ಶ್ರೀಮಂತ ಸಾಲಗಾರರನ್ನು ಪಾರು ಮಾಡಲು ಎಲ್‍.ಐ.ಸಿ. ದುರುಪಯೋಗ

ಸುಸ್ತಿಸಾಲಗಳಲ್ಲಿ ಅತ್ಯಂತ ಕೆಟ್ಟ ದಾಖಲೆ ಹೊಂದಿರುವ ಬ್ಯಾಂಕ್ ಐಡಿಬಿಐ ಯನ್ನು ಪಾರು ಮಾಡಬೇಕು ಎಂದು ಬಿಜೆಪಿ ಸರಕಾರವ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಕ್ಕೆ ಹೇಳಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ.

ಎಲ್‌ಐಸಿ ವಿಮಾ ಪಾಲಿಸಿಗಳ ಸ್ವರೂಪದಲ್ಲಿ ಜನಗಳ ಉಳಿತಾಯಗಳ ಭಂಡಾರ. ಈ ಬಂಡವಾಳವನ್ನು  ಅತ್ಯಂತ ಕೆಟ್ಟ ಸುಸ್ತಿದಾರ ಬ್ಯಾಂಕನ್ನು ಪಾರು ಮಾಡಲು ಬಳಸುವುದು ಜನಗಳ ಉಳಿತಾಯಗಳ ಸಾರ್ವಜನಿಕ ಲೂಟಿಯೇ ಆಗುತ್ತದೆ. ಮೋದಿ ಸರಕಾರ ಶ್ರೀಮಂತ ಬಾಕಿದಾರರ ಹೆಸರುಗಳನ್ನು ಗುಟ್ಟಾಗಿಟ್ಟಿದೆ. ಆ ಬಾಕಿದಾರರಿಂದ ಸಾಲಗಳನ್ನು ವಸೂಲಿ ಮಾಡುವ ಬದಲು ಅವರನ್ನು ವಿಮಾಪಾಲಿಸಿಗಳಲ್ಲಿ ಇಟ್ಟಿರುವ ಹಣದಿಂದ ಪಾರು ಮಾಡಲಾಗುತ್ತಿದೆ ಎಂದು ಸಿಪಿಐ(ಎಂ) ಹೇಳಿದೆ.

ಎಲ್‌ಐಸಿ ಈ ರೀತಿ ವಹಿಸಿಕೊಳ್ಳಲು 13,000 ಕೋಟಿ ರೂ.ಗಳನ್ನು ಹೂಡುತ್ತಿದೆ. ಇದನ್ನು ಪಾಲಿಸಿದಾರರಿಗೆ ಒಂದು ಉತ್ತಮ ಪ್ರತಿಫಲ ನೀಡಲು ಹೂಡಬೇಕಾಗಿತ್ತು. ಅದರ ಬದಲಿಗೆ, ಬಾಕೀದಾರರನ್ನು ಪಾರು ಮಾಡಲು ಅದನ್ನು ಬಳಸಲಾಗುತ್ತಿದೆ. ಇದು ಅತ್ಯಂತ ಕೆಟ್ಟ ರೀತಿಯ ಚಮಚಾ ಬಂಡವಾಳಶಾಹಿ. ಶ್ರೀಮಂತರು ಲೂಟಿ ಮಾಡಿ ಪರಾರಿಯಾಗಬಹದು, ಭಾರತದ ಜನಸಾಮಾನ್ಯ ಅವರ ಸಾಲಗಳನ್ನು ತನ್ನ ಉಳಿತಾಯದಿಂದ ರಕ್ಷಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ವ್ಯಂಗ್ಯ ಮಾಡಿದೆ.

ಅಲ್ಲದೆ ಎಲ್‌ಐಸಿಗೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪ್ರವೇಶಿಸಲು ಅವಕಾಶವಿಲ್ಲ. ಮೋದಿ ಸರಕಾರ ಇದ್ದಕ್ಕಿದ್ದಂತೆ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ. ತಮ್ಮ ಸಾಲಗಳನ್ನು ತೀರಿಸದಿರುವ ಶ್ರೀಮಂತ ಸುಸ್ತಿದಾರರನ್ನು ಕಾಪಾಡಲು ಈ ಸರಕಾರ ನಿಯಂತ್ರಣ ವ್ಯವಸ್ಥೆಯನ್ನೇ ಧ್ವಂಸ ಮಾಡುತ್ತಿದೆ.

ಸರಕಾರ ಈ ನಿರ್ಧಾರವನ್ನು ರದ್ದು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *