಕುಗಳಿಗೂ ಇಂತಹ ಅನುಮತಿ ನೀಡಲಾಗಿದೆ. ಆದರೆ ಜಿಲ್ಲಾ ಮತ್ತು ಪ್ರಾಥಮಿಕ ಬ್ಯಾಂಕುಗಳಿಗೆ ಅನುಮತಿ ನೀಡಿಲ್ಲ. ಈ ಅನುಮತಿಯನ್ನು ಅವುಗಳಿಗೂ ವಿಸ್ತರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ. ಇದು ಈ ಕ್ರಮದಿಂದ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ಗ್ರಾಮೀಣ ಪ್ರದೇಶದ ಜನತೆಗೆ ಸಾಕಷ್ಟು ಪರಿಹಾರ ನೀಡಬಲ್ಲದು ಎಂದು ಅದು ಅಭಿಪ್ರಾಯ ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಮೇಲೆ ಹೇಳಿದಂತೆ

(1) ಅಗತ್ಯ ಕರೆನ್ಸಿ ನೋಟುಗಳ ಲಭ್ಯತೆ ಮತ್ತು ಹೊಸ ನೋಟುಗಳಿಗೆ ಅನುಗುಣವಾಗಿ ಎಟಿಎಂಗಳ ಮರುವ್ಯವಸ್ಥೆ ಆಗುವ ವರೆಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು, ಸರಕಾರವೇ ನಿಗದಿಪಡಿಸಿರುವ ಡಿಸೆಂಬರ್30ರ ಸಮಯ ಮಿತಿಯ ವರೆಗೆ 500 ಮತ್ತು 1000ದ ನೋಟುಗಳಲ್ಲಿ ವ್ಯವಹಾರ ನಡೆಸಲು ಜನಗಳಿಗೆ ಅವಕಾಶ ಕೊಡಬೇಕು.

(2) ಕೇರಳ ಮತ್ತು ತ್ರಿಪುರ ಮುಖ್ಯಮಂತ್ರಿಗಳು ಪರ್ಯಾಯ ವ್ಯವಸ್ಥೆ ದೃಢವಾಗಿ ಜಾರಿಗೊಳ್ಳುವ ವರೆಗೆ 500 ಮತ್ತು 1000 ರೂ.ಗಳ ನೋಟುಗಳನ್ನು ಸ್ವೀಕರಿಸಲು ತಮ್ಮ ರಾಜ್ಯ ಸರಕಾರಗಳಿಗೆ ಅನುಮತಿ ನೀಡಬೇಕೆಂದು ಮುಂದಿಟ್ಟಿರುವ ವಿನಂತಿಯನ್ನು ಒಪ್ಪಬೇಕು ಎಂದು ಆಗ್ರಹಿಸಿದೆ.

ಇತರ ಬಿಜೆಪಿಯೇತರ ರಾಜ್ಯಸರಕಾರಗಳೂ ಕೂಡ ಈ ನೋಟು ಹಿಂಪಡಿಕೆಯಿಂದ ತಂತಮ್ಮ ರಾಜ್ಯಗಳಲ್ಲಿ  ಕಷ್ಟಪಡುತ್ತಿರುವ ಜನರಿಗೆ ಪರಿಹಾರ ಒದಗಿಸಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತವೆ ಎಂದು ಅದು ನಿರೀಕ್ಷೆ ವ್ಯಕ್ತಪಡಿಸಿದೆ.

(3) ಪರ್ಯಾಯ ವ್ಯವಸ್ಥೆಗಳನ್ನು ಮಾಡುವ ವರೆಗೆ ಅಥವ ಡಿಸೆಂಬರ್ 30, 2016ರ ವರೆಗಾದರೂ ಈ ನೋಟುಗಳ ಬಳಕೆಗೆ ಅವಕಾಶ ಕೊಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿ  ದೇಶಾದ್ಯಂತ ಪಕ್ಷದ ಘಟಕಗಳು ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಪೊಲಿಟ್‍ಬ್ಯುರೊ ಕರೆ ನೀಡಿದೆ.

ತಮ್ಮ ಕಾನೂನುಬದ್ಧ ಹಣವನ್ನು ಪರಿವರ್ತಿಸಿಕೊಳ್ಳಲು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮುಂದೆ ದೀರ್ಘವಾದ ಸಾಲುಗಳಲ್ಲಿ ನಿಂತಿರುವ ಜನಗಳಿಗೆ ಸಕ್ರಿಯವಾಗಿ ಸಹಾಯ ಮಾಡಬೇಕು, ನೆರವಾಗಬೇಕು ಎಂದೂ ತನ್ನ ಎಲ್ಲ ಸದಸ್ಯರಿಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ ನೀಡಿದೆ.

Leave a Reply

Your email address will not be published. Required fields are marked *