ರೈತ ಹುತಾತ್ಮ ಜ್ಯೋತಿ ಬೆಂಗಳೂರು ತಲುಪಿದ ದಿನ

5 ಫೆಬ್ರವರಿ 1981

ಬೆಂಗಳೂರು ನಗರ ತನ್ನ ಇತಿಹಾಸದಲ್ಲೇ ಅಭೂತಪೂರ್ವ ಎನ್ನುವಂತಹ ರೈತ-ಕಾರ್ಮಿಕ ಜಾಥಾವನ್ನು ಕಂಡ ದಿನ. ರೈತ ಹುತಾತ್ಮ ಜ್ಯೋತಿಯನ್ನು ಹೊತ್ತ ರೈತರ ಕಾಲ್ನಡೆಗೆ ಜಾಥಾ ಅಂದು ಬೆಂಗಳೂರು ತಲುಪಿದ ದಿನ. ರಾಜ್ಯದ ಮೂಲೆ ಮೂಲೆಗಳಿಂದ ಉಪಜಾಥಾಗಳೊಂದಿಗೆ ನರಗುಂದ ಜಾಥಾವನ್ನು ಸೇರಿಕೊಂಡ ರೈತರ ಸಂಖ್ಯೆ ಹತ್ತಾರು ಪಟ್ಟು ಏರಿ ಬೆಂಗಳೂರಿನ ಹಾದಿಬೀದಿಗಳಲ್ಲಿ ರೈತರೇ ರೈತರು. ತಮ್ಮ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ದೊರೆ (ಕರ್ನಾಟಕ ಸರಕಾರದ ಮುಖ್ಯಮಂತ್ರಿ) ಯನ್ನು ಒತ್ತಾಯಿಸಲು ಅವರು ಬಂದಿದ್ದರು. ರೈತರ ಬೆಂಬಲಕ್ಕೆ ಬೆಂಗಳೂರಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಗಿ ಬಂದಿದ್ದರು. ಅವರ್ಯಾರು ಬರಿಗೈಯಲ್ಲಿ ಬಂದಿರಲಿಲ್ಲ. ಪ್ರತಿಯೊಬ್ಬ ಕಾರ್ಮಿಕ ತನ್ನ ಕೈಯಲ್ಲಿ ರೈತರಿಗಾಗಿ ಅನ್ನದ ಪೊಟ್ಟಣ ಹಿಡಿದುಕೊಂಡು ಬಂದಿದ್ದ.

ಶಾಂತಿಯುತ ಮೆರವಣಿಗೆ ನಡೆಸಿ ಕಬ್ಬನ್‍ಪಾರ್ಕ್‍ನಲ್ಲಿ ಸಂಜೆ ಸಭೆ ಸೇರಿದಾಗ, ಈ ಜನಸಾಗರ ಕಂಡು ಬೆಂಗಳೂರು ಜನಮನದಲ್ಲಿ ರೋಮಾಂಚನ. “ರೈತ-ಕಾರ್ಮಿಕರ ಸಖ್ಯತೆ ಚಿರಾಯುವಾಗಲಿ”, “ನರಗುಂದ ರೈತ ಬಂಡಾಯಕ್ಕೆ ಜಯವಾಗಲಿ”, “ರೈತರು ಬಂದರು ದಾರಿ ಬಿಡಿ ರೈತರ ಕೈಗೆ ರಾಜ್ಯ ಕೊಡಿ” ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಪೊಲೀಸರು ಹಾಕಿದ್ದ ತಡೆಗೋಡೆಗಳನ್ನು ಭೇದಿಸಿ ‘ಹುತಾತ್ಮ ಜ್ಯೋತಿ’ಯನ್ನು ವಿಧಾನಸೌಧದ ಮುಂಬಾಗಿಲಿನಲ್ಲಿ ಇರಿಸುವಲ್ಲಿ ಚಳುವಳಿಗಾರರು ಸಫಲರಾದರು. ಹೆಮ್ಮೆಯಿಂದ ಬೀಗಿದರು. ಹರ್ಷೋದ್ಗಾರಗಳು ಮೊಳಗಿದವು.

Leave a Reply

Your email address will not be published. Required fields are marked *