ಕೆಂಪು ಕೋಟೆ ದಾಲ್ಮಿಯಗಳಿಗೆ ಹಸ್ತಾಂತರ ಪಾಷಂಡತನಕ್ಕಿಂತ ಕಡಿಮೆಯೇನಲ್ಲ

ಭಾರತದ ಪರಂಪರೆಯ ಖಾಸಗೀಕರಣವನ್ನು ನಿಲ್ಲಿಸಿ– ಸಿಪಿಐ(ಎಂ) ಪೊಲಿಟ್‍ಬ್ಯುರೊ

ಇತಿಹಾಸ ಪ್ರಸಿದ್ಧ ಕೆಂಪು ಕೋಟೆಯನ್ನು ವಹಿಸಿಕೊಡುವುದರ ಬಗ್ಗೆ  ಪ್ರವಾಸೋದ್ಯಮ ಮಂತ್ರಾಲಯ, ಸಂಸ್ಕೃತಿ ಮಂತ್ರಾಲಯ ಮತ್ತು ಭಾರತ ಪುರಾತತ್ವ ಸರ್ವೆ(ಎಎಸ್‍ಐ) ಹಾಗೂ ದಾಲ್ಮಿಯ ಭಾರತ್‍ ಲಿಮಿಟೆಡ್‍ ನಡುವೆ ಎಂಒಯು( ತಿಳುವಳಿಕೆ ಒಪ್ಪಂದ)  ಆಗಿದೆ ಎಂದು ವರದಿಯಾಗಿದೆ. ಇದಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. 25 ಕೋಟಿ ರೂ.ಪಡೆದು, ಅದಕ್ಕೆಪ್ರತಿಯಾಗಿ ಕೆಂಪುಕೋಟೆಯನ್ನು ಐದು ವರ್ಷಗಳ ಕಾಲ ಆ ಗುಂಪಿಗೆ ಹಸ್ತಾಂತರಿಸಲಾಗುವುದಂತೆ.

ದಾಲ್ಮಿಯಾ ಗುಂಪು   ‘ಆರಂಭದಲ್ಲಿ ಐದು ವರ್ಷಗಳ ವರೆಗೆ ಅದರ ಒಡೆತನ’ ಹೊಂದಬೇಕಾಗುತ್ತದೆ, ಮತ್ತು ಈ ಗುತ್ತಿಗೆ ತಮಗೆ ದಾಲ್ಮಿಯ ಬ್ರಾಂಡ್‍ ಎದ್ದು ಕಾಣುವಂತೆ ಮಾಡಲು ಸ್ವಾತಂತ್ರ್ಯ ಕೊಟ್ಟಿದೆ  ಎಂದು  ಅವರ ಪತ್ರಿಕಾ ಹೇಳಿಕೆ ತಿಳಿಸಿದೆ. ಆ ಸ್ಥಳದಲ್ಲಿ  ಏರ್ಪಡಿಸುವ ಸಮಾರಂಭಗಳ ಸಂದರ್ಭದಲ್ಲಿ ಎಲ್ಲ ತೆರನ ಪ್ರಚಾರ ಸಾಮಗ್ರಿಗಳಲ್ಲಿ ಮತ್ತು ನಾಮ ಫಲಕಗಳಲ್ಲಿ ತಮ್ಮ ಬ್ರಾಂಡ್‍ ಹೆಸರನ್ನು ಪ್ರದರ್ಶಿಸಲು ಬಳಸುವ ಹಕ್ಕು ಅದಕ್ಕೆ ಇರುತ್ತದೆ.’ಕೆಂಪು ಕೋಟೆಯನ್ನು ದಾಲ್ಮಿಯ ಭಾರತ ಲಿಮಿಟೆಡ್‍ ದತ್ತು ತೆಗೆದುಕೊಂಡಿದೆ’ ಎಂದು ಎದ್ದು ಕಾಣುವ ಫಲಕದಲ್ಲಿ ಸಾರಿ ಹೇಳಲು ಕೂಡ ಅವರಿಗೆ ಅವಕಾಶ ನೀಡಲಾಗಿದೆ.

ಕೆಂಪು ಕೋಟೆ ನಮ್ಮ ದೇಶದ ಪರಂಪರೆಯ ಹಲವು ಸ್ಥಳಗಳಲ್ಲಿ ಒಂದು ಮಾತ್ರವೇ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅದು ಹೊಂದಿರುವ ಸ್ಥಾನದ ಸ್ಮರಣಾರ್ಥ ರಾಷ್ಟ್ರೀಯ ಧ್ವಜಾರೋಹಣ ಮಾಡುವ ಸ್ಥಳವಾಗಿದೆ ಎಂಬ ಸಂಗತಿಯತ್ತ ಗಮನ ಸೆಳೆದಿದೆ. ಬ್ರಿಟಿಶ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯದ ಮೊದಲ ಘೋಷಣೆಯನ್ನು 1857ರಲ್ಲಿ ಬಹದ್ದೂರ್‍ ಶಹಾ ಝಫರ್ ಈ ಕೋಟೆಯ ಕೊತ್ತಳದಿಂದಲೇ ಮಾಡಿದ್ದರು.

ನಂತರ ಬ್ರಿಟಿಶ್ ವಸಾಹತುಶಾಹಿಗಳಿಂದ ಆತನ ವಿಚಾರಣೆ ಇದೇ ಕೋಟೆಯಲ್ಲಿ ನಡೆಯಿತು. ಕೆಲವು ದಶಕಗಳ ನಂತರ, ಭಾರತದ ಸ್ವಾತಂತ್ರ್ಯ ಸಮರದಲ್ಲಿ ಒಂದು ಮಹತ್ವದ ಪಾತ್ರ ವಹಿಸಿದ ಝಾದ್‍ ಹಿಂದ್‍ ಸೇನೆ(ಐಎನ್‍ಎ)ಯ ಚಾರಿತ್ರಿಕ ವಿಚಾರಣೆಯನ್ನು ಕೂಡ ಬ್ರಿಟಿಶರು ಇಲ್ಲಿಯೇ ನಡೆಸಿದರು. ಈ ಸಂಗತಿಯಿಂದಾಗಿಯೇ ಕೇಂಪು ಕೋಟೆ ಸ್ವತಂತ್ರ ಭಾರತದ ಒಂದು ಪ್ರತೀಕವಾಗಿ, ಸ್ವಾತಂತ್ರ್ಯ ದಿನ ಆಗಸ್ಟ್ 15ರಂದು ಪ್ರಧಾನ ಮಂತ್ರಿಗಳು ಈ ಕೋಟೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತಾಡುತ್ತಾರೆ. ಈ ಪ್ರತೀಕಾತ್ಮಕ ಸ್ಮಾರಕವನ್ನು ಒಂದು ಕಾರ್ಪೊರೇಟ್‍ ಗುಂಪಿಗೆ ಹಸ್ತಾಂತರಿಸುವುದು ಪಾಷಂಡತನಕ್ಕಿಂತ ಕಡಿಮೆಯೇನಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಟೀಕಿಸಿದೆ.

ಪರಂಪರೆಯ ಪ್ರತೀಕಗಳನ್ನು ಖಾಸಗಿ ಕಾರ್ಪೊರೇಟ್‍ಗಳಿಗೆ ಹಸ್ತಾಂತರಿಸುವ ಪ್ರಶ್ನೆಯನ್ನು ಕುರಿತಂತೆ ಪರಿಶೀಲೀಸಿರುವ ಸಂಸದೀಯ ಸಮಿತಿ  ಹಾಗೆ  ಮಾಡಬಾರದು ಎಂದು ಒಮ್ಮತದಿಂದ ನಿರ್ಧರಿಸಿದೆ ಎಂಬುದನ್ನೂ ಸರಕಾರಕ್ಕೆ ನೆನಪು ಮಾಡಿಕೊಟ್ಟಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅದು ತನ್ನ  ನಿರ್ಧಾರವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *