ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಚಲಾವಣೆ

ಸಿಪಿಐ(ಎಂ) ಕೇಂದ್ರಸಮಿತಿ ಪಕ್ಷದ 22ನೇ ಮಹಾಧಿವೇಶನದ ರಾಜಕೀಯ ಠರಾವಿನ ಕರಡನ್ನು ಅಂಗೀಕರಿಸುವ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ  ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳಿವೆ ಎಂದು ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು ಹರಡಿವೆ. ಇದು ಒಂದು ಕಮುನಿಸ್ಟ್ ಪಕ್ಷವಾಗಿ ಸಿಪಿಐಎಂ)ನ ಚೈತನ್ಯಪೂರ್ಣ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದನ್ನು ತೋರಿಸುತ್ತದೆ. ಸಿಪಿಐ(ಎಂ) ಅಂಗೀಕರಿಸುವ ರಾಜಕೀಯ ನಿಲುವಿನ ಬಗ್ಗೆ ಆಸಕ್ತಿ ಮತ್ತು ಕಾಳಜಿ ಬಿಜೆಪಿಯನ್ನು ಎದುರಿಸಲು ಒಂದು ಪರಿಣಾಮಕಾರಿ ಐಕ್ಯತೆಯನ್ನು ಬೆಸೆಯಬೇಕೆಂಬ ಜಾತ್ಯತಿತ ಮತ್ತು ಪ್ರಜಾಪ್ರಭುತ್ವವಾದಿ ಮನೋಭಾವದ ಜನಗಳಲ್ಲಿ ವ್ಯಾಪಿಸಿರುವ ಆಶಯದಿಂದ ಮೂಡಿಬಂದಿರುವಂತದ್ದು. ಪಕ್ಷದ ಮಹಾಧಿವೇಶನ ಅಂಗೀಕರಿಸುವ ರಾಜಕೀಯ-ಕಾರ್ಯತಂತ್ರಾತ್ಮಕ ನಿಲುವು ಈ ಆಶಯವನ್ನು ಈಡೇರಿಸುತ್ತದೆ.

ಪ್ರಕಾಶ ಕಾರಟ್

ಸಿಪಿಐ(ಎಂ)ನ 22ನೇ ಮಹಾಧಿವೇಶನಕ್ಕೆ ಕರಡು ರಾಜಕೀಯ ಠರಾವನ್ನು ಜನವರಿ 21ರಂದು ಕೊಲ್ಕತಾದಲ್ಲಿ ನಡೆದ ಕೇಂದ್ರ ಸಮಿತಿಯ ಸಭೆಯಲ್ಲಿ ಬಹುಮತದಿಂದ ಅಂಗೀಕರಿಸಿದ್ದು ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ಬಹಳಷ್ಟು ಟಿಪ್ಪಣಿಗಳನ್ನು ಎಬ್ಬಿಸಿದೆ.

ಕೇಂದ್ರ ಸಮಿತಿಯ ಸಭೆಯ ಮೊದಲೇ ಅದರ ಮುಂದೆ ಒಂದು ಪೊಲಿಟ್‌ಬ್ಯುರೊ ಕರಡು ನಿರ್ಣಯ ಮತ್ತು ಒಂದು ಅಲ್ಪಮತದ ಕರಡು ನಿರ್ಣಯವನ್ನು ಮಂಡಿಸಲಾಗುವುದು ಎಂದು ತಿಳಿದು ಬಂದಾಗ ಮಖ್ಯಧಾರೆಯ ಮಾಧ್ಯಮಗಳಲ್ಲಿ ಬಹಳಷ್ಟು ಮಂದಿಗೆ ಒಂದು ಕಮ್ಯುನಿಸ್ಟ್ ಪಕ್ಷವಾಗಿ ಸಿಪಿಐ(ಎಂ)ನ ಕಾರ್ಯನಿರ್ವಹಣೆಯ ಶೈಲಿಯ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಅಥವ ಅವರು ಪಕ್ಷದ ಮುಖಂಡತ್ವವನ್ನು ಕೆಟ್ಟದಾಗಿ ಚಿತ್ರಿಸುವ ಉದ್ದೇಶದಿಂದ ದುರುದ್ದೇಶಪೂರಿತ ಮತ್ತು ವಿಕೃತ ತೀರ್ಮಾನಗಳಿಗೆ ಬರಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ.

ಉದಾಹರಣೆಗೆ, ಮಾಧ್ಯಮಗಳಲ್ಲಿ, ಅದರಲ್ಲೂ ಪಶ್ಚಿಮ ಬಂಗಾಲದಲ್ಲಿ ಮತ್ತು ಕೇರಳದಲ್ಲಿ,  ಕಾಣ ಬಂದಿರುವ,  ಸಾಮಾನ್ಯ ವಿಷಯ ಎಂದರೆ ಕೇಂದ್ರ ಸಮಿತಿಯ ಸಭೆಯಲ್ಲಿ  “ಎರಡು ಗುಂಪುಗಳು” ಎರಡು ಕರಡುಗಳನ್ನು ಮಂಡಿಸಿದವೆಂದು ಬಿಂಬಿಸುವುದು. ಕೆಲವರು ಇನ್ನೂ ಮುಂದೆ ಹೋಗಿ ಇದನ್ನು ಇಬ್ಬರು ವ್ಯಕ್ತಿಗಳ ನಡುವಿನ, ಇಲ್ಲಿ ಪ್ರಸಕ್ತ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿಂದಿನ  ಪ್ರಧಾನ ಕಾರ್ಯದರ್ಶಿಗಳ ನಡುವಿನ ತಿಕ್ಕಾಟ ಎಂದು ಬಿಂಬಿಸಿದವು.

ಇದು ಆಧಾರಹೀನ ಮತ್ತು ತಪ್ಪು ಚಿತ್ರಣ. ಏಕೆಂದರೆ ಇಲ್ಲಿ ಪಕ್ಷದೊಳಗಿನ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಭಿನ್ನ ರಾಜಕೀಯ ಅಭಿಪ್ರಾಯಗಳು ಮತ್ತು ನಿಲುವುಗಳನ್ನು ವ್ಯಕ್ತಿಗತ ತಿಕ್ಕಾಟಗಳು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳ ಮಟ್ಟಕ್ಕೆ ಇಳಿಸಲಾಗಿದೆ. ಇನ್ನೊಂದು ತಪ್ಪು , ಮತ್ತು ಸಾಮಾನ್ಯವಾದ ಭಾವನೆಯೆಂದರೆ ಕರಡು ರಾಜಕೀಯ ಠರಾವು ಮುಖ್ಯವಾಗಿ 2019ರ ಲೋಕಸಭಾ ಚುನಾವಣೆಗಳ ವೇಳೆಯಲ್ಲಿ ತಳೆಯಬೇಕಾದ ಚುನಾವಣಾ ತಂತ್ರಕ್ಕೆ ಸಂಬಂಧಪಟ್ಟಿದ್ದು ಎಂಬುದು.

ಸಿಪಿಐ(ಎಂ) ಒಂದು ಕಮ್ಯುನಿಸ್ಟ್ ಪಕ್ಷವಾಗಿ ಕಾರ್ಯನಿರ್ವಹಣೆಯ ಒಂದು ವಿಶಿಷ್ಟ ವಿಧಾನವನ್ನು ಅನುಸರಿಸುತ್ತದೆ. ಅದು ಪ್ರಜಾಸತ್ತಾತ್ಮಕ ಕೇಂದ್ರವಾದದ ಸಂಘಟನಾ ನೀತಿಗಳನ್ನು ಆಧರಿಸಿದೆ. ಇದರ ಅರ್ಥ ಪಕ್ಷದ ಎಲ್ಲ ನೇತೃತ್ವದ ಸಮಿತಿಗಳು ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿವೆ. ಅಲ್ಲಿ ಎಲ್ಲ  ರಾಜಕೀಯ ಮತ್ತು ಸಂಘಟನಾತ್ಮಕ ವಿಷಯಗಳನ್ನು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ರಾಜಕೀಯ ಪ್ರಶ್ನೆಗಳ ಮೇಲೆ ಒಬ್ಬ ಸದಸ್ಯ ಅಥವ ಸದಸ್ಯರ ಒಂದು ಗುಂಪು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಸಮಿತಿಯ ಮುಂದೆ ವ್ಯಕ್ತಪಡಿಸಬಹುದು, ಮಂಡಿಸಬಹುದು. ಮುಕ್ತ ಮತ್ತು ನೇರ ಚರ್ಚೆಗಳ ಮೂಲಕ ಸಮಿತಿ ಒಂದು ನಿರ್ಣಯಕ್ಕೆ ಬರುತ್ತದೆ.  ಅಗತ್ಯವಿದ್ದರೆ, ನಿರ್ಣಯಕ್ಕೆ ಬರಲು ಮತದಾನ ನಡೆಸಬಹುದು, ಆಗ ಬಹುಮತದ ಅಭಿಪ್ರಾಯ ಸಮಿತಿಯ ಸಾಮೂಹಿಕ ಅಭಿಪ್ರಾಯವಾಗುತ್ತದೆ.

ಒಂದು ಸಮಿತಿಯೊಳಗೆ ಒಂದು ರಾಜಕೀಯ ಪ್ರಶ್ನೆಯ ಮೇಲೆ ಒಂದು ಬಹುಮತದ ಅಭಿಪ್ರಾಯ ಮತ್ತು ಒಂದು ಅಲ್ಪಮತದ ಅಭಿಪ್ರಾಯ ಇರುವುದನ್ನು ಗುಂಪುಗಾರಿಕೆ ಎಂದು ಕಾಣಲಾಗದು. ಪಕ್ಷದ ಸಂವಿಧಾನದ ಪ್ರಕಾರ ಗುಂಪುಗಾರಿಕೆ ಅಥವ ಒಳಗುಂಪುಗಳಿಗೆ ಅನುಮತಿ ಇಲ್ಲ. ಪಕ್ಷದ ಸಾಮೂಹಿಕ ನಿರ್ಧಾರಗಳನ್ನು ಉಲ್ಲಂಘಿಸುವವರು ಮತ್ತು ಅಪ್ರಸ್ತುತ ಕಾರಣಗಳಿಗಾಗಿ  ಗುಂಪು ಕಟ್ಟಿಕೊಳ್ಳುವುದನ್ನು ಮಾತ್ರ ಗುಂಪುಗಾರಿಕೆ ಎಂದು ಪರಿಗಣಿಸಲಾಗುತ್ತದೆ.

ಈ ನಿರ್ದಿಷ್ಟ ಸಂದರ್ಭದಲ್ಲಿ, ಕೇಂದ್ರ ಸಮಿತಿ ಪಕ್ಷದ ಮಹಾಧಿವೇಶನದಲ್ಲಿ ಮಂಡಿಸಬೇಕಾದ ಕರಡು ರಾಜಕೀಯ ಠರಾವನ್ನು ಚರ್ಚಿಸಿ ಅಂತಿಮಗೊಳಿಸುತ್ತಿತ್ತು. ಇದು ಪಕ್ಷದ ಸಂವಿಧಾನದ ಅಡಿಯಲ್ಲಿ ಕೇಂದ್ರ ಸಮಿತಿಗೆ ವಹಿಸಿರುವ ಜವಾಬ್ದಾರಿ. ಇದನ್ನು ಕೇಂದ್ರ ಸಮಿತಿ ಎರಡು ತಿಂಗಳ ಮೊದಲು ಬಿಡುಗಡೆ ಮಾಡಿ, ಆಮೂಲಕ ಎಲ್ಲ ಪಕ್ಷದ ಘಟಕಗಳು ಮತ್ತು ಸದಸ್ಯರಿಗೆ ಇದನ್ನು ಚರ್ಚಿಸಲು ಸಮಯ ಸಿಗುಂತೆ ಮಾಡಬೇಕೆಂದು ಪಕ್ಷದ ಸಂವಿಧಾನ ವಿಧಿಸಿದೆ. ಅಲ್ಲದೆ ಸಂವಿಧಾನ ಯಾವುದೇ ಪಕ್ಷದ ಘಟಕ ಅಥವ ಸದಸ್ಯರು ನೇರವಾಗಿ ಕೇಂದ್ರಸಮಿತಿಗೆ ತಿದ್ದುಪಡಿಗಳನ್ನು ಕಳಿಸಲು ಅವಕಾಶ ಒದಗಿಸುತ್ತದೆ. ಈ ತಿದ್ದುಪಡಿಗಳ ಒಂದು ವರದಿಯನ್ನು ಪಕ್ಷದ ಮಹಾಧಿವೇಶನದ ಮುಂದೆ ಇಡಬೇಕಾಗುತ್ತದೆ.

ಕಳೆದ ನಾಲ್ಕು ತಿಂಗಳಿಂದ ಪೊಲಿಟ್‌ಬ್ಯುರೊ ಮತ್ತು ಕೇಂದ್ರ ಸಮಿತಿ ಕರಡು ರಾಜಕೀಯ ಠರಾವನ್ನು ಸಿದ್ಧಪಡಿಸುವಲ್ಲಿ ತೊಡಗಿದ್ದವು. ಇದು ಕರಡನ್ನು ಸಿದ್ಧಪಡಿಸಲು ಮತ್ತು ಅದನ್ನು ಮಹಾಧಿವೇಶನದ ಎರಡು ತಿಂಗಳು ಮೊದಲು ಬಿಡುಗಡೆ ಮಾಡಲು ತಗಲುವ ಸಾಮಾನ್ಯ ಅವಧಿ. ಕರಡು ರಾಜಕೀಯ ಠರಾವು ಪಕ್ಷದ ಮಹಾಧಿವೇಶನ ಅದನ್ನು ಅಂಗೀಕರಿಸಿದ ಮೇಲೆ ಮುಂದಿನ ಮೂರು ವರ್ಷ ಅನುಸರಿಸಬೇಕಾದ ರಾಜಕೀಯ-ಕಾರ್ಯತಂತ್ರಾತ್ಮಕ ಮಾರ್ಗವನ್ನು ಪ್ರಸ್ತಾವಿಸುತ್ತದೆ.

ಪಕ್ಷದ ಮಹಾಧಿವೇಶನ ನಡೆಯುವ ವೇಳೆಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದು ಸುಮಾರು ನಾಲ್ಕು ವರ್ಷಗಳಾಗುತ್ತವೆ. ದೇಶ ಬಿಜೆಪಿ-ಆರೆಸ್ಸೆಸ್ ಪ್ರಭುತ್ವ ಅಧಿಕಾರದ ಚುಕ್ಕಾಣಿ ಹಿಡಿದುದರ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದೆ. ಆದ್ದರಿಂದ ಈ ಬೆದರಿಕೆಯನ್ನು ಎದುರಿಸಬಲ್ಲ ಒಂದು ಪರಿಣಾಮಕಾರಿ ರಾಜಕೀಯ-ಕಾರ್ಯತಂತ್ರಾತ್ಮಕ ಮಾರ್ಗವನ್ನು-ಬಿಜೆಪಿಯನ್ನು ರಾಜಕೀಯವಾಗಿ, ಸೈದ್ಧಾಂತಿಕವಾಗಿ ಎದುರಿಸಿ ಹೋರಾಡಬಲ್ಲ ಮತ್ತು ಮೋದಿ ಸರಕಾರವನ್ನು ಸೋಲಿಸಲು ಜನಗಳನ್ನು ಅಣಿನೆರೆಸಬಲ್ಲ ಒಂದು ಕಾರ್ಯತಂತ್ರದ ನಿಲುವನ್ನು  ರೂಪಿಸಲು ಪೊಲಿಟ್‌ಬ್ಯುರೊ ಮತ್ತು ಕೇಂದ್ರ ಸಮಿತಿ ತೀವ್ರ ಚರ್ಚೆಗಳನ್ನು ನಡೆಸುವುದು ಸಹಜವೇ ಆಗಿತ್ತು.

ಸಿಪಿಐ(ಎಂ) ಅಂಗೀಕರಿಸುವ ರಾಜಕೀಯ ನಿಲುವಿನ ಬಗ್ಗೆ ಆಸಕ್ತಿ ಮತ್ತು ಕಾಳಜಿ ಬಿಜೆಪಿಯನ್ನು ಎದುರಿಸಲು ಒಂದು ಪರಿಣಾಮಕಾರಿ ಐಕ್ಯತೆಯನ್ನು ಬೆಸೆಯಬೇಕೆಂಬ ಜಾತ್ಯತಿತ ಮತ್ತು ಪ್ರಜಾಪ್ರಭುತ್ವವಾದಿ ಮನೋಭಾವದ ಜನಗಳಲ್ಲಿ ವ್ಯಾಪಿಸಿರುವ ಆಶಯದಿಂದ ಮೂಡಿಬಂದಿರುವಂತದ್ದು. ಪಕ್ಷದ ಮಹಾಧಿವೇಶನ ಅಂಗೀಕರಿಸುವ ರಾಜಕೀಯ-ಕಾರ್ಯತಂತ್ರಾತ್ಮಕ ನಿಲುವು ಈ ಆಶಯವನ್ನು ಈಡೇರಿಸುತ್ತದೆ. ಪಕ್ಷವು ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಮೂರ್ತ ಕಾರ್ಯತಂತ್ರಗಳನ್ನು ಅಂಗೀಕರಿಸುತ್ತದೆ.

ಕರಡು ರಾಜಕೀಯ ಠರಾವಿನ ಮೇಲೆ ಪಕ್ಷದಲ್ಲಿನ ಆಂತರಿಕ ಚರ್ಚೆಗಳ ಪ್ರಕ್ರಿಯೆ  ಜನವರಿ 18ರಿಂದ 22 ರ ವರೆಗೆ ಹೈದರಾಬಾದಿನಲ್ಲಿ ನಡೆಯಲಿರುವ ಪಕ್ಷದ ಮಹಾಧಿವೇಶನದಲ್ಲಿ ಸಮಾರೋಪಗೊಳ್ಳುತ್ತದೆ ಮತ್ತು ನಿರ್ಧಾರಗೊಳ್ಳುತ್ತದೆ. ಈ ಮಹಾಧಿವೇಶನದಲ್ಲಿ ಎಲ್ಲ ರಾಜ್ಯಗಳಿಂದ ಮತ್ತು ವಿವಿಧ ಸಾಮೂಹಿಕ ರಂಗಗಳಲ್ಲಿ ದುಡಿಯುತ್ತಿರುವ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ಇಲ್ಲಿಯೂ, ಮಹಾಧಿವೇಶನ ಪಕ್ಷದ ಅತ್ಯುನ್ನತ ಸಂಸ್ಥೆಯಾದ್ದರಿಂದ ಪ್ರತಿನಿಧಿಗಳಿಗೆ ಕರಡು ರಾಜಕೀಯ ಠರಾವಿನ ಮೇಲೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಯಾವುದೇ ಬದಲಾವಣೆಗಳನ್ನು ಸೂಚಿಸುವ, ತಿದ್ದುಪಡಿಗಳನ್ನು ಮಂಡಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇರುತ್ತದೆ.

ಪಕ್ಷದ ಮಹಾಧಿವೇಶನ ರಾಜಕೀಯ ಠರಾವನ್ನು ಚರ್ಚಿಸಿ ಅಂಗೀಕರಿಸಿದ ಮೇಲೆ, ಅದು ಪಕ್ಷದ ಪ್ರಸಕ್ತ ರಾಜಕೀಯ- ಕಾರ್ಯತಂತ್ರಾತ್ಮಕ ನಿಲುವು ಆಗಿ ಬಿಡುತ್ತದೆ. ಪ್ರತಿಯೊಬ್ಬ ಪಕ್ಷದ ಸದಸ್ಯ ಈ ಮೊದಲು ಯಾವುದೇ ಅಭಿಪ್ರಾಯ ಹೊಂದಿರಲಿ, ಪ್ರಜಾಸತ್ತಾತ್ಮಕ ಕೇಂದ್ರವಾದದ ನೀತಿಗಳಿಗೆ ಅನುಗುಣವಾಗಿ ಪಕ್ಷದ ಅಂಗೀಕೃತ ರಾಜಕೀಯ ನಿಲುವನ್ನು ಜಾರಿಗೆ ತರಲು ಒಂದಾಗಬೇಕು.
ಹೀಗೆ ಪಕ್ಷದೊಳಗೆ ‘ಬಿಕ್ಕಟ್ಟು’ ಮತ್ತು ಗುಂಪುಗಾರಿಕೆಯ ವಿವಾದಗಳನ್ನು ಕುರಿತಾದ ಲಂಗುಲಗಾಮಿಲ್ಲದ, ಆಧಾರಹೀನ ಊಹಾಪೋಹಗಳು  ನಿಂತು ಹೋಗುತ್ತವೆ.

ಸಿಪಿಐ(ಎಂ) ಚೈತನ್ಯಪೂರ್ಣ ಆಂತರಿಕ ಪ್ರಜಾಪ್ರಭುತ್ವ ಮತ್ತು ಅದರ ಜೊತೆಗೆ ಕೇಂದ್ರೀಕೃತ ಶಿಸ್ತಿನ ಹೆಮ್ಮೆಯ ಪರಂಪರೆಯನ್ನು ಹೊಂದಿದೆ. 22ನೇ ಮಹಾಧಿವೇಶನ ಇದನ್ನು ಸಾಕಾರಗೊಳಿಸುತ್ತದೆ ಮತ್ತು ಈ ಪರಂಪರೆಯನ್ನು ಮುಂದುವರೆಸುತ್ತದೆ.

Leave a Reply

Your email address will not be published. Required fields are marked *