ತೂತುಕುಡಿ: ಸಿಬಿಐಗೆ ಒಪ್ಪಿಸಿ, ಹೈಕೋರ್ಟ್ ಉಸ್ತುವಾರಿಯಲ್ಲಿ ನಡೆಯಸಿ-ಯೆಚುರಿ

ಮೇ 22-23ರಂದು ತಮಿಳುನಾಡಿನ ತೂತುಕುಡಿಯಲ್ಲಿ ಪರಿಸರ ಮಾಲಿನ್ಯ ಮಾಡುತ್ತಿರುವ ಸ್ಟೆರ್ಲೈಟ್ ಕಾರ್ಖಾನೆಯನ್ನು ಮುಚ್ಚಬೇಕೆಂದು ಪ್ರತಿಭಟನೆ ಮಾಡುತ್ತಿದ್ದ ಜನಗಳ ಮೇಲೆ ಗೋಲೀಬಾರಿನಿಂದ 13 ಜನರ ಸಾವು ಸಂಭವಿಸಿರುವ ಘಟನೆಯ ತನಿಖೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಭಾವದಿಂದ ಹೊರಗಿರುವ ಸಂಸ್ಥೆಯೊಂದರಿಂದ ನಡೆಸಬೇಕು, ತನಿಖೆಯನ್ನು ಸಿಬಿಐಗೆ ವಹಿಸಬೇಕು, ಅದು ಮದ್ರಾಸ್‍ ಹೈಕೋರ್ಟಿನ ಉಸ್ತುವಾರಿಯಲ್ಲಿ ಈ ತನಿಖೆ ನಡೆಸುವಂತಾಗಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಆಗ್ರಹಿಸಿದ್ದಾರೆ.

ಅವರು ಜೂನ್‍ 3ರಂದು ತೂತ್ತುಕುಡಿಗೆ ಬಂದು ಸಾವು ಉಂಟಾಗಿರುವ ಕುಟುಂಬಗಳನ್ನು ಮತ್ತು ಗಾಯಗೊಂಡಿರುವವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುತ್ತ ಈ  ಆಗ್ರಹವನ್ನು ಮಾಡಿದ್ದಾರೆ.

ಬಹಳ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿರುವ ಜನರು ತಮ್ಮ ಹೋರಾಟದ ಇತ್ತೀಚಿನ ಘಟ್ಟದ  “100ನೇ ದಿನ ಜಿಲ್ಲಾಧಿಕಾರಿ ಕಚೆರಿಯ ಮುಂದೆ ಧರಣಿ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಆದರೆ  ಅವರು ಪೊಲಿಸ್‍ ಸ್ನೈಪರ್‍ ಬುಲೆಟ್‍ಗಳನ್ನು, ಕಂಡಲ್ಲಿ ಗುಂಡು ಆದೇಶವನ್ನು ಎದುರಿಸಬೇಕಾಯಿತು. ಆ ದಿನ ಜಿಲ್ಲಾ ಮುಖ್ಯಕಚೇರಿಯಲ್ಲಿ ಕಲೆಕ್ಟರ್‍ ಇರಲಿಲ್ಲ,  ಪೊಲಿಸ್‍ ಸೂಪರಿಂಟೆಂಡೆಂಟರೂ ಇರಲಿಲ್ಲ ಎಂದು ನನಗೆ ತಿಳಿದು ಬಂತು. ಹಾಗಿದ್ದರೆ ಗೋಲೀಬಾರಿನ ಆದೇಶ ಕೊಟ್ಟವರಾರು?” ಎಂದು ಯೆಚುರಿ ಪ್ರಶ್ನಿಸಿದರು. ಕಲೆಕ್ಟರ್‍ ಈ ಅಧಿಕಾರವನ್ನು ಯಾರಿಗಾದರೂ ವಹಿಸಿದ್ದರೇ, ಅಥವ ಯಾರೋ ತಾವಾಗಿಯೇ ಈ ಅಧಿಕಾರವನ್ನು ವಹಿಸಿಕೊಂಡರೇ ಎಂದು ಅವರು ಕೇಳಿದರು.

“ಆ ಪ್ರತಿಭಟನೆಯಲ್ಲಿ ಯಾವುದೇ ಪಕ್ಷದ ಬಾವುಟಗಳು ಇರಲಿಲ್ಲ. ನಾವು ಕೂಡ ನಮ್ಮ ಪಕ್ಷದ ಬಾವುಟಗಳೊಂದಿಗೆ ಅಲ್ಲಿ ಇರಲಿಲ್ಲ. ಆದರೂ ನಮ್ಮ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರ ಮೇಲೆ ಹೇರಿರುವ ಎಲ್ಲ ಕೇಸುಗಳನ್ನೂ ಹಿಂತೆಗೆದುಕೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಕಲೆಕ್ಟರ್‍ ಮತ್ತು ಪೋಲೀಸ್‍ ಸೂಪರಿಂಟೆಂಡೆಂಟ್‍ರನ್ನು ತನಿಖೆ ಮುಗಿಯುವ ವರೆಗೆ ಅಮಾನತಿನಲ್ಲಿಡಬೇಕಾಗಿತ್ತು. ಬದಲಾಗಿ ಅವರನ್ನು ವರ್ಗಾಯಿಸಲಾಗಿದೆ. ಈ ಕಾರ್ಖಾನೆಯನ್ನು ನಡೆಸುವ ವೆದಾಂತ ಗುಂಪು ಮತ್ತು ವಿವಿಧ ಸರಕಾರಗಳ ನಡುವೆ ‘ಬಲವಾದ ಸಂಬಂಧಗಳಿವೆ’ಯಾದ್ದರಿಂದ  ವಿಪರೀತ ಪರಿಸರ ದೂಷಣೆ ಮಾಡುತ್ತಿರುವ  ಈ ಕಾರ್ಖಾನೆಯನ್ನು ನಡೆಯಲು ಬಿಡಲಾಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದರ ವಿಸ್ತರಣೆಗೆ ಒಪ್ಪಿಗೆ ನೀಡಿದ್ದು ಯಾಕೆ ಎಂದು ಯೆಚುರಿ ಪ್ರಶ್ನಿಸಿದ್ದಾರೆ. 13 ಜನರನ್ನು ಪೋಲೀಸ್‍ ಗುಂಡುಗಳು ಬಲಿ ತೆಗೆದುಕೊಂಡು, ನೂರಾರು ಜನಗಳನ್ನು ಗಾಯಗೊಳಿಸಿದ ನಂತರ ಮೇ 29ರಂದು ತಮಿಳುನಾಡು ಸರಕಾರ  ಸ್ಥಾವರದ ವಿಸ್ತರಣೆಗೆ ಭೂಮಿ ಮಂಜೂರಾತಿಯನ್ನು ರದ್ದು ಮಾಡಿದೆ, ಈಗಿರುವ ಘಟಕಕ್ಕೆ ಬೀಗಹಾಕಿ ಅದನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಪರಿಸರ ಮಾಲಿನ್ಯ ಹತೋಟಿ ಮಂಡಳಿಗೆ ಆದೇಶ ನೀಡಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *