ನಾಲ್ಕು ವರ್ಷಗಳ ದುರಾಡಳಿತದ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆ

  • ಚುನಾವಣಾ ಸುಧಾರಣೆಗಳಿಗಾಗಿ ದೇಶವ್ಯಾಪಿ ಪ್ರಚಾರಾಂದೋಲನ
  • ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ರಾಷ್ಟ್ರೀಯ ಪ್ರತಿಭಟನೆ
  • ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕೆ ರಾಷ್ಟ್ರೀಯ ಸಮಾವೇಶ

ಜೂನ್‍ 22ರಿಂದ 24 ರವರೆಗೆ ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ ಮೋದಿ ಸರಕಾರದ ನಾಲ್ಕು ವರ್ಷಗಳ ಆಡಳಿತವನ್ನು  ಪರಾಮರ್ಶಿಸಿ ಅದರ ಜನ-ವಿರೋಧಿ ಕ್ರಮಗಳು ಮತ್ತು ಧೋರಣೆಗಳು, ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಮುರಿದು ಬಿದ್ದಿರುವುದು ಹಾಗೂ ಜನತೆಯ ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಗಳು ಮುಂತಾದ ಎಲ್ಲ ಪ್ರಶ್ನೆಗಳ ಮೇಲೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಅಲ್ಲದೆ

  • ಸಪ್ಟಂಬರ್ 5ರಂದು ಸಂಸದ್‍ ಚಲೋ ಗೆ ಕಾರ್ಮಿಕ ವರ್ಗ ಮತ್ತು ರೈತ-ಕೃಷಿ ಕೂಲಿಕಾರ ಸಂಘಟನೆಗಳು ಕೊಟ್ಟಿರುವ ಜಂಟಿ ಕರೆಗೆ ಕೇಂದ್ರ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಸಹಿಸಂಗ್ರಹ ಚಳುವಳಿ ಮತ್ತು ಆಗಸ್ಟ್  9ರಂದು ರೈತ-ಕಾರ್ಮಿಕರ ಜೈಲ್‍ ಭರೋ ಕಾರ್ಯಾಚರಣೆಗೂ ಕೇಂದ್ರ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
  • ತುರ್ತು ಚುನಾವಣಾ ಸುಧಾರಣೆಗಳಿಗೆ ಪ್ರಚಾರಾಂದೋಲನ: ಚುನಾವಣಾ ಸುಧಾರಣೆಗಳು ತುರ್ತಾಗಿ ನಡೆಯಬೇಕು ಎಂದು ಆಗ್ರಹಿಸಿ ಒಂದು ರಾಷ್ಟ್ರವ್ಯಾಪಿ ಪ್ರಚಾರಾಂದೋಲನ ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿದೆ.  ವಿಚಾರ ಸಂಕಿರಣಗಳು, ಸಮಾವೇಶಗಳು, ಸಾರ್ವಜನಿಕ ಸಭೆಗಳ ಮೂಲಕ ಇದನ್ನು ನಡೆಸಲಾಗುವುದು. ಇದರಲ್ಲಿ ಚುನಾವಣೆಗಳಲ್ಲಿ ಭಾಗಶಃ ಪಟ್ಟಿಯೊಂದಿಗೆ ಆನುಪಾತಿಕ ಪ್ರಾತಿನಿಧ್ಯ ವ್ಯವಸ್ಥೆ, ಹೆಚ್ಚುತ್ತಿರುವ ಹಣಶಕ್ತಿಯ ಪ್ರಭಾವ ಮತ್ತು ವಿವಿಧ ಜನವಿಭಾಗಗಳ ನಡುವೆ ವೈರತ್ವವನ್ನು ಸೃಷ್ಟಿಸಿ ದ್ವೇಷದ ವಾತಾವರಣವನ್ನು ಆಳಗೊಳಿಸುತ್ತಿರುವುದನ್ನು ತಡೆಯುವುದು, ಇದಕ್ಕಾಗಿ ಈಗಿರುವ ಚುನಾವಣಾ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರುವ  ಕುರಿತ ಸಿಪಿಐ(ಎಂ) ನಿಲುವಿನ ಪ್ರತಿಪಾದನೆಯೂ ಸೇರಿದೆ. ರಾಜಕೀಯ ಪಕ್ಷಗಳಿಗೆ ನಿಧಿನೀಡಿಕೆಯನ್ನು ಪಾರದರ್ಶಕಗೊಳಿಸಬೇಕು, ಮೋದಿ ಸರಕಾರ ತಂದಿರುವ ಚುನಾವಣಾ ಬಾಂಡ್‍ಗಳನ್ನು ಮತ್ತು ಎಫ್‍ಸಿಆರ್‍ಎ (ವಿದೇಶಿ ವಂತಿಗೆಗಳ ನಿಯಂತ್ರಣ ಕಾಯ್ದೆ) ತಿದ್ದುಪಡಿಯನ್ನು, ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಕ್ರಮಗಳನ್ನು ಹಿಂತೆಗೆದು ಕೊಳ್ಳಬೇಕಾದ ಅಗತ್ಯವನ್ನು ಕೂಡ ಪ್ರಚಾರಾಂದೋಲನ ಎತ್ತಿ ತೋರಿಸಲಿದೆ. ಮುಂದಿನ ಮೂರು ತಿಂಗಳಲ್ಲಿ ದೇಶಾದ್ಯಂತ ಈ  ಪ್ರಚಾರಾದೋಲನವನ್ನು ನಡೆಸಲಾಗುವುದು ಎಂದು ಕೇಂದ್ರ ಸಮಿತಿ ಹೇಳಿದೆ.
  • ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಕೊಲೆಯ ವಿರುದ್ಧ ಜುಲೈ ತಿಂಗಳಲ್ಲಿ  ಒಂದು ರಾಷ್ಟ್ರೀಯ ಮಟ್ಟದ ಪ್ರತಿಭಟನೆ ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿದೆ.
  • ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗುತ್ತಿರುವ ಗಂಭೀರ ಪರಿಸ್ಥಿತಿಯನ್ನು ಕುರಿತಂತೆ, ಆ ರಾಜ್ಯದಲ್ಲಿ ಶಾಂತಿ ಮತ್ತು ಸಾಮಾನ್ಯ ಪರಿಸ್ಥಿತಿಯನ್ನು ನೆಲೆಗೊಳಿಸಲು ಜನಪರ ಮಧ್ಯಪ್ರವೇಶಕ್ಕಾಗಿ ಒಂದು ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ನಡೆಸಲು ಅದು ನಿರ್ಧರಿಸಿದೆ.

ಸಭೆಯ ನಂತರ ಹೊರಡಿಸಿರುವ ಕೇಂದ್ರ ಸಮಿತಿಯ ಹೇಳಿಕೆಯ ಇತರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ:

ಕೇರಳ ಎಲ್‍ಡಿಎಫ್‍  ಗೆ ಪ್ರಶಂಸೆ

ಸಿಪಿಐ(ಎಂ) ಕೇಂದ್ರ ಸಮಿತಿ ಕೇರಳದ ಎಲ್‍ಡಿಎಫ್ ಸರಕಾರ ರಾಜ್ಯದಲ್ಲಿ ಗಾಬರಿ ಉಂಟುಮಾಡಿದ ನಿಪಾಹ್ ವೈರಸ್‍ ಹರಡದಂತೆ ತಡೆದಿರುವ ರೀತಿಗೆ ಅದನ್ನು ಅಭಿನಂದಿಸಿದೆ. ರಾಜ್ಯ ಸರಕಾರದ ಪ್ರಯತ್ನಗಳು ವಿಶ್ವ ಆರೋಗ್ಯ ಸಂಘಟನೆ ಸೇರಿದಂತೆ ಅಂತರ್ರಾಷ್ಟ್ರೀಯ ಸಂಸ್ಥೆಗಳ ಪ್ರಶಂಸೆಗೆ ಪಾತ್ರವಾಗಿವೆ.

ಮೋದಿ ಸರಕಾರದ ನಾಲ್ಕು ವರ್ಷಗಳು

ಮೋದಿ ಸರಕಾರದ ನಾಲ್ಕು ವರ್ಷಗಳ ಪರಾಮರ್ಶೆಯನ್ನು ಕೈಗೊಂಡ ಕೇಂದ್ರ ಸಮಿತಿ  ನಾಲ್ಕು ವರ್ಷಗಳು ಜನಗಳ ಜೀವನಾಧಾರಗಳ ಮೇಲೆ ಅಭೂತಪೂರ್ವ ದಾಳಿಗಳನ್ನು, ಕೋಮುವಾದಿ ಧ್ರುವೀಕರಣ ತೀಕ್ಷ್ಣಗೊಳ್ಳುವುದರೊಂದಿಗೆ ಮುಸ್ಲಿಮರು ಮತ್ತು ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ಕಂಡಿವೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳು ಹಾಗೂ ಸ್ವತಂತ್ರ ಸಂವಿಧಾನಿಕ ಪ್ರಾಧಿಕಾರಗಳನ್ನು ಶಿಥಿಲಗೊಳಿಸುತ್ತಿರುವುದನ್ನು ಕಂಡಿವೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಅವ್ಯಾಹತ ಏರಿಕೆಗಳು ಕೋಟ್ಯಂತರ ಬಳಕೆದಾರರ ಮೇಲಿನ ಹೊರೆಗಳನ್ನು ಹೆಚ್ಚಿಸುವುದಲ್ಲದೆ,  ಅದರಿಂದಾಗಿ ಹಣದುಬ್ಬರದ ಸುರುಳಿ ಸುತ್ತಿಕೊಳ್ಳಲು ಕಾರಣವಾಗಿದೆ, ನೋಟುರದ್ಧತಿ ಮತ್ತು ಜಿಎಸ್‍ಟಿ ಯ ಕಾರಣಗಳಿಂದ ಆರ್ಥಿಕ ಚಟುವಟಿಕೆಗಳು ದುರ್ಬಲಗೊಂಡಿರುವ ಸನ್ನಿವೇಶದಲ್ಲೂ ಹಣದುಬ್ಬರ ದರ ಏರುವಂತಾಗಿದೆ. ಈ ನಾಲ್ಕು ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ಈ ಸರಕಾರ ಹನ್ನೊಂದು ಬಾರಿ ಹೆಚ್ಚಿಸಿದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಕೇಂದ್ರ ಸಮಿತಿ ಗಮನ ಸೆಳೆದಿದೆ.

