ಪೆಟ್ರೋಲ್-ಡೀಸೆಲ್‍ ಮೇಲಿನ ಅಬಕಾರಿ ಸುಂಕ ಏರಿಕೆ ತಕ್ಷಣ ಹಿಂತೆಗೆದುಕೊಳ್ಳಿ

ಮೇ 8ರಂದು ಅಖಿಲ ಭಾರತ ಪ್ರತಿಭಟನಾ ಕಾರ್ಯಾಚರಣೆ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಕರೆ

ಪೆಟ್ರೋಲ್ ಮತ್ತು ಡೀಸೆಲ್‍ ಚಿಲ್ಲರೆ ಮಾರಾಟ ಬೆಲೆಗಳಲ್ಲಿ ತೀವ್ರ ಏರಿಕೆ ಈ ದೇಶದ ಸಾಮಾನ್ಯ ಜನರ ಬೆನ್ನು ಮುರಿಯುವ ಹೊರೆಯಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ದೈನಂದಿನ ಬದುಕಿಗೆ ಜನಸಾಮಾನ್ಯರು ಬಳಸುವ ಅಗತ್ಯ ಸರಕುಗಳ ಮೇಲೆಯೂ ಪರಿಣಾಮ ಬೀರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಅಸಾಮಾನ್ಯ ಏರಿಕೆಯಿಂದ  ಭಾರತದಲ್ಲಿನ ಚಿಲ್ಲರೆ ಮಾರಾಟ ಬೆಲೆಗಳು ದಕ್ಷಿಣ ಏಶ್ಯಾದಲ್ಲೇ ಅತಿ ಹೆಚ್ಚು . ಇದಕ್ಕೆ ಕೇಂದ್ರ ಸರಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಅಬಕಾರಿ ಸುಂಕಗಳನ್ನು ವಿಪರೀತಬಾಗಿ  ಏರಿಸಿರುವುದೇ ಮುಖ್ಯ ಕಾರಣ ಎಂಬುದು ತನ್ನ ಖಡಾಖಂಡಿತ ಅಭಿಪ್ರಾಯ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಎಪ್ರಿಲ್‍ 1, 2014ರಿಂದ ಪೆಟ್ರೋಲಿನ ಮೇಲೆ ಅಬಕಾರಿ ಸುಂಕ ಲೀಟರಿಗೆ 9.48ರೂ.ನಿಂದ ಈಗ 19.48ರೂ.ಗೆ ಏರಿದೆ. ಅಂದರೆ 105% ಏರಿಕೆ. ಚಿಲ್ಲರೆ ಬೆಲೆಯ 47.4% ಸರಕಾರದ ತೆರಿಗೆ ಆದಾಯ ಸಂಗ್ರಹಕ್ಕೆ ಹೋಗುತ್ತದೆ. . ಅದೇ ರೀತಿ ಡೀಸೆಲ್‍ ಮೇಲಿನ  ಸುಂಕ ಲೀಟರಿಗೆ 3.56 ರೂ.ನಿಂದ 15.33ರೂ.ಗೆ ಏರಿದೆ. ಅಂದರೆ 330% ಏರಿಕೆ. ಇದರ ಚಿಲ್ಲರೆ ಬಲೆಯ 38.09% ತೆರಿಗೆಗಳಿಗೇ ಹೋಗುತ್ತದೆ. ಅಂತರ್ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಲಾರಂಭಿಸಿದರೆ ಸುಂಕಗಳನ್ನು ಅದಕ್ಕನುಗುಣವಾಗಿ ಕಡಿಮೆ ಮಾಡುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಹುಸಿಯಾಗಿದೆ. ಸುಂಕಗಳ ವಿಪರೀತ ಮಟ್ಟ ಹಾಗೆಯೇ ಮುಂದುವರೆಯುತ್ತಿದ್ದು ಜನಗಳ ಬೆನ್ನು ಮುರಿಯುತ್ತಿವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಪೆಟ್ರೋಲ್ ಮತ್ತು ಡೀಸೆಲ್ ‍ಎರಡರ ಬೆಲೆಗಳೂ ಹಿಂದೆಂದೂ ಕಾಣದ ಮಟ್ಟಕ್ಕೆ ಏರಿವೆ.

ಆದ್ದರಿಂದ, ತಕ್ಷಣವೇ ಕೇಂದ್ರ ಸರಕಾರ ಸುಂಕ ಏರಿಕೆಗಳನ್ನು ಹಿಂದಕ್ಕೆ ಪಡೆಯಬೇಕು, ಈ ಮೂಲಕ ವಿಪರೀತ ಹೊರೆ ಹೊರಬೇಕಾದ ಜನಗಳಿಗೆ ಸ್ವಲ್ಪ ಪರಿಹಾರವನ್ನು ಒದಗಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ. ಸುಂಕ ಏರಿಕೆಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಮೇ 8ರಂದು ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಿಸಬೇಕು ಎಂದು ಅದು ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಈ ಕೇಂದ್ರ ಸರಕಾರ ದೇಶದ ಉನ್ನತ ಕಾಪೊರೇಟ್‍ಗಳಿಗೆ ಲಕ್ಷ ಕೋಟಿ ರೂ.ಗಳ ತೆರಿಗೆ ವಿನಾಯ್ತಿಗಳನ್ನು ಸಂತೋಷದಿಂದಲೇ ಕೊಡಮಾಡುತ್ತಿರುವಾಗಲಂತೂ ಇದು ಅತ್ಯಗತ್ಯ ಎಂದಿರುವ ಸಿಪಿಐ(ಎಂ) ಅಬಕಾರಿ ಸುಂಕಗಳ ಏರಿಕೆಗಳನ್ನು ಹಿಂದಕ್ಕೆ ಪಡೆಯುವಂತೆ ಬಲವಂತ ಪಡಿಸಲು ಈ ಕಾರ್ಯಾಚರಣೆಯಲ್ಲಿ ಸೇರಿಕೊಳ್ಳಬೇಕು ಎಂದು ಇತರ ಎಲ್ಲ ಜನವಾದಿ ಹಾಗೂ ಜನಪರ ಶಕ್ತಿಗಳಿಗೆ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *