50 ಕೋಟಿ ಜನ ಬರದಿಂದ ತತ್ತರ- ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಾಗಿದೆ

ಸಿಪಿಐ(ಎಂ) ಕೇಂದ್ರ ಸಮಿತಿ ಭಾರತದ ಹಲವು ಭಾಗಗಳು ಬರ ಪರಿಸ್ಥಿತಿಯಿಂದ ನರಳುತ್ತಿರುವ ಬಗ್ಗೆ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ. ಸ್ಕೈಮೆಟ್‍, ಒಂದು ಖಾಸಗಿ ಹವಾಮಾನ ಪರಿವೀಕ್ಷಣಾ ಸಂಸ್ಥೆಯ ಪ್ರಕಾರ ಈ ಬಾರಿಯದ್ದು ಕಳೆದ 65 ವರ್ಷಗಳಲ್ಲಿ ಎರಡನೇ ಬಾರಿಗೆ ಅತೀ ಒಣ ಮಾನ್ಸೂನ್-ಪೂರ್ವ ಸೀಝನ್‍. 2012ರಲ್ಲಿ ಸಂಚಿತ ಮಳೆ ಕೊರತೆ 31%ಕ್ಕೆ ಏರಿತ್ತು. ಈ ವರ್ಷ ಮಾನ್ಸೂನ್-ಪೂರ್ವ ಮಳೆಯಲ್ಲಿ 25ಶೇ.  ವಿಳಂಬವಿದೆ.

ವಿಶ್ವಾಸಾರ್ಹ ಮುನ್ನಚ್ಚರಿಕೆ ವ್ಯವಸ್ಥೆಗಳ ಪ್ರಕಾರ ದೇಶದ 40ಶೇ.ಕ್ಕಿಂತಲೂ ಹೆಚ್ಚು ಜನಸಂಖ್ಯೆ, ಅಂದರೆ 50 ಕೋಟಿ ಜನಗಳನ್ನು ಬರ ಪರಿಸ್ಥಿತಿ ತೀವ್ರವಾಗಿ ತಟ್ಟುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ, ಬಿಹಾರ, ಗುಜರಾತ, ಝಾರ್ಖಂಡ್‍ ಮತ್ತು ಹೊಂದಿಕೊಂಡಿರುವ ಪಶ್ಚಿಮ ಬಂಗಾಲ. ರಾಜಸ್ಥಾನ, ತಮಿಳುನಾಡಿನ ಜಿಲ್ಲೆಗಳು ಬರವು ತೀವ್ರವಾಗಿ ತಟ್ಟಿರುವ ಪ್ರದೇಶಗಳು ಎಂದು ದಿಲ್ಲಿಯಲ್ಲಿ ಜೂನ್‍ 7ರಿಂದ ಸಭೆ ಸೇರಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಆಣೆಕಟ್ಟುಗಳಲ್ಲಿ ನೀರಿನ ದಾಸ್ತಾನು ಗಂಡಾಂತರಕಾರಿ ಮಟ್ಟಕ್ಕೆ ಇಳಿದಿದೆ. ಕೇಂದ್ರ ಸರಕಾರ ಕೆಲವು ರಾಜ್ಯಗಳಿಗೆ ಬರ ಪರಿಸ್ಥಿತಿಯ ಸಲಹಾ ಪತ್ರವನ್ನು ಕಳಿಸಿದೆ. ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ, ಒಡಿಶ ಮತ್ತು ರಾಜಸ್ಥಾನ ರಾಜ್ಯ ಸರಕಾರಗಳು ತಮ್ಮ ಹಲವು ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಗಳಿಗೆ ಪರಿಹಾರವನ್ನು ಕೊಡಲು ಮುಂದೆ ಬರುತ್ತಿಲ್ಲ ಎಂದಿರುವ ಕೇಂದ್ರ ಸಮಿತಿ, ಪ್ರಸಕ್ತ ವಿಶೇಷ ಬರ ಸನ್ನಿವೇಶವನ್ನು ಒಂದು ರಾಷ್ಟ್ರೀಯ ಅನಾಹುತ ಎಂದು ಘೋಷಿಸಬೇಕು ಮತ್ತು ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದೆ.

ಕುಡಿಯುವ ನೀರಿನ ಮತ್ತು ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆಯು ವಿಪರೀತ ಸಂಕಟವನ್ನು ಉಂಟುಮಾಡಿದೆ, ಬೆಳೆ ಸಾಗುವಳಿಯನ್ನು ಇದು ತೀವ್ರವಾಗಿ ಬಾಧಿಸಿದೆ. ದೊಡ್ಡ ಪ್ರಮಾಣದಲ್ಲಿ ಹತಾಶ ವಲಸೆ ನಡೆಯುತ್ತಿದೆ. ಹಸಿವಿನಿಂದ ಸಾವುಗಳು ಸಂಭವಿಸಿರುವ ಪ್ರಕರಣಗಳು ವರದಿಯಾಗುತ್ತಿವೆ. ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

ಕೇಂದ್ರ ಮತ್ತು ಸಂಬಂಧಿತ ರಾಜ್ಯ ಸರಕಾರಗಳು ಕೂಡಲೇ ಬಾಕಿಯಿರುವ ಮನರೇಗ ಕೂಲಿಗಳನ್ನು ಬಿಡುಗಡೆ ಮಾಡಬೇಕು, ಶಾಲಾ ಶುಲ್ಕಗಳನ್ನು ಮನ್ನಾ ಮಾಡಬೇಕು ಮತ್ತು ತುರ್ತಾಗಿ ಪರಿಹಾರಗಳನ್ನು ಒದಗಿಸಬೇಕು ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಜನಗಳನ್ನು ಒಂದುಗೂಡಿಸಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಮತ್ತು ಮೂರ್ತ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಪ್ರಜಾಪ್ರಭುತ್ವ ಮನೋಭಾವದ ರೈತ ಸಂಘಟನೆಗಳು ಮತ್ತಿತರ ಸಾಮೂಹಿಕ ಸಂಘಟನೆಗಳ ಜೊತೆಗೆ ಪ್ರತಿಭಟಿಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *