ಉಪಲೋಕಾಯುಕ್ತ ಪದಚ್ಯುತಿ

ಸರಕಾರಗಳು ಅವುಗಳ ಮುಂದಿರುವ ಸಂಕೀರ್ಣ ಕಾರ್ಯಭಾರಗಳ ದೆಸೆಯಿಂದ ಆಗೊಮ್ಮೆ ಈಗೊಮ್ಮೆ ಎಡವುದು ಸಹಜ. ಆದರೆ ಕರ್ನಾಟಕ ಸರಕಾರ ಹೆಜ್ಜೆ ಹೆಜ್ಜೆಗೂ ಎಡವುತ್ತಿರುವುದು, ತಡವರಸಿಕೊಂಡು ಏಳುವುದು, ಪುನಃ ಎಡವುದರಲ್ಲಿ ರೆಕಾರ್ಡು ಮಾಡಿದೆ ಎಂದು ಹೇಳದೆ ವಿಧಿಯಿಲ್ಲ. ಉಪ ಲೋಕಾಯುಕ್ತ ಅಡಿ ಅವರ ಪದಚ್ಯುತಿ ನಿರ್ಣಯದ ಬಗ್ಗೆ ಇನ್ನೊಂದು ಯೂ-ಟರ್ನ್, ಲೋಕಾಯುಕ್ತ ನೇಮಕ ಪ್ರಕ್ರಿಯೆಯಲ್ಲಿ ನಿರ್ಣಾಯಕ ತ್ವರಿತ ಕ್ರಮದ ಅಭಾವ, ಇಲಾಖೆಗಳ ಅನುದಾನದ ಬಳಕೆಯಲ್ಲಿ ಅತ್ಯಂತ ಕೆಟ್ಟ ಪ್ರಗತಿ, ಸೂಕ್ತ ಕ್ರಮಗಳ ಅಭಾವದಿಂದ ರೈತ ಆತ್ಮಹತ್ಯೆಗಳು ಸಾವಿರ ದಾಟಿರುವುದು – ಈ ವಾರ ಬೆಳಕಿಗೆ ಬಂದ ಸರಕಾರ ಎಡವಿರುವ ಉದಾಹರಣೆಗಳು.

ಉಪ ಲೋಕಾಯುಕ್ತ ನ್ಯಾ. ಅಡಿ ಅವರ ವಿರುದ್ಧ ಪದಚ್ಯುತಿ ನಿರ್ಣಯ ಮಂಡನೆ ಆಗಿದೆ. ಆದರೆ ಅಂಗೀಕೃತವಾಗಿಲ್ಲ ಎಂದು ಹೇಳಿ ಇಡೀ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಕೆಲವೇ ದಿನಗಳ ಹಿಂದೆ ಪ್ರಯತ್ನಿಸಿದ ಸರಕಾರ ಇನ್ನೊಂದು ಯೂ-ಟರ್ನ್ ಮಾಡಿದೆ. ಈಗ ನ್ಯಾ. ಅಡಿ ಅವರ ವಿರುದ್ಧ ಸಾಕ್ಷ್ಯಾಧಾರಗಳು ಇವೆ. ಅದನ್ನು ಸದ್ಯದಲ್ಲೇ ಸ್ಪೀಕರ್ ಮುಖ್ಯ ನ್ಯಾಯಾಧೀಶರಿಗೆ ಮಂಡಿಸಲಿದ್ದಾರೆ ಎಂದು ಕಾಂಗ್ರೆಸ್ ವಲಯಗಳಿಂದ ಕೇಳಿ ಬರುತ್ತಿರುವುದು ಎಂಬುದು ತೀರಾ ಎಡವಟ್ಟಿನ ಬೆಳವಣಿಗೆ. ಸರಕಾರ ಪದಚ್ಯುತಿ ಪ್ರಕ್ರಿಯೆಯನ್ನು ಹಿಂದಕ್ಕೆ ತೆಗೆದುಕೊಳ್ಳಬಯಸುತ್ತದೆಯೇ ಇಲ್ಲವೇ ಮುಂದೆ ಒಯ್ಯಬಯಸುತ್ತದೆಯೇ ಎಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು.

ಲೋಕಾಯುಕ್ತ ನೇಮಕದಲ್ಲೂ ಅಷ್ಟೇ. ನಿರ್ಣಾಯಕ ತ್ವರಿತ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ಕಳಂಕ ರಹಿತ ವ್ಯಕ್ತಿಯ ನೇಮಕ ಮಾಡಲು ಮುತುವರ್ಜಿ ವಹಿಸಬೇಕು. ಈ ಎರಡೂ ವಿಷಯಗಳ ಬಗೆಗೂ ನಿರ್ಣಯ ತೆಗೆದುಕೊಳ್ಳುವಾಗ ಲೋಕಾಯುಕ್ತ ಸಂಸ್ಥೆಯ, ಸರಕಾರದ ಘನತೆ, ವಿಶ್ವಾಸಾರ್ಹತೆ ಕಡಿಮೆ ಮಾಡುವ ಯಾವುದೇ ಧೋರಣೆ, ಕ್ರಮಗಳಿಗೆ ಮುಂದಾಗಬಾರದು. ಅದನ್ನು ರಾಜಕೀಯಕರಣಗೊಳಿಸಬಾರದು. ಅದು ಬೀದಿ ಜಗಳದ ವಿಷಯವಾಗಬಾರದು. ಪ್ರಮುಖ ವಿರೋಧ ಪಕ್ಷ ಸಹ ಇದಕ್ಕೆ ಬದ್ಧವಾಗಿರಬೇಕು. ಆದರೆ ಆಳುವ ಮತ್ತು ಪ್ರಮುಖ ವಿರೋಧ ಪಕ್ಷಗಳೆರಡೂ ಲೋಕಾಯುಕ್ತ ಸಂಸ್ಥೆಯ ವಿಷಯಗಳಲ್ಲಿ ತರುತ್ತಿರುವ ಕೀಳುಮಟ್ಟದ ರಾಜಕೀಯಕರಣ ಈ ಎರಡೂ ಪಕ್ಷಗಳ ಮತ್ತು ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ದೃಷ್ಟಿಯಿಂದಲೂ ತೀರಾ ಅಪಾಯಕಾರಿ. ಅದನ್ನು ತಕ್ಷಣವೇ ನಿಲ್ಲಿಸಬೇಕು.

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಉಪಯೋಜನೆ ಅನುದಾನ ಬಳಕೆಯಾಗಿರುವುದು ಒಂಬತ್ತು ತಿಂಗಳು ಕಳೆದ ನಂತರವೂ ಕೇವಲ ಶೇ. 40 ಎನ್ನುವುದು ತೀರಾ ಆತಂಕಕಾರಿ ಮತ್ತು ಸರಕಾರಕ್ಕೆ ನಾಚಿಕೆಗೇಡಿನ ವಿಷಯ. ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನದ ಬಳಕೆ ಕೇವಲ ಶೇ. 39.21. ಪರಿಶಿಷ್ಟ ಬುಡಕಟ್ಟು ಅಭಿವೃದ್ಧಿ ಉಪಯೋಜನೆ ಅನುದಾನ ಬಳಕೆ ಹಂಚಿಕೆಯಾದ ಅನುದಾನದ ಕೇವಲ ಶೇ. 42.59 ರಷ್ಟಿದೆ. ಕೆಲವು ಇಲಾಖೆಗಳು ಶೇ 10 ರಷ್ಟು ಸಹ (ಉದಾ: ಮೀನುಗಾರಿಕೆ 17 ರಲ್ಲಿ ಬರಿಯ 2 ಕೋಟಿ ರೂ., ಜಲಸಂಪನ್ಮೂಲ 1709ರಲ್ಲಿ ಬರಿಯ 91 ಕೋಟಿ ರೂ.), ಹೆಚ್ಚಿನ ಇಲಾಖೆಗಳು ಶೆ. 30 ರಷ್ಟು (ಉದಾ: ಲೋಕೋಪಯೋಗಿ 582ರಲ್ಲಿ 77 ಕೋಟಿ ರೂ., ಸಮಾಜ ಕಲ್ಯಾಣ 2935ರಲ್ಲಿ 1140 ಕೋಟಿ ರೂ.) ಸಹ ಖರ್ಚು ಮಾಡಿಲ್ಲ. ಇದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮುಖ್ಯ ಮಂತ್ರಿಗಳ ಪ್ರಗತಿ ಪರಿಶಿಲನೆಯ ಸಂದರ್ಭದಲ್ಲಿ ತಿಳಿದು ಬಂದಿದೆ.

ಅನುದಾನದ ಹಂಚಿಕೆಯ ಸುಮಾರು ಶೇ. 54 ರಷ್ಟು ಮಾತ್ರ ಬಿಡುಗಡೆಯಾಗಿದೆ ಎಂಬುದು ಸಹ ತಿಳಿದು ಬಂದಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇ, 7 ರಷ್ಟು ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿರುವ ಬಗ್ಗೆಯೂ ಚರ್ಚೆ ನಡೆಯಿತು ಎಂದು ವರದಿಯಾಗಿದೆ. ಮುಖ್ಯ ಮಂತ್ರಿ ಈ ಬಗ್ಗೆ ಸಮಾಜ ಕಲ್ಯಾಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರ್ಚಿನೊಳಗೆ ಇಡಿಯ ಅನುದಾನದ ಬಳಕೆಯಾಗಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು. ಆದರೆ ಇದು ಸರಕಾರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಲ್ಲೂ ಎಡವುತ್ತಿರುವುದಕ್ಕೆ ಹಿಡಿದ ಕನ್ನಡಿ ಎನ್ನಲೇಬೇಕಾಗಿದೆ.

ಕಂದಾಯ ಇಲಾಖೆಯ ವರದಿಯ ಪ್ರಕಾರ ಕರ್ನಾಟಕದಲ್ಲಿ 18.6.2015 ರಿಂದ ಜನವರಿ 12, 2016 ರ ವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಒಂದು ಸಾವಿರ ದಾಟಿದೆ. ಅಂದರೆ ಜೂನ್ ಸುಮಾರಿಗೆ ಆರಂಭವಾದ ರೈತರ ಸರಣಿ ಆತ್ಮಹತ್ಯೆಗಳು ಇನ್ನೂ ನಿಂತಿಲ್ಲ. ಈ ಬಗ್ಗೆ ಸರಕಾರ ಯಾವುದೇ ತುರ್ತಿನ ಕ್ರಮಗಳನ್ನು ಕೈಗೊಂಡಿಲ್ಲ. ಕೈಗೊಂಡ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದೇ ಇದರರ್ಥ. ಕಬ್ಬು, ಭತ್ತ, ತೊಗರಿ, ಹತ್ತಿ ಮುಂತಾದ ಬೆಳೆಗಳಿಗೆ ನಿರ್ದಿಷ್ಟವಾದ ಹಾಗೂ ಎಲ್ಲಕ್ಕೂ ಸಾಮಾನ್ಯವಾದ ಯಾವುದೇ ಕ್ರಮವನ್ನು ಕೈಗೊಳ್ಳುವಲ್ಲಿ ಸರಕಾರ ಅಡಿಗಡಿಗೂ ಎಡವುತ್ತಿದೆ. ಈ ಪ್ರಶ್ನೆಗಳನ್ನು ವಿಶ್ಲೇಷಿಸಿ ಇದಕ್ಕೆ ಪರಿಹಾರ ಸೂಚಿಸುವ ಲೇಖನಮಾಲೆ ಈ ವಾರದ ಸಂಚಿಕೆಯಿಂದ ಆರಂಭವಾಗಿದೆ. ಈ ಪ್ರಶ್ನೆಯನ್ನು ಪರಿಶೀಲಿಸುವ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇವು ಆತ್ಮಹತ್ಯೆಗಳಲ್ಲ, ಸರ್ಕಾರೀ ಪ್ರಾಯೋಜಿತ ಕಗ್ಗೊಲೆಗಳು ಎನ್ನುತ್ತಾರೆ. ಈ ಲೇಖನಮಾಲೆಯಲ್ಲ್ಲಿ ಸೂಚಿಸಲಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ಈ ಸರಕಾರ ‘ರೈತರ ಸರಣಿ ಆತ್ಮಹತ್ಯೆಗಳ’ ಸರಕಾರ ಎಂದು ಕುಖ್ಯಾತವಾಗುತ್ತದೆ ಎಂದು ಎಚ್ಚರಿಸಬೇಕಾದ ಕಾಲ ಬಂದಿದೆ.

Leave a Reply

Your email address will not be published. Required fields are marked *