ಕರೆನ್ಸಿ ಬಿಕ್ಕಟ್ಟು: ಸರಕಾರದ ನಿರ್ದಯ ಕ್ರಮಗಳು : ಆಂದೋಲನಕ್ಕೆ ಕರೆ

ದೇಶದ ಜನತೆಯನ್ನು ಅತ್ಯಂತ ಅಮಾನವೀಯ ಕಿರುಕುಳಕ್ಕೆ ಗುರಿಪಡಿಸಲಾಗುತ್ತಿದೆ. ಅವರ ದೈನಂದಿನ ಜೀವನಾಧಾರ ಕುಸಿಯುತ್ತಿದೆ. ಸರಕಾರದ ನಿರ್ಣಯದಿಂದಾಗಿ ಈಗಾಗಲೇ ಸುಮಾರು 47 ಸಾವುಗಳು ಸಂಭವಿಸಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರೆನ್ಸಿ ನೋಟುಗಳು ಲಭ್ಯವಾಗುವ ವರೆಗೆ, ಸರಕಾರವೇ ವಿಧಿಸಿರುವ ಡಿಸೆಂಬರ್ 30ರ ವರೆಗೆ ಹಳೆಯ ನೋಟುಗಳಲ್ಲಿ ವ್ಯವಹಾರಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಸಿಪಿಐ(ಎಂ) ಪೊಲಿಟ್‍ಬ್ಯರೊ ಪುನರುಚ್ಚರಿಸಿದೆ.

ಮೋದಿ ಸರಕಾರ ಇನ್ನಷ್ಟು ನಿರ್ದಯ ಕ್ರಮಗಳನ್ನು ಕೈಗೊಂಡಿದೆ, ಅವು 1000 ಮತ್ತು 500 ರೂಪಾಯಿಗಳ ನೋಟುಗಳನ್ನು ಕಾನೂನುಬಾಹಿರಗೊಳಿಸುವ ಈ ಅತ್ಯಂತ ಕೆಟ್ಟದಾಗಿ ರೂಪಿಸಿದ ನಿರ್ಧಾರದಿಂದ ಜನರಿಗೆ ಉಂಟಾಗಿರುವ ಸಂಕಟಗಳನ್ನು ಮತ್ತಷ್ಟು ತೀವ್ರಗೊಳಿಸುತ್ತವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಜನಗಳಿಗೆ ತಕ್ಷಣದ ಪರಿಹಾರ ಕ್ರಮಗಳ ಬದಲು ಸರಕಾರ ನೋಟು  ವಿನಿಮಯ ಮಿತಿಯನ್ನು ಪ್ರತಿ ವ್ಯಕ್ತಿಗೆ 4500ರೂ.ನಿಂದ 2000ರೂ.ಗೆ ಇಳಿಸಿತು. ಇದು ಬಡ ವಿಭಾಗಗಳನ್ನು ಇನ್ನೂ ಕೆಟ್ಟದಾಗಿ ತಟ್ಟುತ್ತದೆ, ಅವರು ಈಗ ತಮ್ಮ ಅಲ್ಪ ನಗದು ಉಳಿತಾಯಗಳನ್ನು  ಪರಿವರ್ತಿಸಲು ಸರತಿಯ ಸಾಲುಗಳಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕಾಗಿದೆ.

ಖಾತೆ ತೆರೆಯಲು ಪಾನ್ ಕಾರ್ಡ್ ಕಡ್ಡಾಯಗೊಳಿಸುವ ನಿರ್ಣಯ ತಿಳಿಸಲಾಗಿದೆ. ಇದು ನಗರಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳ ಬಡವರು ಬ್ಯಾಂಕ್ ಖಾತೆ ತೆರೆಯುವುದನ್ನು ಅಸಾಧ್ಯಗೊಳಿಸಿದೆ. ಬಹುಪಾಲು ಕಾರ್ಮಿಕರು ಅನೌಪಚಾರಿಕ ವಲಯದ ಕಾರ್ಮಿಕರಾಗಿದ್ದು ಅವರಿಗೆ ನಗದು ಸಂಬಳ ಪಡೆಯುವುದು ಅತ್ಯಂತ ಕಷ್ಟಕರವಾಗಿದೆ. ಬ್ಯಾಂಕುಗಳಲ್ಲಿನ ಜನನಿಬಿಡತೆಯಿಂದಾಗಿ ಅವರು ಬ್ಯಾಂಕ್ ಖಾತೆಗಳನ್ನು ತೆರೆಯುವುದೂ ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಂತ ಕಷ್ಟಕರವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಸಹಕಾರಿ ಬ್ಯಾಂಕ್‍ಗಳು ನೋಟುಗಳ ಸ್ವೀಕಾರ ಮತ್ತು ವಿನಿಮಯ ಮಾಡದಂತೆ ನಿಷೇಧ ಹಾಕಿರುವುದು ಈ ವಲಯವನ್ನು ತೀವ್ರವಾಗಿ ಹಾಳುಗೆಡವುತ್ತಿದೆ. ಇದು ಲಕ್ಷಾಂತರ ರೈತರು ಮತ್ತು ಗ್ರಾಮೀಣ ಜನಗಳನ್ನು ತೀವ್ರ ಕಷ್ಟಗಳಿಗೆ ಈಡು ಮಾಡಿದೆ. ಇಂತಹ ವ್ಯವಹಾರಗಳನ್ನು ನಡೆಸಲು ಆರ್‍ಬಿಐ ತಕ್ಷಣವೇ ಜಿಲ್ಲಾ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕುಗಳಿಗೆ ಅವಕಾಶ ನೀಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಸರಕಾರದ ಈ ನಿರ್ಣಯಗಳನ್ನು ಖಂಡಿಸಿರುವ ಪೊಲಿಟ್‍ಬ್ಯುರೊ ಇವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದೆ.

ಈ ಬೇಡಿಕೆಗಳ ಮೇಲೆ ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು ಮತ್ತು ಒಂದು ಐಕ್ಯ ಆಂದೋಲನವನ್ನು ಕಟ್ಟಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *