ತ್ರಿಭಾಷಾ ಸೂತ್ರದ ಬಲವಂತ  ಬೇಡ, ಕರಡನ್ನು ಹಿಂದಕ್ಕೆ ಪಡೆಯಬೇಕು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಕರಡು ರಾಷ್ಟ್ರೀಯ ಶಿಕ್ಷಣ ಧೋರಣೆ ಶಾಲಾಶಿಕ್ಷಣದ ಪ್ರಾಥಮಿಕ ಹಂತದಿಂದಲೇ ತ್ರಿಭಾಷಾ ಸೂತ್ರವನ್ನು ಅನುಸರಿಸುವ ಪ್ರಸ್ತಾವವನ್ನು ಇಟ್ಟಿದೆ.  ಈ ರೀತಿಯ ಹೇರಿಕೆಯನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ನಿಸ್ಸಂದಿಗ್ಧವಾಗಿ  ವಿರೋಧಿಸಿದೆ. ಈ ವಿರೋಧ ಯಾವುದೇ ಒಂದು ಭಾಷೆಗೆ ಅಲ್ಲ, ಬದಲಾಗಿ ಎಲ್ಲ ಭಾರತೀಯ ಭಾಷೆಗಳಿಗೆ ಬೆಳೆಯಲು ಮತ್ತು ಸಮೃದ್ದಗೊಳ್ಳಲು ಸಮಾನ ಅವಕಾಶಗಳನ್ನು ಖಾತ್ರಿಗೊಳಿಸುವುದಕ್ಕಾಗಿ ಎಂದು ಅದು  ಹೇಳಿದೆ.

ಕರಡಿನಲ್ಲಿರುವ   ಈ ಸಂವೇದನಾಹೀನ ವಿಚಾರದ ವಿರುದ್ಧ ವ್ಯಾಪಕ ಪ್ರತಿಕ್ರಿಯೆಗಳು, ವಿಶೇಷವಾಗಿ ದಕ್ಷಿಣದ ರಾಜ್ಯಗಳಿಂದ ವ್ಯಕ್ತವಾಗಿವೆ. ಬಲವಂತದ ಹೇರಿಕೆ ಭಾಷಾ ಸಂಕುಚಿತವಾದದ ಭಾವನೆಗಳು ಬೆಳೆಯಲು ಕಾರಣವಾಗುತ್ತದೆ, ಆ ಮೂಲಕ ನಮ್ಮ ಜನಗಳ ಮತ್ತು ದೇಶದ ಐಕ್ಯತೆಗೆ ಹಾನಿಕಾರಕವಾಗುತ್ತದೆ.

 ಈ ಬಲವಾದ ಟೀಕೆ ಸರಕಾರವನ್ನು ಕುಟುಕಿದ್ದು, ಈ ದಸ್ತಾವೇಜು ಕೇವಲ ಕರಡು ಮಾತ್ರ ಎಂದು ಅದು ಸ್ಪಷ್ಟೀಕರಣ ನೀಡಿದೆ. ಇದು ಅತ್ಯಂತ ಸೂಕ್ಷ್ಮ ಸ್ವರೂಪದ ಪ್ರಶ್ನೆಯಾದ್ದರಿಂದ ಕರಡನ್ನು ಸರಕಾರ ಹಿಂತೆಗೆದುಕೊಳ್ಳಬೇಕು ಮತ್ತು ಈ ವಿವಾದಕ್ಕೆ ಪೂರ್ಣವಿರಾಮ ಹಾಕಿ ಹೊಸದೊಂದು ಕರಡನ್ನು ಮಂಡಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಸರಕಾರ  ಮುಂದಿಟ್ಟಿರುವ  ಈ ಕಳವಳಕಾರಿ ಹೆಜ್ಜೆಯನ್ನು ಹಿಂದಕ್ಕೆ ಸೆಳೆಯುವಂತೆ ಒತ್ತಡ ತರಲು ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಸರಿಯಾದ ದಿಕ್ಕಿನಲ್ಲಿ ಯೋಚಿಸುವ ನಾಗರಿಕರು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಳಲ್ಲಿರುವ ಸಂಘಟನೆಗಳು, ಗುಂಪುಗಳು ಮತ್ತು ವ್ಯಕ್ತಿಗಳೆಲ್ಲರೂ ತಮ್ಮ ದನಿಯನ್ನು ಎತ್ತಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *