ಬಿಜೆಪಿ ಆಳ್ವಿಕೆಯಲ್ಲಿ ಹಗರಣಗಳು

ಸಾಮಾನ್ಯವಾಗಿ ಭಾವಿಸುವಂತೆ ಭಾರತೀಯ ಆರ್ಥಿಕದ ಭಾರೀ ದುಸ್ಥಿತಿ ಕೇವಲ ಆರ್ಥಿಕ ಮತ್ತು ಹಣಕಾಸು ಸ್ಥಿತಿಗಳ ದುರಾಡಳಿತದ ಫಲಿತಾಂಶ ಮಾತ್ರವೇ ಅಲ್ಲ, ಚಮಚಾಗಿರಿಯೇ ಅದರ ಚಾಲಕ ಶಕ್ತಿಯಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾಂiiದರ್ಶಿ ಸೀತಾರಾಮ್ ಯೆಚುರಿ ನವಂಬರ್ ೧೫ರಂದು ಪತ್ರಿಕಾ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.

ಭಾರತದ ಆರ್ಥಿಕ ವ್ಯವಸ್ಥೆ ಈಗ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಕಳೆದ ಚುನಾವಣೆಗಳ ಸಮಯದಲ್ಲಿ ನೀಡಿದ್ದ  ಪ್ರತಿಯೊಂದು ಆಶ್ವಾಸನೆ ಈಡೇರದೆ ಉಳಿದಿದೆ. ನವ-ಉದಾರವಾದಿ ಧೋರಣೆಯನ್ನು ಆಕ್ರಾಮಕವಾಗಿ ಅನುಸರಿಸುತ್ತಿರುವುದರ ಪರಿಣಾಮವಾಗಿ ಚಮಚಾಗಿರಿ  ಸಾಂಸ್ಥೀಕರಣಗೊಂಡಿರುವುದು ಈ ಸರಕಾರದ ಪ್ರಧಾನ ಲಕ್ಷಣವಾಗಿ ಬಿಟ್ಟಿದೆ. ಇದು ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರ ಮತ್ತು ಹಗರಣಗಳ ಮೂಲಸ್ರೋತ ವಾಗಿದೆ. ಕಾರ್ಪೊರೇಟ್‌ಗಳೊಂದಿಗೆ ಅವರಿಗೆ ರಕ್ಷಣೆ ಕೊಡುವ ಸರಕಾರದ ಭಾಗೀದಾರಿಕೆ ಮತ್ತು ಪ್ರಾಯೋಜನೆಯಿಂದಾಗಿ ನಿಯಂತ್ರಣಗಳು, ನಿಯಂತ್ರಕ ಸಂಸ್ಥೆಗಳ ಸ್ವಾತಂತ್ರ್ಯ, ಮತ್ತು ತಪಾಸಣೆ ಮತ್ತು ಸಮತೋಲನಕ್ಕಾಗಿ ರೂಪಿಸಿಕೊಂಡಿರುವ ವಿಧಿ-ವಿಧಾನಗಳು ಎಲ್ಲವನ್ನೂ ಬುಡಮೇಲು ಮಾಡುವ ದಾರಿ ಹಿಡಿಯಲಾಗಿದೆ. ಅದು ರಫಾಲ್ ವ್ಯವಹಾರವಾಗಿರಬಹುದು, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯಾಗಿರಬಹುದು., ಟೆಲಿಕಾಂ ವಲಯದ ಹೂಟಗಳಾಗಿರಬಹುದು, ಮತ್ತು ಮಹಾ ಬ್ಯಾಂಕ್ ದರೋಡೆಗಳಾಗಿರಬಹುದು-ಇವೆಲ್ಲವುಗಳಲ್ಲಿ ಚಮಚಾ ಬಂಡವಾಳಶಾಹಿ ರಂಗಸ್ಥಳದ ಕೇಂದ್ರದಲ್ಲಿ ರಾರಾಜಿಸುತ್ತಿವೆ ಎಂದು ವರ್ಣಿಸಿದ ಅವರು ಇದು ಹೇಗೆ ನಡೆಯುತ್ತಿದೆ ಎಂಬುದು ರಫಾಲ್ ಹಗರಣ, ನೋಟು ರದ್ಧತಿ, ಸಿಬಿಐನ, ರಿಝರ್ವ್ ಬ್ಯಾಂಕಿನ ಸ್ವಾತಂತ್ರ್ಯಕ್ಕೆ ಸಂಚಕಾರ  ಮತ್ತು ಚುನಾವಣಾ ಬಾಂಡುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಒಂದೊಂದಾಗಿ ಅವರು ವಿವರಿಸಿದರು.

modi-ambani-rafale-jet-scam

ರಫಾಲ್ ಹಗರಣ: ಸುಪ್ರಿಂ ಕೋರ್ಟ್ ಉಸ್ತುವಾರಿಯ ಎಸ್‌ಐಟಿ ತನಿಖೆ ಆಗಲೇಬೇಕು:

ರಫಾಲ್ ವ್ಯವಹಾರವನ್ನು ಪೂರ್ಣಗೊಳಿಸುವಲ್ಲಿನ ಅನಿಯಮಿತತೆಗಳ ಬಗ್ಗೆ ಹೊಸ ಸಂಗತಿಗಳು ಹೊರಬರುತ್ತಿವೆ. ಇವುಗಳಲ್ಲಿ ಅತ್ಯಂತ ಕ್ಷೋಭೆಯುಂಟು ಮಾಡುವ ಸಂಗತಿಯೆಂದರೆ, ಇದಕ್ಕೆ ಫ್ರೆಂಚ್ ಸರಕಾರದ ಸಾರ್ವಭೌಮ ಗ್ಯಾರಂಟಿ ಇಲ್ಲ ಎನ್ನುವುದು. ಇದನ್ನು ಸ್ವತಃ ಸರಕಾರವೇ ಸುಪ್ರಿಂ ಕೋರ್ಟಿನಲ್ಲಿ ಒಪ್ಪಿಕೊಂಡಿದೆ. ಕೇವಲ ಸಮಾಧಾನದ ಪತ್ರ (ಲೆಟರ್ ಆಫ್ ಕಂಫರ್ಟ್)ಇದೆ, ಆದರೆ ಇದರ ಮೂಲಕ ಈ ಭಾರೀ ಮೌಲ್ಯದ ಕಾಂಟ್ರಾಕ್ಟ್‌ನ ಈಡೇರಿಕೆಯನ್ನು ಕಾನೂನು ಪ್ರಕಾರ  ಖಾತ್ರಿ ಮಾಡಿಸಿಕೊಳ್ಳಲು  ಸಾಧ್ಯವಿಲ್ಲ.

ಬೆಲೆಗಳ ವಿಷಯದಲ್ಲಿ, ಒಂದು ಮೂಲ ರಫಾಲ್ ವಿಮಾನಕ್ಕೆ ೬೭೦ ಕೋಟಿ ರೂ.ಗಳಾಗುತ್ತವೆ ಎಂದು ಮಾರ್ಚ್ ೨೦೧೮ರಲ್ಲಿ ಸರಕಾರ ಹೇಳಿದೆ. ಆದರೆ ಸಪ್ಟಂಬರ್ ೨೦೧೬ರಲ್ಲಿ ೩೬ ವಿಮಾನಗಳಿಗೆ ೬೦,೦೦೦ ಕೋಟಿ ರೂ. ಎಂದಿತ್ತು, ಅಂದರೆ ಒಂದು ವಿಮಾನಕ್ಕೆ ೧೬೦೦ ಕೋಟಿ ರೂ. ದಸ್ಸಾಲ್ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಇಒ) ಈಗಿನ ೩೬ ಸಿದ್ಧ ವಿಮಾನಗಳ ಮೊತ್ತ ಈ ಹಿಂದಿನ ಒಪ್ಪಂದದ ೧೮ ಸಿದ್ಧ ವಿಮಾನಗಳಷ್ಟಾಗುತ್ತದೆ ಎಂದಿದ್ದರು. ಈ ಎಲ್ಲ ಅಂಕೆ-ಸಂಖ್ಯೆಗಳು ತಾಳೆಯಾಗುತ್ತಿಲ್ಲ ಎಂಬುದು ಸ್ವಯಂವೇದ್ಯ.

ಮಾರ್ಚ್ ೨೦೧೫ರಲ್ಲಿ ಇದೇ ಸಿಇಒ ಹೆಚ್‌ಎಎಲ್‌ನೊಂದಿಗೆ ವ್ಯವಹಾರ ಸುಮಾರಾಗಿ ಪೂರ್ಣಗೊಂಡಿದೆ ಎಂದಿದ್ದರು. ಪ್ರಧಾನ ಮಂತ್ರಿಗಳು ಈ ವ್ಯವಹಾರವನ್ನು ಪ್ಯಾರಿಸಿನಲ್ಲಿ ಎಪ್ರಿಲ್ ೨೦೧೫ರಲ್ಲಿ ಪ್ರಕಟಿಸಿದರು, ಆದರೆ ರಕ್ಷಣಾ ಖರೀದಿ ಮಂಡಳಿ ಸಭೆ ಸೇರಿ ಇದನ್ನು ಅಂತಿಮಗೊಳಿಸಿದ್ದು ಮೇ ೨೦೧೫ರಲ್ಲಿ ಎಂಬುದೀಗ ಸುಸ್ಪಷ್ಟ. ಇದಲ್ಲದೆ, ಅದಾಗಲೇ ಅನಿಲ್ ಅಂಬಾನಿಯ ನಿಷ್ಕ್ರಿಯವಾಗಿದ್ದ ರಿಲಯಂಸ್ ಡಿಫೆನ್ಸ್ ಕಂಪನಿಯ  ಖಾತೆಗೆ ಹಣ ಸಂದಾಯವಾಗಿತ್ತು. ಹಗರಣ ನಡೆದಿದೆ ಎಂಬ ವಾಸ್ತವತೆ ಇದೀಗ ನಿಜವಾಗಿಯೂ ಸಿದ್ಧಗೊಂಡಿದೆ.

ಸತ್ಯ ಹೊರಬರಲು ಮತ್ತು ಇದರಲ್ಲಿ ಯಾರು ಎಷ್ಟು ಹೊಣೆಗಾರರು ಎಂದು ನಿಗದಿ ಮಾಡಲು ಸುಪ್ರಿಂ ಕೋರ್ಟ್ ಉಸ್ತುವಾರಿಯ ವಿಶೇಷ ತನಿಖಾ ತಂಡ(ಎಸ್‌ಐಟಿ)ದ  ತನಿಖೆಯೇ ಆಗಬೇಕಾಗಿದೆ, ದೇಶದ ಮತ್ತು ವಿಶೇಷವಾಗಿ ದೇಶದ ಭದ್ರತೆಯ ದೃಷ್ಟಿಯಿಂದ ಇದು ಪರಮ ಮಹತ್ವದ್ದಾಗಿದೆ. ಸಾರ್ವಜನಿಕ ಖಜಾನೆಯಿಂದ ಸರಕಾರ ತೆಗೆದಿರುವ ತೆರಿಗೆದಾರರ ಹಣಕ್ಕೆ ಈ ಸರಕಾರ ಲೆಕ್ಕ ಕೊಡಬೇಕಾಗಿದೆ ಎಂದು ಯೆಚುರಿಯವರು ಒತ್ತಿ ಹೇಳಿದರು.

atm-rush-1

ನೋಟುರದ್ಧತಿ: ವಿಧ್ವಂಸಕಾರಿ ಹೆಜ್ಜೆಯ ಹಿಂದಿನ ಸತ್ಯತಿಳಿಯಲು ಜೆಪಿಸಿ ತನಿಖೆ ಅಗತ್ಯ:

ದೇಶದ ಆರ್ಥಿಕದಲ್ಲಿ ಹಣದ ಹರಿವಿನಲ್ಲಿ ನಗದು ಪ್ರಮಾಣ ಮತ್ತೆ ನವಂಬರ್ ೮, ೨೦೧೬ ರಂದು ಇದ್ದ ಮಟ್ಟಕ್ಕೆ ಮರಳಿದೆ. ನೋಟುರದ್ಧತಿಯ ನಾಲ್ಕು ಘೋಷಿತ ಉದ್ದೇಶಗಳನ್ನು  ಈಡೇರಿಸುವ ಯೋಜನೆ ಸರಕಾರಕ್ಕೆ ಇರಲೇ ಇಲ್ಲ ಎಂದೀಗ ಸ್ಪಷ್ಟವಾಗಿದೆ. ಈಗ ಎದ್ದಿರುವ ಪ್ರಶ್ನೆಯೆಂದರೆ ಇದರಿಂದ ಪ್ರಯೋಜನವಾಗಿರುವುದು ಯಾರಿಗೆ? ಗುಜರಾತ್ ಸಹಕಾರಿ ಬ್ಯಾಂಕ್‌ಗಳಲ್ಲಿ ಅಸಾಮಾನ್ಯ ಪ್ರಮಾಣದಲ್ಲಿ ನೋಟುಗಳ ಪರಿವರ್ತನೆಯಾಗಿದೆ. ನೋಟುರದ್ಧತಿಯು ನಗದಿನಿಂದ ನಡೆಯುವ ಅಸಂಘಟಿತ ಮತ್ತು ಅನೌಪಚಾರಿಕ ವಲಯವನ್ನು ಧ್ವಂಸ ಮಾಡಿದೆ. ಇದರಿಂದಾಗಿ ಆರ್ಥಿಕ ಬೆಳವಣಿಗೆಗೆ ತೀವ್ರ ರೀತಿಯಲ್ಲಿ ಕುಂದುಂಟಾಗಿದೆ. ಆದರೆ ಅತ್ಯಂತ ವಿಧ್ವಂಸಕಾರಿ ಪರಿಣಾಮ ಉಂಟಾಗಿರುವುದು ಉದ್ಯೋಗನಿರ್ಮಾಣದ ಮೇಲೆ.

ರಘುರಾಮ ರಾಜನ್ ನಿರ್ಗಮನದ ನಂತರ, ರಿಝರ್ವ್ ಬ್ಯಾಂಕ್ ಮಂಡಳಿ ನೋಟುರದ್ದತಿ ಕ್ರಮಕ್ಕೆ ಒಪ್ಪಿಗೆ ನೀಡಿದರೂ, ಈ ಕ್ರಮದ ಫಲಿತಾಂಶಗಳ ಬಗ್ಗೆ ಸರಕಾರದ ದಾವೆಗಳನ್ನು ತಿರಸ್ಕರಿಸಿತ್ತು ಎಂಬುದೀಗ ಗೊತ್ತಾಗಿದೆ.

ಈ ಕ್ರಮದ ಪರಿಣಾಮಗಳ ಒಂದು ನಿಕಟ ತಪಾಸಣೆ ಅಗತ್ಯವಾಗಿದೆ. ಈ ವಿಧ್ವಂಸಲಾರಿ ಹೆಜ್ಜೆಯ ಹಿಂದಿನ ಸತ್ಯವನ್ನು ಕಂಡು ಹಿಡಿಯಲು ಈ ಇಡೀ ಕ್ರಮದ ಬಗ್ಗೆ ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯಿಂದ ತನಿಖೆ ಅಗತ್ಯವಾಗಿದೆ ಎಂದು ಯೆಚುರಿಯವರು ಆಗ್ರಹಿಸಿದರು.

cbi-pti221217

ಸಿಬಿಐ ಸ್ವಾತಂತ್ರ್ಯಕ್ಕೆ ಸಂಚಕಾರ ರಫಾಲ್ ತನಿಖೆಯನ್ನು ತಡೆಯಲಿಕ್ಕಾಗಿ:

ಸಿಬಿಐನ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಶಿಥಿಲಗೊಳಿಸುವ ಕಳವಳಕಾರಿ ಬೆಳವಣಿಗೆಗಳು ಈಗ ಬಹಿರಂಗಕ್ಕೆ ಬಂದಿವೆ. ಸಿಬಿಐ ನಿರ್ದೇಶಕರ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪವನ್ನು ಕೇಂದ್ರೀಯ  ಜಾಗೃತಾ ಆಯೋಗ(ಸಿವಿಸಿ) ಸುಪ್ರಿಂ ಕೋರ್ಟಿನ ಒಬ್ಬ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನಡೆಯುತ್ತಿದೆ. ಸಿಬಿಐ ನಿರ್ದೇಶಕರು ತಪ್ಪು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಾಬೀತು ಪಡಿಸಲು ಗಮನಾರ್ಹವಾದುದೇನೂ ಹೊರಬಂದಿಲ್ಲ ಎಂಬ ಮಾಧ್ಯಮ ವರದಿಗಳತ್ತ ಅವರು ಗಮನ ಸೆಳೆದರು..

ಇನ್ನೊಂದೆಡೆಯಲ್ಲಿ, ನ್ಯಾಯಾಂಗದ ಮಧ್ಯಪ್ರವೇಶದಿಂದಾಗಿ ಆರ್.ಕೆ.ಅಸ್ಥಾನರವರನ್ನು ನಿರ್ದೇಶಕರನ್ನಾಗಿ ಪ್ರತಿಷ್ಠಾಪಿಸುವ ಸರಕಾರದ ಪ್ರಯತ್ನ ವಿಫಲವಾಯಿತು, ಅವರಿಗೆ ವಿಶೇಷ ನಿರ್ದೇಶಕರ ಸ್ಥಾನ ಕೊಡುವುದರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು ಎಂಬ ಸಂಗತಿಯಂತೂ ಸ್ಪಷ್ಟವಾಗಿದೆ.  ಈ ಹಿಂದೆ ಆಳುವ ಪಕ್ಷಕ್ಕೆ ನೆರವಾಗಿರುವ ಅಸ್ಥಾನ ಅವರ ಕೆಲಸ ಚೆನ್ನಾಗಿಯೇ  ದಾಖಲುಗೊಂಡಿದೆ. ೨೦೦೨ರಲ್ಲಿ ಗೋಧ್ರ ತನಿಖೆಯ ನಿರ್ವಹಣೆಯಿಂದ ಹಿಡಿದು ಇತ್ತೀಚೆಗೆ ಮಧ್ಯಪ್ರದೇಶದ ವ್ಯಾಪಂ ಹಗರಣದ ನಿರ್ವಹಣೆಯ ವರೆಗೆ ಹಲವು ದಾಖಲೆಗಳಿವೆ. ಅವರನ್ನು ಸಿಬಿಐ ನಿರ್ದೇಕರಾಗಿ ಮಾಡುವಲ್ಲಿ ಅಡ್ಡಿಯಾದ ಒಂದು ಲಂಚ ಹಗರಣದಲ್ಲಿ ಅವರ ಪಾತ್ರದ ಬಗ್ಗೆ ಈಗ ಸಿಬಿಐ ತನಿಖೆ ನಡೆಯುತ್ತಿರುವುದು ಸ್ಪಷ್ಟವಾಗಿಯೂ ಹಿತಾಸಕ್ತಿಯ ತಿಕ್ಕಾಟಕ್ಕೆ ಒಂದು ಆಧಾರವಾಗಿದೆ.

ಆದ್ದರಿಂದ ಸಿಬಿಐನಲ್ಲಿನ ಜಗಳವನ್ನು ರಫಾಲ್ ವ್ಯವಹಾರದ ಮತ್ತು ಅದರ ಕೇಂದ್ರದಲ್ಲಿರುವ ಚಮಚಾ ಬಂಡವಾಳಶಾಹಿಯ ತನಿಖೆಯನ್ನು ತಡೆಯಲು ಒಂದು ನೆಪವಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದ ಸೀತಾರಾಂ ಯೆಚುರಿ  ರಫಾಲ್ ವ್ಯವಹಾರದ ಬಗ್ಗೆ ಒಂದು ಜೆಪಿಸಿ ತನಿಖೆಗೆ ಸರಕಾರದ ನಕಾರ ಮತ್ತು ೨೦೨೩ರ ಮೊದಲು ಸಿಎಜಿ ಇದರ ಅಧ್ಯಯನ ಮಾಡಬೇಕು ಎಂಬುದನ್ನೂ ಅದು ತಿರಸ್ಕರಿಸಿರುವುದು ಮತ್ತೊಂದು  ಸಂವಿಧಾನಿಕ ಸಂಸ್ಥೆಯ ಸ್ವಾತಂತ್ರ್ಯವನ್ನು ಶಿಥಿಲಗೊಳಿಸುವುದರ ಉದಾಹರಣೆಯಾಗಿದೆ ಎಂದರು.

 RBI

ಆರ್‌ಬಿಐ ಸ್ವಾತಂತ್ರ್ಯಕ್ಕೆ ಸಂಚಕಾರ ಮತ್ತು ಗುಜರಾತಿನ ಚಮಚಾಗಳ ಹಿತರಕ್ಷಣೆ:

ರಿಝರ್ವ್ ಬ್ಯಾಂಕ್(ಆರ್‌ಬಿಐ) ವಿಷಯದಲ್ಲಿ ನಡೆಯುತ್ತಿರುವುದು ಕೂಡ ಅಭೂತಪೂರ್ವ. ಆರ್‌ಬಿಐ ಕಾಯ್ದೆಯ ಸೆಕ್ಷನ್ ೭ನ್ನು ಹಿಂದೆಂದೂ ಬಳಸಿರಲಿಲ್ಲ. ಈಗ ಇದರ ಬಳಕೆ ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಆರ್‌ಬಿಐನ ಸ್ವಾತಂತ್ರ್ಯದ ಬುಡಕ್ಕೇ ಏಟು ಕೊಟ್ಟಿದೆ. ನೋಟುರದ್ಧತಿ, ಕೆಟ್ಟ ಸಾಲಗಳ ನಿರ್ವಹಣೆಯಲ್ಲಿ ಆರ್‌ಬಿಐನ ಸ್ವತಂತ್ರ ನಿಲುವು,  ಈ ಸರಕಾರದ ಅವಧಿಯಲ್ಲಿ ಪ್ರತಿವರ್ಷ ಆರ್‌ಬಿಐನ ಲಾಭಗಳ ೯೯%ವನ್ನು ವಹಿಸಿಕೊಂಡಿರುವುದು  ಮತ್ತು ಈಗ ಹಣಕಾಸು ಕೊರತೆಯನ್ನು ತಡೆಯಲು ಆರ್‌ಬಿಐನ ಮೀಸಲಿನಿಂದ ೩.೫ಲಕ್ಷ ಕೋಟಿ ರೂ.ಗಳನ್ನು ಬಲವಂತದಿಂದ ಪಡೆಯುವ ಪ್ರಯತ್ನ ಇವೆಲ್ಲ ದೇಶದ ಈ ಕೇಂದ್ರೀಯ ಬ್ಯಾಂಕನ್ನು ಶಿಥಿಲಗೊಳಿಸುವ ಪ್ರಶ್ನೆಗಳು.

ಆರ್‌ಬಿಐನೊಂದಿಗೆ ಈ ಭಿನ್ನಾಭಿಪ್ರಾಯ, ಅದು ಗುಜರಾತಿನ ವಿದ್ಯುತ್ ಪ್ರಾಜೆಕ್ಟುಗಳಲ್ಲಿ ೧ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡುವ ಸ್ಟೇಟ್ ಬ್ಯಾಂಕ್ ಆಫ್  ಇಂಡಿಯಾದ ಪ್ರಯತ್ನದ ಬಗ್ಗೆ ಕಣ್ಣು ಮುಚ್ಚಿಕೊಂಡಿರಬೇಕೆಂಬ ಸರಕಾರದ ಸೂಚನೆಗೆ ಒಪ್ಪಲು ನಿರಾಕರಿಸಿದ್ದರಿಂದಾಗಿ ಉಂಟಾದಂತೆ ಕಾಣುತ್ತದೆ ಎಂದ ಯೆಚುರಿಯವರು  ಚಮಚಾ ಬಂಡವಾಳಶಾಹಿಯ ಹಿತಗಳನ್ನು ಕಾಯುವ ಆಶಯ ಆರ್‌ಬಿಐ ಮೇಲೆ ಇಂತಹ ಅಭೂತಪೂರ್ವ ಪ್ರಹಾರದತ್ತ ಒಯ್ದಿದೆ ಎಂದು ಟೀಕಿಸಿದರು.

electoral bonds

ಚುನಾವಣಾ ಬಾಂಡ್‌ಗಳು: ಕಾರ್ಪೊರೇಟ್‌ಗಳಿಗೆ ಮತ್ತೊಂದು ಮುಕ್ತಧಾಮ:

ಚಮಚಾ ಬಂಡವಾಳಶಾಹಿಯ ಇಂತಹ ಶಾಮೀಲಿನ ಮೂಲಕ ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ನಿರೀಕ್ಷಿಸುವ ತಕ್ಷಣದ ಪ್ರಯೋಜನ ಎಂದರೆ ಅದರ ಚುನಾವಣಾ ಲಾಭಕ್ಕೆ ಕಾರ್ಪೊರೇಟ್‌ಗಳಿಂದ ಹಣ ಪಡೆಯುವುದು. ಬಿಜೆಪಿ ಮತ್ತು ಇತರ ಎಲ್ಲ ರಾಜಕೀಯ ಪಕ್ಷಗಳು ಪಡೆದಿರುವ ನಿಧಿಗಳಲ್ಲಿನ ಅಪಾರ ಅಂತರ ಎದ್ದು ಕಾಣುವಂತಿದೆ. ಚುನಾವಣಾ ನಿಧಿ ನೀಡಿಕೆಯ ಕಾನೂನುಗಳ ತಿದ್ದುಪಡಿಯಿಂದಾಗಿ ಚುನಾವಣಾ ಬಾಂಡುಗಳ ಮೂಲಕ ಕಾರ್ಪೊರೇಟ್‌ಗಳಿಗೆ ಇನ್ನೊಂದು ತೆರಿಗೆಮುಕ್ತಧಾಮವನ್ನು ಲಭ್ಯಗೊಳಿಸಲಾಗಿದೆ ಎಂದು ಸೀತಾರಾಂ ಯೆಚುರಿ ವಿಶ್ಲೇಷಿಸಿದರು.

ಇವು ಆಳುವ ಕೂಟಕ್ಕೆ ಸಾಮಿಪ್ಯದ ಮೂಲಕ ಅದರ ಧೋರಣೆಯ ಮೇಲೆ ಪ್ರಭಾವ ಬೀರಲು ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಪ್ರಭಾವ ದೇಶದ ಹಿತಗಳಿಗೆ , ವಿಶೇಷವಾಗಿ ಬಡವರ ಮತ್ತು ದುಡಿಯುವ ಜನಗಳ ಹಿತಗಳಿಗೆ ಮಾರಕವಾಗಬಹುದಾದರೂ ಈ ಕಾರ್ಪೊರೇಟ್‌ಗಳಿಗೆ ಬಹಳ ಪ್ರಯೋಜನಕಾರಿ ಯಾಗುತ್ತವೆ. ಆದ್ದರಿಂದ ಈ ಚುನಾವಣಾ ಬಾಂಡುಗಳನ್ನು ಹಿಂತೆಗೆದುಕೊಂಡು ರಾಜಕೀಯ ಪಕ್ಷಗಳಿಗೆ ಯಾವುದೇ ಮಿತಿಯಿಲ್ಲದೆ ಅನಾಮಧೇಯ ಕಾರ್ಪೊರೇಟ್ ನಿಧಿಗಳನ್ನು ಪಡೆಯುವ ಅವಕಾಶ ಇಲ್ಲದಂತೆ ಮಾಡಬೇಕು ಎಂದು ಸೀತಾರಾಂ ಯೆಚುರಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *