ಮುಕ್ತ ಮತದಾನ ಆಶ್ವಾಸನೆ ಹುಸಿಯಾಗುತ್ತಿದೆ

“ಕ್ರಿಯಾಹೀನತೆಯ ಮೂಲಕ ಆಳುವ ಪಕ್ಷದ ಗೂಂಡಾಗಳಿಗೆ ಅನುಕೂಲ ಕಲ್ಪಿಸುವಲ್ಲಿ ಸಕ್ರಿಯವಾಗಿರುವಂತೆ ಕಾಣುತ್ತದೆ”

ಎಪ್ರಿಲ್‍ 15ರಂದು ಸಿಪಿಐ(ಎಂ)ನ ನಿಯೋಗವೊಂದು ದಿಲ್ಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತ್ರಿಪುರಾದಲ್ಲಿ ಮತ್ತು ಪಶ್ಚಿಮ ಬಂಗಾಲದಲ್ಲಿ ಮುಕ್ತ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸುವ ತನ್ನ ಚುನಾವಣಾ ಕರ್ತವ್ಯವನ್ನು ನಿಭಾಯಿಸುವುದಾಗಿ ನೀಡಿದ ಆಶ್ವಾಸನೆಯನ್ನು ಎಪ್ರಿಲ್ 11ರಂದು ನಡೆದ ಮೊದಲ ಹಂತದ ಮತದಾನದ ವೇಳೆಯಲ್ಲಿ ಈಡೇರಿಸಿಲ್ಲ ಎಂಬುದನ್ನು ಅವರ ಗಮನಕ್ಕೆ ತಂದಿದೆ.

ಎಪ್ರಿಲ್‍ 11ರಂದು ಪಶ್ಚಿಮ ತ್ರಿಪುರಾ ಲೋಕಸಭಾ ಕ್ಷೇತ್ರದ ಮತದಾನದಲ್ಲಿ ಬಹಳಷ್ಟು ಅಕ್ರಮಗಳು ನಡೆದಿದ್ದು, 464 ಮತಗಟ್ಟೆಗಳಲ್ಲಿ ಮರು ಮತದಾನ ಏರ್ಪಡಿಸಬೇಕು ಮತ್ತು ಪೂರ್ವ ತ್ರಿಪುರಾ ಕ್ಷೇತ್ರದಲ್ಲಿ ಇದು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿಯವರ ನೇತೃತ್ವದ ನಿಯೋಗದಲ್ಲಿ ಪೊಲಿಟ್‍ ಬ್ಯುರೊ  ಸದಸ್ಯರಾದ ನೀಲೋತ್ಪಲ ಬಸು ಮತ್ತು ಪಶ್ಚಿಮ ತ್ರಿಪುರಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಶಂಕರ ಪ್ರಸಾದ್‍ ದತ್ತ ಇದ್ದರು.

ಈ ಬಗ್ಗೆ ಹಾಗೂ ಪಶ್ಚಿಮ ಬಂಗಾಲದಲ್ಲಿಯೂ ನಡೆಯುತ್ತಿರುವ ಚುನಾವಣಾ ಆಚಾರ ಸಂಹಿತೆಯ ಉಲ್ಲಂಘನೆಗಳು ಮತ್ತು ಇತರ ಅಕ್ರಮಗಳತ್ತವೂ ನಿಯೋಗ ಮುಖ್ಯ ಚುನಾವಣಾ ಆಯುಕ್ತರ ಗಮನ ಸೆಳೆಯಿತು, ಈ ಕುರಿತಂತೆ ಎರಡು ಮನವಿ ಪತ್ರಗಳನ್ನು ಅವರಿಗೆ ಸಲ್ಲಿಸಲಾಗಿದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ನಡೆಸುವುದು ಸಂವಿಧಾನದ ಕಲಮು 324ರ ಪ್ರಕಾರ ಚುನಾವಣಾ ಆಯೋಗದ ಕರ್ತವ್ಯ, ಇದನ್ನು ನಿಭಾಯಿಸುವಲ್ಲಿ ತ್ರಿಪುರಾ ಮತ್ತು ಪಶ್ಚಿಮ ಬಂಗಾಲದಲ್ಲಿ ಇರುವ ಅಡಚಣೆಗಳ ಬಗ್ಗೆ ಈ ಮೊದಲೇ ಪೂರ್ಣ ಆಯೋಗದೊಂದಿಗೆ ಚರ್ಚಿಸಲಾಗಿತ್ತು ಕೂಡ. ಆಯೋಗ ಈ ಕುರಿತು ನಿರ್ದಿಷ್ಟ ಕ್ರಮಗಳ ಬಗ್ಗೆ ಆಶ್ವಾಸನೆಯನ್ನು ಕೂಡ ಕೊಟ್ಟಿತ್ತು.

ಆದರೆ ಎಪ್ರಿಲ್‍ 11ರ ಘಟನೆಗಳನ್ನು ನೋಡಿದ ಮೇಲೆ, ಚುನಾವಣಾ ಆಯೋಗ ತನ್ನ ಕ್ರಿಯಾಹೀನತೆಯ ಮೂಲಕ ಆಳುವ ಪಕ್ಷ ಮತ್ತು ಅದರ ಗೂಂಡಾಗಳ ಕುಕೃತ್ಯಗಳಿಗೆ ಅನುಕೂಲ ಕಲ್ಪಿಸಿಕೊಡುವಲ್ಲಿ ಸಕ್ರಿಯವಾಗಿದೆ ಎಂದೇ ಭಾವಿಸಬೇಕಾಗಿದೆ ಎಂದು ಸಿಪಿಐ(ಎಂ) ಖೇದ ವ್ಯಕ್ತಪಡಿಸಿದೆ.

“ತ್ರಿಪುರಾದ ಜನತೆ ಭಾರತದ ಚುನಾವಣಾ ಆಯೋಗದ ಸ್ವತಂತ್ರ ಪಾತ್ರಕ್ಕೆ  ಅಪಕೀರ್ತಿ ಬರಬಾರದು ಎಂದು ಕಳಕಳಿಯಿಂದ ನಿರೀಕ್ಷಿಸುತ್ತಿದೆ”:

ತ್ರಿಪುರಾದಲ್ಲಿ ಮತದಾನ ಸಾಮಾನ್ಯ ರೀತಿಯಲ್ಲಿ ನಡೆಯಲು ಅಡ್ಡಿಯಾಗಬಹುದಾದ ಅಕ್ರಮಗಳ ಸ್ವರೂಪದ ಬಗ್ಗೆ  ಮೊದಲೇ ವಿವರವಾದ ಸೂಚನೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿತ್ತು. ಆದರೆ ಈ ಎಲ್ಲ ಮುನ್ನೆಚ್ಚರಿಕೆಗಳು ವ್ಯರ್ಥವಾಗಿವೆ ಎಂದು ಸಿಪಿಐ(ಎಂ) ತನ್ನ ಮನವಿ ಪತ್ರದಲ್ಲಿ ಆಳವಾದ ಆತಂಕ ಹಾಗೂ ನಿರಾಸೆಯನ್ನು ವ್ಯಕ್ತಪಡಿಸಿದೆ. ಮಾರ್ಚ್ 6ರಂದು ಪೂರ್ಣ ಚುನಾವಣಾ ಆಯೋಗದೊಮದಿಗೆ ನಡೆದ ಸಭೆಯಲ್ಲಿ ಮತಗಟ್ಟೆಗಳು ಮತ್ತು ಪ್ರತಿಪಕ್ಷಗಳ ಪೋಲಿಂಗ್ ಏಜೆಂಟರುಗಳ ಭದ್ರತೆಗೆ ಕೇಂದ್ರೀಯ ಪಡೆಗಳನ್ನು ನಿಯೋಜಿಸಬೇಕು, ಸಾಮಾನ್ಯ ಮತದಾರರಲ್ಲಿ ವಿಶ್ವಾಸ ಮೂಡಿಸಲು ಅವುಗಳ ರೂಟ್‍ ಮಾರ್ಚ್‍ ಏರ್ಪಡಿಸಬೇಕು ಎಂಬ ಒಪ್ಪಂದಕ್ಕೆ ಬರಲಾಗಿತ್ತು .ಆದರೆ ಎಪ್ರಿಲ್‍ 11ರಂದು ಪಶ್ಚಿಮ ತ್ರಿಪುರಾ ಕ್ಷೇತ್ರದಲ್ಲಿ ಅದು ಎಲ್ಲಿಯೂ ಕಾಣ ಬರಲಿಲ್ಲ. ಇಬ್ಬರು ಸಿಪಿಐ(ಎಂ) ಅಭ್ಯರ್ಥಿಗಳ ಭದ್ರತೆಯ ವ್ಯವಸ್ಥೆಯೂ ಇರಲಿಲ್ಲ.

ಪಶ್ಚಿಮ ತ್ರಿಪುರ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿಯ ಮುಖ್ಯ ಪೋಲಿಂಗ್‍ ಏಜೆಂಟ್‍ ನೇಮಿಸಿದ ಪೋಲಿಂಗ್‍ ಏಜೆಂಟರುಗಳು ಕಾನೂನು ಪ್ರಕಾರ ಮಾಡಬೇಕಾಗಿದ್ದ ಕರ್ತವ್ಯಗಳನ್ನು ನಿರ್ವಹಿಸಲು ಬಿಟ್ಟಿಲ್ಲ. ಹಲವಾರು ಮತಗಟ್ಟೆಗಳಲ್ಲಿ ಸಿಸಿಟಿವಿ ಸೌಲಭ್ಯವೇ ಇರಲಿಲ್ಲ., ಲೈವ್‍ ವೀಡಿಯೋ ದಾಖಲಾಗದಂತೆ ಮಾಡಲಾಗಿತ್ತು, ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಗೂಂಡಾಗಿರಿ ಮತ್ತು ಕುಕೃತ್ಯಗಳ ಸಾಕ್ಷ್ಯ ಸಿಗದಂತೆ ಮಾಡಲಾಗಿದೆ.

464 ಮತಗಟ್ಟೆಗಳಲ್ಲಿ ಮತದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಮೋಸ ನಡೆದಿದೆ. ಆದ್ದರಿಂದ ಈ ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಸಿಪಿಐ(ಎಂ) ಅಭ್ಯರ್ಥಿ ಶಂಕರಪ್ರಸಾದ್‍ ದತ್ತ ಈಗಾಗಲೇ ಈ ಕ್ಷೇತ್ರಗಳ ವೀಡಿಯೋ ರೆಕಾರ್ಡಿಂಗ್‍ಗಳನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ, ಇವು ಇಲ್ಲಿ ಎಂತಹ ಮತ್ತು ಎಷ್ಟರ ಮಟ್ಟಿಗೆ ಕುಕೃತ್ಯಗಳು ನಡೆದಿವೆ ಎಂಬುದನ್ನು ತೋರಿಸುತ್ತವೆ ಎಂದು ಅವರು ಹೇಳಿದ್ದಾರೆ. ಮರು ಮತದಾನ ನಡೆಯಬೇಕಾದ ನಿರ್ದಿಷ್ಟ ಮತಗಟ್ಟೆಗಳ ಸಂಖ್ಯೆ, ವಿಧಾನಸಭಾ ಕ್ಷೇತ್ರದ ವಿಭಾಗ ಮುಂತಾದ ವಿವರಗಳನ್ನು ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ . ಸಿಪಿಐ(ಎಂ) ಮನವಿ ಪತ್ರದೊಂದಿಗೆ ಪಶ್ಚಿಮ ತ್ರಿಪುರಾ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿಗಳ, ಸಿಪಿಐ(ಎಂ)ನ ಪೋಲಿಂಗ್‍ ಏಜೆಂಟರುಗಳ ದೂರುಗಳನ್ನು, ಜತೆಗೆ ಈ ಹಿಂದೆ ಸಿಪಿಐ(ಎಂ) ಈ ಕ್ಷೇತ್ರಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಆಯೋಗಕ್ಕೆ ಸಲ್ಲಿಸಿದ ಪತ್ರಗಳ ಪ್ರತಿಯನ್ನೂ ಲಗತ್ತಿಸಲಾಗಿದೆ.

ತ್ರಿಪುರಾ ಪೂರ್ವ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಜಿತೇಂದ್ರ ಚೌಧುರಿ ಕೂಡ ಗಾಗಲೇ ಹಲವಾರು ಸಂಗತಿಗಳನ್ನು ಆಯೋಗದ ಗಮನಕ್ಕೆ ತಂದಿದ್ದು, ಎಪ್ರಿಲ್ 11ರಂದು ತ್ರಿಪುರಾ ಪಶ್ಚಿಮ ಕ್ಷೇತ್ರದಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಅವುಗಳನ್ನು ಕೂಡ ಸಿಪಿಐ(ಎಂ)ನ ಮನವಿ ಪತ್ರಗೊಂದಿಗೆ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗಿದೆ. ಜಿತೇಂದ್ರ ಚೌಧುರಿ ಕೇಂದ್ರೀಯ ಪೊಲಿಸ್‍ ವೀಕ್ಷಕರಿಗೆ ಮತ್ತು ರಿಟರ್ನಿಂಗ್‍ ಆಫೀಸರಿಗೆ ಈ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅವುಗಳು ಹೀಗಿವೆ:

  • ಎಲ್ಲ ಸೂಕ್ಷ್ಮ ಮತಗಟ್ಟೆ ಪ್ರದೇಶಗಳಲ್ಲಿ ಮತದಾರರಲ್ಲಿ ವಿಶ್ವಾಸ ಮೂಡಿಸಲು ಎಪ್ರಿಲ್‍ 17ರ ಸಂಜೆಯ ವರೆಗೆ ಬೃಹತ್‍ ಪ್ರಮಾಣದಲ್ಲಿ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು

  • ಚುನಾವಣಾ-ಪೂರ್ವ ಹಿಂಸಾಚಾರದಲ್ಲಿ ಎಫ್.ಐ.ಆರ್‍. ಗಳಲ್ಲಿ ಹೆಸರಿಸಿದ ವ್ಯಕ್ತಿಗಳನ್ನೆಲ್ಲ ಬಂಧಿಸಬೇಕು, ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೆ ಅವರನ್ನು ಹಿಡಿದಿಡಬೇಕು.

  • ಈ ಕ್ಷೇತ್ರದ ಎಲ್ಲ ಮತದಾನ ಕೇಂದ್ರಗಳಲ್ಲಿ ಕೇಂದ್ರೀಯ ಪಡೆಗಳನ್ನು ಮಾತ್ರವೇ ನಿಯೋಜಿಸುವಂತೆ ನೋಡಿಕೊಳ್ಳಬೇಕು, ಈ ಪಡೆಗಳ ಕನಿಷ್ಟ 7 ಸಿಬ್ಬಂದಿಯಾದರೂ ಇರಬೇಕು.

  • ಎಲ್ಲ ಸೂಕ್ಷ್ಮ ವಲಯಗಳಲ್ಲಿ 3ಕ್ಕಿಂತ ಹೆಚ್ಚು ಕೇಂದ್ರೀಯ ಪಡೆಗಳ ಗಸ್ತು ವಾಹನಗಳು ಇರಬೇಕು.

  • ಯಾವುದೇ ಸಂದರ್ಭದಲ್ಲಿ ಸಾಲಿನಲ್ಲಿರುವ ಅನಧಿಕೃತ ವ್ಯಕ್ತಿಗಳು ಮತ್ತು ಸಂಬಂಧಪಟ್ಟ ಮತದಾರರು ಮತದಾನ ಕೇಂದ್ರದೊಳಕ್ಕೆ ಪ್ರವೇಶಿಸಲು ಬಿಡಬಾರದು, ಎಪ್ರಿಲ್‍ 11ರ ಮತದಾನದಲ್ಲಿ ಇದು ವ್ಯಾಪಕವಾಗಿ ನಡೆದಿದೆ.

  • ಅಭ್ಯರ್ಥಿಗಳ ಪೋಲಿಂಗ್‍ ಏಜೆಂಟ್‍ಗಳು ಸುರಕ್ಷಿತವಾಗಿ ಹಾಜರಾಗುವಂತೆ ಮತ್ತು ಹಿಂದಿರುಗಲು ಸಾಧ್ಯವಾಗುವಂತೆ, ಅವರು ಕೋರಿಕೊಂಡಲ್ಲೆಲ್ಲ ಚುನಾವಣಾ ಆಯೋಗದ ತುರ್ತು ತನಿಖಾ ಪಡೆಗಳು ಮತ್ತು ಗಸ್ತು ವಾಹನಗಳು ನೋಡಿಕೊಳ್ಳಬೇಕು.

  • ಹೊರಗಿನವರನ್ನು ಯಾರನ್ನೂ, ಅವರು ಆ ಮತಗಟ್ಟೆಯ ಮತದಾರರಲ್ಲದಿದ್ದರೆ, ಅಥವ ಅವರು ಆಗಲೇ ಮತದಾನ ಮಾಡಿದ್ದರೆ, ಅವರನ್ನು ಪ್ರವೇಶಿಸಲು ಬಿಡಬಾರದು, ಇಡೀ ಪ್ರದೇಶವನ್ನು ಸುತ್ತುವರಿದಿರಬೇಕು.

  • ಎರಡಕ್ಕಿಂತ ಹೆಚ್ಚು ಮೋಟಾರ್ ಸೈಕಲ್‍ಗಳು ಒಟ್ಟಾಗಿ ಚಲಿಸದಂತೆ ತಡೆಯಬೇಕು ಮತ್ತು ಸಂಜೆ 5 ಗಂಟೆಯ ನಂತರ ಹೊರಗಿನವರನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

“ಭಾರತದ ಚುನಾವಣಾ ಆಯೋಗ ಇಷ್ಟು ವರ್ಷಗಳಿಂದ ನಮ್ಮ  ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಸಂಸದೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಧಾನ ಕೊತ್ತಳವಾಗಿ ವಿಕಾಸಗೊಂಡಿದೆ ಎಂದು ನಾವು ನಮ್ಮೆಲ್ಲ ಶಕ್ತಿಯನ್ನೂ ಕ್ರೋಡೀಕರಿಸಿ ಹೇಳುತ್ತಿದ್ದೇವೆ. ತ್ರಿಪುರಾದ ಜನತೆ ಮತ್ತು ದೇಶದ ಜನತೆ ಕೂಡ ಭಾರತದ ಚುನಾವಣಾ ಆಯೋಗದ ಸ್ವತಂತ್ರ ಪಾತ್ರಕ್ಕೆ ಅಪಕೀರ್ತಿ ಬರಬಾರದು ಎಂದು ಕಳಕಳಿಯಿಂದ ನಿರೀಕ್ಷಿಸುತ್ತೇವೆ” ಎಂದು ತ್ರಿಪುರಾ ಕುರಿತ ಮನವಿಯ ಕೊನೆಯಲ್ಲಿ ಹೇಳಲಾಗಿದೆ.

ಪಶ್ಚಿಮ ಬಂಗಾಲ- ಆಯುಕ್ತರ ಲಿಖಿತ ಆಶ್ವಾಸನೆಗಳ ಹೊರತಾಗಿಯೂ…..:

ಎರಡನೇ ಮನವಿ, ಪಶ್ಚಿಮ ಬಂಗಾಲ ಕುರಿತಾಗಿದ್ದು, ಅಲ್ಲಿ ಒಂದು ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವಲ್ಲಿ ರಾಜ್ಯ ಆಡಳಿತದ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕರಲ್ಲಿ ಏನೇನೂ ವಿಶ್ವಾಸ ಇಲ್ಲದಿರುವುದನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿತ್ತು. ಚುನಾವಣಾ ಕರ್ತವ್ಯಗಳನ್ನು ವಹಿಸಲಾದ ಸಿಬ್ಬಂದಿಗಳಲ್ಲಿ ಬಹಳಷ್ಟು ಮಂದಿ ಸಾಮೂಹಿಕವಾಗಿ ತಮ್ಮ ಸುರಕ್ಷಿತತೆ ಮತ್ತು ಭದ್ರತೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು, ಇದಕ್ಕಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಬೇಕು ಎಂಬುದನ್ನು ಒತ್ತಿ ಹೇಳಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದವರ ಬಂಡಾಯವೇ ಎನ್ನ ಬಹುದಾದ ಪರಿಸ್ಥಿತಿಯಿಂದಾಗಿಯೇ ಕೊನೆಗೂ ಇಲ್ಲಿಯ ಮುಖ್ಯ ಚುನಾವಣಾ ಆಯುಕ್ತರು ಈ ಕುರಿತು ನಿರ್ದಿಷ್ಟ ಲಿಖಿತ ಆಶ್ವಾಸನೆಯನ್ನು ಕೊಡಬೇಕಾಗಿ ಬಂತು ಎಂಬ ಸಂಗತಿಯನ್ನೂ ಸಿಪಿಐ(ಎಂ) ಮನವಿಯಲ್ಲಿ ಆಯೋಗದ ಗಮನಕ್ಕೆ ತರಲಾಗಿದೆ.

ಇಂತಹ ನಿರ್ದಿಷ್ಟ ಲಿಖಿತ ಆಶ್ವಾಸನೆ ಇದ್ದರೂ, ವಾಸ್ತವವಾಗಿ, ಎಪ್ರಿಲ್ 11ರಂದು ನಡೆದ ಅಲಿಪುರ್ ದುವಾರ್‍ ಎಸ್. ಟಿ. ಮತ್ತು ಕೂಚ್‍ ಬೆಹಾರ್‍ ಈ ಎರಡು ಲೋಕಸಭಾ ಕ್ಷೇತ್ರಗಳ ಮತದಾನದಲ್ಲಿ ಚುನಾವಣಾ ಆಯೋಗದಲ್ಲಿ ಸಾಮಾನ್ಯ ಮತದಾರರು ಹೊಂದಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ಮನವಿ ಪತ್ರ ಹೇಳಿದೆ. ತ್ರಿಪುರಾದಲ್ಲಿ ಆಗಿರುವಂತೆಯೇ, ಈ ಎರಡು ಕ್ಷೇತ್ರಗಳಲ್ಲೂ ವಿಶ್ವಾಸದ ಭಾವನೆಯನ್ನು ಸೃಷ್ಟಿಸಲು ಮತ್ತು ಒಂದು ಮುಕ್ತ ಹಾಗೂ ನ್ಯಾಯಯುತ ಮತದಾನ ನಡೆಸಲು ಅಗತ್ಯವಾದ ಕೇಂದ್ರೀಯ ಭದ್ರತಾ ಪಡೆಗಳ ಗೈರು ಹಾಜರು ಕಣ್ಣಿಗೆ ರಾಚುವಂತಿತ್ತು.

ಕನಿಷ್ಟ ನಾಲ್ಕು ಎಡರಂಗದ ಅಭ್ಯರ್ಥಿಗಳ ಮೇಲೆಯೇ, ಅಸನ್‍ ಸೋಲ್‍ ಕ್ಷೇತ್ರದಲ್ಲಿ ಗೌರಾಂಗ ಚಟರ್ಜಿ, ಡೈಮಂಡ್‍ ಹಾರ್ಬರ್ ಕ್ಷೇತ್ರದಲ್ಲಿ ಡಾ. ಫವುದ್‍ ಹಲೀಂ, ಬಸಿರ್ಹಾಟ್‍ ಕ್ಷೇತ್ರದಲ್ಲಿ ಪಲ್ಲವ್‍ ಸೆನ್‍ ಗುಪ್ತ ಮತ್ತು ಬೀರ್‍ ಬೂಮ್‍ ನಲ್ಲಿ ಡಾ. ರಿಝವುಲ್ ಕರೀಂ ಇವರುಗಳ ಮೇಲೆ ಹಲ್ಲೆಗಳು ನಡೆದಿವೆ. ಈ ಎಲ್ಲ ಪ್ರಕರಣಗಳಲ್ಲೂ, ಅಭ್ಯರ್ಥಿಗಳಿಗೆ ನೀಡಬೇಕಾಗಿದ್ದ ಭದ್ರತೆ ನಾಪತ್ತೆಯಾಗಿತ್ತು, ಅಭ್ಯರ್ಥಿಗಳ ಪ್ರಚಾರದ ವಿಡಿಯೋಗ್ರಫಿ ಸೌಕರ್ಯವೂ ಕೂಡ ಇರಲಿಲ್ಲ ಎಂಬ ಶ್ಚರ್ಯದ ಸಂಗತಿಯನ್ನು ಮನವಿ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದೆ.

ಈ ಮೊದಲೇ ಸಿಪಿಐ(ಎಂ), ಕಾಂಟ್ರಾಕ್ಟ್ ನೌಕರರನ್ನು ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಬಾರದು, ಏಕೆಂದರೆ ಅವರು ಆಳುವ ಪಕ್ಷದ ಮರ್ಜಿಗಳನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿತ್ತು. ದುರದೃಷ್ಟವಸಾತ್, ಇದನ್ನು ಗಮನಕ್ಕೆ ತಗೊಳ್ಳಲಾಗಿಲ್ಲ. ವಿಶೇಷವಾಗಿ ರಾಯ್‍ ಗಂಜ್‍ ಕ್ಷೇತ್ರದ ಬಗ್ಗೆ ವಿಶೇಷ ಗಮನ ನೀಡಬೇಕಾದ ಅಗತ್ಯದ ಬಗ್ಗೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ಅಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವ ಅಗತ್ಯದ ಬಗ್ಗೆ ದಸ್ತಾವೇಜುಗಳನ್ನು ಈ ಮನವಿ ಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

ಇದಲ್ಲದೆ, ನರೇಂದ್ರ ಮೋದಿ ಜೀವನ ಚಿತ್ರದಂತೆ, ಅಖಿಲ ಭಾರತ ತೃಣಮೂಲ ಕಾಂಗ್ರೆಸಿನ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜೀವನಚಿತ್ರದ ಟ್ರೇಲರನ್ನು ಕಾನೂನುಬಾಹಿರವಾಗಿ, ಮಾದರಿ ಆಚಾರ ಸಂಹಿತೆಯನ್ನು ಉಲ್ಲಂಘಿಸಿ ಪ್ರಸರಿಸಲಾಗುತ್ತಿದೆ ಎಂಬ ಸಂಗತಿಯನ್ನೂ ಸಿಪಿಐ(ಎಂ) ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದೆ.

ಇವೆಲ್ಲವೂ ತುರ್ತಿನ ಸಂಗತಿಗಳಾಗಿದ್ದು, ಚುನಾವಣಾ ಆಯೋಗ ಅಷ್ಟೇ ತುರ್ತಿನಿಂದ ಕ್ರಮ ವಹಿಸುವುದಾಗಿ ಸಿಪಿಐ(ಎಂ)ನ ಮನವಿ ಪತ್ರ ಆಶಿಸಿದೆ.

Leave a Reply

Your email address will not be published. Required fields are marked *