ಕೃಷಿ ಸಂಕಟ ಏರುತ್ತಲೇ ಇದೆ, ರೈತರ ಹತಾಶ ಆತ್ಮಹತ್ಯೆಗಳು ಬಿಡುವಿಲ್ಲದಂತೆ ನಡೆಯುತ್ತಲೇ ಇವೆ. ರೈತಾಪಿ ಜನಗಳ ದೊಡ್ಡ ಮತ್ತು ಸಮರಧೀರ ಹೋರಾಟಗಳಿಂದಾಗಿ ವಿವಿಧ ರಾಜ್ಯಗಳ ಬಿಜೆಪಿ ಸರಕಾರಗಳು ಹಲವಾರು ಆಶ್ವಾಸನೆಗಳನ್ನು ಕೊಟ್ಟವು, ಆದರೆ ಇವುಗಳಲ್ಲಿ ಯಾವುದನ್ನೂ ಜಾರಿಗೆ ತಂದಿಲ್ಲ. ಇನ್ನೊಂದು ಸುತ್ತಿನ ಸಮರಧೀರ ಕಾರ್ಯಾಚರಣೆಗಳು, ಹೋರಾಟಗಳು ಬರಲಿವೆ ಎಂದು ಕೇಂದ್ರ ಸಮಿತಿ ಹೇಳಿದೆ.

ದೇಶಾದ್ಯಂತ, ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಒಟ್ಟಾರೆ ವಾತಾವರಣ ಹಿಂಸಾಚಾರವನ್ನು ಹುಟ್ಟಿಸುತ್ತಿದೆ. ‘ಗೋರಕ್ಷಣೆ’ ಮತ್ತು ’ನೈತಿಕ ಪೋಲೀಸ್‍ಗಿರಿ’ಯ ಹೆಸರಲ್ಲಿ ಖಾಸಗಿ ಸೇನೆಗಳು ನಡೆಸುತ್ತಿರುವ ಹಿಂಸಾಚಾರವಲ್ಲದೆ, ಜನಜಂಗುಳಿಗಳು ಹೊಡೆದು ಸಾಯಿಸುವುದು, ಭೀಕರ ಸಾಮೂಹಿಕ ಬಲಾತ್ಕಾರಗಳು ಮತ್ತು ಅಪ್ರಾಪ್ತವಯಸ್ಕರ ಕೊಲೆಗಳು ಹೆಚ್ಚುತ್ತಿವೆ. ಇವುಗಳಲ್ಲಿ ಇತ್ತೀಚಿನದ್ದು ಝಾರ್ಖಂಡಿನಲ್ಲಿ ಐವರು ಮಹಿಳೆಯರ ಭೀಕರ ಸಾಮೂಹಿಕ ಬಲಾತ್ಕಾರ. ಬಿಜೆಪಿ ಸರಕಾರ ಎಫ್‍ಐಆರ್‍ ದಾಖಲಿಸಲು, ತಪ್ಪಿತಸ್ಥರನ್ನು ಶಿಕ್ಷಿಸಲು ನಿರಾಕರಿಸಿದೆ. ಇದು  ಇಂತಹ ಖಾಸಗಿ ಸೇನೆಗಳಿಗೆ ನೀಡುವ ಕೃಪಾಪೋಷಣೆ, ಈ ಮೂಲಕ ನಮ್ಮ ಸಮಾಜವನ್ನು ಅಮಾನವೀಯಗೊಳಿಸಲಾಗುತ್ತಿದೆ ಎಂದು ಸಿಪಿಐ(ಎಂ)  ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಬಿಜೆಪಿ ಸರಕಾರದ ಅಡಿಯಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಜನತೆಯ ಸಂವಿಧಾನಿಕ ಹಕ್ಕುಗಳನ್ನು ಸಾರಾಸಗಟು ಉಲ್ಲಂಘಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಎಲ್ಲ ಪ್ರಶ್ನೆಗಳ ಮೇಲೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ.

ಸಾರ್ವಜನಿಕ ಹಣದ ಬೃಹತ್  ಲೂಟಿ-ಸರಕಾರ ಮೂಕಪ್ರೇಕ್ಷಕ

ಕೆಲವು ಕಾರ್ಪೊರೇಟ್‍ ಗುಂಪುಗಳು ಬೃಹತ್‍ಪ್ರಮಾಣದಲ್ಲಿ ಸಾರ್ವನಿಕ ಹಣದ ಲೂಟಿ ಮಾಡುತ್ತಿವೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರ ಸಮಿತಿ , ಮೋದಿ ಸರಕಾರದ ಮೊದಲ ಮೂರು ವರ್ಷಗಳಲ್ಲಿ 2.5ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್‍ಗಳ ಸುಸ್ತಿ ಸಾಲಗಳನ್ನು ಮಾಫಿ ಮಾಡಿದ್ದಲ್ಲದೆ, ಮತ್ತೆ 1,44,993 ಕೋಟಿ ರೂ.ಗಳನ್ನು ಕೂಡ ಮಾಫಿ ಮಾಡಿದೆ ಎಂದು ವರದಿಯಾಗಿದೆ. ಭಾರತೀಯ ರಿಝರ್ವ್ ಬ್ಯಾಂಕ್ (ಆರ್ ಬಿ ಐ) ದೇಶದಲ್ಲಿರುವ ಬ್ಯಾಂಕುಗಳ 1.65 ಲಕ್ಷ ಶಾಖೆಗಳ ಉಸ್ತುವಾರಿ ನಡೆಸುವುದಕ್ಕೆ ಸಜ್ಜಾಗಿಲ್ಲ ಎಂದು ಅದರ ಗವರ್ನರ್‍ ಈಗ ಹೇಳುತ್ತಿದ್ದಾರೆ.  ಆರ್ ಬಿ ಐ ಭಾರತೀಯ ಬ್ಯಾಂಕಿಂಗ್‍ ವ್ಯವಸ್ಥೆಯ ನಿಯಂತ್ರಕ, ಅದು ದೇಶದ ಹಣ ಕುರಿತ ಧೋರಣೆಯನ್ನು ರೂಪಿಸುವಂತದ್ದು. ಅದು ತನ್ನ ಸಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸಲು ಸಾಧ್ಯವಾಗುವಂತೆ ಅದನ್ನು ಬಲಪಡಿಸಬೇಕಾಗಿದೆ.

ಈ ಮೋದಿ ಸರಕಾರದ ನಾಲ್ಕು ವರ್ಷಗಳಲ್ಲಿ ಜನತೆಯ ಹಣದ ಲೂಟಿ ನಡೆಯುತ್ತಿದೆ ಮತ್ತು ಈ ಕೃತ್ಯಗಳನ್ನು ಎಸಗುವವರಿಗೆ ದೇಶ ಬಿಟ್ಟೋಡಲು ಅವಕಾಶ ನೀಡಲಾಗುತ್ತಿದೆ, ಸರಕಾರ ಮೂಕಪ್ರೇಕ್ಷಕನಾಗಿಯೇ ಉಳಿದಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ದಲಿತರ ಮೇಲೆ ಯೋಜಿತ ದೌರ್ಜನ್ಯಗಳು ಆತಂಕಕಾರಿ

ದಲಿತರ ಹಕ್ಕುಗಳನ್ನು ಪ್ರತಿಪಾದಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳ ಮೇಲೆ ಮತ್ತು ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಎಪ್ರಿಲ್‍ 2 ರ ಅಖಿಲ ಭಾರತ ಬಂದ್‍ನಲ್ಲಿ ಭಾಗವಹಿಸಿದವರ ಮೇಲೆ, ವಿಶೇಷವಾಗಿ ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನ   ರಾಜ್ಯಗಳಲ್ಲಿ  ಒಂದು ಯೋಜಿತ ಹಲ್ಲೆ ನಡೆಸಿರುವುದು ಅತ್ಯಂತ ಗಂಭೀರ ಸಂಗತಿ ಎಂದು ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಎಲ್ಲ ಮಟ್ಟಗಳಲ್ಲೂ ಈ ಪ್ರತಿಭಟನೆಗಳಲ್ಲಿ ಪಕ್ಷ ಸಕ್ರಿಯವಾಗಿ ಜತೆಗೂಡಿ ಈ ಚಳುವಳಿಗಳನ್ನು ಮುಂದೊಯ್ಯಬೇಕೆಂದು ಕೇಂದ್ರ ಸಮಿತಿ ನಿರ್ಧರಿಸಿದೆ.

ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಬುಡಕಟ್ಟುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯ ಅಂಶಗಳನ್ನು ನಿಷ್ಫಲಗೊಳಿಸಿರುವ ಸುಪ್ರಿಂ ಕೋರ್ಟಿನ ತೀರ್ಪಿನ ಪರಿಣಾಮವನ್ನು ಪ್ರಭಾವಶೂನ್ಯಗೊಳಿಸಲು ಒಂದು ಮಸೂದೆಯನ್ನು ಮಂಡಿಸಬೇಕು ಎಂದು  ಕೇಂದ್ರ ಸಮಿತಿ ಆಗ್ರಹಿಸಿದೆ. ಅದರ ಮಧ್ಯಂತರದ ಅವಧಿಯಲ್ಲಿ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿ  ಈ ಸುಪ್ರಿಂಕೋರ್ಟ್ ತೀರ್ಪಿನ ಮೊದಲಿದ್ದ ಸ್ಥಿತಿಯನ್ನು ತರುವಂತೆ ಮತ್ತು ಆ ಮೂಲಕ ಈ ಸಮುದಾಯಗಳಲ್ಲಿ ಅವರ ಸಂವಿಧಾನಿಕ ಹಕ್ಕುಗಳ ಬಗ್ಗೆ ಉಂಟಾಗಿರುವ ಅಭದ್ರತೆಯ ಭಾವನೆಯನ್ನು ಗಣನೆಗೆ ತಗೊಳ್ಳುವಂತೆ ಆಗಬೇಕು ಎಂದು ಕೇಂದ್ರ ಸಮಿತಿ ಹೇಳಿದೆ.

ಆರೆಸ್ಸೆಸ್‍-ಬಿಜೆಪಿ ‘ನಗರ ಪ್ರದೇಶದ ಮಾವೋವಾದಿಗಳು’ ಎಂಬ ಹೊಸದೊಂದು ಪದವನ್ನು ಸೃಷ್ಟಿಸಿವೆ.  ಈ ವೇಷ ತೊಡಿಸಿ ಐವರು ಕಾರ್ಯಕರ್ತರನ್ನು ದಲಿತ ಚಳುವಳಿಯನ್ನು ಬೆಂಬಲಿಸಿದ್ದಕ್ಕಾಗಿ ಇದುವರೆಗೆ ಬಂಧಿಸಲಾಗಿದೆ. ಮಹಾರಾಷ್ಟ್ರದ ಬಿಜೆಪಿ  ರಾಜ್ಯ ಸರಕಾರ ಭಯಾನಕ ಯುಎಪಿ ಕಾಯ್ದೆಯನ್ನು ಅನ್ವಯಿಸುತ್ತಿದೆ. ಇಂತಹ ಕ್ರಿಯೆಗಳು ದಲಿತರಲ್ಲಿನ ಪರಕೀಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತವಷ್ಟೇ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಒತ್ತಿ ಹೇಳಿದೆ.

ನಾಗರಿಕತ್ವ ಕಾಯ್ದೆ ತಿದ್ದುಪಡಿ- ಚುನಾವಣಾ ಪ್ರಯೋಜನಕ್ಕಾಗಿ

ಧಾರ್ಮಿಕ ನಂಟಿನ ಆಧಾರದಲ್ಲಿ ನಾಗರಿಕತ್ವ ಕಾಯ್ದೆಗೆ ತಿದ್ದುಪಡಿಯ ಪ್ರಸ್ತಾವ ಅಸ್ಸಾಂ ರಾಜ್ಯದ ಜನಗಳ ಈಗಾಗಲೇ ನಾಜೂಕಾಗಿರುವ ಐಕ್ಯತೆಯನ್ನು ಕುಗ್ಗಿಸುತ್ತದೆ.ರಾಷ್ಟ್ರೀಯ ನಾಗರಿಕರ ದಾಖಲೆ( ನ್ಯಾಶನಲ್‍ ರಿಜಿಸ್ಟರ್ ಆಫ್ ಸಿಟಿಝನ್ಸ್-ಎನ್‍ ಆರ್‍ ಸಿ)ಯನ್ನು ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಅಪೂರ್ಣತೆ ಮತ್ತು ಉದ್ದೇಶಪೂರ್ವಕವಾದ ತಾರತಮ್ಯದಿಂದಾಗಿ ಮತ್ತು ‘ಸಂದೇಹಾಸ್ಪದ ಮತದಾರರು’ ಎಂಬ ವಿಧಧಿಂದಾಗಿ  ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರು ತೀವ್ರ ಒತ್ತಡಕ್ಕೊಳಗಾಗಿದ್ದಾರೆ.

ವಿವಿಧ ಪ್ರದೇಶಗಳು, ಭಾಷೆಗಳು ಮತ್ತು ಜನಾಂಗಗಳಿಗೆ ಸೇರಿದ ಜನಗಳ ಐಕ್ಯತೆ ಸರ್ವಪ್ರಥಮ  ಗುರಿಯಾಗಿರಬೇಕು. ಬಿಜೆಪಿ/ಆರೆಸ್ಸೆಸ್‍ ಚುನಾವಣಾ ಪ್ರಯೋಜನಗಳಿಗಾಗಿ ಜನಗಳ ಭಾವನೆಗಳ ಜೊತೆಗೆ ಆಟವಾಡುತ್ತಿರುವುದು ಪರಿಸ್ತಿತಿಯನ್ನು ಹದಗೆಡಿಸುತ್ತಿದೆ ಎಂದಿರುವ ಕೇಂದ್ರ ಸಮಿತಿ ಜನಗಳ ನಾಗರಿಕತ್ವವನ್ನು ನಿರ್ಧರಿಸಲು ಅವರು ಯಾವ ಧರ್ಮಕ್ಕೆ ಸೇರಿದವರು ಎಂಬ ಆಧಾರದಲ್ಲಿ ಯಾವುದೇ ತಿದ್ದುಪಡಿಯನ್ನು ಸಿಪಿಐ(ಎಂ) ವಿರೋಧಿಸುವುದಾಗಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ: ಬಿಜೆಪಿಯ ರಾಜಕೀಯ ನಿಲುವಿನ ಸಂಪೂರ್ಣ ವಿಫಲತೆ:

ಕೇಂದ್ರ ಸಮಿತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಡಿ ಬರುತ್ತಿರುವ ಸನ್ನಿವೇಶವನ್ನು ಪರಿಶೀಲಿಸುತ್ತ, ಪಿಡಿಪಿಯೊಂದಿಗಿನ ಮೈತ್ರಿ ಸರಕಾರದಿಂದ ಸದ್ಯದ ನಿರ್ದಿಷ್ಟ ಕ್ಷಣದಲ್ಲಿ  ಬಿಜೆಪಿ ಹೊರ ಬಂದಿರುವುದು ರಾಜ್ಯದಲ್ಲಿ ಹೆಚ್ಚಿನ ರಾಜಕೀಯ ಅಸ್ಥಿರತೆಯನ್ನು ಉಂಟು ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಇದು ಈ ವಿಷಯದಲ್ಲಿ ಬಿಜೆಪಿಯ ನಿಲುವಿನ ಸಂಪೂರ್ಣ ವಿಫಲತೆಯನ್ನು ಎತ್ತಿ ತೋರುತ್ತದೆ ಎಂದು ಅದು ಹೇಳಿದೆ.

ಈ ಮೈತ್ರಿ ಆರಂಭದಿಂದಲೇ ಅಸಮರ್ಥನೀಯವಾಗಿತ್ತು. ಅದು ಯಾವುದೇ ಪ್ರಶ್ನೆಯಲ್ಲಿ ಎಂದೂ ಸಹಮತವಿಲ್ಲದ ಶಕ್ತಿಗಳ ಮೈತ್ರಿಯಾಗಿದ್ದು ಅಧಿಕಾರದ ಫಲಗಳನ್ನು ಹಂಚಿಕೊಳ್ಳಲಿಕ್ಕೆಂದೇ ಜತೆಗೂಡಿದ ಸಮಯಸಾಧಕ ಕೃತ್ಯವಾಗಿತ್ತು.

ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯ ಸರಕಾರದ ಎಲ್ಲ ನಿರ್ಧಾರಗಳಲ್ಲಿ ಶಾಮೀಲಾಗಿತ್ತು. ಆದ್ದರಿಂದ ರಾಜ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವಲ್ಲಿ ಮತ್ತು ಜನಗಳಲ್ಲಿ ಪರಕೀಯ ಭಾವವನ್ನು ಹೆಚ್ಚಿಸುವಲ್ಲಿ ತನ್ನ ಕೊಡುಗೆಗಳ ಜವಾಬ್ದಾರಿಯಿಂದ ಅದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕೇಂದ್ರ ಸರಕಾರ ವಿಶ್ವಾಸ ಕುದುರಿಸುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ಸಂವಾದದ ಮೂಲಕ  ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂಬ ತನ್ನ ಆಶ್ವಾಸನೆಗಳನ್ನು ಜಾರಿಗೆ ತರಬೇಕು. ಹತೋಟಿ ರೇಖೆಯ ಉದ್ದಕ್ಕೂ ಒಂದು ಪರಸ್ಪರ ಒಪ್ಪಿತ ಕದನವಿರಾಮದ ಮೂಲಕ ಗಡಿಯಾಚೆಯಿಂದ ಭಯೋತ್ಪಾದನೆಯನ್ನು ನಿಲ್ಲಿಸುವಂತಾಗಲು ಪಾಕಿಸ್ತಾನದೊಡನೆ ಮಾತುಕತೆಗಳನ್ನು ಕೇಂದ್ರ ಸರಕಾರ ಆರಂಭಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡಲು ಬಿಡಲಾಗದು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಈಗ ರಾಜ್ಯಪಾಲರ ಆಳ್ವಿಕೆಯನ್ನು ಹೇರುವುದರೊಂದಿಗೆ ಆರೆಸ್ಸೆಸ್‍-ಬಿಜೆಪಿ ಭಯೋತ್ಪಾದನೆಯನ್ನು ಎದುರಿಸುವ ನೆವದಲ್ಲಿ ಒಂದು ಹೆಚ್ಚು ಕಠಿಣವಾದ ನಿಲುವನ್ನು ತಳೆಯಬಹುದು ಎಂಬ ಭೀತಿ ವ್ಯಾಪಕವಾಗಿದೆ. ಮಾನವ ಹಕ್ಕುಗಳ ದುರುಪಯೋಗ ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆಗಳ ಅಪಾಯಗಳು ಹೆಚ್ಚಬಹುದು ಎಂಬ ಭೀತಿಯೂ ಉಂಟಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಪ್ರಯತ್ನವಷ್ಟೇ ಅಲ್ಲ, ಸಾರ್ವತ್ರಿಕ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಹಿಂದುತ್ವ ಕೋಮುವಾದಿ ವೋಟ್‍ ಬ್ಯಾಂಕನ್ನು ಕ್ರೋಡೀಕರಿಸುವ ಪ್ರಕ್ರಿಯೆಗೂ ಇದರಿಂದ ನೆರವು ಪಡೆಯುವ ಪ್ರಯತ್ನವೂ ಆಗಿರುವಂತೆ ಕಾಣುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೇಷಿಸಿದೆ.

ವಿಧಾನಸಭಾ ಮತ್ತು ಉಪಚುನಾವಣೆಗಳ ಫಲಿತಾಂಶಗಳಲ್ಲಿ ಬಿಜೆಪಿಗೆ ಹಿನ್ನಡೆ

ಕರ್ನಾಟಕದ ವಿಧಾನಸಭೆಗೆ ಮತ್ತು ಲೋಕಸಭೆ ಮತ್ತು ವಿಧಾನಸಭೆಗೆ ನಡೆದ ಇತರ ಉಪಚುನಾವಣೆಗಳಲ್ಲಿ ಒಂದು ಹಿನ್ನಡೆಯನ್ನು ಅನುಭವಿಸಿದೆ. ಒಟ್ಟು 14 ಪಚುನಾವಣೆಗಳಲ್ಲಿ ಎರಡನ್ನು ಮಾತ್ರ ಗೆಲ್ಲಲು ಅದಕ್ಕೆ ಸಾಧ್ಯವಾಗಿದೆ. ಕಳೆದ ತಿಂಗಳು ನಾಲ್ಕು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಮಹಾರಾಷ್ಟ್ರದಲ್ಲಿನ ಐದು ಪಕ್ಷಗಳು ಸ್ಪರ್ಧಿಸಿದ್ದ ಪಾಲ್ಘರ್‍ ನಲ್ಲಿ ಮಾತ್ರ ಗೆಲ್ಲಲು ಅದಕ್ಕೆ ಸಾಧ್ಯವಾಗಿದೆ. ಹತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದನ್ನು ಮಾತ್ರ ಅದು ಗೆದ್ದಿದೆ.  ಉತ್ತರಪ್ರದೇಶದ ಕೈರಾನದಲ್ಲಿ ಅದರ ಸೋಲು ಮಹತ್ವದ್ದು, ಏಕೆಂದರೆ ಇದು ಈ ಮೊದಲು 2014ರಲ್ಲಿ  ಅದು ಗೆದ್ದಿದ್ದ ಫೂಲ್ಪುರ್‍ ಮತ್ತು ಗೋರಖ್‍ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಉಂಡಿರುವ ಸೋಲುಗಳನ್ನು ಅನುಸರಿಸಿ ಬಂದಿದೆ. ಕೈರಾನದಲ್ಲಿ ಆರ್‍ಎಲ್‍ಡಿ ಅಭ್ಯರ್ಥಿಯನ್ನು ಕಾಂಗ್ರೆಸ್‍, ಎಸ್‍ ಪಿ ಮತ್ತು ಬಿ ಎಸ್‍ ಪಿ ಬೆಂಬಲಿಸಿದ್ದವು.

ಕೇರಳ: ಚೆಂಗನ್ನೂರ್ ವಿಧಾನಸಭಾ ಕ್ಷೇತ್ರವನ್ನು ಇನ್ನಷ್ಟು ಹೆಚ್ಚಿನ ಬಹುಮತದಿಮದ ಉಳಿಸಿಕೊಂಡಿರುವ ಸಿಪಿಐ(ಎಂ) ಮತ್ತು ಎಲ್‍ಡಿಎಫ್‍ ನ್ನು ಕೇಂದ್ರಸಮಿತಿ ಅಭಿನಂದಿಸಿದೆ. ಸಿಪಿಐ(ಎಂ) ಶಾಸಕರ ನಿಧನದಿಂದಾಗಿ ನಡೆದ ಈ ಉಪಚುನಾವಣೆಯಲ್ಲಿ 20,956 ಮತಗಳ ಬಾರೀ ಅಂತರದ ಗೆಲುವು ಸಿಕ್ಕಿದೆ. ಎಲ್‍ಡಿಎಫ್‍ಗೆ 2016ರಲ್ಲಿ 36.37% ಮತಗಳು ಸಿಕ್ಕಿದ್ದವು, ಈ ಬಾರಿ ಅದು 44.2%ಕ್ಕೇ ಏರಿದೆ. ಯುಡಿಎಫ್ ಮತಪಾಲು ಸುಮಾರಾಗಿ ಹಿಂದಿನಷ್ಟೇ ಇದ್ದರೆ, ಬಿಜೆಪಿಯ ಗಳಿಕೆ 29.26%ದಿಂದ 23.19%ಕ್ಕೆ ಇಳಿದಿದೆ.

ಕರ್ನಾಟಕ ಚುನಾವಣೆಗಳು: ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‍ ತನ್ನ ಸರಕಾರವನ್ನು ಕಳಕೊಂಡಿದೆ. ಜನತೆಯ ತೀರ್ಪಿನಿಂದಾಗಿ ಒಂದು ಅತಂತ್ರ ವಿಧಾನಸಭೆ ಏರ್ಪಟ್ಟಿತು. ಬಿಜೆಪಿ 36.2% ಮತ ಗಳಿಸಿ ಅತಿ ದೊಡ್ಡ ಪಕ್ಷವಾಗಿ ಬಂದರೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‍-ಜೆಡಿ(ಎಸ್) ಕೂಟ ಒಟ್ಟಾಗಿ 56.6% ಮತಗಳಿಸಿತು.

ಬಾಗೇಪಲ್ಲಿ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಜಿ.ವಿ.ಶ್ರೀರಾಮ ರೆಡ್ಡಿ 2013ರಲ್ಲಿ ಪಡೆದ 35,472 ಮತಗಳಿಗೆ ಹೋಲಿಸಿದರೆ, ಈ ಬಾರಿ 51,697 ಮತಗಳೊಂದಿಗೆ ಎರಡನೇ ಸ್ಥಾನ ಪಡೆದರು.

ಕುದುರೆ ವ್ಯಾಪಾರದಿಂದ ಒಂದು ಬಹುಮತವನ್ನು ಕಲೆಹಾಕುವ ಬಿಜೆಪಿ/ಆರೆಸ್ಸೆಸ್‍ ಪ್ರಯತ್ನಗಳನ್ನು ವಿಫಲಗೊಳಿಸಿ ಒಂದು ಜೆಡಿ(ಎಸ್‍)- ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡಿದೆ. ಇಲ್ಲಿ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಪಾಲರು ವಹಿಸಿರುವ ಅಸಹ್ಯಕರ ಪಾತ್ರದ ಬೆಳಕಿನಲ್ಲಿ ಈ ಹುದ್ದೆಯನ್ನು ರದ್ದು ಮಾಡುವ ಬೇಡಿಕೆಯನ್ನು ಪುನರುಚ್ಚರಿಸಬೇಕಾಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಅಮೆರಿಕಾದೊಂದಿಗೆ ಮತ್ತಷ್ಟು ಗಟ್ಟಿ ಮಿಲಿಟರಿ ಸಂಬಂಧಗಳು

ಮುಂದಿನ ತಿಂಗಳು ವಾಶಿಂಗ್ಟನ್‍ ನಲ್ಲಿ 2+2 ಭಾರತ-ಅಮೆರಿಕ ಸಂವಾದ(ಎರಡೂ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ಸಭೆ)ಗೆ ಸಿದ್ಧತೆಯಾಗಿ ‘ಸಂಪರ್ಕಗಳು, ಸಾಂಗತ್ಯ ಮತ್ತು ಭದ್ರತೆ ಒಪ್ಪಂದ’(ಸಿ ಒ ಎಮ್ ಸಿ ಎ ಎಸ್‍ ಎ)ದ ಕರಡಿನ ಬಗ್ಗೆ ಭಾರತ ಮಾತುಕತೆ ನಡೆಸುತ್ತಿದೆ. ಭಾರತೀಯ ಮಿಲಿಟರಿ ಸಂಪರ್ಕ ವ್ಯವಸ್ಥೆಗಳೊಳಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ನುಸುಳುವ ಅವಕಾಶ ಕಲ್ಪಿಸುವಂತ಻ಗುತ್ತದೆ ಎಂಬ ರಕ್ಷಣಾ ಇಲಾಖೆ ವ್ಯಕ್ತಪಡಿಸಿರುವ ಭೀತಿಯನ್ನು ಬದಿಗೊತ್ತಿ ಮೋದಿ ಸರಕಾರ ಅಮೆರಿಕನ್‍ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರನೆಂಬ ತನ್ನ ಸ್ಥಾನಮಾನವನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ ಸಾಗಿದೆ. ಇದಕ್ಕೆ ಮೊದಲು ಅದರೊಂದಿಗೆ ‘ಸಾಗಣೆ ವಿನಿಮಯ ಮನವಿ ಪತ್ರ ಒಪ್ಪಂದ’ (ಎಲ್‍ ಇ ಎಂ ಒ ಎ) ಎಂಬ ಸಾಮರಿಕ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇದು ಭಾರತದ ಸಾರ್ವಭೌಮತೆಯನ್ನು ಬಿಟ್ಟು ಕೊಡುವ ಕ್ರಮ ಎಂದು ಸಿಪಿಐ(ಎಂ) ಕೇಂದ್ರಸಮಿತಿ ಪ್ರತಿಭಟಿಸಿದೆ.

ಜವಾಬ್ದಾರಿಗಳ ಹಂಚಿಕೆ

ಕೇಂದ್ರ ಸಮಿತಿ ಪೊಲಿಟ್‍ಬ್ಯುರೊ ಮತ್ತು ಕೇಂದ್ರ ಸಮಿತಿ ಸದಸ್ಯರ ನಡುವೆ ಜವಾಬ್ದಾರಿಗಳ ಹಂಚಿಕೆಯನ್ನು ನಿರ್ಧರಿಸಿತು. ಪಕ್ಷದ 22ನೇ ಮಹಾಧಿವೇಶನ ನಿರ್ಧರಿಸಿರುವ ಪಕ್ಷದ ಮುಂದಿನ ಕಾರ್ಯಭಾರಗಳ ಜಾರಿಯ ದಾರಿ-ನಕಾಶೆಯನ್ನು ಕೂಡ ಕೇಂದ್ರ ಸಮಿತಿಯ  ಸಭೆ ಅಂತಿಮಗೊಳಿಸಿತು.

ಕೇಂದ್ರ ಸಮಿತಿಗೆ ಸೇರ್ಪಡೆ

22ನೇ ಮಹಾಧಿವೇಶನ  ಕೇಂದ್ರ ಸಮಿತಿಯಲ್ಲಿ ಖಾಲಿ ಬಿಟ್ಟಿರುವ ಒಂದು ಸ್ಥಾನಕ್ಕೆ ಅಲ್ಲಿ ಹೊಸದಾಗಿ ಆಯ್ಕೆಯಾದ ಕೇಂದ್ರಸಮಿತಿ ಒಬ್ಬ ಮಹಿಳಾ ಸಂಗಾತಿಯನ್ನು ಸೇರಿಸಿಕೊಳ್ಳಬೇಕು ಎಂದು ನಿದೇಶನ ನೀಡಿತ್ತು. ಕೇಂದ್ರ ಸಮಿತಿ ಆ ಸ್ಥಾನಕ್ಕೆ ಎ.ಆರ್.ಸಿಂಧು ಅವರನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ.

Leave a Reply

Your email address will not be published. Required fields are marked *