ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಎಸ್.ವರಲಕ್ಷ್ಮಿ ನಾಮಪತ್ರ ಸಲ್ಲಿಕೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಖ್ಯಾತ ಕಾರ್ಮಿಕ ನಾಯಕಿ ಎಸ್.ವರಲಕ್ಷ್ಮಿ ಅವರು ಮಾರ್‍ಚ್ ೨೫ರಂದು ಸೋಮವಾರ ನಾಮಪತ್ರ ಸಲ್ಲಿಸಿದರು. ಅಂದು ಬೆಳಗ್ಗೆ ೧೦ ಗಂಟೆಗೆ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ನಡೆದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಸದಸ್ಯರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.

ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇರಳದ ಮಾಜಿ ಶಿಕ್ಷಣ ಸಚಿವ ಹಾಗೂ ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ, ಈ ಬಾರಿಯ ಚುನಾವಣೆಯಲ್ಲಿ ನಾವು ಸಿಪಿಎಂ ಪಕ್ಷಕ್ಕೆ ಮತವನ್ನು ಕೇಳುವ ಈ ಸಂದರ್ಭದಲ್ಲಿ, ಕಳೆದ ೨೦೧೪ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ದೇಶದ ಜನತೆಗೆ ಕೊಟ್ಟಂತಹ ಭರವಸೆಗಳು ಹಾಗೂ ಅವರು ಅಧಿಕಾರಕ್ಕೆ ಬಂದು ೫ ವರ್ಷಗಳ ಕಾಲ ಅವರು ನಡೆದುಕೊಂಡ ರೀತಿ, ಧೋರಣೆಗಳು ಜನರನ್ನು ಯಾವ ರೀತಿ ದಿವಾಳಿಯೆಬ್ಬಿಸಿದವು ಅನ್ನೊದನ್ನು ಯೋಚಿಸಿ ಮತ ನೀಡಬೇಕು ಎಂದು ಕರೆ ನೀಡಿದರು.

ಈ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ನಿರಂತರವಾಗಿ ಆಯ್ಕೆಗೊಂಡು ಏನೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು ಅನ್ನೋದನ್ನು ಕೂಡಾ ಆಲೋಚಿಸಬೇಕಿದೆ. ಸಿಪಿಎಂ, ಸಿಪಿಐ ಸೇರಿ ಇನ್ನಿತರ ಎಡ ಪಕ್ಷಗಳು ಸೇರಿ ಕಳೆದ ೫ ವರ್ಷಗಳಲ್ಲಿ ಏನೆಲ್ಲಾ ಹೋರಾಟಗಳನ್ನು, ಕೆಲಸಗಳನ್ನು ಮಾಡಿದ್ದಾರೆ. ಈ ರಾಜ್ಯದ ದುಡಿಯುವ ವರ್ಗದ ಪರವಾಗಿ ಯಾವ ರೀತಿ ಹೋರಾಡಿದ್ದಾರೆ ಎನ್ನುವ ಅಂಶಗಳನ್ನು ಪರಿಶೀಲಿಸಿ ಎಡಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಎಸ್. ವರಲಕ್ಷಿ ಅವರನ್ನು ಬೆಂಬಲಿಸಿ ಮತ ನೀಡಿ ಗೆಲ್ಲಿಸಿ ಇನ್ನಷ್ಟು ದುಡಿಯುವ, ಶೋಷಿತರ ಪರ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕ್ಷೇತ್ರದ ಜನತೆಯಲ್ಲಿ ಬೇಬಿ ಅವರು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅನುಸರಿಸಿದ ನೀತಿಯಿಂದಾಗಿ ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ೨೦೧೪ರ ಚುನಾವಣೆಯಲ್ಲಿ ಮೋದಿಯವರು ನಾನು ರೈತರ ಸಂಕಷ್ಟಗಳನ್ನು ಪರಿಹಾರ ಮಾಡ್ತೀನಿ. ಅದರ ಪರಿಹಾರಕ್ಕಾಗಿ ಇರುವ ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡ್ತೀನಿ ಅನ್ನೋ ಭರವಸೆಯನ್ನು ಈ ದೇಶದ ಜನತೆಗೆ ನೀಡಿದ್ದರು. ಆದರೆ ವಾಸ್ತವವಾಗಿ ರೈತರನ್ನು ಕಡೆಗಣೆಸಿ ಮೊದಲಿಗಿಂತಲೂ ಹೆಚ್ಚು ರೈತರ ಸಾವುಗಳನ್ನು ಸಂಭವಿಸಿದವು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಶೇ.೪೬ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಮೋದಿ ಸರ್ಕಾರದ ವಿರುದ್ಧ ಗುಡುಗಿದರು.

ಹಿಂದೆ ಈ ಕ್ಷೇತ್ರದಿಂದ ವಿಧಾನಸಭೆಗೆ ಕೆಂಬಾವುಟದಿಂದ ಆಯ್ಕೆಯಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಅವರು ನಡೆಸಿದ ಹೋರಾಟ ಹಾಗೂ ಯೋಜನೆಗಳು ಜನರ ಸಮಸ್ಯೆಗಳ ಪರಿಹರಿಸುವಲ್ಲಿ ಸಹಕಾರಿಯಾಗಿದ್ದವು. ಹಾಗಾಗಿ ಸದಾ ದುಡಿಯುವ ವರ್ಗದ ಜನತೆಯ ಪರವಾಗಿ ಹೋರಾಡುವ ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮೀ ಅವರಿಗೆ ಮತ ನೀಡಬೇಕು ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್ ಮಾತನಾಡಿ, ಈ ಬಾರಿಯ ಚುನಾವಣೆ ಸ್ವಾತಂತ್ರ್ಯ ನಂತರದ ಮಹತ್ವದ ಚುನಾವಣೆಯಾಗಿದೆ. ಈ ದೇಶದಲ್ಲಿ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ. ನಮ್ಮ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಕಾರ್ಮಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಮೋದಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ ಎಂದು ಅವರು ಕರೆ ನೀಡಿದರು.
ಈ ದೇಶದಲ್ಲಿ ರೈತ, ಕಾರ್ಮಿಕ, ಮಹಿಳೆ, ದಲಿತ, ವಿದ್ಯಾರ್ಥಿ-ಯುವಜನರ ಪರವಾಗಿ ಹೋರಾಡುವವರನ್ನು ಸಂಸತ್ ಗೆ ಆಯ್ಕೆ ಮಾಡಿ ಕಳಿಸಬೇಕಿದೆ ಎಂದು ಹೇಳಿದರು.

ಅಭ್ಯರ್ಥಿ ವರಲಕ್ಷ್ಮೀ ಮಾತನಾಡಿ, ಚುನಾವಣೆಯಲ್ಲಿ ರೈತರ ಸಮಸ್ಯೆಗಳ, ಕಾರ್ಮಿಕರ ಸಮಸ್ಯೆಗಳು, ವಿದ್ಯಾರ್ಥಿ-ಯುವಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ದೇಶದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ನಿರುದ್ಯೋಗ, ಹಸಿವು, ಬಡತನದ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಾಗಿ ಜಾತಿ, ಧರ್ಮ, ಹಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾನವೀಯತೆ ಎತ್ತಿಯುಡಿಯುವವರನ್ನು ಜನರು ಇಂದು ಆಯ್ಕೆ ಮಾಡಬೇಕಾದ ತುರ್ತು ಇದೆ ಎಂದರು.

ಈ ಭಾಗದ ರೈತರ ಪ್ರಮುಖ ಬೇಡಿಕೆಯಾದ ಶಾಶ್ವತ ನೀರಾವರಿಗಾಗಿ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದು ಸಿಪಿಎಂ ಮಾತ್ರ. ಸಿಪಿಎಂನ ಹೋರಾಟದ ಭಾಗವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ. ಮುಂದೆಯೂ ಸಹ ಜನರ ಧ್ವನಿಯಾಗಿ ಸಿಪಿಎಂ ಕಲಸ ಮಾಡುತ್ತೆ. ಹೆಚ್ಚಿನ ಮಟ್ಟದ ಕೆಲಸ ಮಾಡಲು ಸಿಪಿಎಂ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಸಿಪಿಎಂ ಪಕ್ಷದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ಕುರಿತು ಮಾತನಾಡಿ, ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮೀಗೆ ಮತ ನೀಡಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿಪಿಎಂನ ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಮುಖಂಡರಾದ ಮಾರುತಿ ಮಾನ್ಪಡೆ, ಕೆ.ಎನ್.ಉಮೇಶ್, ಗೀತಾ, ಚೆನ್ನರಾಪ್ಪ, ಮೀನಾಕ್ಷಿ ಸುಂದರಂ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಬಿ.ಜಯರಾಮರೆಡ್ಡಿ, ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ, ಹೇಮಚಂದ್ರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *