ಸಂದೇಹಾಸ್ಪದ ನಿಧಿಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ತಪ್ಪಿಸಿ ವರ್ಗಾಯಿಸಲು ಒದಗಿಸುವ ಮಾರ್ಗ

ಚುನಾವಣಾ ಬಾಂಡ್ ಕುರಿತು ಹಣಕಾಸು ಮಂತ್ರಿಗಳಿಗೆ ಯೆಚುರಿ ಪತ್ರ

ಕಳೆದ ಬಜೆಟ್‌ನಲ್ಲಿ ಹೇಳಿದ್ದ ‘ಚುನಾವಣಾ ಬಾಂಡ್’ಗಳನ್ನು ಜಾರಿಗೊಳಿಸ ಬಯಸುವ ಮೋದಿ ಸರಕಾರದ ಹಣಕಾಸು ಮಂತ್ರಿಗಳು ಈ ಬಗ್ಗೆ ಪ್ರತಿಕೂಲ ಪತ್ರಿಕ್ರಿಯೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಈ ಕುರಿತಂತೆ ಸಲಹೆ-ಸೂಚನೆಗಳನ್ನು ತಿಳಿಸಬೇಕೆಂದು ಕೇಳಿದ್ದರು. ಅದಕ್ಕೆ ಸ್ಪಂದಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಬರೆದಿರುವ ಪತ್ರದಲ್ಲಿ ರಾಜಕೀಯ ಪಕ್ಷಗಳಿಗೆ ನಿಧಿ ನೀಡಿಕೆಯನ್ನು ಹಿಂದಿಗಿಂತಲೂ ಇನ್ನಷ್ಟು ಅಪಾರದರ್ಶಕಗೊಳಿಸುವ ಕ್ರಮಗಳಲ್ಲಿ ಇದು ಇನ್ನೊಂದು, ಅದು ಮಾಡುತ್ತಿರುವುದು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಸಂದೇಹಾಸ್ಪದ ನಿಧಿಗಳನ್ನು, ದಾಖಲಾಗದೆ, ಘೋಷಿಸದೆ ಸಾರ್ವಜನಿಕ ವೀಕ್ಷಣೆಯಿಂದ ರಕ್ಷಿಸಿ ವರ್ಗಾಯಿಸಲು ಒಂದು ಮಾರ್ಗವನ್ನು ಒದಗಿಸುವ ಕೆಲಸವನ್ನು ಎಂದು ವಿಷಾದದಿಂದ ಹೇಳಿದ್ದಾರೆ.

ಈ ಚುನಾವಣಾ ಬಾಂಡಿನೊಂದಿಗೆ, ಇದಕ್ಕೆ ಮೊದಲು ಈ ಸರಕಾರ ಕೈಗೊಂಡಿರುವ ಎಫ್‌ಆರ್‌ಸಿಎ ತಿದ್ದುಪಡಿ ಮೂಲಕ ವಿದೇಶಿ ನಿಧಿನೀಡಿಕೆಗೆ ಅವಕಾಶ ಕಲ್ಪಿಸಿರುವುದು ಮತ್ತು ಕಾರ್ಪೊರೇಟ್ ದೇಣಿಗೆಗಳ ಮೇಲಿನ ಗರಿಷ್ಟ ಮಿತಿಯನ್ನು ತೆಗೆಯುವ ಕ್ರಮಗಳು ರಾಜಕೀಯ ನಿಧಿನೀಡಿಕೆಯನ್ನು ಸಾರ್ವಜನಿಕ ಪರೀಕ್ಷಣೆಗೆ ಅವಕಾಶವಿಲ್ಲದ  ಒಂದು ‘ಕರಿ ಪೆಟ್ಟಿಗೆ’(ಬ್ಲಾಕ್ ಬಾಕ್ಸ್) ಯಾಗಿಸಿವೆ, ಇವುಗಳ ಪರಾಮರ್ಶೆ ಮತ್ತು ತಕ್ಷಣವೇ  ಮರುಪರಿಶೀಲನೆ ನಡೆಸಬೇಕು, ಎಂದು ಮೋದಿ ಸರಕಾರವನ್ನು ಯೆಚುರಿಯವರು ಆಗ್ರಹಿಸಿದ್ದಾರೆ. ಅವರ ಈ ಪತ್ರವನ್ನು ಸಿಪಿಐ(ಎಂ) ಬಿಡುಗಡೆ ಮಾಡಿದ್ದು ಅದರ ಪೂರ್ಣಪಾಟವನ್ನು ಇಲ್ಲಿ ಕೊಡಲಾಗಿದೆ.

ಪ್ರಿಯ ಶ್ರೀ ಅರುಣ್ ಜೇಟ್ಲಿಜೀ,

ನೀವು ಚುನಾವಣಾ ನಿಧಿನೀಡಿಕೆಯ ‘ಸುಧಾರಣೆ’ಗಳ ಬಗ್ಗೆ ಸಲಹೆ-ಸೂಚನೆಗಳನ್ನು ಕೇಳಿರುವುದರಿಂದ ಈ ಪತ್ರ ಬರೆಯುತ್ತಿದ್ದೇನೆ.

ಸಿಪಿಐ(ಎಂ) ಸದಾ ಮತ್ತು ನಿರಂತರವಾಗಿ ಸ್ವಚ್ಛ ಚುನಾವಣಾ ನಿಧಿ ನೀಡಿಕೆಯ ಅಗತ್ಯವಿದೆ ಎಂದು ಹೇಳುತ್ತಾ ಬಂದಿದೆ. ವರ್ಷಕಳೆದಂತೆ ಈ ವ್ಯವಸ್ಥೆ ಹೆಚ್ಚು ಹಣವಿರುವವರ ಪರವಾಗುತ್ತಿರುವುದರ ಬಗ್ಗೆ ಆಳವಾದ ಆತಂಕ ಉಂಟು ಮಾಡಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವುದು ಈಗ ಒಂದು ವ್ಯಾಪಾರೋದ್ದಿಮೆಯಂತಾಗಿದೆ, ಸಂಪತ್ತಿರುವವರಿಗೆ ಮಾತ್ರ ಸಾಧ್ಯವೆನ್ನುವಂತಾಗಿದೆ. ಇದರಲ್ಲಿ ಕಟ್ಟುನಿಟ್ಟಾದ ಸುಧಾರಣೆ ಅಗತ್ಯವಾಗಿದೆ.

ಆರಂಭದಲ್ಲಿ, ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ನಿಧಿಗಳನ್ನು ನಿಷೇಧಿಸುವುದು ಒಂದು ಉತ್ತಮ ನಡೆಯಾಗಬಲ್ಲದು. ಕಾರ್ಪೊರೇಟ್‌ಗಳು, ಅದರಲ್ಲೂ ದೊಡ್ಡ ಕಾರ್ಪೊರೇಟ್‌ಗಳು, ರಾಜಕೀಯ ಪಕ್ಷಗಳಿಗೆ ನಿಧಿ ನೀಡಿಕೆಯನ್ನು ಒಂದು ಹೂಡಿಕೆಯಾಗಿ ಕಾಣುತ್ತಾರೆ, ಧೋರಣೆಯನ್ನು ತಮಗೆ ಅನುಕೂಲಕರವಾದ ದಿಕ್ಕುಗಳಲ್ಲಿ ಮುಂದೊತ್ತುವ ಒಂದು ಪರಿಣಾಮಕಾರಿ ಮತ್ತು ಸುಲಭ ಮಾರ್ಗವಾಗಿ  ಕಾಣುತ್ತಾರೆ ಎಂಬುದು ನಮ್ಮ ನಂಬಿಕೆ. ಕಾರ್ಪೊರೇಟ್ ನಿಧಿಗಳನ್ನು ಪಡೆವ ರಾಜಕೀಯ ಪಕ್ಷಗಳು ಕೂಡ ಸರಕಾರದಲ್ಲಿ ಇರುವ ಅವಧಿಯನ್ನು ತಮ್ಮ ‘ಸ್ನೇಹಪರ’ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವ ಧೋರಣೆಗಳನ್ನು ತರಲು ಬಳಸುತ್ತಾರೆ.

ಈ ಕಾರ್ಪೊರೇಟ್‌ಗಳು ನಮ್ಮ ವ್ಯವಸ್ಥೆಯನ್ನು ಕೊರೆಯುತ್ತಿರುವ ಭ್ರಷ್ಟಾಚಾರದ  ‘ಪೂರೈಕೆದಾರರು’. ಕಾರ್ಪೊರೇಟ್ ನಿಧಿ ನೀಡಿಕೆಯನ್ನು ನಿಷೇಧಿಸದೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. 1968ರಿಂದ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ನಿಧಿನೀಡಿಕೆಯ ಮೇಲೆ ಇದ್ದ ನಿಷೇಧವನ್ನು ಸರಕಾರ 1985ರಲ್ಲಿ ತೆಗೆಯಿತು; ಆದರೆ ಅದು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಆಥವ ಕಪ್ಪು ಹಣದ ಸಮಸ್ಯೆಯನ್ನು ಗುಣಪಡಿಸಲಿಲ್ಲ, ಬದಲಿಗೆ ಸಮಸ್ಯೆ ಇನ್ನಷ್ಟು ಹದಗೆಟ್ಟಿತು.

ಈಗ, ಚುನಾವಣಾ ಪ್ರಚಾರಗಳಲ್ಲಿ ಒಬ್ಬ ಅಭ್ಯರ್ಥಿ ಮಾಡಬಹುದಾದ ವೆಚ್ಚದ ಮೇಲೆ ಮಿತಿ ಇದೆ, ಆದರೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚದ ಮೇಲೆ ಯಾವುದೇ ಮಿತಿಯಿಲ್ಲ. ಇದು, ನಿಮಗೆ ತಿಳಿದಿರುವಂತೆ, ಚುನಾವಣಾ ಪ್ರಚಾರದ ವೆಚ್ಚದ ಮೇಲೆ ಮಿತಿ ಹಾಕುವ ವಿಚಾರವನ್ನೆ ಅಪಹಾಸ್ಯಕ್ಕೆ ಈಡುಮಾಡಿದೆ. ರಾಜಕೀಯ ಪಕ್ಷಗಳ ಖರ್ಚುಗಳನ್ನು ಒಂದು ಕಾನೂನು ಮಿತಿಗೆ ಒಳಪಡಿಸಬೇಕು, ಅದರ ಉಲ್ಲಂಘನೆ ಕಠಿಣ ಶಿಕ್ಷೆಗೆ ಗುರಿಯಾಗಬೇಕು.

ಕಾರ್ಪೊರೇಟ್‌ಗಳು, ಭಾರತೀಯ ಸಮಾಜದ ಎಲ್ಲ ಶಕ್ತಿಶಾಲಿ ವಿಭಾಗಗಳಂತೆ, ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಮ್ಮ ಕೊಡುಗೆಯನ್ನೂ ನೀಡುವಂತೆ ಹೇಳಬೇಕಾಗಿದೆ. ಇದು ಅವರ ಲಾಭಗಳ ಒಂದಂಶವನ್ನು ಚುನಾವಣಾ ನಿಧಿ ನೀಡಿಕೆಗೆಂದು ಇರಿಸಿದ ಒಂದು ಪ್ರಭುತ್ವ ನಿಧಿಗೆ ಕೊಡುವ ಸ್ವರೂಪದಲ್ಲಿ ಇರಬೇಕು ಎಂಬುದು ನಮ್ಮ ವಿಚಾರ.

ಚುನಾವಣೆಗಳಲ್ಲಿ ಪ್ರಭುತ್ವ ನಿಧಿ ನೀಡಿಕೆ ಗಮನಾರ್ಹ ಪ್ರಮಾಣದಲ್ಲಾದರೂ ಇರದೆ, ರಾಜಕೀಯ ನಿಧಿ ನೀಡಿಕೆಯ ‘ಶುದ್ಧೀಕರಣ’ ಸಾಧ್ಯವಿಲ್ಲ ಈ ವಿಷಯವನ್ನು  ಸವಿಸ್ತಾರವಾಗಿ ಪರಿಶೀಲಿಸಿರುವ ದಿನೇಶ್ ಗೋಸ್ವಾಮಿ ಸಮಿತಿ ಮತ್ತು ಇಂದರ್ಜಿತ್ ಗುಪ್ತ ಸಮಿತಿ ಕೂಡ ಇದನ್ನು ಶಿಫಾರಸು ಮಾಡಿವೆ. ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’(ಸಿಎಸ್‌ಆರ್) ಎಂದಿರುವಂತೆ ತಮ್ಮ ಗಳಿಕೆಗಳ ಒಂದು ಭಾಗವನ್ನು ಒಂದು ಧನಸಂಗ್ರಹಕ್ಕೆ ದೇಣಿಗೆಯಾಗಿ ನೀಡುವಂತೆ ಕಾರ್ಪೊರೇಟ್‌ಗಳನ್ನು ಕೇಳಬಹುದು.

ಇದನ್ನು ಕೆಲವು ಮಾರ್ಗದರ್ಶಿ ನಿಯಮಗಳಂತೆ( ಅಂದರೆ ರಾಜಕೀಯ ಪಕ್ಷಗಳು ಹಿಂದಿನ ಚುನಾವಣೆಯಲ್ಲಿ ಪಡೆದ ಬೆಂಬಲ, ಮತಗಳಿಕೆಯ ಪಾಲು ಅಥವ ಗೆದ್ದ ಸೀಟುಗಳ ಅನುಪಾತದಲ್ಲಿ) ನೀಡಬಹುದು. ಇದು ಭಾರತೀಯ ಪ್ರಜಾಪ್ರಭುತ್ವದ ಆರೋಗ್ಯಕರ ನಿರ್ವಹಣೆಗೆ ಕೊಡುಗೆ ನೀಡುವ, ಈಗಿರುವುದಕ್ಕಿಂತ ಬಹಳಷ್ಟು ಹೆಚ್ಚು ನ್ಯಾಯಯುತವಾದ  ಮತ್ತು ಪಾರದರ್ಶಕವಾಗಿರುವ ದಾರಿಯಾಗುತ್ತದೆ.

ಉದಾಹರಣೆಗೆ, ಜರ್ಮನಿಯಲ್ಲಿ ಪಕ್ಷಗಳಿಗೆ ಪ್ರಭುತ್ವದ ನಿಧಿನೀಡಿಕೆ ಇದೆ. ಒಂದು ಧನಸಂಗ್ರಹದಿಂದ ಇದನ್ನು ಹಿಂದಿನ ಚುನಾವಣೆಗಳಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಪಡೆದ ಸೀಟುಗಳು ಮತ್ತು ಮತಗಳಿಕೆಯ ಅನುಪಾತದಲ್ಲಿ ಹಂಚಲಾಗುತ್ತದೆ. ಪ್ರತಿವರ್ಷ ರಾಜಕೀಯ ಪಕ್ಷಗಳು ಘೋಷಿಸುವ ಸಂಗ್ರಹಗಳನ್ನು ಪ್ರಭುತ್ವವು ಪಕ್ಷಗಳಿಗೆ ಕೊಡುವ ಹಣದಿಂದ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿಸಲಾಗುತ್ತದೆ. (ಇದಲ್ಲದೆ ಟೆಲಿವಿಶನ್ ಸುದ್ದಿಗಳಲ್ಲಿ ರಾಜಕೀಯ ಪಕ್ಷಗಳಿಗೆಲ್ಲ ಅನುಪಾತಕ್ಕೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ  ಸಮಯವನ್ನು ಲಭ್ಯಗೊಳಿಸುವುದು ಇತ್ಯಾದಿ ಪರೋಕ್ಷ ಸಬ್ಸಿಡಿಗಳೂ ಇವೆ).

ನಮ್ಮ ಪರಿಸ್ಥಿತಿಗಳಿಗೆ  ಸರಿಹೊಂದಿಸಿಕೊಂಡ ಇಂತಹ ಕ್ರಗಳು ರಾಜಕೀಯ ಪಕ್ಷಗಳಿಗೆ ನಿಧಿ ನೀಡಿಕೆಯ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಅಗತ್ಯವಾಗಿದೆ ಎಂಬುದು ನಮ್ಮ ದೃಢವಾದ ನಂಬಿಕೆ.

ನೀವು ಇತ್ತೀಚೆಗೆ ಪರಿಚಯಿಸಿರುವ ಕ್ರಮಗಳು ರಾಜಕೀಯ ನಿಧಿನೀಡಿಕೆಯನ್ನು ಸ್ವಚ್ಛಗೊಳಿಸ ಬಹುದಾಗಿರುವ ಯಾವುದೇ ನಡೆಯನ್ನು ತಿರುಗುಮುರುಗುಗೊಳಿಸಿವೆ ಎಂದು ಹೇಳಲು ನನಗೆ ವಿಷಾದವಾಗುತ್ತಿದೆ. ಚುನಾವಣಾ ಬಾಂಡುಗಳು ಒಂದು ಅತ್ಯಂತ ಪ್ರತಿಗಾಮಿ ನಡೆ. ಅವು ದೇಣಿಗೆದಾರ, ದೇಣಿಗೆ ಪಡೆಯುವಾತ ಮತ್ತು ಮೊತ್ತ ಇವು ಮೂರೂ ಮಹತ್ವದ ಅಂಶಗಳನ್ನು ಅಕ್ಷರಶಃ ಒಂದು ಪ್ರಭುತ್ವ ರಹಸ್ಯವಾಗಿ ಮಾಡಿವೆ. ಇದು ದೇಣಿಗೆದಾರರನ್ನು ಮತದಾರರ ನೆಟ್ಟ ನೋಟದಿಂದ, ಕೆಲವು ಪ್ರಭಾವೀ ದೇಣಿಗೆದಾರರಿಗೆ ನೆರವಾಗುತ್ತದೆಂದೇ ಧೋರಣೆಗಳನ್ನು ಮಾಡಲಾಗುತ್ತಿದೆಯೇ ಎಂದು ತಿಳಿಯಬೇಕಾದ ಮತದಾರರ ನೆಟ್ಟ ನೋಟದಿಂದ ರಕ್ಷಿಸುತ್ತದೆ.

ರಾಜಕೀಯ  ದೇಣಿಗೆಗಳಿಗೆ ಕಂಪನಿಗಳಿಗೆ ಇರುವ ಗರಿಷ್ಟ ಮಿತಿಯನ್ನು ತೆಗೆದು, ನೀವು, ಕೇವಲ ರಾಜಕೀಯ ಪಕ್ಷಗಳಿಗೆ ನಿಧಿ ನೀಡಿಕೆಗಾಗಿಯೇ ರಚಿಸುವ ‘ಚಿಪ್ಪು’(ಶೆಲ್) ಕಂಪನಿಗಳಿಗೆ ಅವಕಾಶ ಕಲ್ಪಿಸುವ ಸಂಭವಗಳನ್ನು ಹೆಚ್ಚಿಸಿದ್ದೀರಿ. ಇದು ನಮ್ಮ ಪ್ರಜಾಪ್ರಭುತ್ವದ ಸ್ಥಿತಿ-ಗತಿಗೆ ಗಂಭೀರವಾಗಿ ಕೆಡಕುಂಟು ಮಾಡುವ ಒಂದು ಕ್ರಮ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯನ್ನು ಹಣಕಾಸು ಮಸೂದೆಯ ಮೂಲಕ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿರುವ ಈ ಸರಕಾರ ರಾಜಕೀಯ ಪಕ್ಷಗಳ ಖಜಾನೆಗಳು ವಿದೇಶಿ ದೇಣಿಗೆಗಳಿಂದ ಉಕ್ಕಿ ಹೋಗುವಂತೆ ಸಾಧ್ಯಗೊಳಿಸಿದೆ, ಆಮೂಲಕ ಭಾರತೀಯ ಪ್ರಜಾಪ್ರಭುತ್ವದ ಸ್ಥಿರತೆಗೆ ಒಂದು ಅಪಾಯಕಾರಿ ಆಯಾಮವನ್ನು ಸೇರಿಸಿದೆ.

ರಾಜಕೀಯ ಪಕ್ಷಗಳಿಗೆ ನಿಧಿ ನೀಡಿಕೆಯನ್ನು ಹಿಂದಿಗಿಂತಲೂ ಇನ್ನಷ್ಟು ಅಪಾರದರ್ಶಕಗೊಳಿಸುವ ಕ್ರಮಗಳನ್ನು ಈ ಸರಕಾರ ತಂದಿರುವ ಬಗ್ಗೆ ನಮಗೆ ಆಳವಾದ ಆತಂಕ ಉಂಟಾಗಿದೆ. ಅದು ಮಾಡುತ್ತಿರುವುದು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಸಂದೇಹಾಸ್ಪದ ನಿಧಿಗಳನ್ನು, ದಾಖಲಾಗದೆ, ಘೋಷಿಸದೆ ಸಾರ್ವಜನಿಕ ವೀಕ್ಷಣೆಯಿಂದ ರಕ್ಷಿಸಿ ವರ್ಗಾಯಿಸಲು ಒಂದು ‘ಚುನಾವಣಾ ಬಾಂಡು’ಗಳ ಮಾರ್ಗವನ್ನು ಒದಗಿಸುವುದು.

ಚುನಾವಣಾ ಬಾಂಡುಗಳು, ಎಫ್‌ಸಿಆರ್ ಕಾಯ್ದೆಯ ಪೂರ್ವಾನ್ವಯ ವಾಗುವಂತಹ (ವಿದೇಶಿ ಕಂಪನಿಗಳಿಂದ ಪರೋಕ್ಷ ನಿಧಿ ನೀಡಿಕೆಗೆ ಅವಕಾಶ ಕೊಡುವ)ತಿದ್ದುಪಡಿ ಮತ್ತು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‌ಗಳಿಗೆ ಕೊಡಬಹುದಾದ ದೇಣಿಗೆಗಳ ಗರಿಷ್ಟ ಮಿತಿಯನ್ನು ತೆಗೆಯುವುದರೊಂದಿಗೆ ಭಾರತದಲ್ಲಿ ರಾಜಕೀಯ ನಿಧಿ ನೀಡಿಕೆಯತ್ತ ಕೈಗೊಂಡಿರುವ ಅತ್ಯಂತ ಪ್ರತಿಗಾಮಿ ಕ್ರಮಗಳು. ಇವನ್ನು ಹಿಂದಕ್ಕೆ ತಳ್ಳಲೇ ಬೇಕು.

ಈ ಕ್ರಮಗಳು  ರಾಜಕೀಯ ನಿಧಿನೀಡಿಕೆಯನ್ನು ಸಾರ್ವಜನಿಕ ಪರೀಕ್ಷಣೆಗೆ ಅವಕಾಶವಿಲ್ಲದ  ಒಂದು ‘ಕರಿ ಪೆಟ್ಟಿಗೆ’(ಬ್ಲಾಕ್ ಬಾಕ್ಸ್) ಯಾಗಿಸಿವೆ, ಇವುಗಳ ಪರಾಮರ್ಶೆ ಮತ್ತು ತಕ್ಷಣವೇ  ಮರುಪರಿಶೀಲನೆ ನಡೆಸಬೇಕು, ಎಂದು ನಾವು ನಿಮ್ಮ ಸರಕಾರವನ್ನು ಆಗ್ರಹಿಸುತ್ತೇವೆ.

ಚುನಾವಣಾ ನಿಧಿ ನೀಡಿಕೆಯನ್ನು ಕುರಿತಂತೆ ಈ ಸಂವಾದ ಇನ್ನೂ ಆಳವಾದ ಚರ್ಚೆಯತ್ತ ಒಯ್ಯುತ್ತದೆ, ಅಗತ್ಯವಾದ ಮತ್ತು ಸಮಗ್ರವಾದ ಚುನಾವಣಾ ಸುಧಾರಣೆಗಳನ್ನು ತರುವತ್ತ ನಿಮ್ಮ ಸರಕಾರವನ್ನು ತಳ್ಳುತ್ತದೆ ಎಂಬುದು ನಮ್ಮ ಆಶಯ. (ಪ್ರತಿಪಕ್ಷದಲ್ಲಿದ್ದಾಗ ನೀವು ಭಾಗಶಃ ಆನುಪಾತಿಕ ಪ್ರಾತಿನಿಧ್ಯವನ್ನು ತರುವ ನಮ್ಮ ಪ್ರಸ್ತಾವವನ್ನು ಬೆಂಬಲಿಸಿದ್ದಿರಿ, ಆದರೆ ಈಗ ಮೊದಲು ಗೆಲುವಿನ ಗೆರೆ ದಾಟಿದವರು ಗೆಲ್ಲುವ ವ್ಯವಸ್ಥೆಯ ಫಲಗಳನ್ನು ಸವಿದ ಮೇಲೆ ನಿಮ್ಮ ಹುರುಪು ಅಡಗಿ ಹೋಗಿರುವಂತೆ ಕಾಣುತ್ತದೆ).

ಈ ಹೊಸ ವರ್ಷದಲ್ಲಿ, ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಆರೋಗ್ಯವಂತಗೊಳಿಸುವ, ಹೆಚ್ಚು ಪಾರದರ್ಶಕಗೊಳಿಸುವ ಮತ್ತು ಒಬ್ಬ ಸಾಮಾನ್ಯ ನಾಗರಿಕ ಒಬ್ಬ ಹಣವಂತನಷ್ಟೆ ಸುಲಭವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಬಹುದಾದಂತಹ ನಿಜವಾಗಿಯೂ ಸಮಾನವಾದ ನೆಲೆಯನ್ನು ಲಭ್ಯಗೊಳಿಸುವಂತಹ ಹೊಸ ಕ್ರಮಗಳನ್ನು ಕೈಗೊಳ್ಳುವಂತೆ ನಿಮ್ಮ ಸರಕಾರವನ್ನು ಆಗ್ರಹಿಸಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ.

ಇಂತಿ ನಿಮ್ಮ ವಿಶ್ವಾಸಿ

ಸೀತಾರಾಮ್‍ ಯೆಚರಿ

Leave a Reply

Your email address will not be published. Required fields are marked *