ನದಿ ತಿರುವು ಯೋಜನೆಗೆ ಅಸ್ತು -ಸ್ವಾಗತಾರ್ಹ

ಕರ್ನಾಟಕದ ನೀರಿನ ಹಂಚಿಕೆ – ಅಸಮರ್ಪಕ,  ಸಿಪಿಐ(ಎಂ) ಟೀಕೆ ! ?

ಗೋವಾ ಸರಕಾರ ಮತ್ತು ಪರಿಸರವಾದಿಗಳೆಂದು ಹೇಳಿಕೊಳ್ಳುವವರ ಸಾಕಷ್ಠು ವಿರೋಧದ ನಡುವೆ ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸಲು ನದಿ ತಿರುವು ಯೋಜನೆ ಯನ್ನು ನ್ಯಾಯಾಧಿಕರಣ ಬೆಂಬಲಿಸಿರುವುದು ಮತ್ತು ಮಹದಾಯಿ ನದಿ ನೀರಿನ ನ್ಯಾಯಾಧೀಕರಣದ ಬಹು ನಿರೀಕ್ಷಿತ ಐತೀರ್ಪು ಮತ್ತಷ್ಠು ವಿಳಂಬವಿಲ್ಲದೇ ಹೊರ ಬಂದಿರುವುದು ಸ್ವಾಗತಾರ್ಹವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ.

ಆದರೆ, ಕರ್ನಾಟಕಕ್ಕೆ ಹಂಚಿಕೆಯಾಗಿರುವ 13.42 ಟಿ.ಎಂ.ಸಿ ನೀರು ಸಾಕಾಗುವುದಿಲ್ಲ, ಅದು ಕಡಿಮೆಯಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ. ಈ 13.42 ಟಿಎಂಸಿ ನೀರಿನಲ್ಲಿ 8.02 ಟಿಎಂಸಿ ನೀರು ವಿದ್ಯುತ್ ಯೋಜನೆಗೆ ಸಿಗುವುದಿದ್ದು, ನಂತರ ಅದು ಮಹದಾಯಿ ನದಿ ಸೇರಲಿದೆ. ಆ ನೀರು ಕರ್ನಾಟಕಕ್ಕೆ ದೊರೆಯದಾಗಿದೆ. ಹೀಗಾಗಿ ಕರ್ನಾಟಕಕ್ಕೆ ಒಟ್ಟಾರೇ ಕುಡಿಯುವ ನೀರಿಗಾಗಿ ಕೇವಲ 5.40 ಟಿಎಂಸಿ ಮಾತ್ರವೇ ದೊರೆಯಲಿದೆ.

ಕರ್ನಾಟಕ ಸರಕಾರ ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರು ಮತ್ತು ಕಾಳಿ ಮತ್ತು ಮಹದಾಯಿ ವಿದ್ಯುತ್ ಎರಡು ಯೋಜನೆಗಳಿಗೆ ಸುಮಾರು 20.498 ಟಿಎಂಸಿ ಮತ್ತು ನೀರಾವರಿಗಾಗಿ ಸುಮಾರು 07 ಟಿಎಂಸಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಹಂಚಿಕೆಯಂತೆ ಕಾಳಿ ವಿದ್ಯುತ್ ಯೋಜನೆಗೆ ಮತ್ತು ನೀರಾವರಿಗೆ ನೀರು ಹಂಚಿಕೆಯಾಗಿಲ್ಲದಿರುವುದು ಅಸಮಾಧಾನಕರವಾಗಿದೆ.

ನದಿಯಲ್ಲಿ ಅಂದಾಜಿನಂತೆ ಸುಮಾರು 220 ಟಿಎಂಸಿ ನೀರು ಹರಿಯುತ್ತಿದ್ದರೂ, ನ್ಯಾಯಾಧೀಕರಣವು ಶೇ 75ರ ಹರಿವಿನ ಆಧಾರದಲ್ಲಿ ೧೮೮.೦೬ ಟಿಎಂಸಿ ಮಾತ್ರ ಲಭ್ಯವೆಂದು ಗುರುತಿಸಿ, ಅದರಲ್ಲಿ ಕೇವಲ 38.72 ಟಿಎಂಸಿ ನೀರನ್ನು ಮಾತ್ರವೇ ಮೂರು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಸುಮಾರು 149.34 ಟಿಎಂಸಿ ನೀರನ್ನು ಸಮುದ್ರಕ್ಕೆ ಹರಿಯಲು ಬಿಡಲಾಗಿದೆ.

ನೀರಾವರಿಗೆ ಹಾಗೂ ಕಾಳಿ ವಿದ್ಯುತ್ ಯೋಜನೆಗೆ ನೀರು ಸಿಗದೇ ಇರುವುದಕ್ಕೆ ಮುಖ್ಯವಾಗಿ, ಮಹದಾಯಿ ನದಿ ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಕ್ರಮವಹಿಸದೇ ಇರುವ ಬಿಜೆಪಿಯ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ಹೊಣೆಗಾರನಾಗಿದೆ.

ಈಗಲಾದರೂ ಕೇಂದ್ರ ಸರಕಾರ ತಕ್ಷಣ ಮದ್ಯಪ್ರವೇಶಿಸಿ, ಆಗಿರುವ ನೀರಿನ ಕೊರತೆಯನ್ನು ತುಂಬಿಕೊಡಲು ಮೂರು ರಾಜ್ಯಗಳ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಸೌಹಾರ್ಧಯುತವಾಗಿ ಪರಿಹರಿಸಲು ಕ್ರಮವಹಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ಕರ್ನಾಟಕ ಸರಕಾರ ಈಗ ಹಂಚಿಕೆ ಮಾಡಲಾದ ನೀರನ್ನು ಆದಷ್ಟು ಬೇಗನೇ ಬಳಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತುರ್ತಾಗಿ ವಹಿಸಬೇಕು. ಮಾತ್ರವಲ್ಲಾ, ಕೊರತೆಯ ನೀರನ್ನು ಪಡೆಯಲು, ಸೌಹಾರ್ದ ಇತ್ಯರ್ಥಕ್ಕೆ ಮೂರು ರಾಜ್ಯಗಳ ಜಂಟಿ ಸಭೆಗಳನ್ನು ನಡೆಸುವಂತೆ ಕೇಂದ್ರ ಸರಕಾರವನ್ನು ಮದ್ಯ ಪ್ರವೇಶಿಸಲು ಒತ್ತಾಯಿಸಬೇಕು ಮತ್ತು ರಾಜ್ಯ ಬಿಜೆಪಿ ಪಕ್ಷವು ಕೂಡಾ ಪ್ರಧಾನಮಂತ್ರಿಗಳು ಈ ಕುರಿತು ಮದ್ಯ ಪ್ರವೇಶಿಸುವಂತೆ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸಲು ಸಿಪಿಐ(ಎಂ) ಒತ್ತಾಯಿಸಿದೆ.

ಜಿ.ವಿ. ಶ್ರೀರಾಮರೆಡ್ಡಿ
ಕಾರ್ಯದರ್ಶಿ

Leave a Reply

Your email address will not be published. Required fields are marked *