ಆಸಾರಾಂಗೆ ಶಿಕ್ಷೆ: ನ್ಯಾಯಕ್ಕೆ, ಸಂತ್ರಸ್ತ ಬಾಲಕಿಯ ಅಸಾಧಾರಣ ಧೈರ್ಯಕ್ಕೆ ಸಂದ ವಿಜಯ

ಆಸಾರಾಂ ಮತ್ತು ಇತರ ಇಬ್ಬರು ಆಗಸ್ಟ್ 2013 ರಲ್ಲಿ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ತಪ್ಪಿತಸ್ಥರು ಎಂಬ ನ್ಯಾಯಾಲಯದ ತೀರ್ಪನ್ನು ಸಿಪಿಐ(ಎಂ) ಸ್ವಾಗತಿಸಿದೆ. ಇದು ಒಬ್ಬ ದೇವಪುರುಷ ಎಂದು ಹೇಳಿಕೊಳ್ಳುವಾತ ತನ್ನ ಅನುಯಾಯಿಗಳ ವಿಶ್ವಾಸ ಮತ್ತು ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಶೋಷಿಸುವ ಒಂದು ಪ್ರಕರಣ. ಇಂತವರು ಅತ್ಯಂತ ಬಲವಾದ ಶಿಕ್ಷೆಗೆ ಗುರಿಯಾಗಬೇಕು ಎಂದು ಅದು ಹೇಳಿದೆ.

ಸಂತ್ರಸ್ತಳು ಮತ್ತು ಆಕೆಯ ಕುಟುಂಬದ ಮೇಲೆ ಹಿಂಸಾಚಾರ ಮತ್ತು ಬೆದರಿಕೆಯನ್ನು ಬಳಸಿದ್ದ ಈ ಪ್ರಕರಣದಲ್ಲಿ ನ್ಯಾಯಕ್ಕೆ ದೊರೆತಿರುವ ವಿಜಯ ಇದು ಎಂದೂ ಸಿಪಿಐ(ಎಂ) ವರ್ಣಿಸಿದೆ. ಒಂಭತ್ತು ಸಾಕ್ಷಿಗಳ ಮೇಲೆ ಆಕ್ರಮಣ ನಡೆಸಲಾಯಿತು. ಅವರಲ್ಲಿ ಮೂವರ ಸಾವು ಉಂಟಾಗಿದೆ. ಇಂತಹ ಅತ್ಯಂತ ಕಠಿಣ ಮತ್ತು ದುರ್ಗಮ ಪರಿಸ್ಥಿತಿಗಳಲ್ಲಿ ಬದುಕುಳಿದಿರುವ ಈ ಹದಿ ಹರೆಯದ ಹುಡುಗಿ ತೋರಿರುವ ಧೈರ್ಯ ಅಸಾಧಾರಣವಾದದ್ದು. ಆಕೆ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟದ ಒಂದು ಪ್ರತೀಕವಾಗಿದ್ದಾಳೆ ಎಂದು ಸಿಪಿಐ(ಎಂ) ಹೇಳಿದೆ.

ನ್ಯಾಯಾಲಯ ಸಾಕ್ಷಿಗಳ ಕೊಲೆಗಳು ಸೇರಿದಂತೆ  ಸಂಬಂಧಿತ ಇತರ ಪ್ರಕರಣಗಳ ವಿಚಾರಣೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳ್ಳುವಂತೆ ಮಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಈ ಹೇಳಿಕೆ ಪ್ರಕಟವಾದ ನಂತರ ಈ ದೇವಪುರುಷನೆನಿಸಿದ ಆಸಾರಾಂ ಬಾಪುಗೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಲಾಗಿದೆ ಮತ್ತು ಇತರ ಇಬ್ಬರಿಗೆ ತಲಾ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *