ತ್ರಿಪುರಾದಲ್ಲಿ ಬಿಜೆಪಿಯ ಭ್ರಷ್ಟ ವರ್ತನೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ

ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಿಪಿಐ(ಎಂ) ಆಗ್ರಹ ಫೆಬ್ರುವರಿ 8ರಂದು ಸಿಪಿಐ(ಎಂ) ಕೇಂದ್ರ ಕಾರ್ಯದರ್ಶಿ ಮಂಡಳಿ ಸದಸ್ಯ ನೀಲೋತ್ಪಲ ಬಸು ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಶಾಂತಿಯುತವಾಗಿ, ನ್ಯಾಯಯುತವಾಗಿ ಮುಕ್ತ ಚುನಾವಣೆಗಳನ್ನು ನಡೆಸುವ ವಿಷಯವನ್ನು ಚರ್ಚಿಸಿದರು, ಮತ್ತು ಬಿಜೆಪಿ ಕೆಲವು ಭ್ರಷ್ಟ ಆಚರಣೆಗಳಲ್ಲಿ ತೊಡಗಿರುವುದನ್ನು ಆಯೋಗದ ಗಮನಕ್ಕೆ ತರುವ ಪತ್ರವೊಂದನ್ನು ಸಾಕ್ಷಿ ದಸ್ತಾವೇಜುಗಳೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೋರಿಕೆಯೊಂದಿಗೆ ಸಲ್ಲಿಸಿದರು. ಸಿಪಿಐ(ಎಂ)ನ ಆತಂಕಗಳನ್ನು ಗಂಭೀರವಾಗಿ ಪರಿಶೀಲಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಆಶ್ವಾಸನೆಯಿತ್ತರು.

ಆ ಪತ್ರದಲ್ಲಿ ಪಟ್ಟಿ ಮಾಡಿದ ಬಿಜೆಪಿಯ ಭ್ರಷ್ಟ ಕ್ರಮಗಳು ಹೀಗಿವೆ:

  • ಬಿಜೆಪಿಯ ಸಾಮಾಜಿಕ ಮಾಧ್ಯಮ ಪುಟದಲ್ಲಿ ತ್ರಿಪುರಾದ ಅನಿವಾಸಿ ಮತದಾರರಿಗೆ ಅವರ ಚುನಾವಣಾ ಗುರುತು ಪತ್ರ ತೋರಿಸಿದರೆ ತ್ರಿಪುರಾಕ್ಕೆ ಹೋಗಲು ಪುಕ್ಕಟೆ ರೈಲು ಟಿಕೇಟ್ ಕೊಡಲಾಗುವುದು ಎಂಬ ಜಾಹೀರಾತು ಪ್ರಕಟಿಸಲಾಗಿದೆ, ಇದು ಪ್ರಧಾನ ಮಂತ್ರಿಗಳಿಂದ ಒಂದು ‘ಕೊಡುಗೆ’ ಎಂದೂ ಹೇಳಲಾಗಿದೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆಯ ಸ್ಪಷ್ಟ ಶಿಕ್ಷಾರ್ಹ ಉಲ್ಲಂಘನೆ.
  • ಅಂಬೀಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ಇಲೆಕ್ಟಾçನಿಕ್ ಚುನಾವಣಾ ಯಂತ್ರದ ಪ್ರದರ್ಶನದಲ್ಲಿ ಯಾವ ಗುಂಡಿ ಒತ್ತಿದರೂ ಕಮಲದ ಚಿಹ್ನೆಗೇ ಮತ ಬೀಳುತ್ತಿತ್ತು. ಅಧಿಕಾರಿಗಳು ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು  ಒಪ್ಪಿಕೊಂಡರು. ಆದರೂ ಯಂತ್ರ ಸರಿಯಾಗಿ ಕೆಲಸ ಮಾಡದಾಗಲೆಲ್ಲ ಕಮಲಕ್ಕೇ  ಮತ ಬೀಳುವುದು ಆಶ್ಚರ್ಯಕರ. ನಿಜವಾದ ಮತದಾನದಲ್ಲಿ ಎಲ್ಲಿಯೂ ಹೀಗಾಗದಂತೆ ಮತದಾರರಲ್ಲಿ ವಿಶ್ವಾಸ ಮೂಡುವಂತೆ ಕ್ರಮ ಕೈಗೊಳ್ಳಬೇಕು, ಮತ್ತು ಮತಗಣನೆಯ ವೇಳೆಯಲ್ಲಿ ಕನಿಷ್ಟ 20% ವನ್ನು ಯಂತ್ರಕ್ಕೆ  ಲಗತ್ತಿಸಿದ ಕಾಗದದಲ್ಲಿನ ದಾಖಲಾತಿಯೊಂದಿಗೆ ತಾಳೆ ಹಾಕಬೇಕು.
  • ದೊಡ್ಡ ಸಂಖ್ಯೆಯಲ್ಲಿ ಹೊರಗಿನವರು ತ್ರಿಪುರಾವನ್ನು ಪ್ರವೇಶಿಸಿ ಅಗರ್ತಲಾದಲ್ಲಿ ನಾಲ್ಕು ಕಡೆ ಮತ್ತು ಖೊವೈ ಜಿಲ್ಲೆಯಲ್ಲಿ ಒಂದು ಕಡೆ ಠಿಕಾಣಿ ಹೂಡಿದ್ದಾರೆ ಎಂದು ಕಂಡುಬಂದಿದೆ. ತ್ರಿಪುರಾ ಒಂದು ಗಡಿರಾಜ್ಯವಾದ್ದರಿಂದ ಚುನಾವಣಾ ಆಯೋಗ ಮುಂದಾಗಿಯೇ ಶಾಂತಿಯುತ ಮತದಾನವನ್ನು  ಬುಡಮೇಲು ಮಾಡುವ ಪ್ರಯತ್ನವನ್ನು ಮುಂಗಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಗುಪ್ತಚರ ಮತ್ತು ಭದ್ರತಾಪಡೆಗಳ ಬಳಕೆಯೂ ಸೇರಿರಬೇಕು.
  • ಬಿಜೆಪಿಯ ಏಳನೇ ವೇತನ ಆಯೋಗದ ಕುರಿತ ಪ್ರಚಾರ ಪುಸ್ತಿಕೆಯಲ್ಲಿ ರಾಜ್ಯಪಾಲರ ಭಾವಚಿತ್ರವಿದೆ. ಇದು ಒಪ್ಪಲಾಗದ ವರ್ತನೆ. ಇದನ್ನು ಸಾರ್ವಜನಿಕವಾಗಿ ಖಂಡಿಸಿ ಮುಟ್ಟುಗೋಲು ಹಾಕಿಕೊಳ್ಳಬೇಕು.
  • ಒಬ್ಬ ಸ್ವತಂತ್ರ ನಿರ್ದೇಶಕರೆಂಬುವವರ  ‘ಲಾಲ್ ಸರ್ಕಾರ್’ ಎಂಬ ವಿಡಿಯೋ ಚಿತ್ರವನ್ನು ಬಿಜೆಪಿ ಬಳಸುತ್ತಿದೆ ಎಂಬುದು ಕೂಡ ಆಘಾತಕಾರಿ. ಯಾವುದೇ ವೀಡಿಯೋ ಚಿತ್ರವನ್ನು ಮಾತ್ರವಲ್ಲ, ಅದರ ಟ್ರೆಲರ್‌ನ್ನೂ ಪ್ರಮಾಣ ಪತ್ರವಿಲ್ಲದೆ ತೋರಿಸಲು ಸಾಧ್ಯವಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾದ್ದರಿಂದ ಇದರ ಪ್ರದರ್ಶನವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು.
  • ಆಕಾಶವಾಣಿ/ ದೂರದರ್ಶನದಲ್ಲಿ ಅಧಿಕೃತವಾಗಿ ಪ್ರಸಾರವಾಗುವ ಭಾಷಣಗಳು ಮತ್ತು ವೀಡಿಯೊ ತುಣುಕುಗಳ ಪ್ರಮಾಣೀಕರಣದ ಕೆಲಸವನ್ನು ಸಾಮಾನ್ಯವಾಗಿ ಎಡ-ವಿರೋಧಿಯಾಗಿರುವ ಮಾಧ್ಯಮಕ್ಕೆ ಸೇರಿದ ಇಬ್ಬರು ಪತ್ರಕರ್ತರಿಗೆ ಒಪ್ಪಿಸಲಾಗಿದೆ ಎಂಬ ಸಂಗತಿ ಆಶ್ಚರ್ಯ ಉಂಟು ಮಾಡುವಂತದ್ದು. ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆ ಕಾಯ್ದುಕೊಳ್ಳಲು ಪ್ರಮಾಣೀಕರಣವನ್ನು ಆಕಾಶವಾಣಿ/ದೂರದರ್ಶನ ತಾವೇ ಮಾಡುವಂತಾಗಬೇಕು.

Leave a Reply

Your email address will not be published. Required fields are marked *