ಚುನಾವಣಾ-ಪೂರ್ವ ವಾತಾವರಣ ಕಲುಷಿತಗೊಳಿಸುವ ಮತ್ತಷ್ಟು ಆಚಾರ ಸಂಹಿತೆ ಉಲ್ಲಂಘನೆಗಳು

ದೃಢ ಕ್ರಮ ಕೈಗೊಳ್ಳದಿರುವ ಚುನಾವಣಾ ಆಯೋಗಕ್ಕೆ ಮತ್ತೊಂದು ನೀಲೋತ್ಪಲ ಬಸು ಪತ್ರ

ಪ್ರಧಾನ ಮಂತ್ರಿ ನರೆಂದ್ರ ಮೋದಿಯವರ ಇತ್ತೀಚಿನ ಮಾದರಿ ಆಚಾರ ಸಂಹಿತೆ ಉಲ್ಲಂಘನೆಯನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯ ನೀಲೋತ್ಪಲ ಬಸು ರವರು ಎಪ್ರಿಲ್‍ 9ರಂದು ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ಪ್ರಧಾನಿಗಳು ಮಾತ್ರವಲ್ಲ, ಅಸ್ಸಾಂನ ಸಂಪುಟ ಮಂತ್ರಿ ಹಿಮಂತ ಬಿಸ್ವಾಸ್‍ ಶರ್ಮರವರು ಮಾಡಿರುವ ಉಲ್ಲಂಘನೆಗಳು ಭಂಡತನದಿಂದ ಕೂಡಿದ್ದು ಚುನಾವಣಾ-ಪೂರ್ವ ವಾತಾವರಣ ಕಲುಷಿತಗೊಳ್ಳದಂತೆ ತಡೆಯಲು ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಲವಾಗಿ ಆಗ್ರಹ ಪಡಿಸಿದ್ದಾರೆ.

ಎಪ್ರಿಲ್‍ 9ರಂದು ಮಹಾರಾಷ್ಟ್ರದ ಲಾತೂರ್‍ ನಲ್ಲಿ ಮೊದಲ ಬಾರಿಗೆ ಮತದಾನ ಮಾಡುವವರನ್ನು ಉದ್ದೇಶಿಸಿ ಮಾತನಾಡುತ್ತ ಅವರು ತಮ್ಮ ಮತಗಳನ್ನು ಬಾಲಕೋಟ್‍ ನಲ್ಲಿ ವಾಯು ಪ್ರಹಾರ ನಡೆಸಿದವರಿಗೆ ಸಮರ್ಪಿಸಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿರುವುದಾಗಿ ವರದಿಯಾಗಿದೆ. ಈ ಕುರಿತ ಮಾಧ್ಯಮ ವರದಿಗಳನ್ನು ತಮ್ಮ ಪತ್ರದಲ್ಲಿ ಲಗತ್ತಿಸಿರುವ ಅವರು ಪ್ರಧಾನಿಗಳಿಂದ ಮಾದರಿ ಆಚಾರ ಸಂಹಿತೆಯ ಉಲ್ಲಂಘನೆಗಳ ತೀರಾ ಇತ್ತೀಚಿನ  ಈ ಪ್ರಕರಣ ಅತ್ಯಂತ ಆತಂಕ ಹುಟ್ಟಿಸುವಂತದ್ದು, ಅವರು ಮತಯಾಚನೆಗೆ ಸಶಸ್ತ್ರ ಪಡೆಗಳ ಪ್ರಸ್ತಾಪವನ್ನು ಪ್ರಚಾರದ ವೇಳೆಯಲ್ಲಿ ತರಬಾರದು ಎಂವ ಚುನಾವಣಾ ಆಯೊಗದ ನಿರ್ದಿಷ್ಟ ನಿರ್ದೇಶನವನ್ನೂ ಉಲ್ಲಂಘಿಸಿದ್ದಾರೆ ಎಂಬ ಸಂಗತಿಯನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ.

ಅತ್ತ ಅಸ್ಸಾಂನಲ್ಲಿ ಅಲ್ಲಿಯ ಸಂಪುಟ ಮಂತ್ರಿ ಹಿಮಂತ ಬಿಸ್ವಾಸ್‍ ಶರ್ಮರವರು ತಮ್ಮ ಚುನಾವಣಾ ಪ್ರಚಾರದಲ್ಲಿ, ತಮಗೆ “ಧೋತಿಗಳನ್ನು ಮತ್ತು ಲುಂಗಿಗಳನ್ನು“ ಧರಿಸಿರುವವರ ಮತಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ರಾಜ್ಯದ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ತಮ್ಮ ಪಕ್ಷದ ತಿರಸ್ಕಾರದ ನಿಲುವಿನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅಸ್ಸಾಂ ನಲ್ಲಿ ಪರಿಸ್ಥಿತಿ ಬಹಳಷ್ಟು ಸ್ಫೋಟಕವಾಗಿದೆ. ಗೋಲ್ಪಾರಾದಲ್ಲಿ ಸರಕಾರ ನಡೆಸುತ್ತಿರುವ ಒಂದು ಬಂಧನ ಕ್ಯಾಂಪ್‍ ನಲ್ಲಿ ಒಂದು ಕಸ್ಟಡಿ ಸಾವು ಸಂಭವಿಸಿದೆ. ಬಿಜೆಪಿಯ ಚುನಾವಣಾ ವಚನಗಳ ಪ್ರಕಾರ ಇಂತಹ ಸಂದೇಹಾಸ್ಪದ ಮತದಾರರು ಎಂದು ಹೇಳಲಾಗಿರುವವರಿಗೆಂದು ಮಾಡಿರುವ  ಬಂಧನ ಕ್ಯಾಂಪುಗಳನ್ನು ಕಳಚಿ ಹಾಕಬೇಕಾಗಿತ್ತು. ಆದರೆ ಆ ಆಶ್ವಾಸನೆಯನ್ನು ಈಡೇರಿಸುವ ಬದಲು ಹೊಸ ಕ್ಯಾಂಪುಗಳು ತಲೆಯೆತ್ತಿವೆ. ಇದು ರಾಷ್ಟ್ರೀಯ ನಾಗರಿಕ ದಾಖಲೆಗಳನ್ನು ಮೇಲ್ದರ್ಜೆಗೆ ಏರಿಸುವ ಸುಪ್ರಿಂ ಕೋರ್ಟ್ ಉಸ್ತುವಾರಿಯ ಪ್ರಕ್ರಿಯೆಯ ಹೊರತಾಗಿಯೂ ನಡೆಯುತ್ತಿದೆ.

“ನಾವು ಈ ಹಿಂದೆಯೂ ಬಿಜೆಪಿ ಮತ್ತು ಅದರ ಮುಖಂಡರಿಂದ ಇಂತಹ ಭಂಡ ಉಲ್ಲಂಘನೆಗಳನ್ನು ತಮ್ಮ ಗಮನಕ್ಕೆ ತಂದಿದ್ದೆವು. ಆದರೆ ಆಯೋಗ ಅದೇಕೋ ಇಂತಹ ಕೃತ್ಯಗಳ ವಿರುದ್ಧ ಯಾವುದೇ ದೃಢತೆಯಿಂದ ಕ್ರಮ ವಹಿಸಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ “ಮೋದೀ ಕೀ ಸೇನಾ” ಎಂಬ ಅಸಹ್ಯಕರ ಹೇಳಿಕೆಯನ್ನು “ಹಗುರವಾಗಿ” ಕಂಡಿದೆ ಎಂದು ವರದಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿರುವ ನೀಲೋತ್ಪಲ ಬಸು, ಚುನಾವಣಾ-ಪೂರ್ವ ವಾತಾವರಣವನ್ನು  ಪಕ್ಷಪಾತಪೂರ್ಣ ಚುನಾವಣಾ ಹಿತಾಸಕ್ತಿಗಳಿಗಾಗಿ ಅಸ್ಮಿತೆಗಳು ಮತ್ತು ರಾಷ್ಟ್ರೀಯ ಸಂಕೇತಗಳ ಆಧಾರದಲ್ಲಿ ಧ್ರುವೀಕರಣಗೊಳಿಸುವ ಮಟ್ಟಕ್ಕೆ ಇಳಿಸಿ ಕಲುಷಿತಗೊಳಿಸುವುದನ್ನು ನಿಲ್ಲಿಸಬೇಕಾಗಿದೆ, ಇದಕ್ಕೆ ಚುನಾವಣಾ ಆಯೋಗತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *