ನಿನ್ನೆ ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ, ಇಂದು ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ…… ನಾಳೆ?

ತ್ರಿಪುರಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅವರ ಅಧ್ಯಕ್ಷ ಅಮಿತ್‍ ಷಾ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಆಶ್ವಾಸನೆ ನೀಡಿದರು. ಇದು ಕಮ್ಯುನಿಸ್ಟರ ಮೇಲೆ ಒಂದು ‘ಸೈದ್ಧಾಂತಿಕ ವಿಜಯ’ ಎಂದು ಪ್ರಧಾನ ಮಂತ್ರಿಗಳು ಘೋಷಿಸಿದರು.  ಇದು  ತ್ರಿಪುರಾದಲ್ಲಿನ ಬಿಜೆಪಿ ಮಂದಿಗೆ ಗಟ್ಟಿಯಾಗಿ ಕೇಳಿಸಿತು.

ಆದರೆ ಇದು ಕೇವಲ ‘ಕಮ್ಯುನಿಸ್ಟ್-ಮುಕ್ತ’ ಭಾರತದ ಘೋಷಣೆ ಮಾತ್ರವಲ್ಲ, ಬಿಜೆಪಿಯ ಹಿಟ್ಲರ್-ಮುಸೊಲಿನಿ ಪ್ರಿಯ ಸಿದ್ಧಾಂತವನ್ನು ವಿರೋಧಿಸುವ ಎಲ್ಲ ತತ್ವ-ಸಿದ್ಧಾಂತಗಳ ವಿರುದ್ಧ ಎಂದು ಹೆಚ್ಚು ಸಮಯ ಹಿಡಿದಿಲ್ಲ. ತಮಿಳುನಾಡಿನ ಬಿಜೆಪಿ ಮುಖಂಡ ಹೆಚ್‍.ರಾಜ “ಇಂದು ತ್ರಿಪುರಾದಲ್ಲಿ ಲೆನಿನ್, ನಾಳೆ ತಮಿಳುನಾಡಿನಲ್ಲಿ ಜಾತಿವಾದಿ ಪೆರಿಯಾರ್” ಎಂದು ಟ್ವೀಟ್‍ ಮಾಡಿದ ಮರುದಿನವೇ ವೆಲ್ಲೂರಿನಲ್ಲಿ ಪೆರಿಯಾರ್ ಪ್ರತಿಮೆಗೆ ಮಸಿ ಬಳೆದ ಘಟನೆ ವರದಿಯಾಗಿದೆ.

ಬಲಪ್ರಯೋಗದಿಂದ ಪ್ರತಿಮೆಯನ್ನು ಧ್ವಂಸಗೊಳಿಸಬಹುದು, ಒಂದು ತತ್ವ-ಸಿದ್ಧಾಂತವನ್ನಲ್ಲ-ಬೃಂದಾ ಕಾರಟ್

ಲೆನಿನ್ ಪ್ರತಿಮೆಯ ಧ್ವಂಸ ಆರೆಸ್ಸೆಸ್‍ಗೆ ರಕ್ತಗತವಾಗಿ ಬಂದಿರುವ ಕಾಯಿಲೆಯಾದ ಕಮ್ಯುನಿಸ್ಟ್-ವಿರೋಧವನ್ನಷ್ಟೇ ತೋರಿಸುತ್ತಿಲ್ಲ, ಅದು ಸಂಘ ಪರಿವಾರ ತನ್ನ ತತ್ವ-ಸಿದ್ಧಾಂತಗಳಿಗೆ ಸವಾಲು ಹಾಕುವ ಯಾವುದೇ ತತ್ವ-ಸಿದ್ಧಾಂತದ ಬಗ್ಗೆಯೂ ಅತ್ಯಂತ ಅಸಹಿಷ್ಣುವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹಿರಿಯ ಸಿಪಿಐ(ಎಂ)  ಮುಖಂಡರಾದ ಬೃಂದಾ ಕಾರಟ್‍ ಹೇಳಿದ್ದಾರೆ. ಮುಂದುವರೆದು ಅವರು ತ್ರಿಪುರಾದಲ್ಲಿನ ಧ್ವಂಸ “ಲೆನಿನ್‍ರ ಅಭಿಮಾನಿಗಳು ಮಾತ್ರವಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಜಕೀಯ ಚರ್ಚೆಗಳಲ್ಲಿ  ನಂಬಿಕೆಯಿರುವ ಯಾರನ್ನೇ ಆಗಲಿ ದಿಗಿಲುಗೊಳಿಸಿದೆ. ಇದರ ವಿರುದ್ಧ ಆಕ್ರೋಶ ಸಾಕಷ್ಟು ಗಟ್ಟಿಯಾಗಿರದಿದ್ದಲ್ಲಿ ಅದು ಲೆನಿನ್‍ಗೇ ನಿಲ್ಲುವುದಿಲ್ಲ” ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಇದು ಈಗಾಗಲೇ ನಿಜವಾಗಿದೆ.

“ಆಳುವ ಪಕ್ಷಕ್ಕೆ ಯಾವ ರೀತಿಯ ಪ್ರತಿಮೆಗಳು ಬೇಕು ಎಂಬುದು ನಮಗೆ ಗೊತ್ತಿದೆ. ಬ್ರಿಟಿಶರಿಗೆ ತಮ್ಮ ವಿಧೇಯತೆಯ ಪಣ ತೊಟ್ಟು ಜೈಲು ಶಿಕ್ಷೆ ನೀಡದಂತೆ ಕ್ಷಮೆ ಯಾಚಿಸಿದವರ ಪ್ರತಿಮೆ, ಒಂದು ಹುಸಿ ಮಾನವತಾವಾದದ ಹೆಸರಿನಲ್ಲಿ ಭಾರತ ಎಂದೂ ಒಂದಾಗದು ಎಂದವರ ಪ್ರತಿಮೆ, ಮತ್ತು ತೀರಾ ಇತ್ತೀಚೆಗೆ, ಮಹಾತ್ಮ ಗಾಂಧೀಜಿಯನ್ನು ಕೊಂದವನ ಪ್ರತಿಮೆ. “ ಎಂದಿರುವ ಬೃಂದಾ ಕಾರಟ್‍ ಅವರು ಪ್ರತಿಮೆಗಳನ್ನು ಬಲಪ್ರಯೋಗದಿಂದ ಧ್ವಂಸಗೊಳಿಸಬಹುದು, ಒಂದು ತತ್ವ-ಸಿದ್ಧಾಂತವನ್ನಲ್ಲ ಎಂದು ಹೇಳಿದ್ದಾರೆ.

“ಪ್ರಧಾನಿಗಳ ಖಂಡನೆಯ ಗೋಸುಂಬೆ ಮಾತುಗಳಿಗೆ ಏನೂ ಅರ್ಥವಿಲ್ಲ”- ಸೀತಾರಾಂ ಯೆಚುರಿ “ಪ್ರಧಾನಮಂತ್ರಿಗಳು ದೇಶದ ಹಲವೆಡೆಗಳಿಂದ ಬಂದಿರುವ ಪ್ರತಿಮೆ ಧ್ವಂಸದ ವರದಿಗಳನ್ನು ಬಲವಾಗಿ ಖಂಡಿಸಿದ್ದಾರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವುದಾಗಿ ಪಿಐಬಿ(ಭಾರತ ಸರಕಾರದ ಅಡಿಯಿರುವ ಪತ್ರಿಕಾ ಮಾಹಿತಿ ಕಚೇರಿ) ಮಹಾನಿರ್ದೇಶಕರು ಪ್ರಕಟಿಸಿದ್ದಾರೆ. ಅವರು ತಮ್ಮ ಬಲವಾದ ಅಸಮ್ಮತಿಯನ್ನು ಗೃಹಮಂತ್ರಿಗಳಿಗೆ ತಿಳಿಸಿದ್ದಾರೆ. ಗೃಹಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ. ರಾಜ್ಯಸರಕಾರಗಳಿಗೆ ಈ ವಷಯದಲ್ಲಿ ಕಟ್ಟುನಿಟ್ಟಾಗಿ ವರ್ತಿಸುವಂತೆ, ಇದರಲ್ಲಿ ತೊಡಗಿರುವವರ ವಿರುದ್ಧ  ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ ಎಂದೂ ಪಿಐಬಿ ತಿಳಿಸಿದೆ.

“ಮೋದಿಯವರು ನೇಮಿಸಿದ ರಾಜ್ಯಪಾಲರು, ಶಾಸಕರು ಮತ್ತು ಅವರ ಪಕ್ಷದ ಒಬ್ಬ ಪ್ರಧಾನ ಕಾರ್ಯದರ್ಶಿಯೇ ಈ ಧ್ವಂಸ ಕ್ರಿಯೆಗಳನ್ನು ಸಮರ್ಥಿಸಿರುವಾಗ ಅವರ ಗೋಸುಂಬೆ ಮಾತುಗಳಿಗೆ ಏನೂ ಅರ್ಥವಿಲ್ಲ “ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ. ಗಾಂಧೀಜಿಯ ಕೊಲೆಯಿಂದ ಹಿಡಿದು ಬಾಬ್ರಿ ಮಸೀಧಿ ಧ್ವಂಸದ ವರೆಗೆ ಸಂಘ ಪರಿವಾರದ ಪರಂಪರೆ ಎಲ್ಲರಿಗೂ ಗೊತ್ತಿರುವಂತದ್ದೇ. ಸಂಘ ಪರಿವಾರದ ಮಂದಿಯಿಂದ ಪ್ರತಿಮೆಗಳ ನಾಶ  ಪ್ರಗತಿ ಮತ್ತು ಜ್ಞಾನೋದಯದ ವಿಚಾರಗಳನ್ನು ಧ್ವಂಸ ಮಾಡುವ ಪರಿವಾರದ ನಿಜ ಆಶಯಗಳನ್ನು  ಮತ್ತು ಅವುಗಳ ಟೊಳ್ಳುತನವನ್ನು ಪ್ರದರ್ಶಿಸುತ್ತಿದೆ” ಎಂದು ಯೆಚುರಿಯವರು ಹೇಳಿದ್ದಾರೆ.

“ನೀವೆಷ್ಟೇ ಪ್ರತಿಮೆಗಳನ್ನು ಧ್ವಂಸ ಮಾಡಿದರೂ ಲೆನಿನ್‍ ಸ್ಮರಣೆ ಶಾಶ್ವತ”

ಕೊಲ್ಕತಾದ ಬೀದಿಗಳಲ್ಲಿ ತ್ರಿಪುರಾದೊಂದಿಗೆ ಸೌಹಾರ್ದ

07-lenin-periyar-statue-vandalised WB

ಕೊಲ್ಕತೆಯಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 25 ನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳು ತಮ್ಮ ಚರ್ಚೆಗಳ ನಡುವೆಯೇ   ಪಕ್ಷದ ಕೊಲ್ಕತಾ ಜಿಲ್ಲಾ ಸಮಿತಿ ಸಂಘಟಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಸ್ವತಃ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹಾಗೂ ಪೊಲಿಟ್‍ಬ್ಯುರೊ ಸದಸ್ಯರುಗಳಾದ ಪ್ರಕಾಶ ಕಾರಟ್‍, ಬಿಮನ್‍ ಬಸು, ಬೃಂದಾ ಕಾರಟ್, ಸೂರ್ಯ ಕಾಂತ್‍ ಮಿಶ್ರ, ಎಂ.ಎ.ಬೇಬಿ ಮತ್ತು ಕೇಂದ್ರ ಸಮಿತಿ ಸದಸ್ಯರು ನಗರದ ವಿವಿಧ ಜನವಿಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ಆಕ್ರೋಶಭರಿತ ಪ್ರತಿಭಟನಾಕಾರರಿಗೆ ನೇತೃತ್ವ ನೀಡಿದರು.

Leave a Reply

Your email address will not be published. Required fields are marked *